ರಾಯಚೂರು: ತಾಲೂಕಿನ ದೇವಸೂಗೂರಿನ ಒಂದು ಮತ್ತು 2ನೇ ಕ್ರಾಸ್ ನಿವಾಸಿಗಳು ಹಾರುಬೂದಿ ಸಮಸ್ಯೆಯಿಂದ ಬಳಲುತ್ತಿದ್ದು, ಕೂಡಲೇ ಅವರಿಗೆ ಸೂಕ್ತ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಕಾರ್ಯಕರ್ತರು ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂಘಟನೆ ಸದಸ್ಯರು, ಹಾರುಬೂದಿ ಹೊಂಡ ಸಮೀಪವಿದ್ದು, ಅಲ್ಲಿಂದ ನಿತ್ಯ ನೂರಾರು ವಾಹನಗಳ ಮೂಲಕ ಬೂದಿ ಸಾಗಿಸಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸುಮಾರು 35 ರಿಂದ 42 ವರ್ಷಗಳವರೆಗೆ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಹಿಂದೆ ಹಾರುಬೂದಿಯ ತೊಂದರೆ ಇರಲಿಲ್ಲ. ಸರ್ಕಾರದ ಕಾಯ್ದೆಗಳನ್ನು ಗಾಳಿಗೆ ತೂರಿ ತೆರೆದ ಲಾರಿಗಳ ಮೂಲಕ ಹಾರು ಬೂದಿ ಸಾಗಿಸಲಾಗುತ್ತಿದೆ. ಹಾರು ಬೂದಿ ಎಲ್ಲೆಡೆ ಹರಡುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ದೂರಿದರು.
ಬೂದಿ ಹೊಂಡದಲ್ಲಿ ನೀರು ಸಿಂಪಡಣೆ ಉಪಕರಣಗಳನ್ನು ಅಳವಡಿಸದ ಕಾರಣ ಬೂದಿ ಒಣಗಿದ ನಂತರ ಗಾಳಿಯಲ್ಲಿ ಹರಡುತ್ತಿದೆ. ಇದು ಗಾಳಿಯೊಂದಿಗೆ ಜನರ ದೇಹ ಸೇರುತ್ತಿದ್ದು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಕ್ಯಾನ್ಸರ್, ಕಾಲರಾ, ಅಸ್ತಮಾ ಹೃದಯಾಘಾತ ಸೇರಿದಂತೆ ಅನೇಕ ಮಾರಕ ಕಾಯಿಲೆಗಳು ಹರಡುತ್ತಿವೆ. ಹೀಗಾಗಿ ಇಲ್ಲಿನ ಜನರನ್ನು ಕೂಡಲೇ ಸ್ಥಳಾಂತರಿಸಬೇಕು. ಬೇರೆ ಕಡೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.