ಬಾರ್ ಲೈಸನ್ಸ್ ನೀಡಿಕೆಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಸಚಿವ ಆರ್ ಬಿ ತಿಮ್ಮಾಪುರ ರವರ ಪಾತ್ರ ಕಿಂಚಿತ್ತೂ ಇಲ್ಲ..!
Voiceofjanata.in : ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಾರ್ ಲೈಸನ್ಸ್ ನೀಡಿಕೆಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಸಚಿವ ಆರ್ ಬಿ ತಿಮ್ಮಾಪುರ ರವರ ಪಾತ್ರ ಕಿಂಚಿತ್ತೂ ಇಲ್ಲ ಆದರೂ ವಿರೋಧ ಪಕ್ಷದ ಬಿಜೆಪಿ ನಾಯಕರು ವೃತಾ ಸಚಿವರ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ರಮೇಶ ಗುಬ್ಬೆವಾಡ ಅವರು ತೀವ್ರವಾಗಿ ಖಂಡಿಸಿದ್ದಾರೆ, ಸಚಿವರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಅಬಕಾರಿ ಇಲಾಖೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹಾಗಾಗಿ ಅವರ ಏಳಿಗೆಯನ್ನು ಸಹಿಸದ ವಿರೋಧ ಪಕ್ಷದವರು ಷಡ್ಯಂತ್ರ ನಡೆಸಿದ್ದಾರೆ, ತಿಮ್ಮಾಪುರ ಅವರು ಒಬ್ಬ ದಲಿತರಾಗಿರುವದರಿಂದ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಕುತಂತ್ರ ಮಾಡಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಅಧಿಕಾರಿಯ ಪಾತ್ರವಿದ್ದು, ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಚಿವರು ಯಾವುದೇ ತಪ್ಪು ಮಾಡಿಲ್ಲ, ಆ ಬಗ್ಗೆ ಯಾವುದೇ ಸಾಕ್ಷಿ ಪುರಾವೆಗಳು ಇರುವದಿಲ್ಲ. ಮಿಗಿಲಾಗಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಸಚಿವರೇ ಹೇಳಿಕೆಯನ್ನು ನೀಡಿದ್ದಾರೆ. ಆದರೂ ವಿರೋಧ ಪಕ್ಷದವರು ಸಣ್ಣಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಸಚಿವ ತಿಮ್ಮಾಪುರ ಅವರು ಯಾವುದೇ ಕಾರಣಕ್ಕೂ ವಿರೋದಪಕ್ಷದ ಕುತಂತ್ರಕ್ಕೆ ಮಹತ್ವ ನೀಡಬಾರದು. ಇಡೀ ದಲಿತ ಸಮುದಾಯ ಅವರೊಟ್ಟಿಗೆ ಇದೆ. ಒಂದುವೇಳೆ ವಿರೋಧಪಕ್ಷದವರು ಸಚಿವರ ವಿರುದ್ದ ಷಡ್ಯಂತ್ರ ಮುಂದುವರೆಸಿದರೆ ಇಡೀ ದಲಿತ ಸಮುದಾಯ ಬೀದಿಗಿಳಿದು ಹೋರಾಡಲಿದೆ ಎಂದು ರಮೇಶ್ ಗುಬ್ಬೆವಾಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಮೇಶ್ ಗುಬ್ಬೆವಾಡ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ, ವಿಜಯಪುರ



















