ಎತ್ತಿನ ಬಂಡಿಗೆ ಕೀಲುಮಣೆ ಇಲ್ಲದೆ 150 ಕಿ.ಮೀ ಸೌದತ್ತಿಗೆ ಪ್ರಯಾಣ
ವಿಜಯಪುರ. ಸೌದತ್ತಿ ಎಂದರೆ ಸಾಕು ಎಲ್ಲಮ್ಮ ತಾಯಿಯ ಪವಾಡಗಳು ಸಾಲು ಸಾಲಾಗಿ ಕಂಡು ಬರುತ್ತವೆ.ಇಷ್ಟಾರ್ಥಗಳ ಸಿದ್ಧಿಗಾಗಿ ಭಕ್ತ ಸಮೂಹ ವಿವಿಧ ರೂಪದ ಭಕ್ತಿಯ ಸೇವೆಯನ್ನು ಸಲ್ಲಿಸುತ್ತದೆ. ಈ ತಾಯಿಗೆ ವಿಶಿಷ್ಟ ಭಕ್ತಿಯ ಸೇವೆ ಎಂಬಂತೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಮುಳವಾಡ ಗ್ರಾಮದ ಕುಟುಂಬವೊಂದು ತಮ್ಮ ಮನೆಯ ಎತ್ತಿನ ಬಂಡಿಯ ಗಾಲಿಗಳಿಗೆ ಕೀಲಿ ಮಣೆ ಹಾಕದೆ 150 ಕಿ.ಮಿ ಸೌದತ್ತಿಗೆ ಹೋಗುವುದು ವಾಡಿಕೆ.
ಮೂಲತಃ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗುಂಡುಪಲ್ಲೆ ಗ್ರಾಮದವರಾದ ಪರಸಪ್ಪ ಲೋಗಾವಿಯವರ ಕುಟುಂಬ ಸುಮಾರು ವರ್ಷಗಳಿಂದ ಮುಳವಾಡ ಗ್ರಾಮದಲ್ಲಿ ನೆಲೆಸಿದೆ. ಈ ಕುಟುಂಬ ಪ್ರತಿ ವರ್ಷ ಡಿಸೆಂಬರ್ ತಿಂಗಳ ಬಂತೆಂದರೆ ಸಾಕು ಸೌದತ್ತಿ ಯಲ್ಲಮ್ಮ ತಾಯಿಯ ದರ್ಶನಕ್ಕೆ ತಮ್ಮ ಸಹ ಕುಟುಂಬದೊಂದಿಗೆ ಹೋಗುವುದು ವಾಡಿಕೆ, ತಮ್ಮ ಮನೆಯಲ್ಲಿರುವ ಜೋಡೆತ್ತುಗಳೊಂದಿಗೆ ತಮ್ಮ ಎತ್ತಿನ ಗಾಡಿಯ ಚಕ್ರಕ್ಕೆ ಯಾವುದೇ ಕೀಲೆ ಮಣೆ ಹಾಕದೇ ,ತಾಯಿ ಯಲ್ಲಮ್ಮನ ಉದ್ಘೋಷದೊಂದಿಗೆ ಕೀಲೆಮಣೆಗೆ ಭಂಢಾರ ಎರಚುತ್ತಾ ಸೌದತ್ತಿಗೆ ಹೋಗುತ್ತಾರೆ. ಹೀಗೆ ಪ್ರತಿ ವರ್ಷ ಸೌದತ್ತಿಗೆ ಕೀಲೆ ಮಣೆ ಇಲ್ಲದೆ ಹೋಗಿ, ವಾಪಸ್ಸು ಬರುವಾಗ ಮಾತ್ರ ಕೀಲೆ ಮಣೆ ಹಾಕಿಕೊಂಡು ಬರುತ್ತೇವೆ. ಪ್ರಸ್ತುತ ಮೂರನೇ ವರ್ಷದ ಸೇವೆ ಎಂದು ಕುಟುಂಬದ ಪರಸಪ್ಪ ಲೋಗಾವಿಯವರು ಹೇಳುತ್ತಾರೆ. ಇವರ ಈ ವಶಿಷ್ಟಪೂರ್ಣ ಭಕ್ತಿ ಸೇವೆಯನ್ನು ಮಲಘಾಣ ಗ್ರಾಮದ ಜಾನಪದ ಗಾಯಕ ಶ್ರೀಶೈಲ್ ಕಾಗಲ್ ರವರು ಗುರುತಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇವರ ಭಕ್ತಿಯ ಸೇವೆಯನ್ನು ಪವಾಡವೆಂಬಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅಭಿನಂದಿಸಿ ಪ್ರಶಂಶಿದ್ದಾರೆ.



















