ಜನೇವರಿ 24 ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಅಲೋಪಥಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಾಳೆ ಜನೇವರಿ 24 ರಂದು ಶನಿವಾರ ನಡೆಯಲಿದೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಅಲೋಪಥಿ ಚಿಕಿತ್ಸೆಗಳಾದ ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆ, ಚಿಕ್ಕಮಕ್ಕಳ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ ಮತ್ತು ಬೆಂಬಲಿತ ಸೇವೆಗಳಾದ ಎಲ್ಲಾ ಬಗೆಯ ರಕ್ತಪರೀಕ್ಷೆಗಳು, ಔಷಧಾಲಯ, ತುರ್ತು ಸೇವೆಗಳು, ಆ್ಯಂಬ್ಯೂಲನ್ಸ್ ಸೇವೆಗಳು ಲಭ್ಯವಿರಲಿವೆ.
ಅಲ್ಲದೇ, ಶಿಬಿರಾರ್ಥಿಗಳಿಗೆ ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಔಷಧಿ ವಿತರಿಸಲಾಗುವುದು. ಅಷ್ಟೇ ಅಲ್ಲ, ಪ್ರಾಥಮಿಕ ರಕ್ತ ಮತ್ತು ಮೂತ್ರ ತಪಾಸಣೆಗಳನ್ನು ಮಾಡಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು. ಹೀಗೆ ಶಿಫಾರಸು ಮಾಡಲಾದ ರೋಗಗಳಿಗೆ ಶೇ. 50 ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಒಳರೋಗಿಗಳಾಗಿ ದಾಖಲಾಗುವ ಶಿಬಿರಾರ್ಥಿಗಳು ಚಿಕಿತ್ಸೆಗೆ ಅಗತ್ಯವಾಗಿರುವ ಔಷಧಿಗಳ ವೆಚ್ಚವನ್ನು ತಾವೇ ಭರಿಸಬೇಕು.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಮೊ. ನಂ. 9591682224 ಮತ್ತು 9481840452 ಸಂಪರ್ಕಿಸಬಹುದಾಗಿದೆ ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್. ಎನ್. ಬೆಂತೂರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
















