ರಾಯಚೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಶಶಾಂಕ್ ಹಿರೇಮಠ(20) ಹೆಸರಿನ ಯುವಕ ಚಿಕಿತ್ಸೆ ಫಲಕಾರಿಯಾಗದೆ ನಗರದ ಓಪೆಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇಂತಹ ದುಃಖದ ಸಮಯದಲ್ಲಿಯೂ ಪುತ್ರನ ನೇತ್ರದಾನ ಮಾಡುವ ಮೂಲಕ ಯುವಕನ ಪಾಲಕರು ಸಮಾಜಕ್ಕೆ ಮಾದರಿಯಾಗಿದ್ದಾರೆ.
ರಾಯಚೂರು ನಗರದ ವಾಸಿಗಳಾದ ಸೋಮಶೇಖರ ಹಿರೇಮಠ ಹಾಗೂ ಗಾಯತ್ರಿ ಹಿರೇಮಠ ದಂಪತಿಗಳ ಪುತ್ರ ಶಶಾಂಕ್ ಇತ್ತೀಚೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದನು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಒಪೆಕ್ ಆಸ್ಪತ್ರೆಗೆ ದಾಖಲು ಮಾಡಿ, ನಿರಂತರ ವಾರಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಇಷ್ಟೆಲ್ಲಾ ಪ್ರಯತ್ನಗಳ ನಂತರವೂ ಶಶಾಂಕ್ ಉಳಿಯದೇ ಬಾರದ ಲೋಕಕ್ಕೆ ತೆರಳಿಬಿಟ್ಟಿದ್ದಾನೆ.
ಪ್ರೀತಿಯ ಪುತ್ರ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ತನ್ನ ಕಣ್ಣುಗಳನ್ನು ದಾನ ನೀಡಿ ಇನ್ನೊಬ್ಬರ ಬಾಳಿಗೆ ಬೆಳಕು ನೀಡಿದ್ದಾನೆ, ತನ್ನ ಕಣ್ಣುಗಳ ಮೂಲಕ ಇನ್ನೂ ಎಲ್ಲೋ ಜೀವಂತವಾಗಿದ್ದಾನೆ ಎಂದು ಮೃತ ಶಶಾಂಕ್ ಪಾಲಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನೇತ್ರದಾನ ಮಾಡುವ ಮೂಲಕ ಶಶಾಂಕ್ ಕುಟುಂಬ ಮಾದರಿಯಾಗಿದೆ. ದೇಹವನ್ನು ಸುಟ್ಟುಹಾಕುವ ಅಥವಾ ಹೂಳುವ ಬದಲು ಈ ರೀತಿ ಕಣ್ಣು ಅಥವಾ ಅಂಗಾಂಗಗಳನ್ನು ದಾನ ಮಾಡಿದರೆ, ಅದೇ ಇನ್ನೊಬ್ಬರ ಬಾಳಿಗೆ ಬೆಳಕಾಗುತ್ತದೆ. ಮೃತರ ಆತ್ಮಕ್ಕೆ ಶಾಂತಿ ಕೋರಬಹುದಾದ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಮಾರ್ಗ ಇದಾಗಿದೆ ಎಂದು ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ರಾಯಚೂರು ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ್ ಶೇವಾಳೆ ತಿಳಿಸಿದ್ದಾರೆ. ಸ್ಥಳೀಯ ನವೋದಯ ವೈದ್ಯಕೀಯ ಸಂಸ್ಥೆಯ ನೇತ್ರ ವಿಜ್ಞಾನ ವಿಭಾಗ ಮುಖ್ಯಸ್ಥೆ ಡಾ. ಅನುಪಮಾ ವಾಲ್ವೆಕರ್ ಅವರ ಮಾರ್ಗದರ್ಶನದಲ್ಲಿ ಕಿರಿಯ ವೈದ್ಯರಾದ ಡಾ. ಸ್ನೇಹ ವಸಂತ, ಡಾ. ಆಶಾ ನಿಕಾತ, ಡಾ. ಮೇಘನಾ, ಹಾಗೂ ಡಾ. ಹರ್ಷ ರವರ ತಂಡ ನೇತ್ರದಾನ ಶಸ್ತ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಲು ಕುಟುಂಬ ಸದಸ್ಯರಾದ ಮಹಾಂತೇಶ ಹಿರೇಮಠ, ಶಶಿಧರ ಸುರಗಿಮಠ, ಶಾಂತಯ್ಯ ಹಿರೇಮಠ ಅವರು ನೇತ್ರದಾನದ ಸಹಕಾರ ನೀಡಿದರು.