ಮುಖ್ಯ ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
ವಿಜಯಪುರ ನಗರದ ಬಡಿಕಮಾನ್ ದಿಂದ ಅತಾವುಲ್ಲಾ ಸರ್ಕಲ್ ವರೆಗಿನ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದ ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ರಸ್ತೆಯನ್ನು ಸಂಬAಧಿಸಿದ ಮಹಾನಗರ ಪಾಲಿಕೆಯು ಕೂಡಲೆ ದುರಸ್ತಿಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ನಗರದ ನಿವಾಸಿಗಳು ಬಡಿಕಮಾನ್ ಹತ್ತಿರದ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ಇರಫಾನ ಶೇಖ್ ಮಾತನಾಡಿ, ಇಲ್ಲಿನ ವಾರ್ಡ್ ನಂ. ೨೩, ೨೪, ೨೫ರಲ್ಲಿ ಬರುವ ಮುಖ್ಯ ರಸ್ತೆಯಲ್ಲಿ ನಿತ್ಯ ಹಗಲಿರುಳು ಸಹಸ್ರಾರು ಜನರು ಬೈಕ್, ಅಟೋ ಸೇರಿದಂತೆ ವಿವಿಧ ವಾಹನದ ಮೂಲಕ ಸಂಚರಿಸುತ್ತಾರೆ. ಕಳೆದ ೩ ವರ್ಷಗಳಿಂದ ಈ ರಸ್ತೆ ಹಾಳಾಗಿದೆ. ಈ ದುಸ್ಥಿತಿ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನಗರದ ಶಾಸಕರು ಇತ್ತ ಗಮನಿಸುತ್ತಿಲ್ಲ ಎಂದು ದೂರಿದರು.ಇಲಿಯಾಸ ಸಿದ್ದಿಕಿ ಮಾತನಾಡಿ, ಮುಖ್ಯ ಮಾರ್ಗದಲ್ಲಿ ಆಳವಾದ ತಗ್ಗು ಗುಂಡಿಗಳಿವೆ.
ಮಳೆಯಾದರಂತೂ ಇಲ್ಲಿ ಸಂಚರಿಸುವದು ಕರ ಕಷ್ಟ. ಈ ಹಿಂದೆ ರಸ್ತೆಯಲ್ಲಿ ಸಂಚರಿಸಲಾಗದೆ ಹಲವರು ಎಡವಿ ಬಿದ್ದು ಗಾಯಗೊಂಡಿದ್ದಾರೆ. ಆದ್ದರಿಂದ ಪಾಲಕೆಯ ಆಯುಕ್ತರು ಈ ರಸ್ತೆಯಲ್ಲಿ ಜೀವಹಾನಿಯಾಗುವಂಥಹ ಅಪಘಾತಗಳು ಸಂಭವಿಸುವ ಮುನ್ನ ಕೂಡಲೆ ಎಚ್ಚೆತ್ತು. ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು. ಹಾಫಿಜ್ ಸಿದ್ದಿಕಿ ಮಾತನಾಡಿ, ರಸ್ತೆಯಿಂದ ಟ್ರಾಫಿಕ್ ಜಾಂ ಮತ್ತು ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ. ಕೆಸರು ಮತ್ತು ಧೂಳಿನಿಂದ ಸಾರ್ವಜನಿಕ ಆರೋಗ್ಯಕ್ಕೂ ಹಾನಿಯಾಗಿದೆ. ಆದ್ದರಿಂದ ಸರ್ಕಾರ ಕೂಡಲೆ ರಸ್ತೆ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವಿಕರಿಸಿ ಕೂಡಲೆ ರಸ್ತೆ ದುರಸ್ತಿಗೊಳಿಸುವ ಭರವಸೆ ನೀಡಿದರು. ಈ ಪ್ರತಿಭಟನೆಯಲ್ಲಿ ಆಸಿಫ್ ಇನಾಮದಾರ, ಯಾಕುಬ್ ನಾಟಿಕಾರ, ಜಿಯಾವುಲ್ಲಾ ಪಠಾಣ ಸೇರಿದಂತೆ ನಗರದ ಹಲವು ನಿವಾಸಿಗಳು ಭಾಗವಹಿಸಿದ್ದರು.