SPL Story Writter By Kori
ನದಿ ತೀರದಲ್ಲಿಯೇ, ಇಡೀ ಆಯುಷ್ಯನ್ನು ಕಳೆಯುವ
ಅಂಬಿಗನನ್ನು ನೋಡಿದೆ..! ಭೀಮೆ
ಭೀಮಾತೀರ : ರಹಸ್ಯಕಾರಿ ಮತ್ತು ವಿಸ್ಮಯಕಾರಿ ಸಂಗತಿಗಳು :ಸಾಹಿತಿ ಶಿಕ್ಷಕ ಕೋರಿ
Voiceofjanata.in SPL Story : ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಭೀಮಾಶಂಕರದ ಹತ್ತಿರದ ಜಲ ಕುಂಡದಿಂದ ಶುರುವಾದ ನನ್ನ
ಚೈತ್ರಯಾತ್ರೆಯಲಿ ಸ್ವರ್ಗ ಲೋಕದಲ್ಲಿ ಶಾಪಗ್ರಸ್ತ ದೇವತೆಗಳಾಗಿ ಮತ್ಸಕನ್ಯೆಯರು-ಯಕ್ಷಿಣಿಯರು (ಜಕಣ್ಯಾರು)ನನ್ನ ಅತ್ಯಾಳದ ನೀರಿನಲ್ಲಿ ಆಶ್ರಯ ಪಡೆದುಕೊಂಡರು.ಕಾಲ ಚಕ್ರ ತಿರುಗುತ್ತ ಸಾಗುತ್ತಿದ್ದಂತೆ ನನ್ನೊಳಗೆ ಸೂಕ್ಷ ಜೀವಿಯಂದ ಹಿಡಿದು ಅಸಂಖ್ಯಾತ ಜಲಚರ ಜೀವಿಗಳು ಹುಟ್ಟಿ ತಮ್ಮ ಪರಿವಾರದೊಂದಿಗೆ ಸುಖ ಸಮೃದ್ಧಿಯಿಂದ ವಾಸಿಸಲು ಪ್ರಾರಂಭಿಸಿದ
ನೋಡ ನೋಡುತ್ತಿದ್ದಂತೆ ಭೂದೇವಿ ಹಸಿರು ಸೀರೆಯುಟ್ಟ ನಳನಳಿಸುತ್ತ ಗಾಳಿಯೆಂಬ ಕಾಲ್ಗೆಜ್ಜೆ ಕಟ್ಟಿಕೊಂಡು,ಕೆಂದಾವರೆ-ಮುಂದಾವರೆ,ಮಂದಾರ ಪುಷ್ಪಗಳ ಸರಮಾಲೆಯಿಂದ ಶೃಂಗಾರಿಸಿಕೊಂಡು ಗಮ್ಯವಾದ ಗಿರಿ ಶಿಖರ ಪರ್ವತಗಳನ್ನು ಆಭರಣವಾಗಿಸಿಕೊಂಡು, ಹಿಮ ಗಲ್ಲು-ನೀರ್ಗಲ್ಲುಗಳಿಂದ ತಂಪಾಗಿರುವ ಅಹ್ಲಾದಕರ ಉಸಿರಿನೊಂದಿಗೆ,ಮಂದ ಮಾರುತ- ಮುಂಗಾರ ಮಾರುತಗಳ ತನ್ನ ಚುಂಬಕ ಶಕ್ತಿಯಿಂದ ಆಮಂತ್ರಿಸುತ್ತ ಚಿನ್ನ-ಬೆಳ್ಳಿಯ ಕೈಯ್ಯುಂಗರ- ಕಾಲುಂಗುರ ಧರಿಸಿಕೊಂಡು ಹೊರಟ ಭೂರಮೆಯ ವರ್ಣನೆ ವರ್ಣಿಸಲದಳವು. ಅವಳು ಹಿಮಪಾತ,ಜಲಪಾತ ಭೋರ್ಗರೆಯುವ ಸಾಗರ- ಸಮುದ್ರಗಳ ಅಲೆಯಿಂದ ದಿವ್ಯತೆಯ ದೇವಿಯಾಗಿ ಹೆಜ್ಜೆಯಿಟ್ಟು ಅರಿಶಿಣ-ಕುಂಕುಮ ಚಂದನ ಲೇಪಿತ ಗಂಧ-ಸುಗಂಧಗಳ ಘಮಲು ಹೊತ್ತು ಹೊರಟವಳ ಸುವಾಸನೆಯ ಕಂಡು ಕಸ್ತೂರಿ ಮೃಗ ಮೇಯಿವದನ್ನು ಮರೆತ್ತಿತ್ತು.! ಬೆರಗಾದ ಪುನುಗು ಗತಿಯಿಲ್ಲದೇ ಗುನಗುತ್ತ ಪೊದೆ ಸೇರಿತ್ತು.! ಮಯೂರ ಮೈ ಮರೆತು ನರ್ತಿಸುವದನ್ನು ನಿಲ್ಲಿಸಿತ್ತು.! ಅತ್ಯಂತ ಅನುಪಮಳಾಗಿರುವ ವಸುಂಧರೆಯ ಭವ್ಯತೆಯನ್ನು ಕಂಡು ದೂರದಲ್ಲಿರುವ ಅಂಬರ ಅವುಡುಗಚ್ಚಿತ್ತು.!
ಅಲ್ಲಿನ ಅಪರಮಿತ ಸೌಂದರ್ಯದ ಖಣಿಯಾಗಿರುವ ಧರಣಿ ದೇವಿಯನ್ನು ನೋಡಿ ಸುದೂರದ ನಕ್ಷತ್ರಗಳು ನಕ್ಕು ನಲಿಯುವದನ್ನು ಕ್ಷಣ ಹೊತ್ತು ನಿಲ್ಲಿಸಿ ಭೂದೇವಿಯ ಸ್ನಿಗ್ದ ಸೌಂದರ್ಯದ ಚೆಲುವಿಕೆಗೆ ಕಂಡು ನಸು ನಾಚಿ ಚದುರಿ ಚಲ್ಲಾಪಿಲ್ಲಿಯಾಗಿ, ಮೋಡದ ಮರೆಯಲ್ಲಿ ಅಡಗಿ ಕುಳಿತು ಕೊಳ್ಳುವಂತೆ ವಸುಂಧರೆಯ ಪರಮ ರೂಪ ರಾಶಿ ಅಖಂಡವಾಗಿ ಬೆಳೆದು ನಿಂತಿತ್ತು.
ಇಂತಹ ರಮ್ಯವಾದ ಪ್ರಕೃತಿಯಲ್ಲಿ ಮರ-ಗಿಡಗಳಲ್ಲಿ ಆಶ್ರಯ ಪಡೆದ ಪಕ್ಷಿ ಸಂಕುಲ ನನ್ನ ತಿಳಿಯಾದ ನೀರು ಕುಡಿದು ಮನ ತಣಿಸಿಕೊಂಡು ಕುಣಿದು ಕುಪ್ಪಳಿಸುತ್ತಿದ್ದವು.ಗರಿ ಬಿಚ್ಚಿ ಕುಣಿಯುವ ನವಿಲು, ಮಾತನಾಡುವ ಮೈನಾ,ಕುಹೂ ಕುಹೂ ಕೋಗಿಲೆ,ಮೊಲ,ನರಿ, ಸಾರಂಗಗಳು ನನ್ನ ಹತ್ತಿರ ನಿತ್ಯ ಬಂದು ಸುಳಿದಾಡುತ್ತಿದ್ದವು.
