ಇಂಡಿ: ಈ ಸನಾತನ ಧರ್ಮ ಒಡೆಯಲು ಹಲವರು ಪ್ರಯತ್ನಿಸುತ್ತಿದ್ದಾರೆ. ಸನಾತನ ಧರ್ಮ ಉಳಿಯಬೇಕಾದರೆ ಪ್ರತಿಯೊಬ್ಬರೂ ಕನಿಷ್ಠ ಆರು ಮಕ್ಕಳನ್ನು ಹೆರಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೇಗಳ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಹೇಳಿದರು.
ಅವರು ಗುರುವಾರ ನಗರದ ಹಳೇ ಸಾಲೋಟಗಿ ರಸ್ತೆಯಲ್ಲಿರುವ ಶಿರಶ್ಯಾಡ ಸಂಸ್ಥಾನ ಹಿರೇಮಠದ ಶಾಖಾ ಮಠದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬಡ ಮಕ್ಕಳ ಉಚಿತ ಪ್ರಸಾದ ಹಾಗೂ ವಸತಿ ನಿಲಯ ಕಾಮಗಾರಿ ವೀಕ್ಷಿಸಿ, ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡು ನಂತರ ಮಾತನಾಡಿದರು.
ಮನುಷ್ಯ ಪ್ರತಿಯೊಂದನ್ನೂ ಕಷ್ಟಪಟ್ಟು ಪಡೆದುಕೊಂಡಾಗ ಮಾತ್ರ ಅದರ ಬೆಲೆ ಅವನಿಗೆ ತಿಳಿಯುತ್ತದೆ. ಬಿಟ್ಟಿ ಅಥವಾ ಉಚಿತವಾಗಿ ಪಡೆದುಕೊಂಡರೆ ಅದರ ಮೌಲ್ಯ ಅವನಿಗೆ ಗೊತ್ತಾಗಲ್ಲ. ಉಚಿತವಾಗಿ ಸಿಗುವ ಎಲ್ಲದ್ದರಿಂದ ಮನುಷ್ಯ ಉದ್ಧಾರವಾಗಲ್ಲ ಬದಲಾಗಿ ದುಷ್ಠನಾಗುತ್ತಾನೆ, ದೇಶದ್ರೋಹಿಯಾಗುತ್ತಾನೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಯಾರಿಗೂ ಸಹ ಉಚಿತವಾಗಿ ಏನನ್ನೂ ನೀಡಬಾರದು ಒಳ್ಳೆಯ ಕಾರ್ಯವಿದ್ದರೆ ಕಡಿಮೆ ಹಣ ಪಡೆದುಕೊಳ್ಳಬೇಕು ವಿನಃ ಉಚಿತ ನೀಡಬಾರದು ಎಂದರು.
ಮನುಷ್ಯ ಎಷ್ಟೇ ದೊಡ್ಡವನಾದರೂ, ಶ್ರೀಮಂತನಾದರೂ ತಂದೆ ತಾಯಿಗಳ ಋಣ ತೀರಿಸಲು ಸಾಧ್ಯವಿಲ್ಲ. ನಾವು ಅವಶ್ಯಕತೆಗಿಂತ ಒಂದಿಷ್ಟು ಹೆಚ್ಚಿನ ಆದಾಯ ಮಾಡಿಕೊಂಡು ಸಮಾಜದಲ್ಲಿನ ಬಡವರನ್ನು ಮೇಲೆತ್ತುವ ಕಾರ್ಯ ಮಾಡಬೇಕು ಎಂದರು.
ಶ್ರೀಗಳು ನಿರ್ಮಾಣ ಮಾಡುತ್ತಿರುವ ವಸತಿ ಹಾಗೂ ಅನ್ನಪ್ರಸಾದ ನಿಲಯದಲ್ಲಿ ಉಚಿತವಾಗಿ ಅನ್ನ ಹಾಗೂ ವಸತಿ ನೀಡುವ ಬದಲಾಗಿ ಅವರಿಂದ ಕನಿಷ್ಠ ದೇಣಿಗೆ ಪಡೆಯಬೇಕು. ಜಪಾನ್‌ನಂತಹ ದೇಶದಲ್ಲಿ ಯಾವುದನ್ನೂ ಉಚಿತ ನೀಡಲ್ಲ. ವಸತಿ ನಿಯಗಳಲ್ಲಿ ತಮ್ಮ ಬಟ್ಟೆಗಳನ್ನು ತಾವೇ ತೊಳೆದುಕೊಳ್ಳುವುದು, ತಮ್ಮ ಶೌಚಾಲಯ ತಾವೇ ಸ್ವಛ್ಛ ಮಾಡಿಕೊಳ್ಳುವುದನ್ನು, ಸ್ವಛ್ಛತೆ ಮಾಡುವುದನ್ನು ರೂಢಿ ಇಟ್ಟಿದ್ದಾರೆ ಎಂದರು.
