ಹಿಂದಿನ ಕಾಲದಲ್ಲಿ ಗುರುಕುಲದಲ್ಲಿ ಶಿಕ್ಷಣ ಪಡೆಯಲು ಉಪನಯನ ಸಂಸ್ಕಾರ ಅನಿವಾರ್ಯ
ಉಪನಯನ ಸಂಸ್ಕಾರದ ಜನಕರು ಶ್ರೀ ಸವಿತ ಮಹರ್ಷಿಗಳು
ತಾಲೂಕ ಆಡಳಿತದಿಂದ ಆಡಳಿತಸೌಧ ಸಭಾಭವನದಲ್ಲಿ ನಡೆದ ಶ್ರೀ ಸವಿತ ಮಹರ್ಷಿ ಜಯಂತಿ ಆಚರಣೆ.
ಮುದ್ದೇಬಿಹಾಳ : ಚೌಲ ಹಾಗೂ ಉಪನಯನ ಸಂಸ್ಕಾರದ ಉಗಮವೇ ಕ್ಷೌರ ಸಂಸ್ಕಾರವಾಗಿದ್ದು, ಉಪನಯನ ಸಂಸ್ಕಾರದ ಜನಕರು ಶ್ರೀ ಸವಿತ ಮಹರ್ಷಿಗಳೆಂದು ಸವಿತಾ ಸಮಾಜದ ಸಂಶೋಧಕ ಹಾಗೂ ಲೇಖಕ ಮಹೇಶ್ ಕುಮಾರ್ ತೇಲಂಗಿ ಹೇಳಿದರು.
ಅವರು ರವಿವಾರ ತಾಲೂಕ ಆಡಳಿತದಿಂದ ಆಡಳಿತಸೌಧ ಸಭಾಭವನದಲ್ಲಿ ನಡೆದ ಶ್ರೀ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಸವಿತ ಮಹರ್ಷಿಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಗುರುಕುಲದಲ್ಲಿ ಶಿಕ್ಷಣ ಪಡೆಯಲು ಉಪನಯನ ಸಂಸ್ಕಾರ ಅನಿವಾರ್ಯವಾಗಿತ್ತು. ಉಪನಯನದಿಂದ ಅಜ್ಞಾನ ಕಳೆದು ಸುಜ್ಞಾನ ದೊರೆಯುತ್ತಿತ್ತು. ಈ ಮಹತ್ವದ ಸಂಸ್ಕಾರಕ್ಕೆ ದಾರಿ ತೋರಿದವರು ಸವಿತ ಮಹರ್ಷಿಗಳು ಎಂದು ಹೇಳಿದರು.
ಉಪನಯನ ಸಂಸ್ಕಾರವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ವರ್ಣದವರು ಪಡೆದು ಗುರುಕುಲ ಶಿಕ್ಷಣ ಪಡೆಯುತ್ತಿದ್ದರು. ಆದರೆ ಕಾಲಕ್ರಮೇಣ ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಗದವರು ಈ ಸಂಸ್ಕಾರವನ್ನು ಮರೆತರು. ವಾಸ್ತವವಾಗಿ ಉಪನಯನ ಸಂಸ್ಕಾರ ಎಲ್ಲರೂ ಪಡೆದುಕೊಳ್ಳಬಹುದಾದ ಮಹತ್ವದ ಸಂಸ್ಕಾರವಾಗಿದೆ ಎಂದರು.