ಹೀಗೆ ಭೂಮಿಯ ಮೇಲೆ ಹಲವು ಕಾಲ ಚಕ್ರಗಳು ತಿರುಗಿದ ಮೇಲೆ ಆದಿ ಮಾನವನ ಯುಗ ಮುಗಿದ ನಂತರ ನನ್ನ ನದಿ ತೀರದಲ್ಲಿ ಅತ್ಯಂತ ಜ್ಞಾನದಿಂದ ಕೂಡಿದ ಪ್ರಜ್ಞಾವಂತಿಕೆಯ ನಾಗರೀಕತೆ ಪ್ರಾರಂಭವಾಯಿತು.ಬೆಸ್ತರು (ಮೀನುಗಾರರು) ರೈತರು ದೋಣಿ ನಡೆಸುವ ಅಂಬಿಗರು, ಕುಶಲ ಕರ್ಮಿಗಳು ಬಂದರು. ಇವರಲ್ಲಿ ಬೆಸ್ತರು,ಅಂಬಿಗರು, ರೈತರು ತಮ್ಮ ಬದುಕಿನ ಉಳುವಿಗಾಗಿ ನನ್ನನ್ನು ಬಹುವಾಗಿ ನೆಚ್ಚಿಕೊಂಡರು.
ಬೆಸ್ತರು ತಮ್ಮ ಕುಟುಂಬದ ಪಾಲನೆ- ಪೋಷಣೆಗಾಗಿ ದೋಣಿಯಲಿ ಬಂದು ಬಲೆ ಬೀಸಿ ಹಿಂಡುಗಟ್ಟಲೇ ಮೀನು ಹಿಡಿದು ಹೊತ್ತೊಯ್ಯತ್ತಿದ್ದರು.ಒಂದೊಂದು ಸಲ ಅವರಿಗೆ ರಾಶಿಗಟ್ಟಲೆ ಮೀನುಗಳು ಸಿಕ್ಕಾಗ ಅವರು ಖುಷಿಯಿಂದ ಹಿರಿ ಹಿರಿ ಹಿಗ್ಗುತ್ತಿದ್ದರು.ಅವರು ಹಿಡಿದ ಮೀನುಗಳ ರಾಶಿಯನ್ನು ಮರಳಿನ ಮೇಲೆ ಸುರುವುತ್ತಿದ್ದರು.ಹೀಗೆ ಹಿಡಿದ ಮೀನುಗಳ ರಾಶಿ ದೂರದಿಂದ ನನಗೆ ಮಿರಿಮಿರಿ ಮಿಂಚುವ ಬೆಳ್ಳಿಯ ರಾಶಿಯಂತೆ ಕಾಣುತಿತ್ತು.
ಹೇರಳವಾಗಿ ಗುಡ್ಡೆ ಹಾಕಿದ ಮೀನುಗಳ ರಾಶಿಯಲ್ಲಿ ನೂರೆಂಟು ಆಕಾರದ ನೂರೆಂಟು ಬಣ್ಣದ ಚಿತ್ರ-ವಿಚಿತ್ರ ಮೀನುಗಳಿದ್ದವು. ಅವುಗಳಲ್ಲಿ ಕೆಲವು ಅಚ್ಚ ಬಿಳುಪಿನ ಮೀನುಗಳಾಗಿದ್ದರೇ, ಮತ್ತು ಕೆಲವು ಕಪ್ಪನೆಯ ಮೀನುಗಳಿದ್ದವು.ಹಾಗೆ ಕೆಲವು ಮೀನುಗಳ ಮೇಲೆ ಆಕಾಶದಿಂದ ಮೈ ತುಂಬಾ ಚುಕ್ಕಿಗಳನ್ನು ಬಳೆದುಕೊಂಡಂತೆ ರಂಗು ರಂಗಾಗಿ ಕಾಣುತ್ತಿದ್ದವು.ಅಲ್ಲಿದ್ದ ಒಂದೊಂದು ಮೀನು ಗಂಡಸರ ಮೀಸೆಯನ್ನು ನೆನಪಿಸುವಂತೆ ಮನಸಿಗೆ ನಗು ತರಿಸುವಂತ ಉದ್ದಾದ ಮೀಸೆ ಹೊತ್ತ ಮೀನುಗಳು ಕಾಣುತ್ತಿದ್ದವು,ಆ ಮೀನುಗಳ ರಾಶಿಯಲ್ಲಿ ಬಂಗಾರದಂತೆ ಥಳ ಥಳ ಪಳ ಪಳ ಹೊಳೆಯುವ ಮೀನುಗಳು ಎದ್ದು ಕಾಣುತಿದ್ದವು. ದೊಡ್ಡ ಬಾಯಿಯ, ಅಗಲ ಬಾಯಿಯ, ಚಿಕ್ಕ ಬಾಯಿಯ, ದೊಡ್ಡ ತಲೆಯ, ಚಿಕ್ಕ ತಲೆಯ ಮೀನುಗಳನ್ನು ನೋಡಿದರೇ ಏನು ಒಂಥರಾ ಮನಸಿಗೆ ಮುದವೆನಿಸುತ್ತಿತ್ತು. ಅದರಲ್ಲಿ ಪಟ್ಟಿ ಪಟ್ಟಿ ಹೊತ್ತ ಕಾಳಿಂಗ ಉರಗವನ್ನು ಹೋಲುವಂತಹ ಹೆದರಿಕೆ ತರುವ ವಿಶೇಷ ಮೀನುಗಳಿದ್ದವು.
ಈ ಮೀನುಗಳನ್ನು ಕಂಡು ಅವುಗಳನ್ನು ಹಿಡಿಯಲು ತುಂಡು ಬಟ್ಟೆಯಲ್ಲಿ ಮೊಗವೀರರ (ಬೆಸ್ತರು) ಮಕ್ಕಳು ಬರುತ್ತಿದ್ದರು. ಬಲೆಗೆ ಬಿದ್ದ ಮೀನುಗಳು ತಮ್ಮ ಜೀವ ಉಳಿಸಿಕೊಂಡು ಪಾರಾಗಿ ನನ್ನೊಂದಿಗೆ ಸೇರಲು ಬೀಳುವ ತವಕದಲ್ಲಿದ್ದಾಗ ಆ ಮಕ್ಕಳು ಜಿದ್ದಿಗೆ ಬಿದ್ದಂತೆ ಪುಟಿದಾಡುವ ಮೀನುಗಳನ್ನು ಕಂಡು ಅವರು ಅತ್ಯುತ್ಸಾಹದಿಂದ ಅವುಗಳನ್ನು ಹಿಡಿಯಲು ಹೋಗುತಿದ್ದರು.ಅವರ ಈ ರಣೋತ್ಸಾಹವನ್ನು ಕಂಡು ನಾನು ಬೆರಗಾಗುತ್ತಿದ್ದೆ.ಅವರು ಹೀಗೆ ಮೀನು ಹಿಡಿಯುವಾಗ ಅವರ ಬಾಯಿಂದ ಓಹೋ! ಓಹೋ! ಆಹಾ.! ಆಹಾ.!ಎಂದು ಕೇಕೆ ಹಾಕುತ್ತ ಜರ್ರನೆ ಜಾರಿ ಸುಯ್ಯ ಎಂದು ಬೀಳುತ್ತ ಓಡಾಡುವ ದೃಶ್ಯ ನನ್ನಲ್ಲಿ ಅವರ ಕುರಿತು ಮತ್ತಷ್ಟು ಪ್ರೀತಿ ಉಕ್ಕಿ ಬರುವಂತೆ ನಗೆ ತರಿಸುವಂತ್ತಿತು.ನದಿ ನೀರಿನಲ್ಲಿರುವ ಮೀನುಗಳಿಗೆ ಮಾನವರಂತೆ ಬಹಳ ವಿಶೇಷವಾದ ಹೆಸರುಗಳಿದ್ದವು ಆ ಹೆಸರುಗಳು ಕೂಡಾ ಅಷ್ಟೇ, ಆಕರ್ಷಕವಾಗಿದ್ದವು.