ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಜಯಗೆ ಸಚಿವ ಶಿವಾನಂದ ಪಾಟೀಲ ಸನ್ಮಾನ
ವಿಜಯಪುರ : ದೇಶದ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿರುವ ಬಸವನಬಾಗೇವಾಡಿ ವಿಧಾನಸಭೆ ವ್ಯಾಪ್ತಿಯ ಯುವಪ್ರತಿಭೆ ಸಂಜಯಕುಮಾರ ಬಿರಾದಾರ ಅವರನ್ನು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಸನ್ಮಾನಿಸಿದರು.
ಕೇಂದ್ರ ಸರಕಾರದ ಯುವ ಸಬಲೀಕರಣ ಸಚಿವಾಲಯ ನೀಡುವ ಪ್ರತಿಷ್ಠಿತ ಮೈ ಭಾರತ್ ರಾಷ್ಟ್ರೀಯ ಸೇವಾ ಯೋಜನೆಯ ಪ್ರಶಸ್ತಿಗೆ ಜಿಲ್ಲೆಯ ತಾವು ಪ್ರತಿನಿಧಿಸುವ ಬಸವನಬಾಗೇವಾಡಿ ಕ್ಷೇತ್ರದ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಸಂಜಯಕುಮಾರ ಯಂಕನಗೌಡ ಬಿರಾದಾರ ಭಾಜನರಾಗಿದ್ದರು. ಅಲ್ಲದೇ ಈಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು.
ರಾಷ್ಟ್ರೀಯ ಪ್ರಶಸ್ತಿ ಮೂಲಕ ಬಸವಜನ್ಮಭೂಮಿಗೆ ಕೀರ್ತಿ ತಂದಿರುವ ಸಂಜಯಕುಮಾರ ಬಿರಾದಾರ ಅವರನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಪ್ರಧಾನ ಕಛೇರಿಯಲ್ಲಿ ಸಚಿವರು ಸನ್ಮಾನಿಸಿ,ಗೌರವಿಸಿದರು.
ಸಂಜಯ ತಮ್ಮ ಸಾಧನೆಯಿಂದ ಬಸವನಬಾಗೇವಾಡಿ ತಾಲೂಕಿಗೆ ಮಾತ್ರವಲ್ಲ ಜಿಲ್ಲೆಯ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ. ಅವರ ಸಾಧನೆ ಇಂದಿನ ಯುವ ಸಮೂಹಕ್ಕೆ ಪ್ರೇರಣೆ, ಅನುಕರಣೀಯ ಮಾತ್ರವಲ್ಲದೆ ಪ್ರೋತ್ಸಾಹದಾಯಕವಾಗಿದೆ ಎಂದು ಸಚಿವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಜಯಕುಮಾರ ಅವರ ತಂದೆ ಯಂಕನಗೌಡ ಬಿರಾದಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.