ಮಕಾಲೆ ಶಿಕ್ಷಣ ಪದ್ಧತಿಯಿಂದ ಗುರುಕುಲ ಶಿಕ್ಷಣ ನಿಂತಿತು. ಜೊತೆಗೆ ಉಪನಯನ ಸಂಸ್ಕಾರವೂ ನಶಿಸಿ ಹೋಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಜಗತ್ತಿಗೆ ಗಾಯನ ರೂಪದಲ್ಲಿ ಸಾಮವೇದ ನೀಡಿದ ಸವಿತ ಮಹರ್ಷಿಗಳು ಗಾಯತ್ರಿ ಮಾತೆಯ ಜನಕರಾಗಿದ್ದಾರೆ. ದೇವಾಲಯಗಳಲ್ಲಿ ಪುರೋಹಿತರು ಋಗ್ವೇದ ಪಠಣ ಮಾಡಿದರೆ, ಸವಿತಾ ಜನಾಂಗದವರು ಸಾಮವೇದವನ್ನು ಗಾಯನ ರೂಪದಲ್ಲಿ ನಾದಸ್ವರ ಮೂಲಕ ಇಂದಿಗೂ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ನುಡಿಸುತ್ತಿರುವುದು ವಿಶೇಷ ಎಂದು ಹೇಳಿದರು.
ಭಾರತದ ಪ್ರಥಮ ಅರಸರು ಸವಿತಾ ಸಮಾಜದ ಮಹಾಪದ್ಮನಂದರು ನಂದವಂಶಸ್ಥರಾಗಿದ್ದಾರೆ. ವಿಶ್ವದ ಪ್ರಥಮ ವೈದ್ಯರು, ಪ್ಲಾಸ್ಟಿಕ್ ಸರ್ಜನ್‌ಗಳು, ದಂತ ಚಿಕಿತ್ಸಕರು ಸವಿತಾ ಸಮಾಜದಿಂದಲೇ ಬಂದವರು. ಕರ್ನಾಟಕದ ಬಿಜ್ಜಳ ಮಹಾರಾಜರು, ಶರಣ ಪರಂಪರೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲೂ ಸವಿತಾ ಸಮಾಜದವರು ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹತ್ವದ ಸಮಾಜಕ್ಕೆ ಇಂದು ನಾಗರಿಕ ಸಮಾಜದಲ್ಲಿ ತಕ್ಕ ಮನ್ನಣೆ ಸಿಗುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್ ಮಾತನಾಡಿ, ಸಪ್ತಮಹರ್ಷಿಗಳಲ್ಲಿ ಶ್ರೀ ಸವಿತ ಮಹರ್ಷಿಗಳು ಒಬ್ಬರಾಗಿದ್ದು, ಸಾಮವೇದದ 1875 ಶ್ಲೋಕಗಳನ್ನು ರಚನೆ ಮಾಡಿದ್ದಾರೆ. ಋಗ್ವೇದದ ಶ್ಲೋಕಗಳನ್ನು ಗಾಯನ ರೂಪದಲ್ಲಿ ನೀಡಿದ್ದಾರೆ. ಋಗ್ವೇದ ಬ್ರಾಹ್ಮಣರಿಗೆ ಉಪಯುಕ್ತವಾದರೆ, ಸಾಮವೇದದ ಶ್ಲೋಕಗಳು ಎಲ್ಲಾ ಸಮಾಜದ ಜನರಿಗೆ ಉಪಯುಕ್ತವಾಗಿವೆ ಎಂದು ಹೇಳಿದರು.