ಬಹಳ ಪ್ರಾಚೀನ ಮೀನು (ಬಡವರ ಮೀನು) ಭೂತಾಯಿ, ಮಧುಮಗಳಷ್ಟೇ ಚೆಲುವಿಕೆಯಿಂದ ಕೂಡಿದ ಮಧುಮೀನು, ರಾಣಿಯಷ್ಟೇ ಪ್ರಾಮುಖ್ಯತೆ ಪಡೆದ ಕಠ ರಾಣಿ, ಮೈ ಮೇಲೆ ಅಚ್ಚ ಬಿಳುಪಿನ ದೊಡ್ಡ ಚಿಪ್ಪನ್ನು ಹೊಂದಿ ಕಣ್ಣು ಕೊರೈಸುವ ತಾಮ್ರ ಮೀನು, ಅಡಗಿ ಕುಳಿತುಕೊಳ್ಳುವ ಡೋಕಳ ಮೀನು,ಬೆಣ್ಣೆಯಷ್ಟೇ ಮೃದುವಾಗಿರುವ ಬಾಳೆ ಮೀನು, ಮರಳನ್ನೆ ಹೋಲುವ ಮರಳು ಮೀನು, ಚಮಕು ಚಮಕಕಾಗಿರುವ ಚಂಬಾರಿ ಮೀನು,ತನ್ನ ಬಾಲಕ್ಕೆ ಥೇಟು ನವಿಲು ಗರಿಯ ಕಣ್ಣಿನ ಚುಕ್ಕಿ ಹೊಂದಿರುವ ಮರ್ಲ್ ಮೀನು, ಅಪರೂಪಕ್ಕೊಮ್ಮೆ ಅಥವಾ ಚಂದಿರನ ರೆಡಿಯಸನ್ ಜಾಸ್ತಿಯಾಗಿರುವ ಹುಣ್ಣಿಮೆ ದಿನದಂದು ಸಮುದ್ರದಿಂದ ನುಸುಳಿದ ಅಂಜಲ್, ಬಂಗುಡೆ, ಕಾಣೆ, ಕಂಡಿಕೆ,ಕೆಂಬೇರಿ, ಕುಡುವಾಯಿ ಮೀನು,ಸಿಗಡಿ, ಬೆಲೆ ಬಾಲುವ ನಕ್ಷತ್ರದಾಮೆ ಅಬ್ಬಬಾ.!ಇವುಗಳ ಸಂತತಿ ಹೆಸರು ಹೇಳುವ ಕಾರ್ಯ ಅದು ಎಂದೆಂದಿಗೂ ಮುಗಿಯದ ಕಾರ್ಯವೆನಿಸುತ್ತದೆ..
ಹೀಗೆ ಥರಥರದ ಹೆಸರು ಹೊತ್ತ ಆ ಮೀನುಗಳು ಮೀನುಗಾರರ ಜಾಳಿಗೆಯಿಂದ ತಪ್ಪಿಸಿಕೊಂಡು ಚಡಪಡಿಸಿ ಪುನಃ ನನ್ನೊಡಲಿಗೆ ಬರುವ ಅವುಗಳ ಜೀವನೋತ್ಸಾಹದ ಪರಿ, ಅವುಗಳು ತಮ್ಮ ಬದುಕಿಗಾಗಿ ಮಾಡುವ ಶತಪ್ರಯತ್ನ ಕಂಡು ನನ್ನ ಹೊಟ್ಟೆಯಲ್ಲಿ ಕಸಿವಿಸಿಯಾಗುತಿತ್ತು. ಅಯ್ಯೋ ಪಾಪ.! ಎನಿಸುತ್ತಿತ್ತು ಆದರೆ ಏನು ಮಾಡುವದು ಕೆಲವು ಸಮಯ, ಸಂದರ್ಭಗಳಲ್ಲಿ ಅನಿವಾರ್ಯತೆಯಿಂದ ನಾನು ನೀವು ಕೂಡಾ ಸಾಕ್ಷಿಭಾವದಿಂದ ಸುಮ್ಮನೇ ಕೂರಬೇಕಾಗುತ್ತದೆ. ಎಲ್ಲವನ್ನು ಎಲ್ಲರನ್ನು ಸಂಭಾಳಿಸಿ ಯಾವುದೇ ರೀತಿಯ ಬೇಧ ಭಾವ ಮಾಡದೇ ಇರುವದೇ ನನ್ನ ಮೂಲ ಗುಣ..
ಇನ್ನೂ ನನ್ನಲ್ಲಿ ದೋಣಿ ನಡೆಸುವ ಅಂಬಿಗ ನದಿ ಮಾರ್ಗದಲ್ಲಿ ನಿತ್ಯ ಸಂಚಾರ ಮಾಡುತ್ತ ಒಂದೂರಿನಿಂದ ಮತ್ತೊಂದೂರಿಗೆ ಯಾತ್ರಿಕರನ್ನು, ಪ್ರಯಾಣಿಕರನ್ನು ನಿತ್ಯ ಬಳಕೆಗೆ ಬೇಕಾದ ಸಾಮಾನು- ಸರಂಜಾಮುಗಳನ್ನು ಅರುಣೋದಯದ ಸಮಯದಲ್ಲಿಯೇ ಭರದಿಂದ ಸಾಗಿಸುವ ಕಾರ್ಯ ಮಾಡುತ್ತಿದ್ದರು.ಅಂಬಿಗರ ಈ ಕಾರ್ಯದ ಉದ್ದೇಶ ಮಾನವತೆಗೆ ಸ್ಪಷ್ಟವಾದ ಸಂದೇಶವಾಗಿತ್ತು. ಅವರು ಎಲ್ಲರೂ ಮಾಡುವದು ‘ಗೇಣು ಹೊಟ್ಟೆಗಾಗಿ ಗೇಣು ಬಟೈಗಾಗಿ‘ ಎಂಬ ಸಾರ್ವಕಾಲಿಕ ಸತ್ಯದ ಮೌಲ್ಯವನ್ನು ಅರಿತಿದ್ದರು.ಅದರ ಸರಳತೆಯ ಸೂತ್ರದಂತೆ ಶಿಸ್ತು ಬದ್ದತೆಯನ್ನು ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದರು.ಅವರ ಜೀವನದ ಘನೊತ್ತಮ ವಿಷಯವೆಂದರೇ ಅಂಬಿಗರು ಅವರು ತಮ್ಮ ಜೀವನದ ಅರ್ಧ ಆಯುಷ್ಯನ್ನು ನನ್ನ ನೀರಿನಲ್ಲಿ ಕಳೆಯುತ್ತಿದ್ದರು.! ಅವರ ಬಗ್ಗೆ ನನಗೆ ಈಗಲೂ ನನ್ನಲ್ಲಿ ಕನಿಕರವಿದೆ. ಅವರ ಅಂಗೈಯ ಅಗಲದಷ್ಟು ಬಡತನದ ಬದುಕನ್ನು ನಾನು ಬಹಳ ಹತ್ತಿರದಿಂದ ನೋಡಿರುವೆ! ಅಂಬಿಗರು,ಬೆಸ್ತರು ನನ್ನ ಮೇಲೆ ಯಾವ ರೀತಿ ವಿಶ್ವಾಸವಿಟ್ಟು ಕೊಂಡಿದ್ದರೆಂದರೇ,
ಅವರು ರಾತ್ರಿ ಹೊತ್ತಿನಲಿ ತಮ್ಮ ದೋಣಿಯನು ನನ್ನ ದಡದಲ್ಲಿ ಲಂಗುರ ಹಾಕಿ ನನ್ನ ಮೇಲೆ ನಂಬಿಕೆಯಿಟ್ಟು ತಮ್ಮ ಮನೆಯಲ್ಲಿ ಸೊಂಪಾದ ನಿದ್ರೆಗೆ ಜಾರುತಿದ್ದರು ಇದೇ ಅಲ್ಲವೇ ‘ವಿಶ್ವಾಸಂ ಫಲಪ್ರದಾಯಕ’ ಎಂಬ ಅಮೂಲ್ಯವಾದ ಮಾತು.
