ನದಿ ತೀರದಲ್ಲಿ ಸಾಕ್ಷಾತ ಪಾಂಡುರಂಗನ ಉಗಮವಾಗಿ ನನ್ನ ಜೀವನ ಸಾರ್ಥಕವಾಯಿತು.!
SPL story Written By KOri
‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ’ ಎನ್ನುವ ಋಷಿ ವಾಣಿಯಂತೆ,ಯಾವ ಸ್ಥಳದಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತಯೋ, ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ.!
ಹೆಣ್ಣೆಂದರೆ ಪ್ರಕೃತಿ, ಹೆಣ್ಣೆಂದರೆ ಸಂಸ್ಕೃತಿ, ಹೆಣ್ಣೆಂದರೆ ಸಹನೆಯ ಸೌರಭ.ಹೆಣ್ಣೆಂದರೇ ತಾಳ್ಮೆಯ ತಂಗಾಳಿಯಾಗಿ ಬೀಸುವ ಮಾಮರ.ಇಂತಹ ಪರಮ ಸೌಭಾಗ್ಯದ ಸಂಕೇತಗಳನ್ನು ಹೊಂದಿರುವ ನಾನು, ಸ್ತ್ರೀ ಕುಲದ ಪ್ರತೀಕವಾಗಿರುವ ನದಿ ದೇವತೆ ಭೀಮೆಯಾಗಿರುವೆನು.!
ನನ್ನ ಪಾವಿತ್ರ್ಯವನ್ನು ಬಲ್ಲ ಪಾಂಡುರಂಗನು ನೂರಾರು ವರ್ಷಗಳ ಹಿಂದೆ ನನ್ನ ನದಿ ತೀರದಲ್ಲಿ ಅವತರಣವಾಗಿರುವ ಸಂಗತಿ ಅಪೂರ್ವವಾಗಿದೆ. ಇದು ಭಾರತದಲ್ಲಿಯೇ, ಬಹು ವೈಶಿಷ್ಟ್ಯಗಳಿಂದ ಕೂಡಿದ ಸಂಗತಿಯಾಗಿದೆ. ಅಂದಿನ ಪುರಾತನ ಕಾಲಘಟ್ಟದಲ್ಲಿ ಪಂಡರಪುರದ ಪಂಡಿರನಾಥನ ಇತಿಹಾಸವು ಮತ್ತು ಸುಕ್ಷೇತ್ರದ ಮಹಿಮೆಯೂ ಅನೇಕ ರೀತಿಯ ಅತ್ಯದ್ಭುತವಾದ ತಿರುವುಗಳನ್ನು ಪಡೆಯುತ್ತ ಅತ್ಯಾಕರ್ಷಣಿಯವಾಗಿದೆ.
ಪಾಂಡುರಂಗನ ಮಹಿಮೆ ಅತೀ ಮಹತ್ವದ ವಿಚಾರಧಾರೆಗಳನ್ನು ಹೊಂದಿ ಭಕ್ತಿಯ ಪಿಪಾಸುಗಳಾಗಿರುವ ಕೇಳುಗರಿಗೆ ಇದು ಮಂತ್ರ ಮುಗ್ಧಗೊಳಿಸಿ ತನ್ನತ್ತ ಸಮ್ಮೋಹನಗೊಳಿಸುತ್ತದೆ. ಇದನ್ನು ಶ್ರವಣ ಮಾಡುವ ಭಕ್ತ ಜನರಿಗೆ, ಸಾಕ್ಷಾತ ಪಾಂಡುರಂಗನ ದಿವ್ಯ ದರ್ಶನವಾಗುವದು. ಕೇಳುಗರಲ್ಲಿ ಭಕ್ತಿಯ ಭಾವ ಪರಾಕಾಷ್ಟತೆ ಮುಗಿಲು ಮುಟ್ಟುಸುತ್ತದೆ. ಗಾಢವಾದ ದೈವಿಕತೆಯ ಝೇಂಕಾರದ ನಾದದಿಂದ ಪದೇ ಪದೇ ವಿಠಲ… ವಿಠಲ… ಪಾಂಡುರಂಗ.. ಪಾಂಡುರಂಗ…. ಎನ್ನುವ ನಾಮಸ್ಮರಣೆಯನ್ನು ಧೇನಿಸುವಂತೆ ಮಾಡುತ್ತದೆ.
ಪಂಡರಪುರದ ಆರಾಧ್ಯ ದೈವ ಮತ್ತು ಅಲ್ಲಿನ ಪುರಾಧೀಶನಾಗಿರುವ ಪಾಂಡುರಂಗನ ಕಥೆ ಸಾಮಾಜಿಕವಾಗಿ, ಧಾರ್ಮಿಕವಾಗಿ, ಅಧ್ಯಾತ್ಮಿಕವಾಗಿ ಹಲವಾರು ಸಮುದಾಯಗಳಲ್ಲಿ ಮಹತ್ತರವಾದ ಭಕ್ತಿಯ ಬದಲಾವಣೆ ತಂದಿರುವ ಮೌಲ್ಯಾಧಾರಿತ ಕತೆಯಾಗಿದೆ. ಕಳೆದು ಹೋಗಿರುವ ಹಲವು ಶತಮಾನಗಳಾಚೆ ಶ್ರೀ ಹರಿಯ ಅವತಾರವು ಜನಮಾನಸದಲ್ಲಿ ಭಾವನಾತ್ಮಕ ಬೆಸುಗೆ ಬೆಸೆದಿದೆ. ಈ ಕಥಾ ಭಾಗವು ಧಾರ್ಮಿಕತೆಯ ದೃವಿಕರಣಕರಣವಾಗಿರುವ ಕಾರಣ, ಮಹತ್ತರ ಮಜಲುಗಳಿಂದ ಕೂಡಿದ ವಿಶೇಷವಾದ ವಿಷಯವಾಗಿದೆ.
ಬನ್ನಿ ನನ್ನ ಜೊತೆ ನನ್ನ ನೆನಪಿನ ದೋಣಿಯ ಪಯಣದಲ್ಲಿ ನೀವು ದರ್ಶನಗಳಾಗಿ ನಾನು ನಾವಿಕಳಾಗುತ್ತೇನೆ.!ಪಾಂಡುರಂಗನ ಪ್ರತಿಷ್ಠಾನದ ಪ್ರಸಂಗ ಕೇಳ ಬನ್ನಿ.! ಈ ಜಗದ ನಾಟಕ ಸೂತ್ರದಾರನಾಗಿರುವ ಪರಮಾತ್ಮನನ್ನು ನಿಮ್ಮ ಕಣ್ಣಿಗೆ ಕಟ್ಟುವಂತೆ, ಪ್ರತ್ಯಕ್ಷವಾಗಿ ಮನ ಮುಟ್ಟುತ್ತ ಹೇಳುತ್ತೇನೆ.
ಅಂದಿನ ದೃಶ್ಯಗಳು ನಿಮ್ಮ ಹೃನ್ಮನಗಳಲ್ಲಿ ದೃಗ್ದೋಚರವಾಗುತ್ತ ನಿಮ್ಮ ಸ್ಮತಿ ಪಟಲದ ಮೇಲೆ ಆಚ್ಚಳಿಯದೇ, ಉಳಿಯುವಂತೆ ತಿಳಿಸುತ್ತೇನೆ.ಅಂದು ಕನ್ನಡ ಮೂಲ ನೆಲದ ಪುಂಡಲಿಕನಾಗಿ, ಮುಂದೆ ಸಂತನಾಗಿ ಅವನ ಮನ ಪರಿವರ್ತನೆಯ ನಂತರ ಕಾಣಿಸಿಕೊಳ್ಳುವ ಆಧ್ಯಾತ್ಮಿಕತೆ ಆಧ್ಯಾಯವನ್ನು ಅರಿಯಿರಿ. ಆತನ ಸತ್ಸಂಗದದ ಸುವರ್ಣ ಮಂದಿರದಲ್ಲಿ ಅನುಭಾವದಿಂದ ಹೊರ ಹೊಮ್ಮಿದ ಮುತ್ತು-ರತ್ನಗಳನ್ನು ನೋಡ ಬನ್ನಿ. ಅವನ ಆದರ್ಶದ ಸೂತ್ರ ಹಿಡಿದು ತಮ್ಮ ಬದುಕಿನ ದಾರಿ ದೀಪವಾಗಿಸಿಕೊಂಡ ಸಂತ ತುಕಾರಾಮ, ನಾಮದೇವ, ಜ್ಞಾನೇಶ್ವರದೇವ, ಮುಕ್ತಾಬಾಯಿ, ಜನಾಬಾಯಿ, ಸತಿ ಸಕ್ಕೂಬಾಯಿ, ಸೋನವಾನೆ ನರಹರಿ, ಗೋರಾ ಕುಂಬಾರರ ಭಕ್ತರ ಯಶೋಗಾಥೆಯ ಸ್ವಾರಸ್ಯಕರ ಸರಣಿ ಒಂದೊಂದು ಕತೆ ಹೇಳುತ್ತ ಒಂದು ಹೊಸ ಅನುಭವ ನಿಮ್ಮ ಮುಂದೆ ತೆರೆದಿಡುತ್ತೇನೆ.ಆ ಎಲ್ಲ ಸಂತ- ಮಹಂತರ ವಿಷಯಗಳ ಹಿನ್ನಲೆ ಹೊಂದಿರುವ ಇತಿಹಾಸದ ಪುಟಗಳಲ್ಲಿನ ಹೊನ್ನಿನೆಳೆಗಳಿಂದ ಹಣೆದ ಝಗಮಗಿಸುವ ಸಂತರ ಕಥಾ ರೂಪದ ಭಕ್ತಿ ಬರಹಗಳನ್ನು ನಿಮ್ಮ ಮುಂದೆ ಹಾಡಿ ಹೊಗಳುವೆ ಕೇಳಿ.! ಹೀಗೆ ಭಕ್ತಿಯ ಸೆಲೆಯಿಂದ ಹುಟ್ಟಿದ ಪನ್ನೀರಿನ ಪ್ರತಿಯೊಂದು ಹನಿಗಳ ಸವಿಯಾದ ಸ್ವಾದವನ್ನು ಪಾನ ಮಾಡಿ. ಪರಮಾತ್ಮನ ನಾಮಸ್ಮರಣೆ ನಿಮ್ಮ ತನು ಮನ ಧಮನಿ ಧಮನಿಗಳಲ್ಲಿ ಸೇರಿಸಿಕೊಳ್ಳಿ. ಇದರಿಂದ ನಿಮ್ಮ ಪಾಪವೆಲ್ಲ ನಷ್ಟವಾಗಿ, ನಿಮ್ಮ ಜೀವನದ ಪುಣ್ಯ ಸಂಪಾದನೆಗೆ ಸನ್ಮಾರ್ಗದ ದಾರಿಯಾಗುವದು.!
ಮೊದಲಿಗೆ ಭಾರತೀಯ ಉಪನಿಷತ್ತುಗಳಲ್ಲಿ
ಒಂದಾಗಿರವ ಛಾಂದೋಗ್ಯ ಉಪನಿಷತ್ತನಲ್ಲಿ ಪಂಡರಪುರದ ವಿಠ್ಠಲ ಆರಾಧನೆಯನ್ನು ಅರ್ಥಪೂರ್ಣವಾಗಿ ವಿವರಿಸಲಾಗಿದೆ. ಈ ತೀರ್ಥಯಾತ್ರೆಯ ಮೊದಲಿನ ಹೆಸರು ‘ಬಿಂದು ತೀರ್ಥ’ ವೆಂದು ಪ್ರಾಚೀನ ಕಾಲದಲ್ಲಿ ಸ್ಥಾಪಿತಗೊಂಡ ಇಲ್ಲಿನ ತಲೆ ಕಾಯುವ ದೇವರಾಗಿರುವ ಬಿಂದು ಮಾಧವ ಇನ್ನು ಅಸ್ತಿತ್ವದಲ್ಲಿ ಇದ್ದು ಇಲ್ಲಿನ ಭಕ್ತರ ನಾನಾ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಾರೆ ಎನ್ನುವ ಬಲವಾದ ನಂಬಿಕೆಯಿದೆ. ಅತ್ಯಂತ ಪವಿತ್ರ ಪುರಾಣದಲ್ಲಿ ಒಂದಾಗಿರುವ ಸ್ಕಂದ ಪುರಾಣದಲ್ಲಿ ಶಿವನು ಕೂಡ ತನ್ನ ಸತಿ ಪಾರ್ವತಿ ದೇವಿಗೆ, ಪಂಡರಪುರದ ಮಹಿಮೆ- ಮಹಾತ್ಮೆಗಳನ್ನು ವಿಶೇಷವಾಗಿ ವರ್ಣಿಸುತ್ತಾನೆ.
