ಸಿಂಧನೂರು: ರಾಯಚೂರ ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಯುವಕನೋರ್ವ ಮಸ್ಕಿ ಶಾಸಕ ಆರ್ ಬಸನಗೌಡ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರಿಂದ ಆಕ್ರೋಶಗೊಂಡ ಬೆಂಬಲಿಗರು ಸ್ಥಳೀಯ ಪೊಲೀಸ್ ಠಾಣೆ ಎದುರು ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಹಾಗೂ ಅವರ ಸಹೋದರರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಡಿಯೋ ವೈರಲ್ ಮಾಡಿದ್ದು, ಈ ವಿಡಿಯೋ ಶಾಸಕರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದ್ದರಿಂದ ಪೊಲೀಸ್ ಠಾಣೆ ಎದುರು ನೂರಾರು ಬೆಂಬಲಿಗರು ಜಮಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಹರಿಬಿಟ್ಟ ಯುವಕನನ್ನು ಬಂಧಿಸಬೇಕು. ಗೌರವ ಸ್ಥಾನದಲ್ಲಿರುವ ಶಾಸಕರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡನಾರ್ಹವಾಗಿದೆ. ಈ ಬಗ್ಗೆ ಕಠಿಣ ಕ್ರಮವಾಗಬೇಕೆಂದು ಪಟ್ಟು ಹಿಡಿದರು. ರಾತ್ರಿ 10 ಗಂಟೆವರೆಗೂ ವಿಚಾರಣೆ ನಡೆಸಿ,ವಿಡಿಯೋ ಹರಿಬಿಟ್ಟ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.