ಮುಟಗಿ ಜೋಳಕ್ಕಾಗಿ ನೆಲಕ್ಕೆ ನೆತ್ತರನ್ನು ಬಸಿಯುವ ರೈತನ ಕಣ್ಣಿರನ್ನು ಕಂಡೆ.!
ನದಿಯೊಳಗೆ ಬಲೆ ಹಾಕುವ ಮೀನುಗಾರರು ದೋಣಿ ನಡೆಸುವ ಅಂಬಿಗರ ಸುಖ-ದುಃಖದ ಕತೆ ಒಂದು ರೀತಿಯದಾಗಿದ್ದಾರೇ, ಇನ್ನೂ ನನ್ನ ನದಿ ತೀರ ಪ್ರದೇಶದ ಮಣ್ಣಿನಲ್ಲಿ ತಾನೇ ಉತ್ತಿ-ಬಿತ್ತಿ ಬೆಳೆ ಬೆಳೆಯುವ ರೈತನ ಎಡಬಿಡದ ಹೋರಾಟದ ಕುರಿತು ಹೇಳಬೇಕಾದರೇ, ಅದೊಂದು ಹೇಳಲೆಬೇಕಾದ ಸುದೀರ್ಘವಾದ ಪುಣ್ಯದ ಕತೆಯಾಗಿದೆ.! ಅಂದಿನ ದ್ವಾಪಾರ ಯುಗದಲ್ಲಿ ಇಲ್ಲದ ಆರೋಪ ಹೊತ್ತು ಅದರ ಪಾಪ ಕಳೆಯಲು ವಿನಾಕಾರಣ ಪ್ರಾಯಶ್ಚಿತದ ಸಲುವಾಗಿ ಬರೀ ತೀರ್ಥಯಾತ್ರೆಗಳಿಗಾಗಿ ತನ್ನ ಇಡೀ ಜೀವನದ ಸಮಯವನ್ನು ಕಳೆದ ನೇಗಿಲು ಹೊತ್ತ ಬಲರಾಮನಿಂದ ಹಿಡಿದು,ಇಂದಿನ ಆಧುನಿಕ ಕಾಲದ ರೈತರ ಬಡತನದ ಬವಣೆ ಕಷ್ಟ-ಕಾರ್ಪಣ್ಯಗಳು ಹೇಳತೀರದು. ಭೂಮಿಯ ಮೇಲೆ ರೈತ ಮೊದಲಿನಿಂದಲೂ ಬಲು ಮುಗ್ದ ಸ್ವಭಾದವನು.ಆತನ ಪಾಲಿಗೆ ಪ್ರಕೃತಿಯಾಡುವ ಚೆಲ್ಲಾಟಗಳು ದಲ್ಲಾಳಿಗಳು ಮಾಡುವ ಮೋಸದ ವ್ಯಾಪಾರ,ಅವನು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆಗಳಿಲ್ಲದೇ,
ಕಂಗಾಲಾಗುವ ರೈತನ ಪರಿಸ್ಥಿತಿ ಇವುಗಳಿಂದ ತಾಕಲಾಟಗಳು, ಪೀಕಲಾಟಗಳು ಒಂದು ಕಡೆಯಾದರೇ,ಇನ್ನೊಂದು ಕಡೆ ಖೊಟ್ಟಿ ರಸಗೊಬ್ಬರ,ಕುಲಾಂತರಿ ಬೀಜಗಳು, ನಕಲಿ ಕೀಟನಾಶಕಗಳ ಹಾವಳಿಯ ಚಕ್ರವ್ಯೂಹದಲ್ಲಿ ಆತ ನಿಸ್ಸಂದೇಹವಾಗಿ ಸಿಲುಕಿ ಬಿದ್ದಿದ್ದಾನೆ. ಹೀಗೆ ಹತ್ತು ಹಲವಾರು ಕಾರಣಗಳಿಂದ ಆತ ಆಧುನಿಕತೆಯ ಕಲುಷಿತವಾಗಿರುವ ವಾತಾವರಣದಲ್ಲಿ ಉಸಿರು ಗಟ್ಟಿಸಿಕೊಂಡ ಸಾಲ-ಶೂಲ ಮಾಡಿಕೊಳ್ಳುತಿದ್ದಾನೆ. ಮೊದಲೇ,ಅಮಾಯಕನಾಗಿರುವ ರೈತ ಇವೆಲ್ಲವುಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ನಿತ್ಯ ಹೈರಾಣಾಗುತ್ತಿದ್ದಾನೆ. ಕ್ಷಣಕ್ಷಣಕ್ಕೂ ಆತ ಆಸ್ಪತ್ರೆಯಲ್ಲಿರುವ ಪ್ರಜ್ಞಾಹೀನ ರೋಗಿಯಂತೆ ಜೀವನ್ಮರಣದ ಹೋರಾಟದಲ್ಲಿ ವಿಲವಿಲ ಒದ್ದಾಡುತ್ತಿದ್ದಾನೆ.ಆತ ಒಂದು ಕಡೇ, ಮಳೆಯಿಲ್ಲದೇ, ಆತ ಬೆಳೆದ ಬೆಳೆ ಸಕಾಲದಲ್ಲಿ ಬಾರದೇ ಇದ್ದ ವಿಷಮ ಪರಿಸ್ಥಿತಿಯಲ್ಲಿ ಆಕಾಶದ ಕಡೆಗೆ ನಿಸ್ಸಾಹಯಕನಾಗಿ ನೋಡುವ ಆತನ ದೃಶ್ಯ ಎಂಥವರ ಕರಳು ಹಿಂಡುತ್ತದೆ.! ಮತ್ತೊಂದು ಕಡೇ, ಬದುಕಿನ ಎಲ್ಲ ಜಂಜಡಗಳೊಂದಿಗೆ ಹಾಗೂ ನಾನಾ ಸಮಸ್ಯೆಗಳೊಂದಿಗೆ ಆತ ತನ್ನ ತುಂಬು ಸಂಸಾರದ ನೊಗ ಹೊತ್ತು ಆ ಬಂಡಿಯನ್ನು ಜಗ್ಗಬೇಕಾಗಿದೆ.ಆದರೆ ಆತನ ಸಂಕಟಗಳ ಸರಮಾಲೆಗಳ ಭಾರದಿಂದ ಜವಾಬ್ದಾರಿಗಳೆಂಬ ಬಂಡಿಯ ಗಾಲಿಯ ಕೀಲು ಮುರಿದು ಹೋಗಿವೆ.ಸುಖ- ಸಂತೋಷ ಎಂಬ ಜೋಡೆತ್ತಗಳು ಆತನ ಪಾಲಿಗೆ ದುಃಖದಿಂದ ಧಾರಣವಾಗಿವೆ.ಇದರಿಂದ ಹತಾಶನಾಗಿರುವ ರೈತ ಆತ್ಮಹತ್ಯೆ ಮಾಡಿಕೊಳ್ಳವ ಮನಸ್ಥಿತಿಗೆ ಬಂದು ತಲುಪಿದ್ದಾನೆ.