ಮುದ್ದೇಬಿಹಾಳ : ಪುಣ್ಯಸ್ಮರಣೋತ್ಸವವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ, ರಚನಾತ್ಮಕ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಅದರ ಮೌಲ್ಯವನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಜ.19, 20 ಮತ್ತು 21ರಂದು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು ತಿಳಿಸಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂ. ಹಾನಗಲ್ಲ ಕುಮಾರಸ್ವಾಮಿಗಳು, ಲಿಂ. ಡಾ. ಶಿವಕುಮಾರ ಸ್ವಾಮಿಗಳು (ತುಮಕೂರು), ಲಿಂ. ಸಿದ್ದೇಶ್ವರ ಮಹಾಸ್ವಾಮಿಗಳು (ವಿಜಯಪುರ) ಹಾಗೂ ಲಿಂ. ಚನ್ನಣ್ಣ ದೇಸಾಯಿ (ಮಡಿಕೇಶ್ವರ) ಅವರ ಸ್ಮರಣಾರ್ಥ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇಲ್ಲಿ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ. ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ನಡೆಯುವ ಈ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಪ್ರಭುಗೌಡ ದೇಸಾಯಿ ಅವರು ತಮ್ಮ ತಂದೆಯ ಪುಣ್ಯಸ್ಮರಣೆಯನ್ನು ಒಂದೇ ದಿನಕ್ಕೆ ಸೀಮಿತಗೊಳಿಸದೇ, ಪರಮಪೂಜ್ಯರ ಸ್ಮರಣೆಯೊಂದಿಗೆ ಪ್ರತಿವರ್ಷ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಜ.19ರಿಂದ ಪುಣ್ಯಸ್ಮರಣೋತ್ಸವ, ಭಕ್ತ ಹಿತಚಿಂತನಾ ಸಭೆ, ವಿಶ್ವ ದಾಸೋಹ ದಿನಾಚರಣೆ, ರಾಷ್ಟ್ರೀಯ ನಾಟಕೋತ್ಸವ, ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪೌರಕಾರ್ಮಿಕರು ಮತ್ತು ಹಿರಿಯರಿಗೆ ಗೌರವ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಮಹಾಂತಪ್ಪ ನಾವದಗಿ ಮಾತನಾಡಿ, ಇಂತಹ ಮಾದರಿಯ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದಾಗಿ ಹೇಳಿದರು.
ಕಾರ್ಯಕ್ರಮಗಳ ಆಯೋಜಕರಾದ ಪ್ರಭುಗೌಡ ದೇಸಾಯಿ ಮಾತನಾಡಿ, ಕಮತಗಿಯ ಹುಚ್ಚೇಶ್ವರ ಮಹಾಸ್ವಾಮಿಗಳು, ಮಸೂತಿಯ ಪ್ರಭುಕುಮಾರ ಮಹಾಸ್ವಾಮಿಗಳು, ಗುಳೇದಗುಡ್ಡದ ಕಾಶಿನಾಥ ಮಹಾಸ್ವಾಮಿಗಳು, ಪಡೇಕನೂರದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ಕುಂಟೋಜಿಯ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಪೌರಕಾರ್ಮಿಕರು ಮತ್ತು ಹಿರಿಯರನ್ನು ಗೌರವಿಸಲಾಗುವುದು ಎಂದು ತಿಳಿಸಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳ ವಿವರ. : ಜ.19ರಂದು ಸಂಜೆ 7ಕ್ಕೆ ಹುಡ್ಕೋ ಬಡಾವಣೆಯ ಗವಿಸಿದ್ದೇಶ್ವರ ವೇದಿಕೆಯಲ್ಲಿ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ವತಿಯಿಂದ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ , ಜಂಗಮದೆಡೆಗೆ ನಾಟಕ ಪ್ರದರ್ಶನ.ಜ.20ರಂದು ಸಂಜೆ 7ಕ್ಕೆ ಕಳ್ಳರ ಸಂತೆ ನಾಟಕ ಪ್ರದರ್ಶನ., ಜ.21ರಂದು ಸಂಜೆ 7ಕ್ಕೆ ಶಿವಯೋಗಿ ಸಿದ್ದರಾಮ ನಾಟಕ ಪ್ರದರ್ಶನ.ಜ.21ರಂದು ಬೆಳಿಗ್ಗೆ 8ಕ್ಕೆ ಹಡಲಗೇರಿಯ ಹುಲಿಗೆಮ್ಮ ದೇವಿ ಭಜನಾ ಮಂಡಳಿಯಿಂದ ತತ್ವಪದಗಳ ಭಜನಾಂಜಲಿ.ನಂತರ ಹುಡ್ಕೋ ಬಡಾವಣೆಯ ಹೇಮರೆಡ್ಡಿ ಮಲ್ಲಮ್ಮ ವೃತ್ತದ ಬಳಿಯ ಉದ್ಯಾನವನದಲ್ಲಿ ಪುಣ್ಯಸ್ಮರಣೋತ್ಸವ, ಜಂಗಮೋತ್ಸವ, ವಚನ ವಂದನೆ, ಭಕ್ತ ಹಿತಚಿಂತನಾ ಸಭೆ ಹಾಗೂ ದಾಸೋಹ ನಡೆಯಲಿದೆ.