ಶಿವನು ಈ ಸ್ಥಳವು ಭೂಲೋಕದಲ್ಲಿ ವೈಕುಂಠವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಪುಷ್ಕರಕ್ಕಿಂತ ಮೂರು ಪಟ್ಟು ಹೆಚ್ಚಾಗಿ,ಕೇದಾರನಾಥಕ್ಕಿಂತಲೂ ಆರು ಪೆಟ್ಟು ಹೆಚ್ಚು ಮಹತ್ವದ್ದಾಗಿದೆ, ಹಾಗೂ ವಾರಣಾಸಿಗಿಂತ ಹತ್ತು ಪಟ್ಟು ಶ್ರೀಶೈಲಕಿಂತ ಹಲವು ಪಟ್ಟು ಹೆಚ್ಚು ಆಧ್ಯಾತ್ಮಿಕವಾಗಿರುವ ಭಕ್ತಿಯ ತಳಹದಿಯ ಮೇಲೆ ಕಟ್ಟಿದ ಕೇಂದ್ರವಾಗಿದೆ ಎನ್ನುತ್ತಾನೆ.
ಹೆತ್ತವರ ಪಾಲಿಗೆ ಪುಂಡಲೀಕ ಪರಮ ಪಾಪಿಯಾಗಿದ್ದ.!
ಒಂದೇ ಒಂದು ಸಣ್ಣದಾದ ಕಿಡಿಯೊಳಗಿರುವ ಕಾಡ್ಗಿಚ್ಚು ಅಡಗಿ ಕುಳಿತಂತೆ, ಮುಂದೆ ಆ ಕಿಡಿ ಭೀಕರವಾಗಿ ಅರಣ್ಯವನ್ನು ಅಹುತಿ ಪಡೆದಂತೆ ಸಂತ ಪುಂಡಲೀಕನ ಜೀವನದ ವೃತಾಂತ ಬಿರುಗಾಳಿಯ ರೂಪ ಪಡೆದು ತಂಗಾಳಿಯಾಗಿ ಪರಿವರ್ತನೆಯಾಗುತ್ತದೆ. ಕೊನೆಗೆ ಅದು ಪರಮಾತ್ಮನಿಂದ ಮುಕ್ತಿ ಸುಖಾಂತ್ಯ ಪಡೆಯುತ್ತದೆ.ಆದರೆ ಪುಂಡಲೀಕ ಮೊದಲಿನ ವೃತ್ತಾಂತದಲ್ಲಿ ಹೆತ್ತವರ ಪಾಲಿಗೆ ಯಮ ಯಾತನೆಯಾಗಿ ಕಾಡುತ್ತ ಮಾತ ಪಿತರಿಗೆ ಬೆನ್ನಿನಲ್ಲಿ ಹುಟ್ಟಿದ್ದ ಹುಣ್ಣಾಗಿದ್ದ. ಹೀಗೆ ಪುಂಡಲೀಕ ತನ್ನ ಬದುಕಿನಲ್ಲಿ ಹೆತ್ತವರೊಂದಿಗೆ ಮಾಡುವ ಪಾಪದ ಕೆಲಸವನ್ನು ಕಣ್ಣಾರೆ ಕಂಡು ನಮ್ಮ ಕರುಣೆಯ ಕಣ್ಣಿರು ಜಿನುಗುತ್ತವೆ. ಅವು ನಮ್ಮ ಅರಿವಿಗೆ ಬರದಂತೆ ಅವುಗಳನ್ನು ಕೇಳುತ್ತ ಕೇಳುತ್ತ ಹೋದಂತೆ, ನಮ್ಮ ಮೈ ಮನಗಳಿಗೆ ಬವಳಿ ಬಂದಂತಾಗುತ್ತದೆ. ಕನಿಕರದ ಮನದಿಂದ ಅಯ್ಯೋ.! ದುರ್ವಿದೆಯೇ,ನೀನು ಎಷ್ಟೊಂದು ಕ್ರೂರಿ.! ಎನ್ನುವ ಉದ್ಗಾರದ ಮಾತು ನಮ್ಮಿಂದ ಕೇಳಿ ಬರುತ್ತವೆ. ಆ ಮಾತುಗಳು ಕ್ಷಣ ಮಾತ್ರದಲ್ಲಿ ತಿರುಗಿ ನಮ್ಮ ಆಕ್ರೋಶದ ಬುತ್ತಿ ಬಿಚ್ಚಿ ಕೊನೆಗೆ ದೇವರೇ, ನಮ್ಮ ಕಣ್ಣಿಗೆ ಕಟ್ಟ ಕಡೆಯ ಪಾಪಿಯನ್ನು ತೋರುತ್ತಿರುವೆ.! ಎನ್ನುವ ಕ್ರೋಧಿತ ಮಾತುಗಳು ನಮ್ಮಿಂದ ಹೊರ ಬರುವಂತೆ ಮಾಡುತ್ತವೆ.
ಪುರಾತನ ದಂತಕತೆಯ ಪ್ರಕಾರ ಒಂದಾನೊಂದು ಕಾಲದಲ್ಲಿ ಲೋಹದಂಡಿ ಎಂಬ ಗ್ರಾಮದಲ್ಲಿ ನಿತ್ಯ ಭಕ್ತಿಯಲ್ಲಿ ಮಿಂದೇಳತ್ತಿದ್ದ ಜ್ಞಾನ ದೇವ ದಂಪತಿಗಳು ವಾಸವಾಗಿದ್ದರು. ಅವರ ಮಗನಾಗಿ ಪುಂಡಲಿಕನು (ಕುಂಡಲಿನಿ ಶಕ್ತಿ ಪಡೆದಿರುವ ಕುಂಡಲಿಕ ) ಜನಿಸಿ ದೊಡ್ಡವನಾದನು.ಮೊದಲಿಗೆ ಪುಂಡಲೀಕ ತಂದೆ ತಾಯಿಗಳು ನಿರ್ಮಿಸಿದ ಆಧ್ಯಾತ್ಮಿಕ ಅಂಗಳದಲ್ಲಿ ಪುಷ್ಟವಾಗಿ ಅರಳಿ, ಪರಿಮಳವಾಖಿ ಹರಡಬೇಕಾಗಿದ್ದ, ಆದರೆ ಆತನಲ್ಲಿ ಭಯ ಭಕ್ತಿ ಬಿಡಿ, ಲವಲೇಶದಷ್ಟು ಮಾನವೀಯತೆ ಕೂಡಾ ಇರಲಿಲ್ಲ. ಆತ ಬೆಳೆದು ನಿಂತು ತನ್ನ ವಯೋವೃದ್ಧ ತಂದೆ ತಾಯಿಗಳ ಪಾಲಿಗೆ ಊರುಗೋಲಾಗಿ ಹೆತ್ತವರಿಗೆ ಆಶ್ರಯಾಗಬೇಕಾಗಿದ್ದ ಮಗ ಮಗನಾಗಿರಲಿಲ್ಲ.! ಆತ ನಿಷ್ಕರುಣೆಯ ಗುಣಗಳಿಂದ ಕೂಡಿದ ಪರಮ ಶತೃವಾಗಿದ್ದ. ಪುಂಡಲೀಕ ಸಂತನಾಗುವ ಮೊದಲು ಆತನ ಹಣೆ ಬರಹದ ವಿಧಿ ಲಿಖಿತ ಬೇರೆ ರೀತಿಯದಾಗಿತ್ತು. ಸಜ್ಜನಿಕೆ, ಸಂಸ್ಕಾರಗಳ ಸಾಕಾರ ಮೂರ್ತಿಯಾಗಬೇಕಾಗಿದ್ದ, ಪುಂಡಲೀಕ ಇವೆಲ್ಲವುಗಳಿಗೆ ತದ್ವಿರುದ್ಧವಾಗಿ ಗಾಂಪರ ಗುಂಪಿನ ನಾಯಕನಾಗಿದ್ದ. ಆ ಗುಂಪಿನೊಂದಿಗೆ ಸೇರಿ ನಿತ್ಯ ಒಂದಾದರ ಮೇಲೊಂದಂತೆ ಗಲಾಟೆ ಗೌಜಲುಗಳನ್ನು ಮಾಡುತ್ತ ಅಡಿಗಡಿಗೆ ಗುಲ್ಲೆಬ್ಬಿಸುತ್ತಿದ್ದ. ಇದರಿಂದ ಆತನ ಹೆತ್ತವರು ಹಲವಾರು ಭಾರಿ ಮುಜಗುರಕ್ಕೊಳಗಾಗಿ ಮನದಲ್ಲಿಯೇ, ಮರಗುತ್ತಿದ್ದರು. ಇಷ್ಟಾದರೂ ಕೂಡಾ ಮಗ ಪುಂಡಲಿಕನನ್ನು ಹೆತ್ತವರು ಸುಖದ ಸಂತಾನವೆಂದು ತಿಳಿದಿದ್ದರು. ವಿಪರ್ಯಾಸವೆಂದರೇ, ಆತ ತಂದೆ- ತಾಯಿಗಳ ಪಾಲಿಗೆ ವಿಷಕಂಠಕನಾಗಿದ್ದನು.
ತಮ್ಮ ಮಗ ಜೀವನ ಚಕ್ರದ ಏರು ಪೇರುಗಳನ್ನು ಜಯಸಿ ಮುಂದೊಂದು ದಿನ ಭಕ್ತಿಯ ಪಯಣದಲ್ಲಿ ಆಧ್ಯಾತ್ಮಿಕ ಥೇರನ್ನು ಎಳೆಯುತ್ತ, ತಮ್ಮ ಮಗ ಪಾಮರ, ವಿಷಯು, ಜಿಜ್ಞಾಸುಗಳನ್ನು ಜಯಸಿ ಮುಕ್ತಿ ಮಾರ್ಗದೆಡೆಗೆ, ಸಾಗುತ್ತಾನೆ ಎಂದು ನಂಬಿದ್ದರು. ಆತ ತನ್ನ ಬದುಕಿನಲ್ಲಿ ಭಕ್ತಿ ಪೂರ್ವಕವಾಗಿ ಬಾಂದಳದೆತ್ತರ ಬೆಳೆದು, ಮನೆಗೆ ಬೆಳಕಾಗುತ್ತಾನೆ ಎಂದು ಕನಸು ಕಂಡಿದ್ದರು. ಆದರೆ ಮಗ ಮಾತ್ರ ಎಲ್ಲದಕ್ಕೂ ವೀರೋಧವಾಗಿ, ಹೆತ್ತವರ ಪಾಲಿಗೆ ಉರುಳಾಗಿದ್ದ. ಮಾತಾ ಪಿತರ ಪಾಲಿಗೆ ಜನ್ಮ ಜನ್ಮಾಂತರ ಶತೃವಾಗಿ ಇನ್ನಿಲ್ಲದಂತೆ ಕಾಡುತ್ತಿದ್ದ.!ಆತನ ಕಾಡುವಿಕೆ ಹೇಗಿತ್ತೆಂದರೇ, ಮನುಷ್ಯನೊಬ್ಬ ತನ್ನ ಅತಿಯಾದ ಆಶೆಗಳಿಂದ ಏಕಾಏಕಿ ಮರಣ ಹೊಂದಿ ಪುನಃ ಪಿಶಾಚಿಯಾಗಿ ಬಂದು ದ್ವೇಷಾಸೂಯಗಳಿಂದ ವೈರಿಗಳನ್ನು ಕಾಡಿದಂತ್ತಿತ್ತು. ನಿತ್ಯವು ಹೆತ್ತವರನ್ನು ಗೋಳು ಹೊಯ್ದುಕೊಳ್ಳುತಿದ್ದ ಪುಂಡಲೀಕನ ಉಪಟಳಕ್ಕೆ ಬಂಧು ಭಾಂಧವರು ಮೊದಲೇ ಬೇಸತ್ತು ಬಹು ದೂರ ಸಾಗಿದ್ದರು. ಆತನ ತಂದೆ-ತಾಯಿಗಳು ಮಗ ಎಂಬ ಬಂಧನದ ಬೆಸುಗೆ ಕಡಿದುಕೊಂಡು ದೀನರಾಗಿ ಬದುಕುತ್ತ, ನೆಪ ಮಾತ್ರಕ್ಕೆ ಅನಿವಾರ್ಯತೆಯಿಂದ ಆತನೊಂದಿಗೆ ಕಾಲ ಕಳೆಯುತ್ತಿದ್ದರು.
