ರಾಯಚೂರು: ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು ಹಾಗೂ ವೇತನವನ್ನು ಪ್ರತಿ ತಿಂಗಳು 2ನೇ ತಾರೀಖಿನ ಒಳಗೆ ಪಾವತಿ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಬಿಸಿಯೂಟ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಸರ್ಕಾರಿ ಹಿರಿಯ, ಕಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಮುಖ್ಯ ಅಡುಗೆ ಮತ್ತು ಸಹಾಯಕರು ಕೆಲಸ ಮಾಡುತ್ತಿದ್ದು, ಮುಖ್ಯ ಅಡುಗೆಯವರಿಗೆ ₹2700 ಹಾಗೂ ಸಹಾಯಕಿಯರಿಗೆ ₹2600 ವೇತನ ನೀಡಲಾಗುತ್ತಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ.
ಅಡುಗೆ ಮಾಡುವ ಜೊತೆಗೆ ಈಗ ಸರ್ಕಾರ ಪ್ರತಿ ಮಕ್ಕಳಿಗೆ ಮೊಟ್ಟೆಗಳನ್ನು ವಿತರಿಸುವುದು ಸೇರಿದಂತೆ ಇತರೆ ಕೆಲಸದ ಒತ್ತಡ ಹೆಚ್ಚಾಗಿದೆ. ವೇತನವನ್ನು ಪ್ರತಿ ತಿಂಗಳು ಸರಿಯಾಗಿ ಪಾವತಿ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದರು.
ಅಡುಗೆ ತಯಾರಿಸುವವರಿಗೆ ಹಾಗೂ ಸಹಾಯಕಿಯರಿಗೆ ₹10 ಸಾವಿರಕ್ಕೆ ವೇತನ ಹೆಚ್ಚಳ ಮಾಡಬೇಕು ಹಾಗೂ ಪ್ರತಿ ತಿಂಗಳು 2ನೇ ದಿನಾಂಕದಂದು ವೇತನ ನೀಡಬೇಕು ಎಂದು ಆಗ್ರಹಿಸಿದರು.