ರಾಯಚೂರು – ರಾಜ್ಯದಲ್ಲಿ ಮುಸ್ಲಿಂ ಬಾಲಕಿಯರಿಗೆ, ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಬಾರದೆಂದು ಆದೇಶ ಹೊರಡಿಸಿದ್ದು, ಈ ಆದೇಶವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಯೂತ್ ಕಾಂಗ್ರೆಸ್ ಮುಖಂಡ ಶೇಖ್ ಫಾರೂಕ್ ಒತ್ತಾಯಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಸ್ಲೀಂ ವಿದ್ಯಾರ್ಥಿನಿಯರು ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಬಾರದೆಂದು ಆದೇಶ ಹೊರಡಿಸಿದ್ದು, ಕೂಡಲೇ ಈ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಈ ಆದೇಶದಿಂದ ಶಾಲಾ, ಕಾಲೇಜು ಆಡಳಿತ ಮಂಡಳಿ ವಿರೋಧ ಮಾಡುತ್ತಿರುವುದು ಹಾಗೂ ತರಗತಿಗಳಿಗೆ ಕೂಡಲೇ ಅವಕಾಶ ನೀಡದೇ, ಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಸಮಾಜಗಳಲ್ಲಿ ವಿಷ ಬೀಜ ಬಿತ್ತುತ್ತಿರುವ ಕೆಲಸ ಮಾಡಲಾಗುತ್ತಿದೆ. ಮುಸ್ಲೀಂರು, ದಲಿತರು, ಕ್ರೈಸ್ತರು ಹಾಗೂ ಶಿಖ್ ಸಮಾಜದವರ ವಿರುದ್ಧ ಪ್ರತಿ ದಿನ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ಪಕ್ಷದ ನಾಯಕರು ನೀಡುತ್ತಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಯಾವುದೇ ಬೇಧ, ಭಾವವಿಲ್ಲದೇ ವಿದ್ಯಾರ್ಥಿಗಳು ಒಂದೇ ಟಿಫಿನ್ ಬಾಕ್ಸ್‌ನಲ್ಲಿ ಊಟ ಮಾಡಿ, ಒಂದೇ ಬೆಂಚಿನಲ್ಲಿ ಕೂಡುತ್ತಿದ್ದಾರೆ.
ಆದರೆ, ಜಾತಿ ನಡುವೆ ವಿಷ ಬೀಜ ಬಿತ್ತುತ್ತಿರುವ ಕೆಲಸ ಬಿಜೆಪಿ ಮಾಡುತ್ತಿರುವುದು ಖಂಡನೀಯ. ಹಿಜಾಬ್ ಧರಿಸಬಾರದೆಂಬ ಆದೇಶ ಕೂಡಲೇ ಸರ್ಕಾರ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೇ ದೇಶಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ ಕರಣ್ ಸಿಂಗ್, ಶಂಕರ್, ಸಲ್ಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.