ಉರುಳಿನ ಹಗ್ಗ ಕೈಗಳಿಗೆ ಹಾಕಿ, ಘೋರತೆ ಮೆರೆದ ಪುಂಡಲೀಕ .!
ಪುಂಡಲೀಕನು ತನ್ನ ಪುಂಡ ಪ್ರಚಂಡರ ಪಟಾಲಂ ಸೇರಿ, ಮಾಡುತ್ತಿದ್ದ ದುರ್ನಡತೆಯನ್ನು ಹೆತ್ತವರು ಕಣ್ಣಾರೆ ಕಂಡು, ಆತನನ್ನು ಹತೋಟಿಯಲ್ಲಿಡಲು ಆತನಿಗೆ ಹೆಂಡತಿ ಎಂಬ ಮಾಯೆಯನ್ನು ತಂದು, ಮಂಗಳ ಮಹೋರ್ತದಲ್ಲಿ ಮದುವೆ ಮಾಡಿಸಿದರು. ಆದರೆ ಏನು ಮಾಡುವದು, ಮನೆಗೆ ದಾರಿ ದೀಪವಾಗಬೇಕಾಗಿದ್ದ ಮಗ ಹೆಂಡತಿಯೊಂದಿಗೆ ಸೇರಿ ಮತ್ತಷ್ಟು ದಾರಿ ತಪ್ಪಿದ ಮಗನಾದ. ಆತನನ್ನು ಹೇಗಾದರು ಮಾಡಿ, ತಹಬದಿಗೆ ತರಲು ತಂದೆ ತಾಯಿಗಳು ಎಷ್ಟೇ ಪ್ರಯತ್ನ ಪಟ್ಟರು ಕೂಡಾ ಅವರಿಂದಾಗಲಿಲ್ಲ. ಪುಂಡಲೀಕನ ಮನ ಪರಿವರ್ತನೆಗಾಗಿ ಅವರು ದಶದಿಶೆಯಲ್ಲಿರುವ ದೇವರಲ್ಲಿ ಕೈ ಮುಗಿದು ಬೇಡಿಕೊಂಡರೂ ಕೂಡಾ ಯಾವ ಪ್ರಯೋಜನಗಳಾಗಲಿಲ್ಲ. ಯಾವ ದೇವರು ಅವರ ಮೇಲೆ ಕರುಣೆ ಕಣ್ಣು ಬಿಡಲಿಲ್ಲ. ಇದರಿಂದ ಪುಂಡಲೀಕನ ದುರ್ಗುಣಗಳಲ್ಲಿ ಬದಲಾವಣೆ ಕಾಣಲಿಲ್ಲ. ಆತನಲ್ಲಿ ಬದಲಾವಣೆ ಎಂಬುವದು ಮರೀಚಿಕೆಯ ಮಾತಾಯಿತು.ಈ ಜಗತ್ತಿನಲ್ಲಿ ಮನುಷ್ಯನೊರ್ವನ ತನ್ನ ಕರ್ಮ ಬಂಧನಗಳನ್ನು ಕಳೆದು ಬದುಕಿನಲ್ಲಿ ಏನಾದರೂ ಒಂದು ಸಾಧನೆ ಮಾಡಲು ಒಂದು ಘಟನೆ ಜರುಗಬೇಕಾತ್ತದೆ. ಮತ್ತು ಆತ ಆ ಘಟನೆಗಳಿಂದ ಲೋಕ ವಿಖ್ಯಾತನಾಗಬೇಕಾದರೇ, ಆತನಿಗಾಗಿ ಪರಮಾತ್ಮ ಜಗತ್ತಿನಲ್ಲಿ ಪ್ರತಿಯೊಂದನ್ನು ಗಣಿತಾತ್ಮಕವಾಗಿ ಜೋಡಿಸಿಟ್ಟಿರುತ್ತಾನೆ.ಆದರೆ ಅದಕ್ಕೂ ಮುಂಚಿತವಾಗಿ ಪೂರ್ವ ಜನ್ಮದ ಪಾಪ ಕರ್ಮಗಳನ್ನು ಕಳೆಯಬೇಕಲ್ಲವೇ? ಈ ಪಾಪ ಕಳೆದು ಸನ್ಮಾರ್ಗದಲ್ಲಿ ಸಾಗಲು ಪರಮಾತ್ಮನ ಎಣಿಕೆ, ಗ್ರಹಿಕೆ ಎಲ್ಲ ಸಾಧ್ಯತೆಗಳು ಲೆಕ್ಕಾಚಾರಗಳು ಬೇಕೇ ಬೇಕು. ಇವೆಲ್ಲವುಗಳು ಸಾಧ್ಯವಾಗಲು ಮೇಲಿರುವ ಭಗವಂತ ಕೆಟ್ಟದಾದ ಕಾರ್ಗತ್ತಲ್ಲನ್ನು ಹೊಡೆದೊಡಿಸಲು ತಥಾಸ್ತು ಹೇಳಬೇಕು ನಮ್ಮ ಬದುಕಿನಲ್ಲಿ ಬದಲಾವಣೆ ಘಟಿಸಬೇಕಾದರೇ,ಆತನಿಂದ ಮಾಡಲ್ಪಟ್ಟ ಒಂದು ಅತೀ ನಿಚ್ಚಳವಾದ ಬೆಳಕಿನ ದಾರಿಯ ಅವಶ್ಯಕವಾಗಿರುತ್ತದೆ.
ಅದು ನೀನೊಲಿದರೇ ಕೊರಡು ಕೊನರುವದಯ್ಯ… ನೀನೊಲಿದರೇ ಬರಡು ಹಯನುವದಯ್ಯ..ಎಂಬ ವಾಣಿಯಂತೆ, ಸಾಗಿ ಮುಂದೆ ಮಾನವನ ಜೀವನದಲ್ಲಿ ಅದು ಸತ್ಕರ್ತಿಗಳ ಗುಡಿ ಕಟ್ಟಿ, ಕನಸುಗಳ ನನಸಾಗಿಸಿಕೊಂಡು ಅದಕ್ಕೆ ಕಳಸಾರೋಹಣ ಮಾಡುವ ಸುಸಂದರ್ಭ ಬಂದೇ,ಬರುತ್ತದೆ ಎಂಬುದು ನಿರ್ವಿವಾದದ ಮಾತು.
ಒಂದು ದಿನ ಪುಂಡಲಿಕನ ಮನೆ ಮುಂದೆ ತೀರ್ಥಯಾತ್ರೆಗಾಗಿ,
ಕಾಶಿಗೆ ಹೋಗುವ ಯಾತ್ರಿಕರ ಕಂಡು ಬರುತ್ತಾರೆ.ದಾರಿಯಲ್ಲಿ ದೊರಕಿದ ಯಾತ್ರಿಕರನ್ನು ಪುಂಡಲೀಕನು ತಡೆದು ನಿಲ್ಲಿಸಿ,ಮಾತೊಂದನ್ನು ಕೇಳುತ್ತಾನೆ. ನೀವು ಏತಕ್ಕಾಗಿ ದೂರದ ಕಾಶಿ ಯಾತ್ರೆಗಾಗಿ ಹೊರಟಿದ್ದೀರಿ.? ಕಾಶಿ ಯಾತ್ರೆಯಿಂದ ನಿಮಗೇನು ಲಾಭ ದೊರಕುತ್ತದೆ. ? ಎಂದು ಕೇಳುತ್ತಾನೆ ಆಗ ಯಾತ್ರಿಕ ಗುಂಪಿನಿಂದ ಒಬ್ಬ ಯಾತ್ರಿಕ ಕಾಶಿ ಯಾತ್ರೆಯಿಂದ ನಾವು ಮಾಡಿದ ನಮ್ಮ ಸಕಲ ಪಾಪ ಕರ್ಮಗಳು ಕಳೆಯುತ್ತವೆ.? ನಮ್ಮ ಆತ್ಮ ಮುಕ್ತಿಯ ಮಾರ್ಗದಲ್ಲಿ ಸಾಗುತ್ತ ಅದಕ್ಕೆ ಮೋಕ್ಷ ಸಿಗುತ್ತದೆ.!ಈ ತೀರ್ಥಯಾತ್ರೆಯಿಂದ ನಾವು ಪರಮಾತ್ಮನೊಂದಿಗೆ ಅತೀ ನಿಕಟವಾದ ಸಂಪರ್ಕದಲ್ಲಿರುತ್ತೇವೆ ಎನ್ನುತ್ತಾನೆ. ಇದನ್ನು ಕೇಳಿದ ಪುಂಡಲೀಕನ ಮನದಿಂದ ಹೊರ ಬಿದ್ದ ಮಾತು ನಾನು ಕೂಡ ಕಾಶಿಯಾತ್ರೆಗೆ ಬರುತ್ತೇನೆ ನನ್ನೊಂದಿಗೆ ನನ್ನ ಪರಿವಾರವನ್ನು ಕರೆದು ಕೊಂಡು ಬರುವೆ ಎಂದು ಲಗಬಗೆಯಿಂದ ನಿರ್ಧಾರವನ್ನು ತೆಗೆದುಕೊಂಡು ಮನೆಗೆ ಬರುತ್ತಾನೆ. ಮನೆಗೆ ಬಂದ ಪುಂಡಲೀಕ ತನ್ನ
ತಂದೆ ತಾಯಿ ಹೆಂಡತಿಗೆ ಕಾಶಿ ಯಾತ್ರೆಗಾಗಿ ಒಪ್ಪಿಸುತ್ತಾನೆ.
ಮನೆಗೆ ಬಂದ ಪುಂಡಲೀಕನ ಕಾಶಿ ಯಾತ್ರೆಗೆ ಹೊರಡುವಾಗ ದಾರಿಯಲ್ಲಿ ದಣಿವಾದ ಹೆಂಡತಿಯನ್ನು ಬೆನ್ನು ಮೇಲೆ ಕೂಡಿಸಿಕೊಂಡು ನಡೆಯುತ್ತಾ ಸಾಗುತ್ತಾನೆ.ಆದರೆ ಆತ ಇಲ್ಲಿ ಹೇಳುವುದು ಶಾಸ್ತ್ರ, ತಿನ್ನುವದು ಬದನೆಕಾಯಿ ಎಂಬಂತಾಗುತ್ತದೆ.ಏಕೆಂದರೆ ವಯೋವೃದ್ಧ ತಂದೆ ತಾಯಿರನ್ನು ಜೋಪಾನವಾಗಿ ಕರೆದುಕೊಂಡು ಹೋಗಬೇಕಾಗಿದ್ದ ಮಗ, ಬಿಸಿಲು, ಮಳೆ,ಗಾಳಿಯಲ್ಲಿ ನಡೆದು ನಡೆದು ಸುಸ್ತಾಗಿರುವ ಹೆತ್ತವರನ್ನು ಲೆಕ್ಕಿಸದೇ, ಹೆಂಡತಿಯ ವ್ಯಾಮೋಹದಲ್ಲಿ ಬಿದ್ದು ಅವಳನ್ನು ಮಾತ್ರ ಜೋಪಾನದಿಂದ, ಜತನಾಗಿ ನೋಡಿಕೊಂಡು ಸಾಗುತ್ತಿರುತ್ತಾನೆ.