ಇತ್ತೀಚೆಗೆ ಕೆಲ ಸ್ವಾಮೀಜಿಗಳು ಜಾತಿ-ಜಾತಿತಳ ಮಧ್ಯ ಬಿರುಕು ಮೂಡಿಸಿ ಸನಾತನ ಧರ್ಮ ಒಡೆಯುವ ಹುನ್ನಾರ ನಡೆಸಿದ್ದಾರೆ. ಅಂತಹ ಸ್ವಾಮೀಜಿಗಳಿಂದ ನಾವೆಲ್ಲರೂ ದೂರವಿರಬೇಕು. ಭಾರತ ದೇಶದೊಳಗೆ ಅಕ್ರಮ ವಲಸಿಗರು ಬರುತ್ತಿದ್ದಾರೆ. ಅವರಿಗೆಲ್ಲ ನಮ್ಮಲ್ಲಿ ಆಧಾರ ಕಾರ್ಡ ಮಾಡಿ ಕೊಡಲಾಗುತ್ತಿದೆ. ಅವರೆಲ್ಲ ನಮ್ಮ ದೇಶದ ಆಂತರಿಕ ಭದ್ರತೆಗೆ ಬೆದರಿಕೆ ಒಡ್ಡುತ್ತಾರೆ. ಯಾವುದೇ ಸರಕಾರವಿರಲಿ ದೇಶದ ಹಿತದೃಷ್ಠಿಯಿಂದ ಈ ಒಳನುಸುಳುವಿಕೆ ತಡೆಯಬೇಕು ಎಂದರು.
ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ವಿಜಯ ಸಂಕೇಶ್ವರ ಅವರು ಎಲ್ಲ ರಂಗದಲ್ಲೂ ವಿಶಿಷ್ಠ ಸಾಧನೆ ಮಾಡಿದ ಶ್ರೇಷ್ಠ ಉಧ್ಯಮಿಯಾಗಿದ್ದಾರೆ. ವಿಆರ್‌ಎಲ್ ಸಮೂಹ ಸಂಸ್ಥೆ ಕಟ್ಟಿ ಮೂವತ್ತು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಠಿಸಿ ಉದ್ಯೋಗದಾತರಾಗಿದ್ದಾರೆ. ಅವರು ಸಮಾಜದಲ್ಲಿ ಸನಾತನ ಧರ್ಮ ಪ್ರಚಾರಕರೂ ಆಗಿದ್ದಾರೆ. ತಾವು ಹೇಳಿದ್ದೇ ನಡೆಯಬೇಕು ಎಂಬ ಅಹಂ ಅವರ ಹತ್ತಿರ ಇಲ್ಲ. ಒಬ್ಬ ಕಾರ್ಮಿಕ ಒಳ್ಳೆಯ ಮಾತುಗಳನ್ನಾಡಿದರೂ ಅವರ ಮಾತುಗಳನ್ನು ಸಹ ಅವರು ಕೇಳುವ ಹೃದಯ ವೈಶಾಲ್ಯತೆ ಹೊಂದಿದ್ದಾರೆ ಎಂದರು.
ಜೈನಾಪೂರದ ರೇಣುಕ ಶಿವಾಚಾರ್ಯರು, ಬರಡೋಲದ ರೇವಣಸಿದ್ದ ಸ್ವಾಮೀಜಿ, ಶ್ರೀಮತಿ ಲಲಿತಾ ಸಂಕೇಶ್ವರ, ಆನಂದ ಅಕ್ಕಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಕಾಸುಗೌಡ ಬಿರಾದಾರ, ಅನೀಲ ಏಳಗಿ, ಬಾಬು ಹಂಜಗಿ, ಅನಂತ ಜೈನ, ಚಂದ್ರಶೇಖರ ಇವಣಿ, ನೀಲಕಂಠಗೌಡ ಪಾಟೀಲ, ಉಮೇಶ ಬಳಬಟ್ಟಿ, ರಾಘವೆಂದ್ರ ಕುಲಕರ್ಣಿ, ದುಂಡಯ್ಯ ಹಿರೇಮಠ, ಸಂತೋಶ ಶ್ಯಾಪೇಟಿ, ರಾಕೇಶ ಕಲ್ಲೂರ, ಮಲ್ಲಿಕಾರ್ಜುನ ಬುರಕುಲೆ, ಉಮಾ ಪಟ್ಟದಕಲ್, ಪೂಜಾ ಏಳಗಿ, ಶಶಿಕಲಾ ಆಳೂರ, ಶಶಿಕಲಾ ಬೆಟಗೇರಿ ಸೇರಿದಂತೆ ಇನ್ನಿತರರು ಇದ್ದರು.
ಶಿರಶ್ಯಾಡ ಸಂಸ್ಥಾನ ಹಿರೇಮಠದ ಶಾಖಾ ಮಠದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬಡ ಮಕ್ಕಳ ಉಚಿತ ಪ್ರಸಾದ ಹಾಗೂ ವಸತಿ ನಿಲಯ ಕಾಮಗಾರಿಯನ್ನು ವೀಕ್ಷಿಸಲು ಆಗಮಿಸಿದ್ದ ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಡಾ. ವಿಜಯ್ ಸಂಕೇಶ್ವರ ದಂಪತಿಗಳಿಗೆ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಸತ್ಕರಿಸಿದರು.


















