ಮುದ್ದೇಬಿಹಾಳ: ಒಂದೇ ಕುಟುಂಬದ ಅಕ್ಕ, ತಮ್ಮ,
ಅಳಿಯ ನೀರುಪಾಲಾಗಿರುವ ಘಟನೆ ಪಟ್ಟಣದ ಶಿರೋಳ ರಸ್ತೆಯಲ್ಲಿರುವ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ನ.11ರ ಮಂಗಳವಾರ ಘಟನೆ ನಡೆದಿದೆ.
ಸುಡುಗಾಡು ಸಿದ್ದ ಸಮುದಾಯದ ಬಸಮ್ಮ ಚಿನ್ನಪ್ಪ ಕೊಣ್ಣೂರ (20), ತಮ್ಮ ಸಂತೋಷ ಚಿನ್ನಪ್ಪ ಕೊಣ್ಣೂರ (18), ಅಳಿಯ ರವಿ ಹಣಮಂತ ಕೊಣ್ಣೂರ (18) ನೀರುಪಾಲಾದವರು.
ಬಸಮ್ಮ ಬಟ್ಟೆ ತೊಳೆಯಲೆಂದು ಕಾಲುವೆಗೆ ಬಂದಾಗ ಕಾಲು ಜಾರಿ ನೀರಿಗೆ ಬಿದ್ದರು. ಇದನ್ನು ನೋಡಿದ ತಮ್ಮ ಸಂತೋಷ ಅಕ್ಕನನ್ನು ಕಾಪಾಡಲು ನೀರಿಗೆ ಜಿಗಿದಿದ್ದಾನೆ. ಇವರಿಬ್ಬರನ್ನು ಕಾಪಾಡಲು ರವಿ ಕೂಡ ನೀರಿಗೆ ಜಿಗಿದಿದ್ದಾನೆ. ಆದರೆ ನೀರಿನ ರಭಸಕ್ಕೆ, ಕಾಲುವೆಯಲ್ಲಿ ಆಳವಾದ ಮಟ್ಟದಲ್ಲಿ ನೀರಿದ್ದುದರಿಂದ ಇವರು ಮೇಲೆ ಬರಲಾಗದೆ ಮುಳುಗಿದರು ಎಂದು ಪ್ರತ್ಯಕ್ಷದರ್ಶಿ ಬಸಮ್ಮನ ವೈನಿ ರೂಪಾ, ಬಸಮ್ಮನ ಅಕ್ಕ ಹಣಮವ್ವ ತಿಳಿಸಿದ್ದಾರೆ.
ಸ್ಥಳಕ್ಕೆ ಪಿಎಸೈ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಆಲಮಟ್ಟಿಯ ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಲುವೆಯಲ್ಲಿ ನೀರಿನ ಹರಿವನ್ನು ಸ್ಥಗಿತಗೊಳಿಸಲು ಸೂಚಿಸಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಬಸವರಾಜ ಬಿರಾದಾರ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶವಗಳ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರು, ಬಂಧುಗಳ ಆಕ್ರಂದನವಾಗಿದೆ.
ಮಾಜಿ ಶಾಸಕ ಸಾಂತ್ವನ, ಆರ್ಥಿಕ ನೆರವು
ವಿಷಯ ತಿಳಿದು ಘಟನೆ ಸ್ಥಳಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ವೈಯುಕ್ತಿಕವಾಗಿ ಆ ಕುಟುಂಬಕ್ಕೆ1 ಲಕ್ಷ ರೂ ಆರ್ಥಿಕ ನೆರವು ಒದಗಿಸುವ ವಾಗ್ದಾನ ಮಾಡಿದರು.
ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಮೃತರಿಗೆ ತಲಾ ರೂ 5 ಲಕ್ಷ ಪರಿಹಾರ ಕೊಡುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು. ಇವರದ್ದು ಅಲೆಮಾರಿ ಕುಟುಂಬವಾಗಿದ್ದು ಕಡುಬಡತನದ ಜೀವನ ನಡೆಸುವ ಸ್ಥಿತಿ ಇದೆ. ಇವರ ಮಕ್ಕಳನ್ನು ಕಳೆದುಕೊಂಡು ಹತಾಶರಾಗಿದ್ದಾರೆ. ಇವರಿಗೆ ಕೂಡಲೇ ಜಿಲ್ಲಾಡಳಿತ, ತಾಲೂಕಾಡಳಿತ ಆರ್ಥಿಕ ನೆರವು ಒದಗಿಸಿ ನೆರವಾಗಬೇಕು. ಸ್ಥಳೀಯ ಶಾಸಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರ್ಥಿಕ ನೆರವು ಒದಗಿಸಿ ಅಧಿಕಾರಿಗಳಿಗೆ ಸೂಚಿಸಿ ಹೆಚ್ಚಿನ ಪರಿಹಾರ ದೊರಕಿಸಿಕಡಲು ಮುಂದಾಗಬೇಕು ಎಂದರು.