ಹೀಗೆ ದಾರಿ ಮಧ್ಯದಲ್ಲಿ ಸಾಗುತ್ತಿರುವಾಗ ಮುಪ್ಪಾವಸ್ಥೆಯ ತಂದೆ- ತಾಯಿಗಳು ನಿಧಾನವಾಗಿ ನಡೆಯುತ್ತಿರುವುದನ್ನು ಕಂಡು ಹಾಗೂ ಅವರು ಪದೇ ಪದೇ ದೂರದಲ್ಲಿ ಉಳಿಯುವದನ್ನು ನೋಡಿ ರೋಷಾವೇಷದಿಂದ ಕೋಪಗೊಳ್ಳುತ್ತಾನೆ. ಕ್ರೋದಿತ ವ್ಯಕ್ತಿಯಾಗಿದ್ದ ಆತನು ಹೆತ್ತವರನ್ನು ಗದರಿಸಿ, ಬೆದರಿಸಿ ಅವರ ಕೈಗಳಿಗೆ ಹಗ್ಗದ ಉರುಳು ಹಾಕಿ ಅವರನ್ನು ವೇಗವಾಗಿ ನಡೆಯಲು ಹೇಳುತ್ತಾನೆ.ತಾನು ಹಾಕಿದ ಹಗ್ಗದಿಂದ ಬಲವಂತವಾಗಿ ಎಳೆಯಲು ಪ್ರಾರಂಭಿಸುತ್ತಾನೆ.
ಅವನ ಬಿರುಸಿನ ಎಳೆತದಿಂದ ಅವರು ಮತ್ತಷ್ಟು ಕುಗ್ಗಿ ಹೋಗುತ್ತಾರೆ. ಕ್ಕೆಗಳಿಗೆ ಹಗ್ಗ ಹಾಕಿ ಜಗ್ಗುವಿಕೆಯ ಪರಿಣಾಮದಿಂದ ಅವರು ಸುಸ್ತಾಗಿ, ನೋವಿನಿಂದ ಚೀರುತ್ತಾರೆ,ಅವನಲ್ಲಿ ಅಂಗಲಾಚಿ ಬೇಡಿಕೊಳ್ಳುತ್ತಾರೆ. ಜೊತೆಗೆ ಹೈರಾಣಾಗಿ ನಿತ್ರಾಣದಿಂದ ನೆಲಕ್ಕೆ ಕುಸಿಯುತ್ತಾರೆ. ನೀವು ಮಾನವರಾಗಿ ಇದರಿಂದ ತಿಳಿದುಕೊಳ್ಳವದೆನೆಂದರೇ, ಬರೀ ಆಧುನಿಕತೆಯ ಕಾಲದಲ್ಲಿ ಈ ಕಲಿಯುಗದಲ್ಲಿ ಮಾತ್ರ ಕೆಟ್ಟವರಿರುವದಿಲ್ಲ! ಹಳೇ ಕಾಲದಲ್ಲಿ ಪ್ರಾಚೀನ ಯುಗದಲ್ಲೂ ಕೂಡಾ ಕೆಟ್ಟವರಿದ್ದರು.!ಆ ಚಾಳಿ ಈಗಲೂ ಮಾನವರಲ್ಲಿ ಆಗಾಗಾ ಮುಂದುವರೆದು ಪ್ರಕಟವಾಗುತ್ತಿರುತ್ತದೆ; ನೆರಳಿನಂತೆ ಬೆನ್ನತ್ತಿರುತ್ತದೆ.ಹೀಗೆ ದಾರಿಯಲ್ಲಿ ಪುಂಡಲೀಕನು ಮಾಡುತ್ತಿದ್ದ ಅಸಭ್ಯವಾದ ಕುಕೃತ್ಯಗಳು ನಿಜವಾಗಲೂ ಬಲು ದುಃಖಕರವಾಗಿದ್ದವು. ಅವು ಯಾವ ನರಕ ಲೋಕದ ದೃಶ್ಯಗಳಿಗೆ ಕಡಿಮೆ ಇರಲಿಲ್ಲ.! ಹೆತ್ತವರನ್ನೇ ಹಗ್ಗ ಕಟ್ಟಿ ಎಳೆಯುವದೆಂದರೇ, ಅದು ಆ ಶತಮಾನದ ಘೋರ ಪಾಪವಲ್ಲವೆ.? ಅದು ಕಟುಕನೋರ್ವ ಬಲಿಗಾಗಿ ಕುರಿಯನ್ನು ಕಸಾಯಿಖಾನೆಗೆ ಎಳೆದ್ಯೊಯುವಂತೆ ಹೃದಯ ವಿದ್ರಾವಕವಾಗಿರುತ್ತದೆ. ನೋವಿನ ತೀವ್ರತೆಯಲ್ಲಿ ಹೆತ್ತವರ ಬಾಯಿಂದ ಹೊರ ಬರುವ ಪಾಹಿಮಾಮ.! ಪಾಹಿಮಾಮ.! ಎನ್ನುವ ಕರಳು ಹಿಂಡುವ ಮಾತು ಕೇಳಿದ ದಾರಿಹೋಕ ಜನರು ಬಾಯಿ ಬಾಯಿ ಬಡಿದುಕೊಳ್ಳುತ್ತ ದಿಗ್ಬ್ರಾಂತರಾಗಿ ನೋಡುತ್ತಾರೆ. ಇದನ್ನು ನೋಡುವ ಎಂಥಹ ಕಲ್ಲೆದೆಯ ಮನಸುಗಳಿಗೆ ಒಂದು ಕ್ಷಣದಲ್ಲಿ ಎದೆ ಝಲ್ಲೆಂದು ಅಶ್ರುಧಾರೆಗಳು ಉದುರುವವು. ಅಂದಿನ ದುಃಖದ ಸನ್ನಿವೇಶ ಕಂಡು ಆಕಾಶದಲ್ಲಿದ್ದ ಮೋಡಗಳು ಮರುಗಿ ಮರೆಯಾಗುತ್ತವೆ. ಗಿಡ ಮರಗಳಲ್ಲಿದ್ದ ಪಕ್ಷಿಗಳು ಬರ್ಬರತೆಯ ಕಂಡು ಕಣ್ಣಿರು ಸುರಿಸುತ್ತವೆ. ದೂರದಲ್ಲಿ ನಿಂತು ನೋಡುತ್ತಿದ್ದ ಪ್ರಾಣಿಗಳು ದುಃಖದ ಕಂಬನಿ ಮಿಡಿಯುತ್ತವೆ. ‘ಬೇಲಿಯೇ ಎದ್ದು ಹೊಲ ಮೇಯುವಾಗ ಯಾರೇನು ಮಾಡುವರು.!
‘ಕೊಡಲಿಯ ಕಾವ ಕುಲಕ್ಕೆ ಮೃತ್ಯುವಾದಾಗ, ನಿಂತ ನೆಲವೇ ಕುಸಿದಾಗ ಮನುಷ್ಯನ ದುರ್ನಡತೆಯ ದಂಡನೆಗೆ ದಂಡಪಾಣಿಯಾಗಿ ನಿಲ್ಲುವರು ಯಾರು.?ಕೊನೆಗೆ ಇದಕ್ಕೆ ಉತ್ತರ ನೀಡಬೇಕಾದವನು ಪರಮಾತ್ಮನಲ್ಲವೇ.? ಭೂಮಿಯ ಮೇಲೆ ಪ್ರತಿಯೊಂದು ಕರ್ಮಕ್ಕೂ ಪ್ರಕೃತಿಯೂ ಸಾಕ್ಷಿಭೂತವಾಗಿ, ನೋಡುತ್ತದೆ.ಆದರೆ ಅದು ಅಜ್ಞಾತವಾಗಿ ಬಂದು ನಮ್ಮಿಂದ ಕಂದಾಯ ಕಟ್ಟಿಸಿಕೊಳ್ಳುತ್ತದೆ. ಸೃಷ್ಠಿಯೂ ಮರು ಸೃಷ್ಠಿ ಮಾಡಿದ ಒಟ್ಟು ಕರ ಪಟ್ಟಿ ನಮಗೆ ತಲುಪಬೇಕಲ್ಲವೇ.? ಅದೇ ರೀತಿ ಪರಮಾತ್ಮ ಹಾಕುವ ಬೀಜಗಣಿತದ ಯಾವ ಲೆಕ್ಕಾಚಾರಗಳು ಸುಳ್ಳಾಗುವದಿಲ್ಲ. ಅವನು ನಮಗೆ ನಮ್ಮ ಕರ್ಮಗಳಿಗನುಸಾರವಾಗಿ ನೀಡುವ ಬೀಜ ಅಂಕುರಿತವಾಗಿ ಬೆಳೆದು ಗಿಡವಾಗಿ, ಮರವಾಗಿ ಸಿಹಿಯಾದ ಹಣ್ಣು ಅಥವಾ ಕಹಿಯಾದ ಹಣ್ಣು ತಂಪಾದ ನೆರಳೋ, ಅಥವಾ ಫಲ ಸಹಿತವೋ ಫಲರಹಿತವೋ ಮರವಾಗಿ ಪ್ರತ್ಯುತ್ತರ ಕೊಡಬೇಕಲ್ಲವೇ.? ಅಂತಹ ಒಂದು ಪ್ರಸಂಗ ಪುಂಡಲೀಕನ ಬದುಕಿನಲ್ಲಿ ಬರುತ್ತದೆ.
ಚಾಂಡಲ ಯೋಗ ಚದುರಿ , ಕಾಳ ಸರ್ಪ ಮರೆಯಾಗಿ ಜಾತಕದ ಶನಿ ದೂರಾಗಿ ಹೋಗುವನು.!
ಸಂಜೆಯಾಗುತ್ತಿದ್ದಂತೆ ಪುಂಡಲೀಕನ ಹೆತ್ತವರು ನಡೆಯುತ್ತ ಹೋದಂತೆ ಅವರ ಪಾದಗಳಲ್ಲಿ ಊತ ಕಾಣುತ್ತವೆ. ಇದರಿಂದ ಅವರು ಮತ್ತಷ್ಟು ನೋವುನ್ನುಂಡು ಪುಂಡಲೀಕನೊಂದಿಗೆ ದಿವ್ಯ ಜ್ಞಾನಿಗಳಾದ ಕುಕ್ಕಟ ಮುನಿಯ ಆಶ್ರಮಕ್ಕೆ ಬಂದು ತಲುಪುತ್ತಾರೆ.ಅಲ್ಲಿದ್ದ ಕುಕ್ಕಟ ಮುನಿಗೆ ಪುಂಡಲೀಕನು ಮನವಿ ಮಾಡಿಕೊಂಡು ವಾಸ್ತವ್ಯ ಹೂಡುತ್ತಾರೆ. ಗುಣಗ್ರಾಹಿಗಳಾಗಿದ್ದ ಮುನಿಗಳು ತಮ್ಮ ದಿವ್ಯ ದೃಷ್ಠಿಯಿಂದ ಎಲ್ಲವನ್ನು ತಿಳಿದುಕೊಂಡು ಸುಮ್ಮನಾಗುತ್ತಾರೆ.ಪುಂಡಲೀಕನು ಸ್ವಲ್ಪ ಹೊತ್ತು ಕುಟೀರದಲ್ಲಿ ವಿಶ್ರಾಂತಿ ಪಡೆದು ಅಲ್ಲಿಂದ ಧ್ಯಾನಸಕ್ತರಾಗಿದ್ದ ಯೋಗಿ ಕುಕ್ಕಟ ಮುನಿಯ ಬಳಿ ಹೋಗುತ್ತಾನೆ. ಅವರೊಂದಿಗೆ ಮಾತಿಗಿಳಿಯುತ್ತ ಯೋಗಿಗಳಿಗೆ ನೀವು ಕಾಶಿಯಾತ್ರೆಗೆ ಹೋಗೋದಿಲ್ಲವೇ.? ನೀವು ಮನುಷ್ಯ ಜನ್ಮದಿಂದ ಮೋಕ್ಷ ಪಡೆಯುವದಿಲ್ಲವೇ.? ಎಂದು ವ್ಯಂಗ್ಯಭರಿತ ಧ್ವನಿಯಲ್ಲಿ ಕೇಳುತ್ತಾನೆ. ಆಗ ಆಗ ಕುಕ್ಕಟ ಮುನಿಗಳು ನಸುನಕ್ಕು ಹೋಗು ರಾತ್ರಿಯಾಗುತ್ತಿದೇ, ಪ್ರಸಾದ ಸ್ವೀಕರಿಸಿ,ವಿಶ್ರಾಮ ತೆಗೆದುಕೋ, ನಿನ್ನ ಎಲ್ಲ ಪ್ರಶ್ನೆಗಳಿಗೂ ನಾಳೆ ಇದೇ ಸ್ಥಳದಲ್ಲಿ ಸರಿಯಾದ ಉತ್ತರ ನೀಡುವೆ ಎನ್ನುತ್ತಾರೆ.
