ರಾಯಚೂರು: ರಾಷ್ಟ್ರೀಯ ಹೆದ್ದಾರಿ ೧೫೦ ಸಿ ೬ ಮಾರ್ಗಗಳ ರಸ್ತೆ ರಾಯಚೂರು ಮತ್ತು ಗದ್ವಾಲ್ ಮೂಲಕ ಹಾದು ಹೋಗುವಂತೆ ನಿರ್ಮಿಸಲು ಕೇಂದ್ರ ಸರ್ಕಾರ ೯೨೭ ಕೋಟಿ ರೂ. ಮಂಜೂರು ಮಾಡಿದೆ. ಭಾರತಮಾಲಾ ಪರಿಯೋಜನೆ ಅಡಿಯಲ್ಲಿ ಸೋಲ್ಲಾಪೂರು, ಕರ್ನೂಲ್, ಚೈನ್ನೈ ಆರ್ಥಿಕ ಕಾರಿಡರ್ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ಸಿ ನಿರ್ಮಿಸಲಾಗುತ್ತಿದೆ. ರಾಯಚೂರು, ಗದ್ವಾಲ್ ರಸ್ತೆಯಿಂದ ಜುಲೈಕಲ್ ವರೆಗೆ ೬ ಮಾರ್ಗಗಳ ರಸ್ತೆ ನಿರ್ಮಿಸಲಾಗುತ್ತಿದೆ.
ಗ್ರೀನ್ ಫೀಲ್ಡ್ ರಾಷ್ಟ್ರೀಯ ಹೆದ್ದಾರಿ ವಿಭಾಗ ಈ ಕಾಮಗಾರಿ ನಿರ್ವಹಿಸುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಅನುದಾನ ಮಂಜೂರಿ ಮಾಡಿದ್ದಾರೆ. ಸಂಸದ ರಾಜಾ ಅಮರೇಶ್ವರ ನಾಯಕ ಅವರು ೬ ಮಾರ್ಗ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದ್ದರು. ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಮಹಿಬೂಬ್ ನಗರ, ಗುಂತಕಲ್ ವರೆಗೂ ರಾಷ್ಟ್ರೀಯ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತದೆ.
ಗುಲ್ಬರ್ಗಾದಿಂದ ಗುಂತಕಲ್ ವರೆಗೆ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಗದ್ವಾಲ್, ರಾಯಚೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದ ಬಹುತೇಕ ಪ್ರಮುಖ ರಸ್ತೆಗಳ ಸಂಪರ್ಕಕ್ಕೆ ಜಿಲ್ಲೆ ಕೇಂದ್ರ ಸ್ಥಾನವಾಗಲಿದೆ. ಕೇಂದ್ರ ಸರ್ಕಾರ ಈ ರಸ್ತೆ ಮಂಜೂರಿ ಮಾಡಿದ ಕ್ರಮಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಸ್ವಾಗತಿಸಿದ್ದಾರೆ. ಅಲ್ಲದೇ, ದಕ್ಷಿಣ ಕೇಂದ್ರ ವಲಯದ ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಬಾಬುರಾವ್ ಅವರು ಸಹ ಇದನ್ನು ಸ್ವಾಗತಿಸಿದ್ದಾರೆ.
ನಿತಿನ್ ಗಡ್ಕರಿ ಅವರು ಈ ಬಗ್ಗೆ ಟ್ವಿಟ್ ಮಾಡುವ ಮೂಲಕ ೬ ಮಾರ್ಗಗಳ ಈ ರಸ್ತೆಯನ್ನು ನಿರ್ಮಿಸುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಗದ್ವಾಲ್ ನಂತರ ಎರಬಲ್ಲಿ ಚೌಕ್ ಬಳಿ ಹೈದ್ರಾಬಾದ್ ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಈ ರಸ್ತೆ ಸಂಪರ್ಕ ಕಲ್ಪಿಸಲಿದೆ. ಈ ಉದ್ದೇಶಿತ ರಸ್ತೆ ನಿರ್ಮಾಣದಿಂದ ಈ ಭಾಗದ ರಾಯಚೂರು ಜಿಲ್ಲೆ ಪ್ರಮುಖ ಸಂಪರ್ಕವನ್ನು ಹೊಂದಿದ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ.