VOJ ನ್ಯೂಸ್ ಡೆಸ್ಕ್ : ಕೇಂದ್ರ ಸರ್ಕಾರ ಮನೆ-ಮನೆಗೆ ಪೈಪ್ ಮುಖಾಂತರ ಗ್ಯಾಸ್ ನೀಡುವ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಂತೆ ಪ್ರತಿಯೊಂದು ಜಿಲ್ಲೆಯಲ್ಲಿ ಯೋಜನೆ ಜಾರಿಗೆಗೊಳಿಸಲು ವಿವಿಧ ಕಾಮಗಾರಿಗಳು ನಡೆದಿವೆ. ಅದೇ ರೀತಿಯಲ್ಲಿ ರಾಯಚೂರು ಸಿಟಿಯ ಪ್ರತಿಯೊಂದು ಮನೆಗೂ ಪೈಪ್ ಮುಖಾಂತರ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳು ನಡೆದಿವೆ. ಇಂತಹ ಮಹತ್ವದ ಯೋಜನೆಗೆ ಬಿಸಿಲುನಾಡು ರಾಯಚೂರಿನ ಜನರು ಈಗ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಯಚೂರು ನಗರದ ಹೈದರಾಬಾದ್ ರಸ್ತೆಯಲ್ಲಿ ಎಜಿಪಿ ಗ್ಯಾಸ್ ಕಂಪನಿ ಗ್ಯಾಸ್ ರಿಫಿಲ್ಲಿಂಗ್ ಪ್ಲಾಂಟ್ ಕಾಮಗಾರಿ ಶುರು ಮಾಡಿದೆ. ಈ ಪ್ರದೇಶವೂ ಜನವಸತಿ ಪ್ರದೇಶವಾಗಿದೆ. ಗ್ಯಾಸ್ ಪ್ಲಾಂಟ್ ನಿರ್ಮಾಣ ಮಾಡಲು ಮುಂದಾಗಿರುವ ಸ್ಥಳದ ಸುತ್ತಲ್ಲೂ ಕಾಟನ್ ಮಿಲ್, ರೈಸ್ ಮಿಲ್, ಮೆಡಿಕಲ್ ಕಾಲೇಜ್, ಎಸ್ಪಿ ಕಚೇರಿ, ರೈಲ್ವೆ ಹಳಿ ಇದೆ. ಇಂತಹ ಜನವಸತಿ ಪ್ರದೇಶದಲ್ಲಿ ಗ್ಯಾಸ್ ರಿಫಿಲ್ಲಿಂಗ್ ಪ್ಲಾಂಟ್‌ಗೆ ಅನುಮತಿ ನೀಡಬಾರದು ಆದ್ರೆ ಅಧಿಕಾರಿಗಳು ಹೇಗೆ ಅನುಮತಿ ನೀಡಿದ್ದಾರೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಯಚೂರು ಅಂದ್ರೆ ಬಿಸಿಲು ಇಂತಹ ಬಿಸಿಲುನಾಡಿನ ಪ್ರದೇಶದಲ್ಲಿ ಎಜಿಪಿ ಕಂಪನಿ ಸುಮಾರು 56.8 ಕೆಎಲ್ ಸಾಮರ್ಥ ಬೃಹತ್ ಎರಡು ಟ್ಯಾಂಕರ್‌ಗಳನ್ನು ಅಳವಡಿಕೆ ಮಾಡಿದೆ. ಇನ್ನೂ ನಾಲ್ಕು ಟ್ಯಾಂಕರ್ಗಳನ್ನ ಅಳವಡಿಕೆ ಮಾಡಲು ಕಾಮಗಾರಿ ಆರಂಭಿಸಿದೆ. ಜನವಸತಿ ಪ್ರದೇಶದಲ್ಲಿ ಗ್ಯಾಸ್ ರಿಫಿಲ್ಲಿಂಗ್ ಪ್ಲಾಂಟ್‌ಗೆ ಅವಕಾಶ ನೀಡಬಾರದು. ಒಂದು ವೇಳೆ ಏನಾದರೂ ಅನಾಹುತ ಸಂಭವಿಸಿದ್ರೆ ಸುತ್ತಲಿನ 2-3 ಕಿ.ಮೀ. ಪ್ರದೇಶ ಸುಟ್ಟು ಕರಕಲಾಗುತ್ತೆ, ಅಷ್ಟೇ ಅಲ್ಲದೆ ಇಂತಹ ಮಹತ್ವದ ಯೋಜನೆ ಬಂದಾಗ ಅಧಿಕಾರಿಗಳು ಜನವಸತಿ ಪ್ರದೇಶವಲ್ಲದ ಕಡೆ ಸ್ಥಳ ಗುರುತಿಸಿ ಅಂಡರ್ ಗ್ರೌಂಡ್‌ನಲ್ಲಿ ಗ್ಯಾಸ್ ಟ್ಯಾಂಕರ್‌ಗಳು ಅಳವಡಿಕೆ ಮಾಡಲು ಅನುಮತಿ ನೀಡಬೇಕು. ಆದ್ರೆ ರಾಯಚೂರಿನ ವಿಬಿಧ ಇಲಾಖೆ ಅಧಿಕಾರಿಗಳು ಲಂಚ ಪಡೆದು ಜನವಸತಿ ಪ್ರದೇಶದಲ್ಲಿ ಗ್ಯಾಸ್ ಪ್ಲಾಂಟ್ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ ಎಂದು ಲೋಕಜನಶಕ್ತಿ ರಾಜ್ಯಾಧ್ಯಕ್ಷ ಜಿ.ವೆಂಕಟರೆಡ್ಡಿ ಆರೋಪಿಸಿದರು.