ರಾತ್ರಿಯಾಗುತ್ತಿದ್ದಂತೆ ಪುಂಡಲೀಕ ಮತ್ತು ಆತನ ಪರಿವಾರದವರು ಬೆಳದಿಂಗಳ ಬೆಳಕಿನಲ್ಲಿ ಸವಿರುಚಿಯಾದ ಭೋಜನವನ್ನು ಸವಿಯುತ್ತಾರೆ. ಆಶ್ರಮದ ಅನತಿ ದೂರದ ಜಾಗದಲ್ಲಿ ಎಲ್ಲರೂ ಮಲಗುತ್ತಾರೆ.ಕತ್ತಲು ಕಳೆದು ಬೆಳಗಿನ ಜಾವಾ ಚುಮು ಚುಮು ಬೆಳಕಿನಲ್ಲಿ ಹಕ್ಕಿಗಳ ಕಲರವ ಕೇಳುತ್ತದೆ.ಅದರೊಂದಿಗೆ ಆಶ್ರಮದ ಒಳ ಹೊರಗೆ ನದಿಯ ನೀರು ಹರಿದಂತೆ,ನೀರಿನ ಜುಳ ಜುಳದ ನಾದ ಹರಡುತ್ತದೆ.
ನದಿಯ ನೀರಿನ ಸಪ್ಪಳ ತನ್ನ ದಡಕ್ಕೆ ತಾಗಿ ಕಲುಕಿದ ಸಪ್ಪಳದಂತೆ ಪುಂಡಲೀಕನಿಗೆ ಕೇಳುತ್ತದೆ. ಸಪ್ಪಳ ಕೇಳಿ ನಿದ್ರೆಯ ಮಂಪರಿನಲ್ಲಿದ್ದ ಪುಂಡಲೀಕ ಗಡಿಬಿಡಿಯಿಂದ ಗಾಬರಿಯಾಗಿ, ಕಣ್ಣುಜ್ಜಿಕೊಳ್ಳುತ್ತ ಆಶ್ರಮದ ಮುಂದಿರುವ ಮನ ಮೋಹಕವಾಗಿರುವ ದೃಶ್ಯವನ್ನು ನೋಡುತ್ತಾನೆ.ಅಲ್ಲಿ ಕಂಡ ದೃಶ್ಯ ವನ್ನು ತಾನೇ ನಂಬಲಾಗಲಿಲ್ಲ ಆಶ್ರಮದ ಮುಂದೆ ಸುಂದರವಾಗಿರುವ ಮೂವರು ಅಪ್ರತಿಮವಾದ ಸುಂದರ ಸ್ತ್ರೀಯರು ಕಾಣುತ್ತಾರೆ. ಅವರು ಕೊರಳಲ್ಲಿ ಹೊಳೆಯುವ ಮುತ್ತಿನ ಮಾಲೆ ಧರಿಸಿ, ಕಣ್ಕುಕ್ಕುವ ಅಚ್ಚ ಬಿಳುಪಿನ ಸೀರೆಯುನುಟ್ಟು, ಕುಕ್ಕಟ ಮುನಿಯ ಆಶ್ರಮಕ್ಕೆ ತಳಿರು ತೋರಣ ಕಟ್ಟುತ್ತ, ಅಂಗಳ ಕಸ ಗುಡಿಸಿ, ನೀರು ಚಿಮುಕಿಸುತ್ತ, ಬಣ್ಣ ಬಣ್ಣದ ರಂಗೋಲಿಯ ಚಿತ್ತಾರದ ಚಿತ್ರಗಳನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ. ಆಶ್ಚರ್ಯಕರ ಸಂಗತಿ ಎಂದರೇ ಅವರೆಲ್ಲ ಒಂದೇ ತಾಯಿಯ ಮಕ್ಕಳಂತೆ, ಅವಳಿ ಜವಳಿಯಂತೆ ತದ್ರೂಪವಾಗಿ ತ್ರಿವೇಣಿ ಸಂಗಮದಂತೆ ಕಾಣುತ್ತಿರುತ್ತಾರೆ.
ಕುಕ್ಕಟ ಮುನಿಯ ಆಶ್ರಮದ ಮುಂದೆ ಆಶ್ಚರ್ಯಚಕಿತರಾಗಿಸುವ ದೃಶ್ಯಗಳನ್ನು ಕಂಡು ಪುಂಡಲೀಕ ಮೂಕವಿಸ್ಮಿತನಾಗುತ್ತಾನೆ.ತಾನು ಹಿಂದೆಂದೂ ಎಲ್ಲಿಯೂ ನೋಡದ ಸೂಜಿಗದ ಸನ್ನಿವೇಶಗಳನ್ನು ಇಂದು ಕಣ್ಣಾರೆ ಕಾಣುವ ಕ್ಷಣ ಆತನದಾಗಿರುತ್ತದೆ. ಆ ಮೂವರು ಸ್ತ್ರೀಯರ ಮೊಗದಲ್ಲಿ ದೈವಲೀಲೆಯ ಕಳೆಯಿರುತ್ತದೆ.!ಆ ನಾರಿಯರು ಅತ್ಯಂತ ಭಕ್ತಿಯಿಂದ ಕೆಲಸ ಮಾಡುವದನ್ನು ಕಂಡು ಆತನ ಮನದಲ್ಲಿ ಇವರು ಯಾರು ಎಲ್ಲಿಂದ ಬಂದಿದ್ದಾರೆ.! ಎನ್ನುವ ಪ್ರಶ್ನೆಗಳ ಸರಮಾಲೆಯೊಂದಿಗೆ ಅವನಲ್ಲಿ ಕುತೂಹಲಕರವಾದ ಸಂಗತಿಗಳು ಹುಟ್ಟುತ್ತವೆ. ಜೀವನದಲ್ಲಿ ಇಂತಹ ಹುಣ್ಣಿಮೆಯ ಚಂದಿರನ ಹೋಲಿಕೆಯ ಸೌಂದರ್ಯ ಹೊಂದಿದ ಭಕ್ತಿಯ ಸುಗಂಧ ಹೊತ್ತು, ಹೂವಿನಂತೆ ಜೀವಕಳೆಯನ್ನು ತುಂಬಿರುವ ಸ್ತ್ರೀಯರನ್ನು ಆತ ಜೀವಮಾನದಲ್ಲಿ ಎಂದಿಗೂ ನೋಡಿರಲಿಲ್ಲ. ಪುಂಡಲೀಕನು ಪಾವಿತ್ರ್ಯತೆಯಿಂದ ಕೂಡಿದ ಆ ಮೂವರ ಸ್ತ್ರೀಯರ ಸಾಮಿಪ್ಯಕ್ಕೆ ಬಂದು ತಲುಪುತ್ತಾನೆ. ಅವರ ದೈವಿ ಸ್ವರೂಪವಾದ ಆಕರ್ಷಕ ತರಂಗಗಳ ಅವನನ್ನು ಮಂತ್ರ ಮುಗ್ದಗೊಳಿಸಿ, ಆತನಲ್ಲಿ ದೈವಿಕ ಭಾವನೆಯ ಸ್ಪರ್ಶವಾಗುತ್ತವೆ. ಆ ನದಿ ದೇವತೆಗಳಲ್ಲಿ ಶ್ರೀ ತುಳಸಿಯ ತಲ್ಲಿನತೆಯಿರುತ್ತದೆ. ಜಾನಕಿಯ ಜ್ವಾಜಲ್ಯಮಾನವಾದ ಪ್ರಕಾಶನವಿರುತ್ತದೆ. ಪಾರ್ವತಿದೇವಿಯ ಪ್ರಭಾವಳಿಯಿರುತ್ತದೆ. ಝಲ ದೇವತೆಯನ್ನು ಕಂಡು ಉದಯ ಕಾಲದಲ್ಲಿ ಎದ್ದ ಪಕ್ಷಿಗಳು ನಮನ ಸಲ್ಲಿಸಿದರೇ, ಅವರ ಜಲದ ರುಚಿಯನ್ನುಂಡ ಪ್ರಾಣಿಗಳು ಅವರನ್ನು ಹಾಡಿ ಹರಸುತ್ತಿದ್ದವು. ಮೊಲ ಜಿಂಕೆಗಳು ಅವರ ಚರಣ ತೊಳೆಯುಂತೆ ಅವರ ಅಂಗಾಲುಗಳಿಗೆ ಮುತ್ತಿಕ್ಕಲು ತವಕಿಸುತ್ತಿದ್ದವು.
ಆಶ್ರಮದಲ್ಲಿ ದ್ದ ದೇವದಾರ ಮರ ನದಿ ದೇವತೆಗಳ ಇರುವಿಕೆಯಿಂದ ಅದು ಹಚ್ಚು ಹಸಿರಾಗಿ ತಂಪಾದ ಗಾಳಿಯನ್ನು ಬೀಸುತ್ತದೆ. ಪರಿಮಳ ಹೊತ್ತ ಶ್ರೀಗಂಧ ಅವರನ್ನು ಆಲಂಗಿಸಿಕೊಳ್ಳಲು ಹಾತೊರೆಯುತ್ತಿರುತ್ತದೆ.ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ, ಸೇವಂತಿಗೆ, ಸಂಪಿಗೆ,ಕೇದಿಗೆ ಅವರ ಮುಡಿ ಸೇರಲು ಸಜ್ಜಾಗಿದ್ದವು. ಮೂವರು ಪುಣ್ಯಶಾಲಿ ಸ್ತ್ರೀಯರ ಪಾದ ಸ್ಪರ್ಶಕ್ಕೆ ಅಲ್ಲಿನ ನೆಲ, ಈಗ ತಾನೇ ಮಳೆ ಬಿದ್ದು ಹಸಿಯಾದಂತೆ ಕಾಣುತ್ತಿತ್ತು. ಕುಕ್ಕಟ ಮುನಿಯ ಆಶ್ರಮದಲ್ಲಿ ಕಸ ಗುಡಿಸುವ ಕಾಯಕವನ್ನು ಮಾಡುತ್ತಿರುವ ಸ್ತ್ರೀಯರು ಬೇರಾರು ಅಲ್ಲ ಅವರು ನದಿ ದೇವತೆಗಳಾಗಿದ್ದರು;ಈ ಭೂಮಿಯ ಮೇಲಿನ ಜೀವ ನದಿಗಳಾಗಿದ್ದರು.
ಇಂತಹ ರಮಣೀಯತೆಯ ಕ್ಷಣವನ್ನು ನೋಡುತ್ತ ಮೈ ಮರೆತು ನಿಂತಿದ್ದ ಪುಂಡಲೀಕ ಸ್ವಲ್ಪ ಹೊತ್ತಿನಲ್ಲಿ ಸ್ಥಿತಿ ಪ್ರಜ್ಞನಾಗಿ ಆ ಮೂವರು ಸ್ತ್ರೀಯರ ಹತ್ತಿರಕ್ಕೆ ಬಂದನು.ಬಂದು ಪ್ರಶ್ನೆ ಮಾಡುತ್ತಾನೆ. ನೀವು ಯಾರು.? ಎಲ್ಲಿಂದ ಬಂದಿರುವಿರಿ.! ನಿಮ್ಮ ಪವಿತ್ರವಾದ ಕರ ಕಮಲಗಳಿಂದ ಏತಕ್ಕಾಗಿ ಕುಕ್ಕಟ ಮುನಿಯ ಆಶ್ರಮದಲ್ಲಿ ಕಸ ಗುಡಿಸುವ ಹೀನವಾದ ಕೆಲಸ ಮಾಡುತ್ತಿದ್ದೀರಿ.! ಆತನ ಅಂಗಳವೇಕೆ ಸ್ವಚ್ಚ ಮಾಡುತ್ತಿದ್ದೀರಿ.?ಎನ್ನುತ್ತಾನೆ.
