VOJ ನ್ಯೂಸ್ ಡೆಸ್ಕ್ : ಜಾತ್ಯಾತೀತ ಜನತಾದಳದ ಹಿರಿಯ ನಾಯಕ ಎನಿಸಿರುವ ಬಸವರಾಜ ಹೊರಟ್ಟಿ ಅವರು ಬಿಜೆಪಿಯ ಕಮಲ ಮುಡಿಯಲು ಮುಂದಾಗಿದ್ದು, ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಮತ್ತಷ್ಟು ಹೊಡೆತ ಬಿದ್ದಿದೆ.
ಸದ್ಯ ಸಭಾಪತಿಯಾಗಿರುವ ಹೊರಟ್ಟಿ ಇಷ್ಟರಲ್ಲೇ ಎದುರಾಗಲಿರುವ ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಾವು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಧ್ಯಮಗಳ ಎದುರು ಘೋಷಿಸಿದ್ದಾರೆ. ಬಿಜೆಪಿ ಕೂಡ ಅವರನ್ನು ಸ್ವಾಗತಿಸಲು ಸಿದ್ಧತೆ ನಡೆಸಿದೆ. ಈ ಭಾಗದಲ್ಲಿ ತುಸು ಕ್ರಿಯಾಶೀಲ ದಳಪತಿಗಳು ಎನಿಸಿದ್ದ ಸಿಂದಗಿಯ ಎಂ.ಸಿ.ಮನಗೂಳಿ ಆಕಸ್ಮಿಕ ನಿಧನರಾದರು. ಗೋಕಾಕದ ಅಶೋಕ ಪೂಜಾರಿ ಬೆನ್ನಲ್ಲೇ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕೂಡ ಕಾಂಗ್ರೆಸ್ ಕೈಹಿಡಿದರು. ಕಾರವಾರದ ಆನಂದ ಅಸ್ನೋಟಿಕರ್ ಕೂಡ ಬಹುದಿನಗಳಿಂದ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದು ಮುಂದಿನ ಚುನಾವಣೆ ವೇಳೆಗೆ ಅವರು ಜೆಡಿಎಸ್ ತೊರೆಯುವುದು ಖಚಿತವಾಗಿದೆ. ಈಗ ಹೊರಟ್ಟಿ ಬಿಜೆಪಿಗೆ ಹೋಗುವುದಾಗಿ ಸ್ವತಃ ಘೋಷಿಸಿರುವುದು ನಿಜಕ್ಕೂ ಜೆಡಿಎಸ್‌ಗೆ ದೊಡ್ಡ ಹೊಡೆತ.
ಎಚ್.ಡಿ.ಕುಮಾರಸ್ವಾಮಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟಿಸುವ ಮತ್ತು ಬೆಳೆಸುವ ಹಂಬಲದಿಂದ ಕಳೆದ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಅಲ್ಲಿ ದಿನವೂ ಸಾವಿರಾರು ಜನ ಸೇರುತ್ತಿದ್ದರು. ಆದರೆ ಅದಾವುದೂ ಮತವಾಗಿ ಪರಿವರ್ತನೆಯಾಗದೆ ಚುನಾವಣೆಯಲ್ಲಿ ಯಾರೊಬ್ಬರೂ ಗೆಲ್ಲಲಿಲ್ಲ. ಭಾರಿ ಭರವಸೆ ಹೊಂದಿದ್ದ ಕೋನರಡ್ಡಿ ಕೂಡ ಸೋತರು. ಆಗ ಶುರುವಾದ ದಳಪತಿಗಳ ನಿರ್ಗಮನ ಪಥ ಸಂಚಲನ ಇನ್ನೂ ನಿಂತಿಲ್ಲ. ಸಾಲು ಸಾಲು ದಳಪತಿಗಳು ಕಾಂಗ್ರೆಸ್, ಬಿಜೆಪಿಗೆ ಹೋದರು. ತಮ್ಮೊಂದಿಗೆ ಕಾರ್ಯಕರ್ತರನ್ನೂ ಕರೆದೊಯ್ದರು. ಉಳಿದೊಬ್ಬ ಹೊರಟ್ಟಿಯೂ ಕಮಲ ಹಿಡಿಯುತ್ತಿರುವುದರಿಂದ ಎಚ್‌ಡಿಕೆ ಮನೆ ಮಾಡಿದ ನೆಲದಲ್ಲಿ ತೆನೆ ಹೊರಲು ಮತ್ತೊಬ್ಬ ನಾಯಕ ಇಲ್ಲದಂತಹ ಪರಿಸ್ಥಿತಿ ಜೆಡಿಎಸ್‌ಗೆ ಎದುರಾಗಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್ ನಿಧಾನವಾಗಿ ಗಟ್ಟಿಗೊಳ್ಳುತ್ತಿದೆ. ಆದರೆ, ಪಕ್ಷದಿಂದ ಹೇಳಿಕೊಳ್ಳುವಷ್ಟು ಬೆಂಬಲ ಸಿಗದೇ ಅಲ್ಲಿನ ಹನುಮಂತ ಮಾವಿನಮರದ ಹೆಣಗಾಡುತ್ತಿದ್ದಾರೆ ಎನ್ನುವ ಮಾತಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಎಚ್.ಡಿ.ದೇವೇಗೌಡರಿಂದ ಅತಿ ಹೆಚ್ಚು ಅನುದಾನ, ಬೆಳಗಾವಿಯಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಅಧಿವೇಶನ ನಡೆಸಿದ ಎಚ್.ಡಿ. ಕುಮಾರಸ್ವಾಮಿ, ಜನತಾದಳ ಸರ್ಕಾರವಿದ್ದಾಗಲೇ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸರ್ಕಾರಿ ಶಾಲಾ-ಕಾಲೇಜುಗಳ ಆರಂಭ. ಇತ್ಯಾದಿ ಹತ್ತು ಹಲವು ಕೊಡುಗೆ ನೀಡಿಯೂ ಜೆಡಿಎಸ್‌ಗೆ ಇಂದು ಈ ಪರಿಸ್ಥಿತಿ ಎದುರಾಗಿರುವುದಕ್ಕೆ ಕಾರಣ ಏನು ಎನ್ನುವುದು ಪ್ರಶ್ನೆಯಾಗಿದೆ.