ಲಿಂಗಸೂಗೂರು : ಸ್ಥಳೀಯ ಪುರಸಭೆ 2022-23ನೇ ಸಾಲಿನ ಬಜೆಟ್ ಮಂಡನೆಗೆ ಸಂಬಂಧಿಸಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಆದಾಯ ಹೆಚ್ಚಳ, ಅಭಿವೃದ್ಧಿ, ಅಕ್ರಮಗಳಿಗೆ ಕಡಿವಾಣ ಹಾಕುವ ಕುರಿತಂತೆ ಸಲಹೆ ನೀಡಿದರು.
ಲಿಂಗಸುಗೂರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆ ಮುಖ್ಯಾಧಿಕಾರಿ 2021-22ನೇ ಸಾಲಿನಲ್ಲಿ ಮಂಡನೆ ಮಾಡಿದ್ದ ಬಜೆಟ್ ಕುರಿತಂತೆ ಸದಸ್ಯರ ಗಮನ ಸೆಳೆಯುತ್ತಿರುವಾಗಲೆ, ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಬೇಕು ಎಂಬ ಸಲಹೆಗಳು ಕೇಳಿ ಬಂದವು. ತಾಲ್ಲೂಕು ಕೇಂದ್ರವಾಗಿದ್ದು ವಾಣಿಜ್ಯ ಮಳಿಗೆಗಳನ್ನು ಗುರುತಿಸಿ ಹೆಚ್ಚಿನ ತೆರಿಗೆ ವಿಧಿಸಲು ಮುಂದಾಗಬೇಕು.
ಅಕ್ರಮ ನಳಗಳನ್ನು ಗುರುತಿಸಿ ಸಕ್ರಮಗೊಳಿಸಬೇಕು. ಮನೆಗಳ ತೆರಿಗೆ ವಸೂಲಿ ಮಾಡಲು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸದಸ್ಯರಾದ ದೊಡ್ಡನಗೌಡ ಹೊಸಮನಿ, ಬಾಬುರೆಡ್ಡಿ ಮುನ್ನೂರು ಸಲಹೆ ನೀಡಿದರು. ಪುರಸಭೆ ವ್ಯಾಪ್ತಿ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ಧಿ, ಚರಂಡಿಗಳ ನಿರ್ಮಾಣ, ವಿದ್ಯುತ್ ಬೀದಿ ದೀಪಗಳ ಅಳವಡಿಕೆ, ಶುದ್ಧ ಕುಡಿವ ನೀರು ಪೂರೈಕೆಗೆ ಪೈಪಲೈನ್ ವಿಸ್ತರಣೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಆದ್ಯತೆ ನೀಡಬೇಕು ಎಂದು ಸದಸ್ಯರಾದ ರುದ್ರಪ್ಪ ಬ್ಯಾಗಿ, ಮಹಾಂತೇಶ ನರಕಲದಿನ್ನಿ ತಿಳಿಸಿದರು. ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಕಟ್ಟಡಗಳು ಸೇರಿದಂತೆ ಪೊಲೀಸ್, ಜೆಸ್ಕಾಂ, ಅಗ್ನಿಶಾಮಕ, ಅಂಚೆ, ಆರೋಗ್ಯ ಇಲಾಖೆಗಳ ವಸತಿಗೃಹಗಳ ತೆರಿಗೆ, ನೀರಿನ ಕರ ವಸೂಲಿಗೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು.
ಉದ್ಯಾನ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮಹಾಂತೇಶ ಗಮನ ಸೆಳೆದರು. 15ನೇ ಹಣಕಾಸು, ಎಸ್‍ಎಫ್‍ಸಿ ಅನುದಾನ, ಕುಡಿವ ನೀರು, ತ್ಯಾಜ್ಯ ವಿಲೆವಾರಿ, ನೌಕರರ ವೇತನ, ಪೌರಕಾರ್ಮಿಕ ಗೃಹಭಾಗ್ಯ ಯೋಜನೆ, ಎಸ್‍ಎಫ್‍ಸಿ ವಿಶೇಷ ಅನುದಾನ, ಸ್ವಚ್ಛಭಾರತ ಅಭಿಯಾನ ಅನುದಾನ ಸದ್ಬಳಕೆ ಆಗಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ ಹೇಳಿದರು. ಪುರಸಭೆ ಅಧ್ಯಕ್ಷೆ ಸುನಿತಾ ಪರಶುರಾಮ ಕೆಂಭಾವಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ನರಸಪ್ಪ ತಹಶೀಲ್ದಾರ್ ಸಮಗ್ರ ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ, ಸದಸ್ಯರಾದ ದೊಡ್ಡನಗೌಡ ಹೊಸಮನಿ, ಸೋಮನಗೌಡ ಕರಡಕಲ್ಲ, ರುದ್ರಪ್ಪ ಬ್ಯಾಗಿ, ಶಿವರಾಯ ದೇಗುಲಮಡಿ, ಮುದಕಪ್ಪ ನಾಯಕ ಇದ್ದರು.