ಪುಂಡಲಿಕನು ಕೇಳಿದ ಪ್ರಶ್ನೆಗಳಿಗೆ ಆಕಾಶದ ದೇವತೆಯಂತೆ ಕಾಣುತ್ತಿದ್ದ ಮೂವರು ದೇವತೆಗಳು ಪ್ರತಿಯಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ನಾವು ಮೂರು ಜನ ಶಿವನ ಜಟೆಯಿಂದ ಈ ಜಗದಲ್ಲಿ ಜನಿಸಿ ಬಂದು, ನೀರಾಗಿ ಹರಿಯುವ ನದಿ ದೇವತೆಗಳು.! ನಾವು ಗಂಗೆ, ಯಮನೆ, ಸರಸ್ವತಿ ಕುಕ್ಕಟ್ಟ ಮುನಿಯ ಆಶ್ರಮದಲ್ಲಿ ನಾವು ಅನುದಿನವು ಬಂದು ಈ ಮುನಿಯ ಸೇವೆಯನ್ನು ಸಲ್ಲಿಸುತ್ತ ಮತ್ತು ಇಲ್ಲಿ ಕಸ ಗುಡಿಸುವ ಕೆಲಸವನ್ನು ಮಾಡುತ್ತೇವೆ. ಆಶ್ರಮದಲ್ಲಿ ನೆಲ ಒರೆಸುವ ಕೆಲಸದಿಂದ ಹಿಡಿದು ಅಂಗಳದಲ್ಲಿ ಅಂದ ಚಂದದ ರಂಗೋಲಿ ಹಾಕುತ್ತ ಮುನಿಗಳ ಸೇವೆ ಸಲ್ಲಿಸುತ್ತೇವೆ.! ಎನ್ನುತ್ತಾರೆ.
ಆ ಮೂವರು ಸ್ತೀ ದೇವತೆಗಳು ಗಂಗೆ ಯಮುನೆ ಸರಸ್ವತಿ ಎಂಬ ಮಾತು ಕೇಳಿದ ಪುಂಡಲೀಕ ದಂಗಾಗಿ ಹೋಗುತ್ತಾನೆ. ತಾನು ಈಗ ಮಾತನಾಡುತ್ತಿರುವದು ಅಸಾಮಾನ್ಯರಾದ ನದಿ ದೇವತೆಗಳ ಜೊತೆ, ಎಂಬುವದು ಮನವರಿಕೆಯಾಗುತ್ತದೆ. ಈ ನದಿಗಳು ಭರತ ಭೂಮಿಯಲ್ಲಿ ಹರಿದು ತಮ್ಮ ಜೀವನವಿಡಿ ಜನರಿಗಾಗಿ ಬದುಕಿದ ಮಹಾಮಹೀಮವಾಗಿ ತ್ರಿವೇಣಿ ಸಂಗಮವಾಗಿರುವ ಪುಣ್ಯ ನದಿಗಳು ಎಂಬುವದು ಆತನಿಗೆ ಮನದಟ್ಟಾಗುತ್ತದೆ. ಇದರಿಂದ ನಿಜಕ್ಕೂ ಆತನಿಗೆ ದಿಕ್ಕು ತೋಚದಂತಾಗುತ್ತದೆ. ಆದರೂ ಆತ ಸಾವರಿಸಿಕೊಂಡು ನಿಜಕ್ಕೂ ನಾನೇ ಭಾಗ್ಯಶಾಲಿ ಎಂದು ತಿಳಿದು ಅವರಿಂದ ಮತ್ತಿಷ್ಟು ವಿಚಾರ ತಿಳಿಯಲು ಮುಂದಿನ ಪ್ರಶ್ನೆಯನ್ನು ಕೇಳಲು ಅಣಿಯಾಗುತ್ತಾನೆ. ನೀವು ಕುಕ್ಕಟ ಮನೆಯ ಯಾವ ಘನ ಕಾರ್ಯ ನೋಡಿ ಇಷ್ಟೊಂದು ತಲ್ಲಿನರಾಗಿ, ಇಲ್ಲಿ ಕಾಯಾ, ವಾಚಾ,ಮನಸಾ ಪರಿಶುದ್ಧವಾಗಿ ಸೇವೆ ಸಲ್ಲಿಸುತ್ತಿದ್ದೀರಿ.! ಅದು ಕೂಡಾ ಈ ಹಳತಾದ ಆಶ್ರಮದ ಮುಂದೆ ಎನ್ನುತ್ತಾನೆ. ಮಾತು ಮುಂದುವರೆಸಿದ ಪುಂಡಲೀಕ ನೀವು ಕುಕ್ಕಟ ಮುನಿ ಯಾವ ರೀತಿಯ ಪುಣ್ಯದ ಕೆಲಸ ಮಾಡಿದ್ದಾನೆಂದು ಇಷ್ಟೊಂದು ಸಹನಶೀಲರಾಗಿ, ತಲ್ಲಿನತೆಯಿಂದ ಆತನ ಆಶ್ರಮದ ಕೆಲಸ ಮಾಡುತ್ತಿದ್ದಿರಿ.! ಎನ್ನುತ್ತಾನೆ.
ಆಗ ನದಿ ದೇವತೆಗಳು ಆತನು ಮಾತು ಕೇಳಿ, ಮಂದಾಹಾಸದ ಮೊಗದಿಂದ ಅತ್ಯಂತ ತಾಳ್ಮೆಯಿಂದ ಉತ್ತರಿಸಿತ್ತು.ಪ್ರಪಂಚಕ್ಕೆ ಬೇಕಾದ, ಎಲ್ಲರ ಮನ ಪ್ರಸನ್ನಗೊಳಿಸುವ ಪರಮ ಶ್ರೇಷ್ಠವಾದ ಅದ್ಭುತವಾದ ವಾಣಿಯನ್ನು ಉದ್ಗರಿಸುತ್ತಾರೆ. ಯಾರು ತಮ್ಮ ಜೀವನದಲ್ಲಿ ಹೆತ್ತ ತಂದೆ ತಾಯಿಯ ಸೇವೆಯನ್ನು ಮಾಡುತ್ತ ಅವರಿಗೆ ನಿತ್ಯ ನತಮಸ್ತಕರಾಗಿ ನಮಸ್ಕರಿಸಿ, ಅವರ ಪಾದಗಳಿಗೆ ಹಣೆ ಹಚ್ಚುತ್ತಾರೋ, ಅವರು ಪರಮಾತ್ಮನ ಸಾಮಿಪ್ಯಕ್ಕೆ ಬಹು ಬೇಗ ತಲುಪಿ, ಆತನ ಪ್ರೀತಿಗೆ ಪಾತ್ರವಾಗಿ ದೇವಾನುದೇವತೆಗಳ ನಿಕಟ ಸಂಪರ್ಕಕ್ಕೆ ಬರುತ್ತಾರೆ. ಅಂತಹ ಪುಣ್ಯಶಾಲಿ ಮಾನವರ ಸೇವೆಯನ್ನು ಮಾಡಲು ಸ್ವತ ಹರ,ಹರಿಗಳೇ, ಸುರಗೃಹದಿಂದ ಧರೆಗಿಳಿದು ಬರುವರು. ! ನಾವು ಕೂಡಾ ಆ ದೇವರು ಕಳುಹಿಸಿದ ಪ್ರತಿನಿಧಿಗಳು.! ಎನ್ನುತ್ತಾರೆ. ಹೆತ್ತವರ ಸೇವೆಯೂ ಮಕ್ಕಳ ಪಾಲಿಗೆ ಜೀವನದಲ್ಲಿ ಒಂದು ಸುವರ್ಣಾವಕಾಶ. ಹೆತ್ತವರ ಸೇವೆಯಿಂದ ಮನುಷ್ಯನಾಗಿ ಜೀವನದಲ್ಲಿ ನಾವು ಮಾಡಿದ ದುರಿತ ಪಾಪ ಕರ್ಮಗಳೆಲ್ಲವೂ ಕಳೆದು ಹೋಗುವವು. ಜನ್ಮ ಜನ್ಮಾಂತರದ ಜಾತಕದ ಚಾಂಡಾಲ ಯೋಗ, ಸರ್ಪದೋಷ, ಶನಿಯ ಕಾಕ ದೃಷ್ಠಿ ಗ್ರಹಚಾರ, ಗೋಚಾರದ ಫಲಗಳು ಬೆಣ್ಣೆಯಂತೆ ಕರಗಿ ಆ ದೋಷಗಳು ದೂರಾಗಿ ಮಾನವ ಜನ್ಮ ಪಾವನವಾಗುವದು. ಎನ್ನುತ್ತಾರೆ.
ನದಿ ದೇವತೆಗಳ ಮಾತು ಕೇಳಿದ ಪುಂಡಲೀಕ ಅತೀವ ದುಃಖದಿಂದ ಗದ್ಗದಿತನಾಗುತ್ತಾನೆ. ಅವನಲ್ಲಿ
ಪಶ್ಚಾತಾಪದ ಕಣ್ಣಿರು ಉದರಲು ಪ್ರಾರಂಭಿಸುತ್ತವೆ.ತಾನು ಹೆತ್ತವರೊಂದಿಗೆ ಮಾಡಿದ ಘೋರ ಪಾಪ ಕರ್ಮಗಳನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾನೆ.ಆತನ ಕಣ್ಣುಗಳಿಂದ ಕಣ್ಣೀರು ಮಳೆ ಧಾರಾಕಾರವಾಗಿ ಸುರಿಯುತ್ತವೆ. ರಾತ್ರಿ ನಿತ್ರಾಣವಾಗಿ ಮಲಗಿದ ತಂದೆ ತಾಯಿಗಳು ಆಗ ತಾನೇ ಎದ್ದು ಕುಳಿತ ಹೆತ್ತವರು ಮಗನಿನಿಂದ ಕೈ ಕಾಲುಗಳಿಗಾದ ಗಾಯಗಳು ಕಂಡು ದುಃಖಿತವಾಗಿ ದಾರಿ ತೋಚದೆ ಕುಳಿತಿರುತ್ತಾರೆ.ಕುಕ್ಕಟ ಮುನಿಯ ಆಶ್ರಮದ ಸಂಭಾಷಣೆಯನ್ನು ಅರಿಯದ್ದೇ ಮೌನವಾಗಿ ಕುಳಿತು ಕೇಳಿತ್ತಿರುತ್ತಾರೆ.ಇತ್ತ ಪುಂಡಲೀಕನು
ತಾನು ಹೆತ್ತವರೊಂದಿಗೆ ಹೀನಾಯಮಾನವಾಗಿ ನಡೆದುಕೊಂಡ ಹಿಂದಿನ ದಿನದ ದೃಶ್ಯ ನೆನಪುಗಳಾಗಿ ಅವು ಪುಂಡಲೀಕನ ಎದೆಯಲ್ಲಿ ಹರಿತವಾದ ಈಟಿಯಂತೆ ಇರಿಯುತ್ತಿರುತ್ತವೆ. ನೆನಪುಗಳೆಲ್ಲ ಪೆಟ್ಟಾಗಿ ಆ ಪೆಟ್ಟುಗಳ ಪರಿಣಾಮದಿಂದ ಆತನ ಕಣ್ಣಾಲೆಗಳಲ್ಲಿ ಮತ್ತಷ್ಟು ಕಣ್ಣೀರು ತರಿಸುತ್ತವೆ.
ನದಿ ದೇವತೆಗಳು ಹೇಳಿದ ಜ್ಞಾನೋದಯದ ಮಾತುಗಳು ಪುಂಡಲೀಕನ ಅಂತರಂಗವನ್ನು ಕಲಕುತ್ತವೆ.ತಾನು ಮಾಡಿದ ಒಂದೊಂದು ತಪ್ಪುಗಳು ಭೀಷ್ಮನ ಶರಪಂಜರದ ನಟ್ಟ ಬಾಣುಗಳಂತೆ ಯಮಯಾತನೆಯಿಂದ ಕಾಡುತ್ತವೆ.ಆ ನೋವುಗಳು ಮೈಮನಗಳನ್ನು ಆಳವಾಗಿ ಘಾಸಿಗೊಳಿಸುತ್ತವೆ. ಆತನ ಪಾಲಿಗೆ ಆ ಮಾತೆಯರು ಹೇಳಿದ ಪ್ರತಿ ಮಾತುಗಳು ಆತನ ಇಡೀ ಜೀವನವನ್ನು ಬದಲಾಯಿಸುತ್ತವೆ.ನಿಧಾನವಾಗಿ ಸಾವರಿಸಿಕೊಂಡ ಪುಂಡಲೀಕ ಕುಕ್ಕಟ ಮುನಿಯ ಕಾಲಿಗೆರಗಿ,ನದಿ ದೇವತೆಗಳಿಗೆ ಹಣೆ ಮಣಿದು ಆಶ್ರಮದತ್ತ ತಿರುಗಿ ನೋಡುತ್ತಾನೆ.
