ವಿಜಯಪುರ | ಖ್ಯಾತ ಉದ್ಯಮಿ, ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಗುತ್ತಿಗೆದಾರ ಡಿ.ವೈ.ಉಪ್ಪಾರ ನಿಧನ
ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಕಾಂಟ್ರಾಕ್ಟರ್ ಡಿ.ವೈ.ಉಪ್ಪಾರ್ ಇನ್ನಿಲ್ಲ
ವಿಜಯಪುರ: ಖ್ಯಾತ ಉದ್ಯಮಿ, ಗುತ್ತಿಗೆದಾರ ಡಿ.ವೈ.ಉಪ್ಪಾರ (81) ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.
ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಗುರುವಾರ(ಜ.22) ಸಂಜೆ 5ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೂಲತಃ ಬಸವನಬಾಗೇವಾಡಿ ತಾಲ್ಲೂಕು ಯಾಳವಾರ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ಅವರು, ಗುತ್ತಿಗೆ ಕಾಮಗಾರಿಗಳ ಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿಗಳ ಮೂಲಕ ಹೆಸರು ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ನಾಡಿನಲ್ಲಿ ಹೆಸರಾಂತ ಕಾಮಗಾರಿಗಳನ್ನು ಮಾಡಿ ಅವರು ಯುವ ಗುತ್ತಿಗೆದಾರರಿಗೆ ಮಾದರಿಯಾಗಿದ್ದರು.
ವಿನಮ್ರತೆ, ಶಿಸ್ತು, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ದೂರದೃಷ್ಠಿಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತಿತರ ಗಣ್ಯರು ಬೆಂಗಳೂರಿನಲ್ಲಿ ಉಪ್ಪಾರ ಅವರ ಪಾರ್ಥೀವ ಶರೀರದ ದರ್ಶನ ಪಡೆದರು.


















