ಸಿಬ್ಬಂದಿ ಕೊರತೆಯಿಂದ ಆಧಾರ್ ಸೇವೆ ಸ್ಥಗಿತ – ಮುದ್ದೇಬಿಹಾಳದಲ್ಲಿ ಮೂರು ತಿಂಗಳಿಂದ ಜನಸಾಮಾನ್ಯರ ಪರದಾಟ.
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ಆಡಳಿತ ಸೌಧದಲ್ಲಿರುವ ತಹಶಿಲ್ದಾರರ ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯಕ್ಕೆ ಅಗತ್ಯ ಸಿಬ್ಬಂದಿ ನಿಯೋಜನೆ ಆಗದೆ ಇರುವುದರಿಂದ ಕಳೆದ ಮೂರು ತಿಂಗಳಿನಿಂದ ಜನಸಾಮಾನ್ಯರು ತೀವ್ರ ಅನಾನುಕೂಲಕ್ಕೆ ಒಳಗಾಗಿದ್ದಾರೆ.
ಆಧಾರ್ ಕಾರ್ಡ್ ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯ ದಾಖಲೆ ಆಗಿದ್ದು, ಬ್ಯಾಂಕ್ ವ್ಯವಹಾರ, ಪಿಂಚಣಿ, ವಿದ್ಯಾರ್ಥಿವೇತನ, ರೇಷನ್ ಕಾರ್ಡ್, ಆರೋಗ್ಯ ಸೇವೆ ಸೇರಿದಂತೆ ಬಹುತೇಕ ಸರಕಾರಿ ಸೌಲಭ್ಯಗಳಿಗೆ ಇದು ಕಡ್ಡಾಯವಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಗ್ರಾಮೀಣ ಪ್ರದೇಶಗಳಿಂದ ದೂರದೂರಿನಿಂದ ಆಗಮಿಸುವ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಕಚೇರಿ ಮುಂದೆ ಬಂದು ನಿರಾಶರಾಗಿ ಮರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಖಾಸಗಿ ಕೇಂದ್ರಗಳಿಗೆ ಹೋಗಿ ಹೆಚ್ಚಿನ ಹಣ ವ್ಯಯ ಮಾಡಬೇಕಾದ ಸ್ಥಿತಿಯೂ ಎದುರಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
“ಆಧಾರ್ ತಿದ್ದುಪಡಿ ಆಗದೆ ಪಿಂಚಣಿ ನಿಂತಿದೆ”, “ಮಕ್ಕಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ”, “ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲಾಗದೆ ತೊಂದರೆ ಅನುಭವಿಸುತ್ತಿದ್ದೇವೆ” ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ, ತಹಶಿಲ್ದಾರರ ಕಚೇರಿಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಆಧಾರ್ ಸೇವೆಯನ್ನು ಪುನರಾರಂಭಿಸಬೇಕು ಎಂಬುದು ಮುದ್ದೇಬಿಹಾಳದ ಜನಸಾಮಾನ್ಯರ ಆಗ್ರಹವಾಗಿದೆ.
ಸರ್ಕಾರ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಕೋಟ್ :- ಗ್ರಾಮೀಣ ಪ್ರದೇಶದಿಂದ ಜನಸಾಮಾನ್ಯರು ಬಂರುವದರಿಂ ಆಧಾರ ಕಾರ್ಡ ಮಾಡುವರು ಯಾರು ಇಲ್ಲದ ಕಾರಣ ತೊಂದರೆಯಾಗುತ್ತಿದೆ, ಈ ಕೂಡಲೇ ಆಧಾರ ಕಾರ್ಡ ನೊಂದಣಿ ಪ್ರಾರಂಬಿಸಬೇಕು.
ಪ್ರಕಾಶ ಸರೂರ.
ದಲಿತ ಮುಖಂಡರು ಮುದ್ದೇಬಿಹಾಳ.


















