ತಾಲೂಕು ಬಣಜಿಗ ಸಮಾಜದ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಸಮಾರಂಭ
ಬಣಜಿಗರು ನ್ಯಾಯದ ತಕ್ಕಡಿಯ ಪರಿಪಾಲಕರು-ಶೆಟ್ಟರ್
ಮುದ್ದೇಬಿಹಾಳ: ನ್ಯಾಯದ ತಕ್ಕಡಿಯ ಪರಿಪಾಲಕರಾಗಿರುವ ಬಣಜಿಗ ಸಮಾಜದ ಶಕ್ತಿ ರಾಜ್ಯದಲ್ಲಿ ಬಲಿಷ್ಠವಾಗಿದೆ. ಬಸವಣ್ಣ, ಅಕ್ಕಮಹಾದೇವಿ ಈ ಸಮಾಜಕ್ಕೆ ದಿಕ್ಸೂಚಿ. ೧೨ನೇ ಶತಮಾನದ ಶರಣರ ತತ್ವ ಪಾಲಿಸುವ ಸಮಾಜ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ಶ್ರೀ ವಿಜಯಮಹಾಂತೇಶ ಮಂಗಲ ಭವನದಲ್ಲಿ ರವಿವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಣಜಿಗ ಸಮಾಜ ಎಲ್ಲರೊಂದಿಗೂ ಹೊಂದಿಕೊಂಡು ಹೋಗುವಂಥದ್ದು. ನಮಗೆ ಸಂಘರ್ಷ ಬೇಡ. ರಾಜ್ಯದ ೯ ಮುಖ್ಯಮಂತ್ರಿಗಳಲ್ಲಿ ೭ ಮುಖ್ಯಮಂತ್ರಿಗಳು, ಒಬ್ಬ ರಾಷ್ಟçಪತಿ (ಬಿ.ಡಿ.ಜತ್ತಿ) ಈ ಸಮಾಜದವರು ಎನ್ನುವುದು ಹೆಮ್ಮೆಯ ಸಂಗತಿ. ವೀರಶೈವ ಲಿಂಗಾಯತ ಸಮಾಜ ಒಂದು ಎನ್ನುವ ಸಂದೇಶ ಸಾರಬೇಕಾಗಿದೆ ಎಂದರು.
ವೀರಶೈವ ಲಿಂಗಾಯತ ಸಮಾಜ ಬಹಳ ದೊಡ್ಡದಿದೆ. ನಾನು ಸಿಎಂ ಇದ್ದಾಗ ಈ ಸಮಾಜಕ್ಕೆ ೨ಎ ಮೀಸಲಾತಿ ಸೌಲಭ್ಯ ಕೊಟ್ಟಿದ್ದೇನೆ. ಹಿಂದು ಅನ್ನೋದು ಸಂವಿಧಾನಬದ್ಧ ಧರ್ಮ. ಸಮೀಕ್ಷೆಯಲ್ಲಿ ಧರ್ಮ ಹಿಂದು ಎಂದು, ಜಾತಿ ವೀರಶೈವ ಲಿಂಗಾಯತ ಎಂದು, ಉಪಜಾತಿಯಲ್ಲಿ ನಮ್ಮ ನಿಜವಾದ ಜಾತಿ ಬರೆಸಬೇಕು. ವೀರಶೈವ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಿಲ್ಲ ಎನ್ನುವುದು ಗೊತ್ತಿರಬೇಕು. ವಿದ್ಯಾರ್ಥಿಗಳು ಸಾಧನೆ ಜೊತೆಗೆ ತಂದೆ ತಾಯಿ ಸೇವೆ ಮರೆಯಬಾರದು. ಸಮಾಜದ ಬಡವರನ್ನು ಮೇಲೆತ್ತಲು ಉಳ್ಳವರು ಮುಂದಾಗಬೇಕು ಎಂದರು.
ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಶೆಟ್ಟರ್ ಸಿಎಂ ಆಗಿದ್ದಾಗ ಉಕದ ನೀರಾವರಿ ಯೋಜನೆಗಳಿಗೆ ೧೭೨೩೦ ಕೋಟಿ, ಈ ಭಾಗದ ಚಿಮ್ಮಲಗಿ, ಮುಳವಾಡ ಏತ ನೀರಾವರಿಗೆ ೧೮೦೦ ಕೋಟಿ, ಇದರಲ್ಲಿ ಮುದ್ದೇಬಿಹಾಳದ ನೀರಾವರಿ ಯೋಜನೆಗಳಿಗೆಂದೆ ೮೦೦ ಕೋಟಿ ನೀಡಿದ್ದರು. ನಾನಾಗ ವಿಪಕ್ಷದಲ್ಲಿದ್ದರೂ ನಮ್ಮ ಭಾಗಕ್ಕೆ ಹೆಚ್ಚು ಅನುದಾನ ನೀಡಿದ್ದರು. ನಮ್ಮವರೇ ಸಿಎಂ ಇದ್ದಾಗ ಉಕ ಭಾಗಕ್ಕೆ ಹೆಚ್ಚು ಅನುಕೂಲ ಆಗುತ್ತದೆ. ಸಮಾಜ ಸಂಘಟನೆಯಲ್ಕಿ ತಪ್ಪಿಲ್ಲ. ಆದರೆ ಸಮಾಜ ಸಂಘಟನೆಯ ವೇಳೆ ನಮ್ಮತನ ಮರೆಯಬಾರದು. ವೀರಶೈವ ಲಿಂಗಾಯತರು ಒಂದಾಗಿ ಹೋದರೆ ನಮ್ಮದೆ ಅಧಿಕಾರ. ನಮ್ಮನ್ನು ಒಡೆಯುವ ಪ್ರಯತ್ನ ನಡೆಯುತ್ತಿದ್ದು ಇದರಲ್ಲಿ ನಮ್ಮವರೇ ಇದ್ದಾರೆ. ಸ್ವಾರ್ಥಿಗಳು ಸಮಾಜ ಬಳಸಿಕೊಳ್ತಿದ್ದಾರೆ. ಮುದ್ದೇಬಿಹಾಳ ಹಿಂದೆ ಹೇಗಿತ್ತು, ಈಗ ಹೇಗಾಗಿದೆ ಅನ್ನೋದು ನಿಮಗೆಲ್ಲರಿಗೂ ಗೊತ್ತಿದೆ. ಮುಂದೆಯೂ ನಿಮ್ ಜೊತೆ ನಾನಿರುತ್ತೇನೆ ಎಂದರು.
ಜಿಪಂಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಬಣಜಿಗ ಸಮಾಜದವರು ಯಾರೇ ಬೈದರೂ, ಟೀಕಿಸಿದರೂ ಪ್ರತ್ಯುತ್ತರಿಸುವ ಗೋಜಿಗೆ ಹೋಗುವುದಿಲ್ಲ. ಸಮಯ ಬಂದಾಗ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಬಣಜಿಗರದ್ದು ಎಲ್ಲರೂ ಒಪ್ಪಿಕೊಳ್ಳುವ ಸಮಾಜ. ತಕ್ಕಡಿ ಚಿಹ್ನೆ ನ್ಯಾಯದ ಸಂಕೇತವಾಗಿದ್ದು ನ್ಯಾಯ ಮಾಡುವ ಸ್ಥಾನದಲ್ಲಿ ಬಣಜಿಗರಿದ್ದಾರೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಮುದ್ದೇಬಿಹಾಳ ಕುಡಿಯುವ ನೀರಿನ ಯೋಜನೆಗೆ ೯.೫ ಕೋಟಿ, ಶೆಟ್ಟರ್ ಸಿಎಂ ಇದ್ದಾಗ ಚಿಮ್ಮಲಗಿ ಏತ ನೀರಾವರಿಗೆ ಅನುದಾನ ನೀಡಿದ್ದಾರೆ. ಸಹಾಯ ಮಾಡಿದವರನ್ನು ಪಕ್ಷಭೇದ ಮರೆತು ಸ್ಮರಿಸಬೇಕು. ಯಾರ್ ಜೊತೆಗಾದ್ರೂ ಕೆಟ್ಟಸ್ತನ ಕಟ್ಕೋಳಿ ಆದರೆ ಬಣಜಿಗರ ಜೊತೆ ಮಾತ್ರ ಕೆಟ್ಟಸ್ತನ ಕಟ್ಕೋಬ್ಯಾಡ್ರಿ ಎಂದು ನಮ್ಮ ತಾತ ಹೇಳ್ತಿದ್ದರು ಎಂದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ, ಶಿಕ್ಷಕ ಅಶೋಕ ಹಂಚಲಿ ಅವರು, ಬಣಜಿಗರು ವಚನಗಳ ನಿಜವಾದ ಸಂರಕ್ಷಕರು. ಬಸವಣ್ಣನವರ ವಾರಸುದಾರರು ಬಣಜಿಗರು ಎಂದು ಧೈರ್ಯದಿಂದ ಹೇಳಬಹುದು ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಅಶೋಕ ಚಟ್ಟೇರ, ದಿವ್ಯಸಾನಿಧ್ಯ ವಹಿಸಿದ್ದ ಕಿಲ್ಲಾ ಹೊಸಮಠದ ಅಮರೇಶ್ವರ ದೇವರು ಮಾತನಾಡಿದರು.