ಕೆಲ ರೈತರು ಅದಾಗಲೇ ಇಂತಹ ದುರಂತದ ಸರಣಿ ಸಾವುಗಳನ್ನು ಕಂಡಿದ್ದಾರೆ. ಆತನಿಗಾದ ನಿರಂತರ ಅನ್ಯಾಯ, ಘೋರತೆಯ ವನವಾಸ ಕಂಡು ನನ್ನ ಮನ ಮರುಗುತ್ತಿದೆ.ಇಂತಹ ರೈತರು ನನ್ನದೊಂದಿಗೆ ತಮ್ಮ ಮೂಕ ಭಾವದಿಂದ ತಮ್ಮ ನೋವು, ವಿಷಾದದ ಭಾವ ಹೊತ್ತು ಅದನ್ನು ಶತಮಾನಗಳ ಕಾಲದಿಂದ ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ.ಅವರಿಗೆ ಧೈರ್ಯ ತುಂಬಲು ನಾನು ಆಗಾಗ ಮಾತ್ತೊಂದು ಹೇಳುತ್ತೇನೆ ‘ಮಕ್ಕಳೇ.! ನೀವು ಸಾಗಿ ಬಂದ ದಾರಿಗಿಂತ ಸಾಗಬೇಕಾದ ದಾರಿ ಸುಧೀರ್ಘವಾಗಿದೆ’.! ಹೆದರಬೇಡಿ. !! ಎಲ್ಲವೂ ಸುನಿಶ್ಚಿತವಾಗಿ ಒಳ್ಳೆಯದಾಗುತ್ತದೆ ಎಂದು ಪೇರಣೆಯ ಮಾತು ಹೇಳುತ್ತೇನೆ. ಪಾಪ.! ನನ್ನ ನೀರಿನ ಹರಿಯುವಿಕೆ ಸಪ್ಪಳದಲ್ಲಿ ಆತನಿಗೆ ನನ್ನದ್ಯಾವ ಮಾತು ಸ್ಪಷ್ಟವಾಗಿ ಕೇಳುವದಿಲ್ಲ.!ಆದರೂ ಆತ ನಾಳಿನ ಸುಖದ ದಿನಗಳಿಗಾಗಿ ಹಂಬಲಿಸುತ್ತ ನನ್ನ ಹರಿಯುವಿಕೆಯನ್ನು ನೋಡಿ ತಾನು ಜೀವನವಿಡೀ ಸೋಲುವದನ್ನು ಮರೆತು ಬಲು ಅಕ್ಕರೆಯಾಗಿ ಸಕ್ಕರೆಯಂತೆ ನನ್ನೊಂದಿಗೆ ಸಿಹಿ ಸ್ನೇಹ ಸಂಬಂಧ ಅನುಬಂಧ ಹೊಂದುತ್ತ ನನ್ನೊಂದಿಗೆ ಸಾಗುತ್ತಿದ್ದಾನೆ.ಈ ಜಗದ ಏಳಿಗೆಗಾಗಿ ನಾಳೆಗಾಗಿ ಉಳುಮೆ ಮಾಡುವ ರೈತರು ನಿಜಕ್ಕೂ ಅಭಿನಂದನಾರ್ಹರು! ಕಡು ಕಷ್ಟ ಜೀವಿಗಳು.ಆದರೂ ಈ ಭೂಮಿಯ ಮೇಲೆ ರೈತನ ಬಾಳು ಗೋಳಾಗಿದೆ.ಈ ಗೋಳನ್ನು ದೂರ ಮಾಡಲು ಯಾರಾದರೂ ಆಪತ್ಬಾಂದವ ಬರುತ್ತಾನೆ ಎಂದು ನದಿ ತೀರದಲ್ಲಿ ನೂರಾರು ವರ್ಷಗಳಿಂದ ಕಾದು ನೋಡುತ್ತಿದ್ದೇನೆ. ನನ್ನ ನೋಡುವ ನೋಟ ಹೇಗಿದೆ ಎಂದರೇ, ಅದು ತಾಯಿಯೊಬ್ಬಳು ಬೆಳ್ಳಂಬೆಳಿಗ್ಗೆ ಏಕಾಏಕಿಯಾಗಿ ಮನೆ ಬಿಟ್ಟು ಹೋದ ಮಗ ಸಂಜೆಗತ್ತಲಾದರು ಮರಳಿ ಮನೆಗೆ ಮಗ ಬಾರದಿರುವಾಗ ಮನಸಿಗಾಗುವ ಚಿಂತೆ, ಕಳವಳದಿಂದ ಕೂಡಿದ ಆತಂಕದಂತಾಗಿರುತ್ತದೆ.
ಇನ್ನೂ ನದಿ ತೀರದ ರೈತ ತನ್ನ ಕುಟಂಬದ ಸದಸ್ಯ ಬಸವಣ್ಣ ಎಂದು ಸಂಭೋದಿಸುವ ಎತ್ತುಗಳಿಗೆ ಯಾವ ರೀತಿ ಭಕ್ತಿ ಭಾವದಿಂದ ನೋಡಿಕೊಳ್ಳತ್ತಾನೋ,ಅದೇ ರೀತಿ ನನಗೂ ಕೂಡಾ ಅಷ್ಟೇ ಭಯ ಭಕ್ತಿಯಿಂದ ಪೂಜ್ಯತೆಯಿಂದ ನೋಡಿಕೊಳ್ಳವನು. ಸಮಾಜದ ಉಳಿವಿಗಾಗಿ ತನ್ನನ್ನು ನಂಬಿದವರ ಹೊಟ್ಟೆ ತುಂಬಿಸಲು ಮುಟಗಿ ಜೋಳಕ್ಕಾಗಿ ಈ ನೆಲಕ್ಕೆ ರಕ್ತ ಬಸಿಯುವ ಅನ್ನದೇವರು ರೈತ ಈ ಭೂಮಿಯ ಮೇಲಿನ ನಿಜವಾದ ದೇವರು! ಎಂದರೇ ತಪ್ಪಾಗಲಾರದು. ಆದರೆ ಆತ ನಮ್ಮ ಪಾಲಿಗೆ ಬಡಪಾಯಿ ರೈತ ಹೃದಯ ಶ್ರೀಮಂತವಿರುವ ವ್ಯಕ್ತಿ.! ಅಂಥಹ ರೈತನಿಗಿರುವ
ನೀತಿ-ನಿಯತ್ತು ನಿಷ್ಕಲ್ಮಷ ಹೃದಯ ಎಲ್ಲರಿಗೂ ಕೊಡು ದೇವರೇ,ಎಂದು ಕೈಲಾಸದ ಶಂಕರನಲ್ಲಿ ಪುನಃ ಪುನಃ ಬೇಡಿಕೊಳ್ಳುತ್ತ ಸಾಗುತ್ತೇನೆ..!