ಶಿವನ ಬಲಗಣ್ಣಿನಿಂದ ಜನಿಸಿದ ಸವಿತ ಮಹರ್ಷಿಗಳು ಸೂರ್ಯವಂಶಜರಾಗಿದ್ದು, ಸವಿತಾ ಸಮಾಜ ಕಾಯಕನಿಷ್ಠೆಯಿಂದ ದುಡಿದು ತಿನ್ನುವ ಸಂಸ್ಕೃತಿಯ ಸಮಾಜವಾಗಿದೆ. ಋಷಿಮುನಿಗಳ ಕಾಲದಿಂದ ಇಲ್ಲಿವರೆಗೆ ಈ ಸಮಾಜ ಎಲ್ಲರೊಂದಿಗೆ ಬೆರೆತು ಪ್ರೀತಿ, ವಿಶ್ವಾಸ ಮತ್ತು ಸ್ನೇಹದಿಂದ ಬದುಕಿದೆ ಎಂದರು
ತಾಲೂಕ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಸವಿತಾ ಸಮಾಜ ಪ್ರಥಮ ವೈದ್ಯಕೀಯ ಸಮಾಜವಾಗಿದ್ದು, ಹಿಂದಿನಿಂದಲೂ ನಾಟಿ ವೈದ್ಯಪದ್ದತಿ, ಪ್ರಸೂತಿ ತಜ್ಞರಾಗಿ ಸೇವೆ ಸಲ್ಲಿಸಿ ಎಲ್ಲರಿಗೂ ಬೇಕಾದ ಸ್ನೇಹಸಮಾಜವಾಗಿದೆ. ಇಂತಹ ದಾರ್ಶನಿಕರ ಪರಿಚಯ ಎಲ್ಲರಿಗೂ ದೊರಕಲೆಂದು ಸರಕಾರದಿಂದ ಜಯಂತಿ ಆಚರಿಸಲಾಗುತ್ತಿದೆ ಎಂದರು.
ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಮಾತನಾಡಿ, ಸವಿತ ಮಹರ್ಷಿಗಳ ಆದರ್ಶ ಜೀವನವನ್ನು ಅಳವಡಿಸಿಕೊಂಡು ಯುವಕರು ಶಿಕ್ಷಣವಂತರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿರಸ್ತೆದಾರ ಎಂ. ಬಾಗವೇವಾಡಿ, ಮುಖ್ಯ ಪಶುವೈದ್ಯಾಧಿಕಾರಿ ಶಿವಾನಂದ ಮೇಟಿ, ಎಎಐ ಅಮರಪ್ಪ ಸಾಲಿ, ಕಂದಾಯ ನಿರೀಕ್ಷಕ ಪವನ ತಳವಾರ, ಸವಿತಾ ಸಮಾಜದ ಅಧ್ಯಕ್ಷ ರವಿ ತೇಲಂಗಿ, ಗೌರವ ಅಧ್ಯಕ್ಷ ಮಲ್ಲಣ್ಣ ತೇಲಂಗಿ, ದೇವೇಂದ್ರ ಶಹಾಪೂರ, ಈರಣ್ಣ ಈಡ್ಲೂರ, ಅಪ್ಪು ಶಹಾಪೂರ, ಶರಣಪ್ಪ ಮಸಾಲಜಿ, ಶ್ರೀನಿವಾಸ ಶಹಾಪೂರ, ಪ್ರವೀಣ ಮಸಾಲಜಿ, ಶ್ರೀಕಾಂತ ತೇಲಂಗಿ, ಕುಮಾರ್ ತೇಲಂಗಿ, ಸುರೇಶ್ ಮಸಾಲಜಿ, ಶಂಕ್ರಪ್ಪ ಹಡಪದ, ಭೀಮಣ್ಣ ಬಳವಾಟ, ಶಂಕರಪ್ಪ ಅಮರಗೋಳ, ತಿಪ್ಪಣ್ಣ ಶಹಾಪೂರ, ರಾಘವ್ ತೇಲಂಗಿ, ಗೌತಮ್ ಚಿಗನೂರ, ಕಾರ್ಮಿಕ ಇಲಾಖೆ ಸಿದ್ದು ನಾವಿ ಸೇರಿದಂತೆ ಸವಿತಾ ಹಾಗೂ ಹಡಪದ ಸಮಾಜದ ಬಂಧುಗಳು ಮತ್ತು ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಕ ಎಂ.ಬಿ. ಗುಡಗುಂಟಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ತಾಳಿಕೋಟೆ ರಸ್ತೆಯಲ್ಲಿರುವ ಸವಿತ ಮಹರ್ಷಿಗಳ ವೃತ್ತ ಹಾಗೂ ತಹಶಿಲ್ದಾರ ಕಚೇರಿಯಲ್ಲಿ ಸವಿತ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಲಾಯಿತು.