ಲಿಂಗಸೂಗೂರು: ತಾಲ್ಲೂಕಿನಾದ್ಯಂತ ಸರಕಾರಿ ಜಾಗಗಳು ಒತ್ತುವರಿಯಾಗುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ಪ್ರಭಾವಿಗಳು ಸರಕಾರಿ ಸ್ಥಳಗಳನ್ನು ಒತ್ತುವರಿ ಮಾಡುತ್ತಿದ್ದರು ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಸಂಬಂಧಿಸಿದ ಅಧಿಕಾರಿಗಳು. ಇದರಿಂದ ಅಸಮಧಾನಗೊಂಡ ಸಾರ್ವಜನಿಕರು ಅಧಿಕಾರಿಗಳು ಮತ್ತು ಪ್ರಭಾವಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ 21 ನೇ ವಾರ್ಡಿನಲ್ಲಿ ಕಳೆದ 30 ವರ್ಷಗಳಿಂದ ಹಳ್ಳಕ್ಕೆ ಹೊಂದಿಕೊಂಡು ಮಹಿಳಾ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿತ್ತು. ಇದೀಗ ಆ ಶೌಚಾಲಯಕ್ಕೆ ಬಹಿರ್ದೆಸೆಗೆ ತೆರಳಲು ಮುಖ್ಯ ರಸ್ತೆ ಇಲ್ಲ. ಅಲ್ಲದೆ ಶೌಚಾಲಯದ ಅಕ್ಕ ಪಕ್ಕದಲ್ಲಿ ಮನೆಗಳು ನಿರ್ಮಾಣವಾಗಿವೆ.
ಮಾಜಿ ಪುರಸಭೆ ಅಧ್ಯಕ್ಷರು ಶೌಚಾಲಯವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ವಾರ್ಡಿನ ನಿವಾಸಿಗಳಿಗೆ ಭರವಸೆ ನೀಡಿದ್ದರು. ಆದರೆ ಶೌಚಾಲಯ ಮಾತ್ರ ಅಭಿವೃಧ್ಧಿ ಕಾಣದೇ ಅಲ್ಪ ಸ್ವಲ್ಪ ಉಳಿದುಕೊಂಡಿದೆ. ಶೌಚಕ್ಕೆ ತೆರಳಲು ಸ್ಥಳವಿಲ್ಲದೇ ಉಪಯೋಗಕ್ಕೆ ಬಾರದಂತೆ ಮಾಡಿದ್ದು ಇದೀಗ ಶೌಚಾಲಯದ ಸ್ಥಳ ಒತ್ತುವರಿ ಮಾಡಲು ಹುನ್ನಾರ ನಡೆಸಿದ್ದನ್ನು ಖಂಡಿಸಿ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯ ಮಹಿಳೆಯರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಇನ್ನೂ ಶೌಚಾಲಯ 7-8 ವರ್ಷಗಳ ಹಿಂದಿನಿಂದ ದುರಸ್ತಿ ಮಾಡದೇ ಅದನ್ನು ಹಾಳುಕೆಡವಲಾಗಿದೆ. ಈ ಬಗ್ಗೆ ಅನೇಕ ಬಾರಿ ಪುರಸಭೆ ಅಧಿಕಾರಿಗಳ ಜನಪ್ರತಿನಿಧಿಗಳ ಗಮನಕ್ಕೆ ತಂದರೆ ಪ್ರಯೋಜನವಾಗಿಲ್ಲ.
ಇದರಿಂದ ಪ್ರಭಾವಿಗಳ ಕಣ್ಣು ಈ ಸ್ಥಳದ ಮೇಲೆ ಬಿದ್ದಿದ್ದು ಶೌಚಾಲಯದ ಸ್ಥಳವನ್ನು ಅನಧಿಕೃತವಾಗಿ ಮಾರಾಟ ಮಾಡಲು ಹೊರಟಿದ್ದಾರೆ. ಇನ್ನು ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಬಂದೆ ಪುಟ್ಟ ಹೋದೆ ಪುಟ್ಟ ಅಂತಾ ಸ್ಥಳ ನೋಡಿ ಹೋಗಿದ್ದಾರೆ, ಹೊರತು ಬೇರೇನು ಕ್ರಮಕೈಗೊಂಡಿಲ್ಲ ಅಂತಾ ವಾರ್ಡಿನ ಮಹಿಳೆಯರು ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ 30 ವರ್ಷಗಳಿಂದ ಇದ್ದ ಸಾರ್ವಜನಿಕ ಶೌಚಾಲಯ ಇದೀಗ ಉಳ್ಳವರ ಪಾಲಾಗುತ್ತಿದೆ ಎಂಬುದು ವಾರ್ಡಿನ ಮಹಿಳೆಯರ ಆತಂಕ ವ್ಯಕ್ತಪಡಿಸುತ್ತಿದ್ದು. ಇನ್ನಾದ್ರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಶೌಚಾಲಯ ದುರಸ್ತಿ ಮಾಡಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡುತ್ತಾರಾ ಕಾದು ನೋಡಬೇಕಿದೆ.