ಅಲ್ಲಿ ಕುಳಿತಿರುವ ಆತನ ತಂದೆ ತಾಯಿಗಳು ಕೈಲಾಸ ಪರ್ವತದಲ್ಲಿ ಕುಳಿತಿರುವ ಸಾಕ್ಷಾತ ಪಾರ್ವತಿ ಪರವೇಶ್ವರನಂತೆ ಕಾಣುತ್ತಾರೆ. ಇವೆಲ್ಲ ಕ್ಷಣ ಭಂಗುರದ ಘಟನೆಗಳ ಪರಿಣಾಮದಿಂದ ಮನ ಪರಿವರ್ತನೆ ಹೊಂದಿದ ಪುಂಡಲೀಕ ಕಾಶಿ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ತನ್ನೂರಿನತ್ತ ತಂದೆ ತಾಯಿ ಹೆಂಡತಿಯೊಂದಿಗೆ ಸಾಗುತ್ತಾನೆ.
ಇಟ್ಟಿಗೆ ಮೇಲೆ ನಿಂತು ವಿಷ್ಣು ವಿಠ್ಠಲನಾದ .!
ಹೆಚ್ಚು ಹಿಂಸಾತ್ಮಕತೆಯನ್ನು ಹೊಂದಿದ್ದ ಸಾಮ್ರಾಟ ಅಶೋಕ ಕಳಿಂಗ ಯುದ್ಧದ ಪ್ರತಿಕಾರದ ಶೋಧದಲ್ಲಿ ಲಕ್ಷ ಸೈನಿಕರನ್ನು ಯಮ ಪುರಿಗೆ ಅಟ್ಟಿ ಕೊನೆಗೆ ಬೌದ್ಧ ಬಿಕ್ಕು ವಾಗಲಿಲ್ಲವೆ.ಕಾಡಿನ ಹಾದಿಯಲ್ಲಿ ಹಾದು ಹೋಗುವ ನಿರಪರಾಧಿಗಳನ್ನು ಹತ್ಯೆ ಮಾಡುತ್ತಿದ್ದ ಬೇಡರ ರತ್ನಾಕರ ನಾರದರಿಂದ ವಾಲ್ಮೀಕಿಯಾಗಿ ರಾಮಾಯಣ ಗ್ರಂಥ ಬರೆದು ಜಗತ್ತಿಗೆ ಕೊಡುಗೆ ನೀಡಿದನಲ್ಲವೆ. ತಕ್ಷಶಿಲೆಯಲ್ಲಿ ಓದು ನೆತ್ತಿಗೆ ಹತ್ತಲಿಲ್ಲವೆಂದು ದಾರಿ ತಪ್ಪಿ ಅಂಗುಲಿಮಾಲಾ ಸಾವಿರ ಜನರ ಕಗ್ಗೊಲೆ ಮಾಡಿ ಕೊನೆಯಲ್ಲಿ ಬುದ್ಧನಿಂದ ಪ್ರಭಾವಿತನಾಗಿ ಬಿಕ್ಕುವಾದ. ಹಿಂಸಾತ್ಮಕ ಪರ ಪೀಡನೆಯನ್ನು ಬಗಲ ಕೆಂಡವಾಗಿಸಿಕೊಂಡಿದ್ದ ಪುಂಡಲೀಕ ಜೀವನದಲ್ಲಿ ಮಹತ್ತರ ಬದಲಾವಣೆಗಳು ಪ್ರಾರಂಭವಾಗಲು ಶುರು ಮಾಡಿದವು.
ಕುಕ್ಕಟ ಮುನಿಯ ಆಶ್ರಮದಲ್ಲಿನ ನದಿ ದೇವತೆಗಳಿಂದ ನಡೆದ ಘಟನೆಗಳು ಪುಂಡಲಿಕನ ಆಂತರ್ಯದಲ್ಲಿ ಶರವೇಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತವೆ. ತನ್ನ ತಂದೆ ತಾಯಿಗಳ ಸೇವೆಯೇ, ತನ್ನ ಜೀವನದ ಪರಮ ಗುರಿ ಅದಕ್ಕಾಗಿಯೇ, ತಾನು ಬದುಕಬೇಕೆಂದು ಭಾವಿಸಿ ಅತ್ಯಂತ ಭಕ್ತಿ ಭಾವದಿಂದ ಅವರ ಸೇವೆಯನ್ನು ಮಾಡುತ್ತಾ ಸಾಗಿದನು. ಇದರಿಂದ ಮುಂದೆ ಅವನಲ್ಲಿ ಅನೇಕ ರೀತಿಯ ಧಾರ್ಮಿಕ ನಂಬಿಕೆಗಳು ಪೂಜ್ಯ ಭಾವನೆಗಳು ಬೆಳವಣಿಗೆ ಹೊಂದಿ ಆತನ ಉದ್ದಾರವಾಗಲು ಪ್ರಾರಂಭವಾಗುತ್ತವೆ. ಆಧ್ಯಾತ್ಮಿಕ ಅನುಭವಗಳಿಂದ ಆತನ ನಡೆ ನುಡಿಯಲ್ಲಿ ಸಂಪೂರ್ಣ ಬದಲಾವಣೆಯಾಗುತ್ತವೆ.ಇದರಿಂದ ಅವನ ಮನೆಯಲ್ಲಿ ಸತ್ಸಂಗದ ಜ್ಞಾನ ದೀವಿಗೆ ಹೊತ್ತುತ್ತದೆ.ಇದರ ಪ್ರಜ್ವಲವಾದ ಬೆಳಕನ್ನು ದರ್ಶಿಸಲು, ಅದನ್ನು ಅರಿಯಲು ಸುತ್ತ ಮುತ್ತಲ್ಲಿದ್ದ ಜನ ತಂಡೋಪತಂಡವಾಗಿ ಅವನ ಮನೆಯತ್ತ ಆಗಮಿಸುತ್ತಾರೆ.
ಆತ ಯೋಗ ಕುಂಡಲೀನಿ ಶಕ್ತಿಯ ಸಂಯೋಜನೆಗಳೊಂದಿಗೆ, ಮತ್ತು ಮುಖ್ಯವಾಗಿ ಮಾತಾ ಪಿತರ ಸೇವೆಗೆ ಹೆಸರಾಗುತ್ತಾನೆ.ಆ ಊರಿನಲ್ಲಿ, ಪರ ಊರುಗಳಲ್ಲಿ ಆತ ಮಾಡುವ ದೇವ ಕೀರ್ತನೆ, ಗಾನ ಪ್ರಾರ್ಥನೆಗಳಿಂದ ಹೆಸರು ವಾಸಿಯಾಗಿ ಮನೆ ಮಾತಾಗುತ್ತಾನೆ. ಇತ್ತ ಪುಂಡಲೀಕನ ಸತ್ಸಂಗದ ಸುವಾರ್ತೆ ಮೈಕುಂಠದಲ್ಲಿದ್ದ ಶ್ರೀ ಹರಿ ವಿಷ್ಣುವಿಗೆ ತಲುಪುತ್ತದೆ.ತನ್ನ ಭಕ್ತನ ಅಪಾರವಾದ ಸೇವೆ ಭೂಲೋಕದಲ್ಲಿ ಜನಜನಿತವಾಗಿರುವದನ್ನು ತನ್ನ ದಿವ್ಯ ದೃಷ್ಠಿಯಿಂದ ಕಾಣುತ್ತಾನೆ. ತನ್ನ ಭಕ್ತ ಪುಂಡಲೀಕನ ಪರೀಕ್ಷೆಗಾಗಿ ಒಂದು ದಿನ ಶ್ರೀ ಕೃಷ್ಣ ಪರಮಾತ್ಮ ಗೋಪಾಲನ ವೇಷಧಾರಿಯಾಗಿ ಭೂಲೋಕಕ್ಕೆ ಬಂದು ಸಂತ ಪುಂಡಲೀಕನ ಮನೆಯ ಹೊಸ್ತಿಲಲ್ಲಿ ಬಂದು ನಿಲ್ಲುತ್ತಾನೆ.
ಇತ್ತ ಮನೆಯಲ್ಲಿ ಪುಂಡಲೀಕ ಮುಪ್ಪಾವಸ್ಥೆಯಲ್ಲಿರುವ ತನ್ನ ತಂದೆ ತಾಯಿಗಳ ಸೇವೆಯಲ್ಲಿ ನಿರತನಾಗಿ ತಲ್ಲಿನತೆಯಿಂದ ಅವರ ತಲೆಗಳಿಗೆ ತನ್ನ ತೊಡೆಗಳನ್ನು ತಲೆ ದಿಂಬನ್ನಾಗಿಸಿ, ಅವರ ನಿದ್ರಗೆ ಭಂಗ ಬಾರದಂತೆ ಗಾಳಿ ಬೀಸುತ್ತ ಸಮರ್ಪಣೆಯ ಭಾವದಿಂದ ಸೇವೆಯನ್ನು ಸಲ್ಲಿಸುತ್ತಿರುತ್ತಾನೆ. ಇಂತಹ ವೇಳೆಯಲ್ಲಿ ಪುಂಡಲೀಕನನ್ನು ಪರೀಕ್ಷಿಸಲು ಅದಾಗಲೇ ಬಾಗಿಲ ಬಳಿ ನಿಂತಿದ್ದ ಗಿರಿಧರ ಗೋಪಾಲ ಪುಂಡಲೀಕನಿಗೆ ಕೂಗಿ ಹೇಳಿದ ನಾನು ಶ್ರೀ ಹರಿ.! ವೈಕುಂಠದಿಂದ ಬಂದಿರುವೆ, ನಿನ್ನ ಬಾಗಿಲ ಬಳಿ ಬಂದು ಬಹಳ ಹೊತ್ತಾಯಿತು.! ನನ್ನತ್ತ ನೀನು ತಿರುಗಿ ನೋಡುವದಿಲ್ಲವೇ.? ನೀನು ನಿನ್ನ ಕೆಲಸದಲ್ಲಿ ಅಷ್ಟೊಂದು ಮಗ್ನನಾಗಿರುವೆಯಾ.?
ಆಗ ಪುಂಡಲೀಕ ನಾನು ನನ್ನ ಹೊತ್ತವರ ಸೇವೆಯಲ್ಲಿ ತೊಡಗಿರುವೆ ನನಗೆ ಈಗ ಪುರುಸೊತ್ತಿಲ್ಲ ಅದಕ್ಕಾಗಿ ಕ್ಷಮೆಯಿರಲಿ! ಎನ್ನುತ್ತಾನೆ
ಆಗ ಶ್ರೀ ಹರಿ ಮತ್ತೇ ಮಾತು ಮುಂದುವರಸಿ ಈ ಕಲಿಯುಗದಲ್ಲಿ ಭೂಲೋಕದ ಜನರಿಗೆ ನನ್ನ ದರ್ಶನ ಬಹಳಷ್ಟು ಅಪರೂಪಾಗಿದೆ.! ಗನನ್ನ ಭಕ್ತರು ಗುಡ್ಡ-ಗಂವ್ವರ, ದಂಡಕಾರಣ್ಯ, ತೀರ್ಥಕ್ಷೇತ್ರಗಳಲ್ಲಿ, ದೇವ ಮಂದಿರಗಳಲ್ಲಿ ಭಕ್ತಿಯಿಂದ ಮತ್ತು ಅತ್ಯಂತ ಕಠಿಣ ತಪಸ್ಸುಗಳಿಂದ ನನ್ನನ್ನು ಒಲಿಸಿಕೊಳ್ಳಲು ಸಾಕಷ್ಟು ಹರ ಸಾಹಸ ಪಡುತಿರುತ್ತಾರೆ.!ಅವರು ನನ್ನ ಬರುವಿಕೆಗಾಗಿ ತಮ್ಮ ಪ್ರಾಣ ಪ್ರಾಣಕ್ಕಿಟ್ಟು ನನ್ನ ಇರುವಿಕೆಯನ್ನು ನೋಡಲು ಹಗಲಿರುಳು ಪ್ರಯತ್ನ ಪಡುವರು.!ನೀನು ಕೂಡಾ ಅಷ್ಟೇ,ಬಹಳಷ್ಟು ದಿನಗಳಿಂದ ನನ್ನ ನಾಮಸ್ಮರಣೆ ಮಾಡುತ್ತಿರುವೇ, ಬಾ ಕೇಳಿಕೋ, ನಿನಗೆ ಬೇಕಾದ ವರಗಳನ್ನು ಪಡೆದುಕೋ, ನಿನ್ನ ಹೊಸ್ತಿಲಲ್ಲಿಯೇ, ನಿಂತಿರುವೆ,
ನನ್ನತ್ತ ನೋಡು.! ಎಂದನು.
