ರಾಯಚೂರು : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ಹಾಗೂ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾದ SCP-TSP ಗೆ ಬಂದ 20 ಕೋಟಿ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ. ಕೂಡಲೇ ನೈತಿಕ ಹೊಣೆ ಒತ್ತು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ದೇವದುರ್ಗ ತಾಲೂಕಾಧ್ಯಕ್ಷ ಬುದ್ದನಗೌಡ ಪಾಟೀಲ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಸರ್‌ಕಲ್, ಮಲದಕಲ್, ರಾಮದುರ್ಗ, ಆಳ್ದಾಳ, ಮುಷ್ಟೂರ ಮತ್ತಿತರ ಒಟ್ಟು ೮ ಕಡೆ ರಸ್ತೆ ನಿರ್ಮಾಣ ಮಾಡುವ ಮೂಲಕ ೨೦ ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಎಸ್‌ಟಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಕೆ.ಶಿವನಗೌಡ ನಾಯಕ ಅವರು ಎಸ್‌ಸಿ. ಎಸ್.ಟಿ ಅಭಿವೃದ್ಧಿಗೆ ಬಂದಂತ ಹಣವನ್ನು ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ.
ತಮ್ಮ ಅಳಿಯನಾದ ರಂಜಿತ್ ಕನ್‌ಸ್ಟ್ರಕ್ಷನ್’ ಹೆಸರಿನ ಕಂಪನಿಗೆ ಗುತ್ತಿಗೆ ನೀಡುವ ಮೂಲಕ ಬಿಲ್ ಎತ್ತುವಳಿ ಮಾಡಿಕೊಳ್ಳುತ್ತಿದ್ದಾರೆ.ತಮ್ಮ ಮಾತನ್ನು ಕೇಳುವಂತಹ ಅಧಿಕಾರಿಗಳನ್ನು ನೇಮಿಸಿಕೊಂಡು ತಮಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಮಾಡುವ ಚಾಳಿ ಬೆಳೆಸಿಕೊಂಡು ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಿ,ಮತ ಹಾಕಿದ ಕ್ಷೇತ್ರದ ಮತದಾರರಿಗೆ ಮೋಸ ಮಾಡುತ್ತಿದ್ದಾರೆ.ಅವರ ಅವ್ಯವಹಾರಗಳ ದಾಖಲಾತಿಗಳನ್ನು ಸಂಬಂಧಪಟ್ಟ ಇಲಾಖೆಗಳಲ್ಲಿ ಕೇಳಿದರೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಹೇಳಿದರು.
ಬಿಜೆಪಿ ಸರಕಾರ ಬಂದ ನಂತರ ಶೇ.೯೦ ರಷ್ಟು ಶಾಸಕರೇ ಗುತ್ತೇದಾರರಾಗಿದ್ದಾರೆ. ಹೀಗಾಗಿ ಗುತ್ತಿಗೆದಾರರಿಗೆ ಅನ್ಯಾಯ ವಾಗುತ್ತಿದೆ.ಕೆ.ಎಸ್.ಈಶ್ವರಪ್ಪ ಕೇವಲ ಪ್ರತಿಶತ ೪೦ ಕಮೀಷನ್ ಪಡೆಯುತ್ತಿದ್ದರೂ ಎನ್ನುವ ಆರೋಪದ ಮೇಲೆ ಸಚಿವ ಸ್ಥಾನ ಕಳೆದುಕೊಂಡರೆ, ದೇವದುರ್ಗದಲ್ಲಿ ನೂರಕ್ಕೆ ನೂರು ಪ್ರತಿಶತ ಬಿಲ್ ಎತ್ತುವಳಿ ಮಾಡಿಕೊಳ್ಳುವವರ ಮೇಲೆ ಇನ್ನು ಕ್ರಮ ಕೈಗೊಂಡಿಲ್ಲ. ಈ ವಿಷಯವನ್ನು ನಾವು ಮುಖ್ಯಮಂತ್ರಿಗಳಿಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳಿಗೆ, ಎಸಿಬಿ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸರಕಾರ ತಮ್ಮ ಶಾಸಕರೆ ಎಂದು ಮೃಧುಧೋರಣೆ ತೋರಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡರಾದ ಕರೆಮ್ಮ ಮಾತನಾಡಿ, ಶಾಸಕ ಶಿವನಗೌಡ ನಾಯಕ ಅವರು ಎಸ್.ಟಿ ಮೀಸಲಾತಿ ಕ್ಷೇತ್ರದಿಂದ ಗೆದ್ದು ಎಸ್.ಸಿ ಎಸ್. ಟಿ ಗೆ ಬಂದಂತ ಅನುದಾನವನ್ನು ನೂರಕ್ಕೂ ನೂರು ದುರುಪಯೋಗ ಪಡಿಸಿಕೊಂಡಿದ್ದಾರೆ .ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ.ಕೂಡಲೇ ಶಾಸಕರು ನೈತಿಕ ಹೊಣೆ ಹೊತ್ತು ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಒತ್ತಾಯಿಸಿದರು.
ದೇವದುರ್ಗ ಕ್ಷೇತ್ರ ಹಿಂದುಳಿದ ಕ್ಷೇತ್ರವೆಂದು ಹೆಚ್ಚು ಅನುದಾನವನ್ನು ತಂದು ಶಾಸಕರು ಕುಬೇರ ರಾಗುತ್ತಿದ್ದಾರೆ ಹೊರತು ಕ್ಷೇತ್ರ ಅಭಿವುದ್ದಿ ಮಾತ್ರ ಶೂನ್ಯವಾಗಿದೆ.
ದೇವದುರ್ಗ ಇಂದು ನೀರಾವರಿಯಿಂದ ಸ್ವಲ್ಪ ನೆಮ್ಮದಿ ಕಾಣುವಂತಾಗಿದ್ದರೆ, ಅದಕ್ಕೆ ನಮ್ಮ ವರಿಷ್ಠರಾದ ದೇವೇಗೌಡರು ಕಾರಣ. ಈಗ ಶಾಸಕರು ಎಸ್‌ಇಪಿ ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಈ ಕುರಿತು ತನಿಖೆ ನಡೆಸದಿದ್ದರೆ ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಜನರೊಂದಿಗೆ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯೂಸೂಫ್ ಖಾನ್, ತಿಮ್ಮಾರೆಡ್ಡಿ ಇದ್ದರು.