ಇಷ್ಟು ಹೇಳುತ್ತ ನಾನು ಕೂಡಾ ಸಾಗಬೇಕಲ್ಲವೇ.?ನನ್ನ ಜೀವನವು ಕೂಡಾ ತಗ್ಗು ದಿನ್ನೆಯಿಂದ ಕೂಡಿದ ಕಲ್ಲು ಮುಳ್ಳಿನ ದಾರಿಯಾಗಿದೆ.ಅದು ಹರಿತವಾದ ಬೆಣಚು ಕಲ್ಲು, ಕರಿ ಕಲ್ಲುಗಳ ಕೊರಕಲಿನ ಹಾದಿಯಲ್ಲಿ ಹಾದು ಹೋಗುವ ದಾರಿಯಾಗಿದೆ. ಸತತವಾಗಿ ನನ್ನ ಮೈ ಕೈಗಳನ್ನು ಹಣ್ಣಾಗಿಸಿಕೊಂಡು ಪ್ರಪಾತವಾಗಿ ಬೀಳುವ ದಾರಿಯಾಗಿರುತ್ತದೆ. ನಾನು ಇವುಗಳಿಂದ ಸುರಕ್ಷಿತವಾಗಿ ತಪ್ಪಿಸಿಕೊಂಡು ಆವಾಗಾವಾಗ ಮಗ್ಗಲು ಬದಲಾಯಿಸಿಕೊಂಡು ಹೊರಟರೇ ಮೈ ನುಗ್ಗಾಗುವ ದಾರಿ ಎದುರಾಗುತ್ತದೆ.ಎಲ್ಲವೂ ಮೇಲಿರುವ ಭಗವಂತನಿಚ್ಚೆ ಎನ್ನುತ್ತೇನೆ. ರಾತ್ರಿ ಎಲ್ಲವನ್ನು ನೆನಪಿಸಿಕೊಂಡು ಕದ ಮುಚ್ಚಿ ವಿಶಾಲ ಬಯಲಲ್ಲಿ ಪ್ರಶಾಂತವಾಗಿ ಹರಡಿ ಸ್ವಲ್ಪ ಹೊತ್ತು ಮಲಗುತ್ತೇನೆ. ಹೀಗೆ ಮಲಗಿದಾಗ ಈ ಲೋಕದ ಜನರು ನನ್ನೊಂದಿಗೆ ಮಾಡಿದ ಘನ ಘೋರವಾದ ಪೈಶಾಚಿಕ ಕನಸುಗಳು ಬೀಳಲು ಪ್ರಾರಂಭವಾಗುತ್ತವೆ. ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಕಂಡ ಕನಸುಗಳೆಲ್ಲವು ನನ್ನ ಸುತ್ತ ದುಃಖದ ಮಡುವುಗಳಾಗುತ್ತವೆ. ಹೀಗೆ ಬಿದ್ದ ಕೆಟ್ಟ ಕೆಟ್ಟ ಕನಸುಗಳಲ್ಲಿ ಬರೀ ಮಾನವರೇ ಕಾಣುತ್ತಾರೆ.ಅವರು ಕೊಳ್ಳಿ ಹಿಡಿದ ದೆವ್ವಗಳಂತೆ ವಿಕಾರವಾಗಿ ಚೀರುತ್ತ ತಮ್ಮ ದುರ್ಮತನೆಗಳಿಂದ ನನ್ನ ಇಡೀ ಅಸ್ತಿತ್ವವನ್ನು ಅಲುಗಾಡಿಸಿದಂತಾಗುತ್ತವೆ.ಈ ಸ್ವಪ್ನಗಳೆಲ್ಲವು ನನ್ನ ಭವಿಷ್ಯವನ್ನು ಭಯಭೀತಗೊಳಿಸುವ ಅಪಶಕುನವಾಗಿ ಕಾಣುತ್ತವೆ. ನಾನು ಕಂಡ ಕನಸುಗಳಲ್ಲಿ ಭೂಮಿಯ ಮೇಲೆ ನಾನು ಗಂಟಲು ಒಣಗಿ, ನಿಂತ ನೆಲವೇ ಬಿರುಕು ಬಿಟ್ಟು ಭೂಮಿಯಾಗುತ್ತದೆ. ಅದು ಕೂಡಾ ಹನಿ ನೀರಿಲ್ಲದೇ, ಒಣಗುತ್ತ ನಶಿಸಿ ಹೋದಂತೆ ಭಾಸವಾಗುತ್ತದೆ.!ಈ ದುಸ್ವಪ್ನಗಳ ದುಷ್ಪರಿಣಾಮದಿಂದ ನಾನು ನಟ್ಟ ನಡುರಾತ್ರಿಯಲ್ಲಿ ತಲ್ಲಣಗೊಂಡು ಭಯಭೀತಳಾಗಿ ದಿಗ್ಗನೇ ಎದ್ದು ಕೂರುತ್ತೇನೆ.ಆಗ ಸುತ್ತಮುತ್ತಲು ಕತ್ತಲಿನಲ್ಲಿ ಯಾರು ಕಾಣುವದಿಲ್ಲ. ಇದರಿಂದ ನನಗೆ ಮತ್ತಷ್ಟು ಭಯ ಬರುತ್ತದೆ. ರಾತ್ರಿಯ ಹೊತ್ತು ನನ್ನನ್ನು ನಾನು ನೋಡಿದಾಗ, ದಿಕ್ಕಿಲ್ಲದ ನನ್ನ ತಬ್ಬಲಿಯ ದೇಹಕ್ಕೆ ವಿಷಘಾತಕವಾದ ನೂರು ಚೇಳುಗಳು ಒಮ್ಮೆಗೆ ಕುಟುಕಿದಂತಾಗುತ್ತದೆ.! ಈ ನೋವು ಅಸಹಾಯಕತೆಯ ಆಘಾತವನ್ನು ನಾನು ಯಾರ ಮುಂದೆ ಹೇಳಲಿ.?ನನ್ನ ಮೊರೆತದ ಜೋಗುಳ ಯಾರು ಕೇಳುತ್ತಾರೆ.?ಅಷ್ಟರಲ್ಲಿ ಬೆಳಗಾಗುತ್ತ ರವಿ ರಶ್ಮಿಯ ಕಿರಣಗಳಿಂದ ಬೆಳಕು ಮೂಡುತ್ತದೆ. ದೂರದಲ್ಲಿ ನದಿ ಸ್ನಾನ ಮಾಡಲು ಯಾರೋ ಬರುತ್ತಿದ್ದಾರೆ ಅವರ ಹೆಜ್ಜೆಯ ಸಪ್ಪಳ ಕೇಳುತ್ತದೆ. ಕಣ್ಣುಜ್ಜಿಕೊಂಡು ನೋಡುತ್ತೇನೆ, ನೋಡಿದಾಗ ಅವರು ಬಹುಶಃ ದೊಡ್ಡವರೊಂದಿಗೆ ನದಿ ಸ್ನಾನಕ್ಕ ಬಂದ ಚಿಕ್ಕ ಚಿಕ್ಕ ಮಕ್ಕಳಿರಬೇಕು ಅನಿಸುತ್ತದೆ.ಅವರ ಮುಂದೆ ನನ್ನ ಕರುಣಾಜನಕವಾದ ಕತೆ ಹೇಳಬೇಕು. ಅವರೇ ಅಲ್ಲವೇ ಈ
-
ಭೂಮಿಯ ಮೇಲೆ ನನ್ನನ್ನು ಉಳಿಸಿಕೊಳ್ಳವ ನಿಜವಾದ ವಾರಸುದಾರರು.! ಭೀಮೆ

ದಿವ್ಯತೆಯ ದಾರಿಯೇ ಪುಣ್ಯರಣ್ಯವಾಯಿತು..!
ಸಾಗಿದ ನೆಲದಲ್ಲಿ ಸುಕ್ಷೇತ್ರಗಳಾದವು..!
ಮೊದಲಿಗೆ ನಾನು ರಹಸ್ಯಕಾರಿ ಮತ್ತು ವಿಸ್ಮಯಕಾರಿ ಸಂಗತಿಗಳ ಫಲದಿಂದ ಹುಟ್ಟಿದ ತರುವಾಯ ನಾಗರೀಕತೆಗಳು ನದಿ ತಟದಲ್ಲಿ ಶುರುವಾದಂತೆ ಭೀಮೆ ಎಂಬ ನನ್ನ ಹೆಸರು ನೋಡ ನೋಡುತ್ತಿದ್ದಂತೆ ಲೋಕ ವಿಖ್ಯಾತ -ಪ್ರಖ್ಯಾತವಾಗ ತೊಡಗಿತು. ಭಾರತದ ಭವ್ಯ ಭೂಮಿಯಲಿ ಅದರ ದಿವ್ಯತೆಯ ದಾರಿಯಲಿ ನಾನು ಸಾಗುವಾಗ ಬ್ರಹ್ಮಾಂಡದ ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಲ್ಲಿ ಪ್ರಾಚೀನ ಜೀವಿಯಾದ ಏಕ ಕೋಶ ಜೀವಿ ಅಮೀಬಾದಿಂದ ಹಿಡಿದು ತಿಮಿಂಗಲುವರೆಗೂ ನೆಲದ ಮೇಲಿರುವ ಅತೀ ಸೂಕ್ಷ್ಮ ಜೀವಿಯಿಂದ ಹಿಡಿದು ಭೂಮಿಯ ಮೇಲಿರುವ ಬೃಹತ ಪ್ರಾಣಿಯವರೆಗೆ, ಮಂಗನಿಂದ ಮಾನವನವರಿಗೂ ತಾನು ಬೆಳೆದ ಬಂದ ನಂತರ ಮನುಷ್ಯರು ನನ್ನ ಹರಿಯುವಿಕೆಯನ್ನು, ಇರುವಿಕೆಯನ್ನು ಕಂಡು ಅತ್ಯಂತ ಸಡಗರ-ಸಂಭ್ರಮದಿಂದ ಪ್ರಪುಲ್ಲತೆಯಿಂದ ಲವಲವಿಕೆಯಿಂದ ಪೂಜ್ಯತೆಯ ಭಾವನೆಯಿಂದ ನನ್ನನ್ನು ಸ್ವಾಗತಿಸ ತೊಡಗಿದರು.
