ರಾಯಚೂರು: ಇತ್ತೀಚಿನ ದಿನಗಳಲ್ಲಿ ಕೋವಿಡ್ ೧,೨ ಮತ್ತು ಮೂರನೇ ಅಲೆಗಳಿಂದ ಮಹಿಳೆ ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಇದರಿಂದಾಗಿ ಮಕ್ಕಳಲ್ಲಿ ಮೊಬೈಲ್ ಗೀಳು ಕ್ರಿಯಾತ್ಮಕ ಚಟುವಟಿಕೆ ಇಲ್ಲದಿರುವುದು ಹಾಗೂ ಮಹಿಳೆಯರಲ್ಲಿ ಆತಂಕ ಭಯ ಮುಂತಾದ ಮಾನಸಿಕ ಕಾಯಿಲೆಗಳು ಜಗತ್ತಿನಾದ್ಯಂತ ಹೆಚ್ಚಾಗಿವೆ ಇದಕ್ಕೆ ಮೂಲಕಾರಣ ಲಾಕ್‌ಡೌನ್ ಉದ್ಯೋಗದ ಕೊರತೆ ಆರ್ಥಿಕ ಸಮಸ್ಯೆ ಕೌಟುಂಬಿಕ ಹಿಂಸಾಚಾರ ಮುಂತಾದವುಗಳು ಕಾರಣಗಳಾಗಿವೆ ಎಂದು ಡಾ.ಸುನಿಲ್ ಕುಮಾರ್ ಅವರು ಹೇಳಿದರು.
ಗುವಿವಿಯ ರಾಯಚೂರು ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ’ಮಾನಸಿಕ ಆರೋಗ್ಯದ ಮೇಲೆ ಕೋವಿಡ್-೧೯ ಪರಿಣಾಮಗಳು’ ಕುರಿತು ವಿಷಯವನ್ನು ಮಂಡಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಪ್ರೊ.ಪಾರ್ವತಿ ಸಿ.ಎಸ್. ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕೌಶಲ್ಯ ವೃದ್ಧಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಸೇವೆಯನ್ನು ಮಾಡಲು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಶರಣಬಸವರಾಜ ಮಾತನಾಡಿ, ಮಾನಸಿಕ ಆರೋಗ್ಯ ಸಾಮಾನ್ಯ ಆರೋಗ್ಯದ ಭಾಗವಾಗಿದ್ದು ಮನುಷ್ಯನಿಗೆ ಇತರೆ ಕಾಯಿಲೆಗಳು ಬರುವುದು ಎಷ್ಟು ಸಹಜವೋ ಅಷ್ಟೇ ಸಹಜವಾಗಿ ಮಾನಸಿಕ ಕಾಯಿಲೆಗಳು ಬರುತ್ತವೆ ಇವುಗಳಿಗೆ ಸೂಕ್ತ ಚಿಕಿತ್ಸೆ ಅವಶ್ಯಕತೆ ಇದೆ ಎಂದರು. ಈ ಕಾರ್ಯಗಾರದಲ್ಲಿ ಡಾ.ಸೋಮನಾಥ ರೆಡ್ಡಿ, ಬಜಾರಪ್ಪ, ಡಾ.ರಶ್ಮೀರಾಣಿ ಅಗ್ನಿಹೋತ್ರಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.