ನೇತಾಜಿ ದೇಶಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ
-ಸಂತೋಷ ಬಂಡೆ
ಇಂಡಿ: ನೇತಾಜಿ ಅವರಲ್ಲಿದ್ದ ಧೈರ್ಯಗಾರಿಕೆಯನ್ನು ಇಂದಿನ ವಿದ್ಯಾರ್ಥಿಗಳು ಪಾಲಿಸುವ ಮೂಲಕ ಬದುಕಿನ ಕಠಿಣ ಪರಿಸ್ಥಿತಿಗಳಲ್ಲಿ ಜಯ ಸಾಧಿಸುವುದನ್ನು ಕಲಿಯಬೇಕೆಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ನಿಮಿತ್ತ ಹಮ್ಮಿಕೊಂಡ ‘ಪರಾಕ್ರಮ ದಿವಸ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ ಮತ್ತು ರೋಗಗಳನ್ನು ಹೋಗಲಾಡಿಸಲು ಸ್ವಾವಲಂಬಿ ಭಾರತ ನಿರ್ಮಾಣದ ಕನಸು ಕಂಡ ನೇತಾಜಿ ಅವರ ದೇಶಪ್ರೇಮ, ಹೋರಾಟ, ತ್ಯಾಗ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ನೇತಾಜಿ ಅವರಲ್ಲಿದ್ದ ಧೈರ್ಯ, ಭಕ್ತಿ, ಶಿಸ್ತು, ನಾಯಕತ್ವ, ಸಂಘಟನೆಯನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರು ರಾಷ್ಟ್ರಸೇವೆ ಮಾಡಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಆಯ್ ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ನೇತಾಜಿ ಅವರ ದೂರದೃಷ್ಟಿ, ರಾಜಕೀಯ ಅನುಭವ ಮತ್ತು ಯುವಕರ ಬಗ್ಗೆ ಅವರು ಹೊಂದಿದ್ದ ದೃಷ್ಟಿಕೋನ ವಿಶಿಷ್ಟವಾದದ್ದು’ ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ,ಡಿ ಎಡ್ ಪ್ರಶಿಕ್ಷಣಾರ್ಥಿಗಳಾದ ಮುಸ್ಕಾನ ಮಂಕಣಿ, ಸಾನಿಯಾ ಪಠಾಣ, ಜುಬಿಯಾ ಬಾಗವಾನ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.


