ನನ್ನ ನದಿ ತೀರದ ಪ್ರದೇಶದಲ್ಲಿ ನೋಡು ನೋಡುತ್ತಿದ್ದಂತೆ ನಾಗರೀಕತೆ ವಿಕಸಿಸವಾಗ ತೊಡಗಿತು. ಈ ಸುದ್ದಿ ಬಾಯಿಂದ, ಬಾಯಿಗೆ ಶರವೇಗದಲ್ಲಿ ಸಾಗುತ್ತ ದೇವಾನುದೇವತೆಗಳಿಗೆ ಮುಟ್ಟಿತು. ಅವರು ಕೂಡಾ ನನ್ನ ಹಿತವಾದ ತಣ್ಣನೆಯ ತೀರದಲಿ,ಸ್ಥಿರವಾಗಿರಲು ಯೋಜನೆ ಹಾಕಿದರು.ಆದರೆ ಭೂಮಿಯ ಮೇಲೆ ಅವತಾರ ತಾಳಲು ಭಗವಂತನಿಗೆ, ದೇವತೆಗಳಿಗೆ ಎಲ್ಲ ಅವತಾರಗಳಿಗೆ ಕಾಲ ಕೂಡಿ ಬರಬೇಕಲ್ಲವೇ.? ಮೃತ್ಯುಲೋಕದಲ್ಲಿ ಮಾನವ ಸೇವೆಯೇ ಪರಮ ಗುರಿಯಾಗಿಸಿಕೊಂಡ ಹೊರಟ ನನಗೆ ಸಾಕಷ್ಟು ಗೌರವಾಧಾರಗಳು ದೊರಕಿದವು. ಸನಾತನದ ಧಾರ್ಮಿಕ ಸೂತ್ರವಾದ ಪಂಚಭೂತಗಳಲ್ಲಿ ಪರಮಾತ್ಮನನ್ನು ಕಾಣುವಂತೆ ಮನುಷ್ಯರು ನನ್ನನ್ನು ಪೂಜಿಸತೊಡಗಿದರು. ಮನುಜರ ಈ ನಡೆ ಪ್ರಕೃತಿಯೊಂದಿಗೆ ಅವರು ಸುಮಧುರವಾಗಿ ಮೇಳೖಸುವಿಕೆಯ ಪರಿ ಕಂಡು ನನಗೆ ಎಲ್ಲಿಲ್ಲದ ಖುಷಿ ತಂದಿತು. ಅವರ ಪೂಜೆ ಪುನಃಸ್ಕಾರಗಳು ಹೇಗೆ ಸಾಗಿದವೆಂದರೇ,ಅವು ಬಹು ವಿಶೇಷತೆಯಿಂದ ಕೂಡಿದ್ದವು. ಒಮ್ಮೊಮ್ಮೆ ಅವರು ನನ್ನ ಉಡಿಯನ್ನು ತುಂಬಲು ಬಾಗಿನ ಮೂಲಕ ಕನಕ ವೃಷ್ಠಿಯ ಸುರಿಮಳೆಯನ್ನು ಸುರುವಿ ನಾನು ಬೆಕ್ಕಸ ಬೆರಗಾಗುವಂತೆ ಮಾಡಿದರು.ಇನ್ನೂ ಕೆಲವು ಯಾತ್ರಾರ್ಥಿಗಳು ದೂರದಿಂದಲೇ ನನ್ನ ನದಿ ಪಾತ್ರದೊಳಗೆ ಸ್ವರ್ಣ ಖಚಿತ ನಾಣ್ಯ-ಬೆಳ್ಳಿಯ ನಾಣ್ಯಗಳನ್ನು ಹಾಕಿ, ನಮಸ್ಕಾರಗಳನ್ನು ಸಮರ್ಪಿಸಿದರು. ಅದರ ಮುಂದುವರೆದ ಭಾಗವಾಗಿ ವರ್ತಮಾನದಲ್ಲಿ ಕೂಡಾ ಅಲ್ಲಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಈಗಲೂ ನದಿ ನೀರಿನಲ್ಲಿ ದೂರದಿಂದ ದುಡ್ಡು ಎಸೆದು ಪ್ರಣಾಮಗಳನ್ನು ತಮ್ಮ ಪುರಾತನ ನೆನಪಿನೊಂದಿಗೆ ಬೆಸೆದುಕೊಂಡು ಕೈ ಮುಗಿಯುತ್ತಾರೆ. ನಾನು ಯಾವುದನ್ನೂ ಆಶೆ-ಆಕಾಂಕ್ಷೆಗಳನ್ನು ಇಟ್ಟುಕೊಂಡವಳಲ್ಲ.ಹಾಗಾಗಿ ನಾನು ಎಂದೂ ಧನ-ಕನಕಗಳನ್ನು ಪಡೆದವಳಲ್ಲ.! ಎಲ್ಲದಕ್ಕೂ ಸಹಕರಿಸುವದು ನನ್ನ ಸ್ವಭಾವ.
ವಿಪರ್ಯಾಸವೆಂದರೆ,ನನ್ನ ಒಡಲಾದೊಳಗೆ ಹಾಕಿದ ದುಡ್ಡು ಪುನಃ ಮನುಷ್ಯರ ಕೈಗಳಿಗೆ ಹಾಗೋ ಹೀಗೋ ದೊರಕುತ್ತದೆ ಅದು ಬೇರೆ ಮಾತು.!ಆದರೂ ಇವರೆಲ್ಲರೂ ಸಂಬಂಧಲ್ಲಿ ನನ್ನ ಮಕ್ಕಳ ಸಮಾನರಲ್ಲವೇ.? ಆ ದೃಷ್ಠಿಕೋನದಿಂದಲಾದರೂ ಇವರನ್ನು ನಾನು ಸಹಿಸಿಕೊಂಡು, ಮುಂದೆ ಸಾಗಬೇಕು,ಹಾಗೆ ಸಾಗುವದೇ,ನನ್ನ ಕರ್ತವ್ಯ ಪ್ರಜ್ಞೆ ಎಂದು ತಿಳಿಯುತ್ತೇನೆ.
ನಾನು ಸಾಗುತ್ತ ,ಸಾಗುತ್ತ ಸಂವತ್ಸರಗಳು ಕಳೆದವು.ಯುಗ ಯುಗಗಳು ಉರುಳಿದವು. ನನ್ನ ತೀರ ಪ್ರದೇಶದಲ್ಲಿರುವ ಸಮೃದ್ಧಿಯ ಕಂಡು ಶುಕ-ಪಿಕಗಳು ಕೋಗಿಲೆ-ಕಾಜಾಣಗಳು ಹರುಷದಿಂದ ಉಲಿಯತೊಡಗಿದವು.
