ಕ್ರೀಡೆ ಕೇವಲ ಮನರಂಜನೆಗಾಗಿ ಅಲ್ಲ, ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿ,ಗೆ..!
ವಿಜಯಪುರ : ಮನುಷ್ಯನನ್ನು ಒತ್ತಡ ಮುಕ್ತವನ್ನಾಗಿ ಮಾಡಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಕ್ರೀಡೆಗಳ ಪಾತ್ರ ಅನನ್ಯ ಎಂದು ಯುವ ಭಾರತ ಸಮಿತಿ ಸಂಸ್ಥಾಪಕ ಹಾಗೂ ಸಮಾಜ ಸೇವಕ ಉಮೇಶ ಕಾರಜೋಳ ಹೇಳಿದರು.
ವಿಜಯಪುರ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಸಖಿ ಯುವ ಮಹಿಳಾ ಸೇವಾ ಸಂಸ್ಥೆ ಹಾಗೂ ಯುವ ಭಾರತ ಸಮಿತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಓಪನ್ ಬ್ಯಾಡ್ಮಿಂಟನ ಟೂರ್ನಾಮೆಂಟ್ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆ ಕೇವಲ ಮನರಂಜನೆಗಾಗಿ ಅಲ್ಲ, ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿ, ಏಕಾಗ್ರತೆ, ಭಾವೈಕ್ಯತೆ ವೃದ್ದಿ ಹೀಗೆ ಅನೇಕ ವಿಷಯಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ, ಕ್ರೀಡೆಗೆ ತನ್ನದೇ ಆದ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಕೂಡಾ ಇದೆ, ಕ್ರೀಡೆಗಳ ಬಗ್ಗೆ ಅಭಿರುಚಿ ಬೇರೆ ಇರಬಹುದು, ಆದರೆ ಪ್ರತಿಯೊಬ್ಬರು ಒಂದಿಲ್ಲೊಂದು ಕ್ರೀಡೆಯ ಅಭಿಮಾನಿಯಾಗಿರುವುದಂತೂ ಸತ್ಯ ಎಂದರು.
ಒಳಾಂಗಣ, ಹೊರಾಂಗಣ ಎರಡು ತೆರನಾದ ಕ್ರೀಡೆಗಳಿಂದಲೂ ಸಾಕಷ್ಟು ಪ್ರಯೋಜನಗಳಿವೆ ಎಂದರು. ಇನ್ನೂ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕು, ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಸೋಲಿನಿಂದ ಹತಾಶವಾಗದೇ ಆ ಸೋಲಿನಿಂದ ಆಗಿರುವ ತಪ್ಪಿನ ಪಾಠ ಕಲಿತು ಅದನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕು, ಕ್ರೀಡಾನಿಯಮಗಳ ಪಾಲನೆ ಕ್ರೀಡಾಪಟುಗಳ ಆದ್ಯ ಜವಾಬ್ದಾರಿ ಎಂದರು. ವಿವಿಧ ಸಂಘ ಸಂಸ್ಥೆಗಳು ಕ್ರೀಡಾಕೂಟ ಆಯೋಜಿಸಿ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ವೇದಿಕೆ ಸೃಜಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ, ಸಿ.ಪಿ.ಐ ಶರಣಗೌಡ ಗೌಡರ, ಗೀತಾ ಪಾಟೀಲ, ಪೂಜಾ ಬಾಗಿ , ಅಖೀಲ ಶೀಲವಂತ, ಸತೀಶ ಬಾಗಿ, ಮಹೇಶ ಬಾಗಿ, ವಿನೋದಕುಮಾರ ಮಣೂರ ಹಾಗೂ ಸ್ಪರ್ದಾಳುಗಳು ಉಪಸ್ಥಿತರಿದ್ದರು.