ವಿಜಯಪುರ: ನ್ಯಾಯಾಧೀಕರಣದ ತೀರ್ಪಿನ ಕುರಿತು ಜೂನ್ 8ರಂದು ವಿಚಾರ ಸಂಕಿರಣ
ವಿಜಯಪುರ : ರೈತ ಮುಖಂಡರಾದ ಅರವಿಂದ ಕುಲಕರ್ಣಿ ಹಾಗೂ ಮಹಾದೇವಪ್ಪ ತೇಲಿ ಅವರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ 2ನೇ ನ್ಯಾಯಾಧೀಕರಣದ ತೀರ್ಪು ಹಾಗೂ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಳದ ಕುರಿತು ಜೂನ್ 8ರಂದು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ತಿಳಿಸಿದರು.ಅವರ ಪ್ರಕಾರ, ನ್ಯಾಯಾಧೀಕರಣವು 2013ರ ಅಂತಿಮ ತೀರ್ಪಿನಲ್ಲಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಏರಿಸಲು ಅನುಮತಿ ನೀಡಿತ್ತು. ಆದರೆ ತೀರ್ಪು ಜಾರಿಯಾಗಿ 13 ವರ್ಷಗಳಾದರೂ ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.ವಿಜಯಪುರ ಜಿಲ್ಲೆಯಲ್ಲಿ ಐದು ನದಿಗಳು ಹರಿಯುತ್ತಿದ್ದರೂ, ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಕೃಷಿಗೆ ನೀರು ಒದಗಿಸುವುದು ಇನ್ನೂ ದೊಡ್ಡ ಸವಾಲಾಗಿದ್ದು, ರೈತರು ಹೋರಾಟದ ಮೂಲಕವೇ ನೀರು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಆಲಮಟ್ಟಿ ಅಣೆಕಟ್ಟು ನಿರ್ಮಾಣಕ್ಕಾಗಿ ಸಾವಿರಾರು ರೈತರು ತಮ್ಮ ಜಮೀನು ಮತ್ತು ಮನೆಗಳನ್ನು ಕಳೆದುಕೊಂಡಿದ್ದು, ಸಮರ್ಪಕ ಪುನರ್ವಸತಿ ಹಾಗೂ ನೀರಾವರಿ ಸೌಲಭ್ಯಗಳು ದೊರಕಿಲ್ಲ ಎಂದು ಅವರು ಹೇಳಿದರು. ನೀರಿನ ಮಟ್ಟವನ್ನು 524.256 ಮೀಟರ್‌ಗೆ ಹೆಚ್ಚಿಸಿದರೆ ಮುಳುಗಡೆಯಾಗುವ ಪ್ರದೇಶಗಳಿಗೆ ಪರಿಹಾರ, ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಈಗ ಸುಮಾರು ₹1 ಲಕ್ಷ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಇದೇ ಕಾರ್ಯವನ್ನು 2013ರಲ್ಲೇ ಕೈಗೊಂಡಿದ್ದರೆ ಸುಮಾರು ₹17 ಸಾವಿರ ಕೋಟಿ ವೆಚ್ಚ ಸಾಕಾಗುತ್ತಿತ್ತು ಎಂದು ಅವರು ತಿಳಿಸಿದರು.ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ವಿಳಂಬ ನೀತಿಗಳಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಅವರು, ರಾಜ್ಯಕ್ಕೆ ನ್ಯಾಯಾಧೀಕರಣದಿಂದ ಹಂಚಿಕೆಯಾದ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ವಿಚಾರ ಸಂಕಿರಣದ ವಿವರ 8 ಜೂನ್ 2026 (ಸೋಮವಾರ)
ಸಮಯ:*ಬೆಳಿಗ್ಗೆ 10:30 ಗಂಟೆಗೆ
*ಸ್ಥಳ: ಕಂದಗಲ್ ಹಣಮಂತರಾಯ ರಂಗಮಂದಿರಕಾರ್ಯಕ್ರಮದಲ್ಲಿ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ವಿಷಯ ಮಂಡನೆಯನ್ನು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ರಾಜೇಂದ್ರ ಪೋದ್ದಾರ ಹಾಗೂ ಪಂಚಪ್ಪ ಕಲಬುರ್ಗಿ ನಡೆಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಸಿ. ಬಿರಾದಾರ ಹಾಗೂ ನಿಂಗನಗೌಡ ಎಂ. ಬಿರಾದಾರ ಭಾಗವಹಿಸಲಿದ್ದಾರೆ.
ರೈತ ಮುಖಂಡರಾದ ಸಿದ್ಧನಗೌಡ ಪಾಟೀಲ ಮತ್ತು ಬಸವರಾಜ ಸಿದ್ದಾಪೂರ ಅವರು ವಿಜಯಪುರ, ಬಾಗಲಕೋಟ ಹಾಗೂ ಉತ್ತರ ಕರ್ನಾಟಕದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಹೊನಕೇರೆಪ್ಪ ತೆಲಗಿ, ಸಂಗನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.


