ನಾಲ್ಕು ದಿಕ್ಕಗಳಿಂದ ನನ್ನ ಸುತ್ತ ಧಾರ್ಮಿಕತೆಯ ಪ್ರವಾಹ ಹರಿಯ ತೊಡಗಿತು. ನನ್ನ ತೀರದಲ್ಲಿ ಋಷಿ ಮುನಿಗಳು
ಬಂದು ನೆಲೆ ನಿಂತರು. ನದಿ ಸ್ನಾನದ ಮೂಲಕ ಸೂರ್ಯದೇವನಿಗೆ ಆರ್ಘ್ಯವನ್ನು ನೀಡಿದರು. ಓಂಕಾರದ ಗಾನ ಗುಂಜನದೊಂದಿಗೆ ಧ್ಯಾನ-ಮೌನ- ತಪಸ್ಸು ಆಚರಿಸಿದ ಸಂತ- ಮಹಂತರಿಂದ ದಿಶೆ,ದಿಶೆಯಲಿ ಆಧ್ಯಾತ್ಮಿಕ ಶಕ್ತಿ ಪಸರಿಸತೊಡಗಿತು.ಈಗಾಗಲೇ ನನ್ನಲ್ಲಿ ಉಪನದಿಗಳು,ಪವಿತ್ರ ಹಳ್ಳಗಳ ಸೇರುವಿಕೆಯಿಂದ ಸಂಗಮ ಸ್ಥಳಗಳು ಎಂದು ನಿರ್ಮಾಣವಾದವು.ದೇವಾನು ದೇವತೆಗಳು ಮಾನವನ ಭಕ್ತಿಗೆ ಅವರ ಪರೀಕ್ಷೆಗೆ ನನ್ನ ತೀರ ಪ್ರದೇಶಗಳಿಗೆ ಬೇಟಿಯಿತ್ತರು. ಅವರು ಬೇಟಿಯಿತ್ತ ಸ್ಥಳಗಳು ಪುರಾಣ ಪ್ರಸಿದ್ದವಾಗಿ ಇನ್ನೂ ಕೆಲವು ಸ್ಥಳಗಳು ಅವರ ಕುರುಹಗಳಾಗಿ ಐತಿಹ್ಯದ ಪ್ರತೀಕಗಳಾಗಿ ಪ್ರಸಿದ್ಧವಾಗತೊಡಗಿದವು. ಅಂದುಕೊಂಡಂತೆ ಅಲ್ಲಿಗೆ ವಾಸ್ತು ಶಿಲ್ಪಿಗಳು ಬಂದರು,ದತ್ತಿದಾನ ನೀಡಿ ಔದಾರ್ಯ ಮೆರೆಯುವ ರಾಜರು-ರಾಣಿಯರು,ಧನಿಕರು- ವರ್ತಕರು, ಗ್ರಾಮಸ್ಥರು-ಪಟ್ಟಣಿಗರು ಬಂದರು.ಎಲ್ಲರೂ ಸೇರಿ ಅನೇಕ ರೀತಿಯ ಹೊಸ ಶೈಲಿಯ ಗುಡಿ- ಗೋಪುರ ಕಟ್ಟುತ್ತ ಐತಿಹಾಸಿಕವಾಗಿ ಭಕ್ತಿಯ ಪರಾಕಾಷ್ಠೆ ಮೆರೆದು ಪ್ರಾಂತಃಸ್ಮರಣಿಯರಾದರು. ವಂದಿ ಮಾಗದರು, ಆಳರಸರು, ಪ್ರಜೆಗಳು ಸೇರಿ ನನ್ನ ಇಕ್ಕೆಲಗಳಲ್ಲಿ ದೇವಸ್ಥಾನಗಳನ್ನು ಕಟ್ಟಿ ಶಾಸನಗಳಲ್ಲಿ ತಮ್ಮ ಹೆಸರು ಕೆತ್ತನೆ ಮಾಡಿಸಿದರು.ದೇವ ಮಂದಿರಗಳಲ್ಲಿ ಕವಿಗಳು ಹಾಡಿದರೇ,ರಾಜ- ಮಹಾರಾಜರು ದೇವರ ದರ್ಶನ ಪಡೆದರು.ಸಾಲು,ಸಾಲು ಯಾತ್ರಾರ್ಥಿಗಳ ದಂಡು ದೂರ ದೂರದ ಪುರ-ಪಟ್ಟಣಗಳಿಗೆ ಈ ಭಾಗದ ದೇವರುಗಳ ಮಹಿಮೆಯನ್ನು ಗಾನ ವೈಭವದ ಭಜನೆಗಳ ಮೂಲಕ ಬಿತ್ತರಿಸಿದರು. ತೀರ್ಥಕ್ಷೇತ್ರಗಳಲ್ಲಿ ಘಂಟಾನಾದ, ಶಂಖವಾಧ್ಯ,ಪೂಜೆ ಪ್ರಸಾದ ಎಡಬೀಡದೆ ಸಾಗಿ ಅವು ಸುಕ್ಷೀತ್ರ ಗಳಾದವು.
ನನ್ನ ಬೆಳವಣಿಗೆ ಇಷ್ಟಕ್ಕೂ ನಿಲ್ಲಲಿಲ್ಲ ಋಷಿಗಳು-ಮಹರ್ಷಿಗಳು ಯೋಗಿಗಳು-ತ್ಯಾಗಿಗಳು ಸಿದ್ದರು-ಶರಣರು ಸಂತರ- ಮಹಂತರು ಸೇರಿ ನನ್ನ ನದಿ ತೀರದ ಅರಣ್ಯ ಪ್ರದೇಶಕ್ಕೆ *ಪುಣ್ಯಾರಣ್ಯ ವೆಂದು ಶಾಸನಗಳ ಸಾಲಿನಲ್ಲಿ ಅಕ್ಷರಗಳ ಬಾಂಧವ್ಯ ಬೆಸೆದರು ಹಾಗೆ ಶರಣರ ವಚನಾಂಕಿತದಲ್ಲಿ ನನ್ನ ನಾಮಾಮೃತ ತುಂಬಿ ನನ್ನ ಹಿರಿಮೆಯೂ ದಶದಿಕ್ಕುಗಳಲ್ಲಿ ಪಸರಿಸಿ ಅದರ ಕೀರ್ತಿಯ ಪತಾಕೆಯನ್ನು ಪಟಪಟಿಸುವಂತೆ ನಾಮಕರಣದ ಮೈಲುಗಲ್ಲುನ್ನು ಸ್ಥಾಪಿಸಿ ಹೊಸ ಇತಿಹಾಸ ನಿರ್ಮಿಸಿದರು. ನನ್ನ ಭೀಮಾ ತೀರದ ಮಹಿಮೆಯನ್ನು ತ್ರಿಲೋಕಕ್ಕೆ ಕೇಳುವಂತೆ ವಾಧ್ಯ ವೈಭವಗಳೊಂದಿಗೆ ಶಂಖನಾದ ಮೊಳಗಿಸುತ್ತ ಡಂಗುರ ಸಾರಿದರು…
✍️ ದಶರಥ ಕೋರಿ ಶಿಕ್ಷಕರು, ಸಾಹಿತಿಗಳು ಇಂಡಿ
ಆಕರಗಳು:
ಗೂಗಲ್ ವಿಕಿಪಿಡಿಯಾ
ಭಾವಚಿತ್ರಗಳು:ಗೂಗಲ್
ಪ್ರೇರಣೆ ಪ್ರೋತ್ಸಾಹ:
ಶ್ರೀ ಕಿಶೋರ ಕಾಸಾರ ಸಾಹಿತಿಗಳು
ಮಣೂರ ತಾ:ಅಫಜಲಪುರ
ಶ್ರೀ ಉಮೇಶ ಕೋಳೆಕರ ವಿಜಯ ಕರ್ನಾಟಕ ವರದಿಗಾರರು ಇಂಡಿ
ಶ್ರೀ ಬಸವರಾಜ ಕಿರಣಗಿ ಶಿಕ್ಷಕರು ಹವ್ಯಾಸಿ ಬರಹಗಾರರು ಇಂಡಿ.
ಭಾಗ-04
ನನ್ನ ಸಹೋದರಿ ಚಂದ್ರ ಭಾಗ (ಭೀಮಾ)ನದಿ ದೇವಿ ಸಕಲ
ಪಾಪ ಕಳೆಯುವಳು.!
ಕಾನಡಾ (ಕನ್ನಡ) ರಾಜಾ ಪಂಡರೀಚ…..
ಶೀಘ್ರದಲ್ಲಿ ವೀಕ್ಷಿಸಿರಿ
🙏🌹💐💕🙏