ಕಳೆದ 3 ತಿಂಗಳಿಂದ ಎಜಿಪಿ ಕಂಪನಿ ಕೆಲಸ ಆರಂಭಿಸಿ 56.8ಕೆಎಲ್ ಸಾಮರ್ಥ್ಯದ ಎರಡು ಟ್ಯಾಂಕರ್‌ಗಳನ್ನು ಕೂಡ ಸ್ಥಾಪನೆ ಮಾಡಿದೆ. ಜನರ ವಿರೋಧದ ನಡುವೆಯೂ ಎಜಿಪಿ ಕಂಪನಿ ತನ್ನ ಕೆಲಸ ಮುಂದುವರೆಸಿದೆ. ಹೀಗಾಗಿ ಅಧಿಕಾರಿಗಳು ಶೀಘ್ರವೇ ತಜ್ಞರನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಿ ಗ್ಯಾಸ್ ರಿಫಿಲ್ಲಿಂಗ್ ಪ್ಲಾಂಟ್ ಅದನ್ನು ನಗರದಿಂದಾಚೆಗೆ 30-40 ಕಿ.ಮೀ. ದೂರದಲ್ಲಿ ನಿರ್ಮಿಸಬೇಕು ಮತ್ತು ಅಂಡರ್ ಗ್ರೌಂಡ್ ಪದ್ಧತಿಯಲ್ಲಿ ನಿರ್ಮಿಸಬೇಕು. ಇಲ್ಲದಿದ್ದರೆ ನಗರಕ್ಕೆ ಅನಾಹುತ ಕಟ್ಟಿಟ್ಟ ಬುತ್ತಿ ಆಗಿದೆ. ಅದರಲ್ಲೂ ಈಗ ನಿರ್ಮಾಣವಾಗುತ್ತಿರುವ ಗ್ಯಾಸ್ ಪ್ಲಾಂಟ್ ಸುತ್ತಲ್ಲೂ ಬಹುತೇಕ ಕಾಟನ್ ಕಂಪನಿಗಳೇ ಹೆಚ್ಚಾಗಿದ್ದು ಸಣ್ಣ ಅನಾಹುತವಾದರೂ ಇಡೀ ಸಿಟಿಗೆ ಕಂಟಕವಾಗಿದೆ. ಹೀಗಾಗಿ ದುರಂತ ಸಂಭವಿಸುವ ಮುನ್ನವೇ ಗ್ಯಾಸ್ ಪ್ಲಾಂಟ್ ಬೇರೆ ಕಡೆ ಸ್ಥಳಾಂತರ ಮಾಡಬೇಕಾಗಿದೆ ಎಂದು ರಾಯಚೂರಿನ ವಕೀಲ ಜಿ.ಎಲ್. ರಂಗಪ್ಪ ಎಂಬುವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಹೈದ್ರಾಬಾದ್ ರಸ್ತೆಯಲ್ಲಿ ಎಜಿಪಿ ಕಂಪನಿ ಗ್ಯಾಸ್ ಪ್ಲಾಂಟ್ ನಿರ್ಮಾಣ ಮಾಡುತ್ತಿದೆ. ಎಲ್ಲಾ ಇಲಾಖೆಗಳ ಅನುಪತಿ ಪಡೆದೇ ಎಜಿಪಿ ಕಂಪನಿ ಗ್ಯಾಸ್ ರಿಲಿಪ್ಲಿಂಗ್ ಪ್ಲಾಂಟ್ ಕೆಲಸ ಶುರು ಮಾಡಿದೆ. ಆದ್ರೂ ಗ್ಯಾಸ್ ಪ್ಲಾಂಟ್ ನಿರ್ಮಾಣದ ಬಗ್ಗೆ ಈಗಾಗಲ್ಲೇ ಕೆಲ ದೂರುಗಳು ಬಂದಿವೆ. ಮತ್ತೊಮ್ಮೆ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಆದೇಶ ಮಾಡುವೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಅವಿನಾಶ ರಾಂಜಂದ್ರನ್ ಮೇನನ್.
ಒಟ್ಟಿನಲ್ಲಿ ರಾಯಚೂರು ನಗರದ ಜನವಸತಿ ಪ್ರದೇಶದಲ್ಲಿಯೇ ಎಜಿಪಿ ಕಂಪನಿ ಗ್ಯಾಸ್ ರಿಲಿಪ್ಲಿಂಗ್ ಪ್ಲಾಂಟ್ ಮಾಡಲು ಮುಂದಾಗಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಗೊತ್ತಿದ್ರೂ ಗಪ್‌ಚುಪ್ ಆಗಿದ್ದಾರೆ. ಹೀಗಾಗಿ ಸಂಬಂಧಪಟ್ಟವರು ಮತ್ತೊಂದು ಗ್ಯಾಸ್ ದುರಂತ ಸಂಭವಿಸುವ ಮುನ್ನವೇ ಎಚ್ಚತ್ತುಕೊಳ್ಳಬೇಕಾಗಿದೆ.