ಆಗ ಪುಂಡಲೀಕ ನಾನು ಈಗ ನನ್ನನ್ನು ಹೆತ್ತ ಹೊತ್ತು ಸಾಕಿ ಸಲುಹಿದ ಮಾತಾ ಪಿತರ ಸೇವೆಯಲ್ಲಿರುವೆ.! ನಾನು ನಿನ್ನ ಸೇವೆಗೆ ನಿನ್ನತ್ತ ದರ್ಶನಕ್ಕೆ ಬಂದರೇ ನನ್ನ ತಂದೆ-ತಾಯಿಗಳಿಗೆ ನನ್ನಿಂದ ತೊಂದರೆಯಾಗುವುದು. ಇದರಿಂದ ಖಂಡಿತ, ನನ್ನಿಂದ ಕ್ಷಮಿಸಲಾಗದ ತಪ್ಪಾಗುವದು.! ಅವರ ವಿಶ್ರಾಂತಿಯ ನಿದ್ರೆಗೆ ಭಂಗವಾಗುವದು.! ಶಾಂತಂ.! ಪಾಪಂ.! ಎನ್ನುತ್ತ ಕ್ಷೀಣ ಧ್ವನಿಯಲ್ಲಿ ಮಾತನಾಡುವನು
ಪುಂಡಲೀಕನ ನಿಜವಾದ ಭಕ್ತಿಯ ಪರೀಕ್ಷೆಗಾಗಿ ಬಂದ ಪಾಂಡುರಂಗನು ಬಹಳ ಹೊತ್ತಿನವರೆಗೂ ಕಾಯುತ್ತಾನೆ. ಕಾಯುತ್ತ ಪುನಃ ಪುನಃ ಆತನನ್ನು ಕರೆಯುತ್ತ ಹೊಸ್ತಿಲಲ್ಲಿಯೇ, ನಿಲ್ಲುತ್ತಾನೆ.
ಆತ ಎಷ್ಟೇ ಅಲವತ್ತಕೊಂಡು ಕರೆದರು ಪುಂಡಲೀಕ ಮಾತ್ರ ಕ್ಷಣ ಮಾತ್ರಕ್ಕೂ ತನ್ನ ತಂದೆ ತಾಯಿಗಳನ್ನು ಬಿಟ್ಟು. ತಾನೆದ್ದು ಬರುವದಿಲ್ಲ ಎನ್ನುತ್ತಾನೆ. ಆತ ತನ್ನ ತಾಯಿ ತಂದೆಯ ಸೇವೆಯಲ್ಲಿ ಸಂಪೂರ್ಣವಾಗಿ ತನ್ಮಯತೆಯಿಂದ ಮಗ್ನನಾಗಿರುತ್ತಾನೆ.ಆಗ ಪಾಂಡುರಂಗ, ಪುಂಡಲೀಕನ ಜೊತೆ ಮಾತನಾಡುತ್ತ, ನಾನು ನಿಂತ ನೆಲದಲ್ಲಿ ಸಾಕಷ್ಟು ಮಣ್ಣಿದೆ, ಧೂಳಿದೆ, ಕೆಸರಿದೆ ನನಗೆ ಇಲ್ಲಿ ನಿಲ್ಲುವದು ತುಂಬಾ ಕಷ್ಟವಾಗುತ್ತಿದೇ, ಇದರಿಂದ ನನಗೆ ದಣಿವಾಗುತ್ತಿದೆ. ನಾನು ನಿಂತಲ್ಲಿಯೇ, ವಿರಮಿಸಿಕೊಳ್ಳಲು ಏನಾದರೂ ಮಾಡು ನನಗೇನಾದರೂ ಕೊಡು.! ಎನ್ನುತ್ತಾನೆ.
ಆಗ ಪುಂಡಲೀಕನು ತನ್ನ ಬೆನ್ನು ಮುಖ ತಿರುಗಿಸದೇ, ಅಲ್ಲಿಯೇ ಹತ್ತಿರದಲ್ಲಿದ್ದ ಇಟ್ಟಿಗೆಯನ್ನು ತೆಗೆದುಕೊಂಡು ಪಾಂಡುರಂಗನತ್ತ ತೆಗೆದುಕೋ ಎಂದು ಎಸೆಯುತ್ತಾನೆ. ಪುಂಡಲೀಕ ಎಸೆದ ಇಟ್ಟಿಗೆಯ ಮೇಲೆ ಶ್ರೀ ವಿಷ್ಣು ತನ್ನ ಎರಡು ಪಾದಗಳನಿಟ್ಟು ಭಕ್ತನಿಗಾಗಿ ಕಾಯುತ್ತ ಎರಡು ಕೖಗಳನ್ನು ಕಟಿ ಭಾಗದ ಮೇಲಿಟ್ಟು ಪುಂಡಲಿಕನ ಬರುವಿಕೆಯನ್ನು ನೀರಿಕ್ಷಿಸುತ್ತಾ ನಿಲ್ಲುತ್ತಾನೆ. ಹೊತ್ತು ಸರಿಯುತ್ತ ಹೋದಂತೆ ಬೆಳಗಾಗುತ್ತದೆ.
ಪುಂಡಲೀಕ ಲಗುಬಗೆಯಿಂದ ಓಡೋಡಿ ಬರುತ್ತಾನೆ. ಆಗ ಅಲ್ಲಿನ ದೃಶ್ಯ ಕಂಡು ಪುಂಡಲೀಕ ಮಾತು ಬರದೇ, ಅವಕ್ಕಾಗಿ ನಿಲ್ಲುತ್ತಾನೆ. ಅಲ್ಲಿ ತನಗಾಗಿ ಪ್ರತ್ಯಕ್ಷವಾಗಿ ಹಲವು ಗಂಟೆಗಳ ಕಾಲ ಕಾಯ್ದು ನಿಂತ ಜಗದ ರಕ್ಷಕ ಶ್ರೀ ಹರಿ ಪಾಂಡುರಂಗ ತಾನು ಎಸೆದ ಇಟ್ಟಿಗೆಯ ಸಮೇತ ಕಲ್ಲಿನ ಮೂರ್ತಿಯಾಗಿ ನಿಂತಿರುತ್ತಾನೆ. ಆ ಮೂರ್ತಿಯನ್ನು ಪುಂಡಲೀಕನು ಬಿಕ್ಕಳಿಸಿ ಅಳುತ್ತ ಅಪ್ಪಿಕೊಳ್ಳುತ್ತಾನೆ, ಒಪ್ಪಿಕೊಳ್ಳತ್ತಾನೆ. ಆತನ ಭಕ್ತಿಯ ಪವಾಡದ ಶಕ್ತಿ ಲೋಕ ವಾರ್ತೆಯಾಗಿ, ಬಾಯಿಂದ ಬಾಯಿಗೆ ಸ್ತುತಿ ಸಾರುತ್ತ ಹೊಯ್ದಳ ರಾಜ ವಿಷ್ಣುವರ್ಧನರಾದಿಯಾಗಿ ತಲಪುತ್ತ ಲೋಕ ವಿಖ್ಯಾತವಾಗುತ್ತದೆ. ಅಲ್ಲಿಗೆ ಸಂತ ಪುಂಡಲೀಕ ಹೊಸ ಇತಿಹಾಸದೊಂದಿಗೆ ಸಾಗರೋಪಾದಿಯಲ್ಲಿ ವಾರಿಕ ಪಂಥವು ಸ್ಥಾಪನೆಯಾಗಿ ಅನಾವರಣಗೊಳ್ಳುತ್ತದೆ. ಪುಂಡಲೀಕನು ತನ್ನ ಸತ್ಸಂಗದಿಂದ ಹೊಸ ಮುನ್ನುಡಿಗೆ
ನವ ನವೀನವಾದ ಮನ್ವಂತರಕ್ಕೆ ನಾಂದಿ ಹಾಡುತ್ತಾನೆ. ಆ ನಾಂದಿಯೇ, ಶೈವ ವಿಷ್ಣು ಪಂಥಗಳ ಹಿನ್ನಲೆಯ
ಮಹಾ ಮೇಳೖಸುವಿಕೆಯ ಫಲವಾಗಿ ಪಂಡಪುರದಲ್ಲಿ ವಿಠ್ಠಲ ಹುಟ್ಟಿಕೊಳ್ಳುತಾನೆ.! ಇನ್ನೂ ಈ ಪಾಂಡುರಂಗ ವಿಠ್ಠಲ ದೇವರ ಕುರಿತು ‘ವಿಠ್ಠಲ ಒಂದು ಮಹಾ ಸಮನ್ವಯ’ ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಖ್ಯಾತ ಸಂಶೋಧಕ ಶ್ರೀ ಆರ್, ಸಿ ಡೇರೆಯವರು ಪಾಂಡುರಂಗ ವಿಠ್ಠಲನ ಮೇಲೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಆ ಬೆಳಕಿನೊಂದಿಗೆ ಸಾಗುತ್ತ ಮತ್ತಷ್ಟು ಸಂಶೋಧಕರ ಅಭಿಪ್ರಾಯದೊಂದಿಗೆ ಮುಂದಿನ ಭಾಗಕ್ಕೆ ಸಾಗೋಣ..
ಭಾಗ-05
ಬಿಟ್ಟಿ > ಬಿಟ್ಟಿಗ> ಬಿಟ್ಟಲ > ಇಟ್ಟಲ > ವಿಠಲ > ವಿಷ್ಣುವರ್ಧನ……..
(ಬಿಟ್ಟಿಗ, ಬಿಟ್ಟದೇವ, ವಿಟ್ಟಿಗ, ವಿಠ್ಠಲ)
✍️ ದಶರಥ ಕೋರಿ ಶಿಕ್ಷಕರು ಇಂಡಿ.
ಆಕರಗಳು:
ವಿಠ್ಠಲ: ಒಂದು ಮಹಾಸಮನ್ವಯ
ಲೇಖಕರು ಶ್ರೀ ಆರ್ ಸಿ ಡೇರೆ
ಖ್ಯಾತ ಸಂಶೋಧಕರು,
ಕೇಂದ್ರ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ ವಿಜೇತರು ಸೊಲ್ಲಾಪುರ.
ವಿಕಿಪೀಡಿಯ.
ಪ್ರೇರಣೆ ಪ್ರೊತ್ಸಾಹ
ಮಾರ್ಗದರ್ಶನ:
ಶ್ರೀ ಕಿಶೋರ ಕಾಸಾರ ಸಾಹಿತಿಗಳು
ಮಣೂರು ತಾ:ಅಫಜಲಪುರ
ಶ್ರೀ ರಮೇಶ ಬಗಲೂರ (ಶಿಕ್ಷಕರು)
ಸಿ ಆರ್ ಪಿ ಶಿಕ್ಷಣ ಇಲಾಖೆ ಇಂಡಿ.
ಶ್ರೀ ಸಂತೋಷ ಕೆಂಭೋಗಿ
ಸಂಸ್ಥಾಪಕರ ಅಧ್ಯಕ್ಷರು.
ಎಕ್ಸಲೆಂಟ್ ಪ್ಯಾರಾ ಮೆಡಿಕಲ್
ಕಾಲೇಜು ಇಂಡಿ.
ಶ್ರೀ ಮಲ್ಲನಗೌಡ ಸಾಹೇಬಗೌಡ ಪಾಟೀಲ ಸಾಹಿತಿಗಳು ಗೊರವಗುಂಡಗಿ ತಾ:ಸಿಂದಗಿ.