ಗಣ್ಯರಾದ ಬಸವರಾಜ ಮೋಟಗಿ, ಎಂ.ಬಿ.ನಾವದಗಿ, ಬಿ.ಎಂ.ತಾಳಿಕೋಟಿ ವಕೀಲರು, ಸಂಘದ ಗೌರವಾಧ್ಯಕ್ಷ ಎಂ.ಎಸ್.ನಾವದಗಿ ವಕೀಲರು, ಕಾರ್ಯದರ್ಶಿ ರಾಜು ಬಳ್ಳೊಳ್ಳಿ, ಪ್ರಭುರಾಜ ಕಲಬುರ್ಗಿ, ಸಂಗಮೇಶ ನಾವದಗಿ, ಸಂಗಮ್ಮ ಜೋಳದ, ಶೋಭಾ ನಾಗಠಾಣ, ರತ್ನಾಬಾಯಿ ದಡ್ಡಿ, ಮಹಾದೇವಿ ನಾಲತವಾಡ ವೇದಿಕೆಯಲ್ಲಿದ್ದರು.
ಸೇವಾ ನಿವೃತ್ತ ಕುಲಬಾಂಧವರನ್ನು, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಪ್ರಭು ಕಲಬುರ್ಗಿ ಅವರು ನೂತನ ಅಧ್ಯಕ್ಷ ಅಶೋಕ ಚಟ್ಟೇರ ಅವರಿಗೆ ಅಧಿಕಾರ ಹಸ್ತಾಂತರಿಸಿ ಸಮಾಜದ ಕುರಿತು ಮಾತನಾಡಿದರು.
ಸುಭಾಸಚಂದ್ರ ಹೊಳಲು ತಂಡದವರು ಪ್ರಾರ್ಥಿಸಿದರು. ಶಿಕ್ಷಕಿ ಸರೋಜಾ ಕೋರಿ ಸ್ವಾಗತಿಸಿದರು. ಮುಖ್ಯಾಧ್ಯಾಪಕ ರುದ್ರೇಶ ಕಿತ್ತೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ ಕಂಠಿ, ಕಲ್ಪನಾ ದಡ್ಡಿ, ಬಿ.ವಿ.ಕೋರಿ ಕಾರ್ಯಕ್ರಮ ನಿರ್ವಹಿಸಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾನ್ವಿತರನ್ನು ಸನ್ಮಾನಿಸುವಾಗ ಬಡತನದಲ್ಲೂ ಓದಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿರುವ ಆಶ್ರಯ ಕಾಲೋನಿಯ ಬಡ ಕುಟುಂಬದ ವಿದ್ಯಾರ್ಥಿನಿ ವಾಣಿಶ್ರೀ ಹಳ್ಳದಗೆ ಬಸವರಾಜ ದಡ್ಡಿ ವಕೀಲರು ೫೦೦೦ ರೂ ವೈಯುಕ್ತಿಕ ಸಹಾಯಧನ ನೀಡಿ ಪ್ರೋತ್ಸಾಹಿಸಿದ್ದು ವಿಶೇಷ ಮೆಚ್ಚುಗೆ ಗಳಿಸಿತು. ವೇದಿಕೆಯಲ್ಲಿ ಸಮಾಜದ ಸಂಕೇತವಾಗಿರುವ ನೈಜ ತಕ್ಕಡಿ ಇರಿಸಿದ್ದು ಗಮನ ಸೆಳೆಯಿತು.
ಮುದ್ದೇಬಿಹಾಳ, ತಾಳಿಕೋಟ ಸಾಕಷ್ಟು ಅಭಿವೃದ್ಧಿ ಆಗಿದೆ. ನಾನು ಸಿಎಂ ಇದ್ದಾಗ ಎ.ಎಸ್.ಪಾಟೀಲ ನಡಹಳ್ಳಿಯವರು ಬೆನ್ನು ಹತ್ತಿ ನೀರಾವರಿ ಕೆಲಸ ಮಾಡಿಸಿಕೊಂಡಿದ್ದಾರೆ. ಎಲ್ಲರೂ ಕೂಡಿ ಅಭಿವೃದ್ಧಿ ಕೆಲಸ ಮಾಡೋಣ.
–ಜಗದೀಶ ಶೆಟ್ಟರ್, ಮಾಜಿ ಸಿಎಂ, ಹಾಲಿ ಎಂಪಿ.
ಮತಾಂತರಗೊಂಡವರು ಬರೆಸುವ ವಿವರ ಗೊಂದಲಕ್ಕೆ ಕಾರಣವಾಗಿದೆ. ಸಮೀಕ್ಷೆಯಲ್ಲಿ ನಾವೇ ತಪು ಬರೆಸಿ ಗೊಂದಲ ಮೂಡಿಸ್ತೇವೆ. ನಾವು ಮಾಡುವ ತಪು ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸಲು ಕಾರಣ. ಸಮಾಜ ಒಡೆಯುವ ಸಂಚು ಸರ್ಕಾರ ಮಾಡೊಲ್ಲ.
-ಸಿ.ಎಸ್.ನಾಡಗೌಡ, ಶಾಸಕ