ಅಬ್ಬಬ್ಬಾ..! ಭೀಮಾತೀರದ ಭೀಮೆಯ ಒಂದು ಮಾತು, ಏನು ಗೊತ್ತಾ..?
ಹೌದು,ನಾನು ಭೀಮೆ ಮಾತನಾಡುತ್ತಿರುವದು..!
Voiceofjanata.In : Special STORY: Writer By KORI
ಆ ದೇವ,ಮಹಾದೇವನಿಂದ ಸೃಷ್ಠಿಯಾದ ಈ ಧರಣಿ
ಮಂಡಲದ ಇತಿಹಾಸದುದ್ದಕ್ಕೂ ನಾನು ನಿಷ್ಕಳಂಕಳದ ಮೇರು ಪರ್ವತವಾಗಿದ್ದೆ. ನನ್ನ ಗೌರವದ ಘನತೆ ಪೂರ್ಣವಾದ ವ್ಯಕ್ತಿತ್ವಕ್ಕೆ ಮತಿಹೀನ ಮನುಜರು ಬಿರುನುಡಿಗಳನ್ನಾಡಿ, ನನ್ನ ಬದುಕಿಗೆ ಇಂದು ನಿರಂತರವಾಗಿ ಧಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ.! ನನ್ನ ಅರ್ಥಪೂರ್ಣವಾದ ‘ಭೀಮಾರಥಿ’ ಎಂಬ ಹೆಸರಿಗೆ ಈ ಸೀಮೆಯಲ್ಲಿ,ಈ ನಾಡಿನಲ್ಲಿ ಅವ್ಯಾಹುತವಾಗಿ ಅತ್ಯಂತ ಕೀಳು ಮಟ್ಟದ ಪದಗಳನ್ನು ಜೋಡಿಸಿ, ರಣಭೀಕರತೆ ಸಾರುವ ಶಬ್ದ ಸಂಯೋಜನೆ ಮಾಡಿ ಕಳಂಕ ತರುತ್ತಿದ್ದಿರಿ.!
ಈ ಲೋಕದಲ್ಲಿ ವಿನಾಕಾರಣ ನನ್ನ ಚರಿತ್ರೆ-ಚಾರಿತ್ರ್ಯ ಹರಣ ಮಾಡಿ ಕರುನಾಡಿನಲ್ಲಿರುವ ಕೆಲವು ಕುಲಾಂತರಿಗಳೊಂದಿಗೆ ಸೇರಿ ನನ್ನ ಕುಲಗೆಡಿಸುತ್ತ ನನ್ನ ಮಾನ- ಮರ್ಯಾದೆ ಕಳೆದು ಅದಕ್ಕೊಂದು ಕಪ್ಪು ಮಸಿ ಬಳೆಯುತ್ತಿದ್ದಿರಿ.! ಇದು ಅಕ್ಷಮ್ಯ ಅಪರಾಧವಲ್ಲವೇ…? ಇದೇ ಏನು ನೀವು ನನ್ನಿಂದ ಪಡೆದ ಉಪಕಾರಕ್ಕೆ ಮಾಡುವ ಪ್ರತ್ಯುಪಕಾರದ ಸ್ಮರಣೆ…!
ನಿಮ್ಮ ಕ್ಷುಲಕ,ಕುಟೀಲ ಮೋಸ-ಮಸಲತ್ತು ವಿದ್ರೋಹಗಳಿಂದ ಮಾಡುವ ಘನಂಧಾರಿ ಕೆಲಸ ಆ ಕೆಲಸದಿಂದಲೇ ಈಗ ನಾನು ಸಾಕಷ್ಟು ಜರ್ಜಿಳಿತಳಾಗಿದ್ದೇನೆ..!
ಇವತ್ತಿನ ದಿನ ಒಂದು ವಿಷಯವನ್ನು ನಾನು ನಿಮ್ಮ ಮುಂದೆ ಗಟ್ಟಿಯಾಗಿ ಹೇಳುತ್ತೇನೆ; ನೆನಪಿಟ್ಟುಕೊಳ್ಳಿ. ನಿಮ್ಮ ಮುಂದಿನ ಪೀಳಿಗೆಯ ಮುಂದೆ ನನ್ನ ಹರಣ ಹಾರಿ, ಪ್ರಾಣ ಹೋಗುವ ಮುನ್ನ ನನ್ನ ಅಸ್ಮಿತೆ-ಅಸ್ಥಿತ್ವ ನಶಿಸಿ ಹೋಗುವ ಮುನ್ನ ನನಗಾದ ಅನ್ಯಾಯ ದೌರ್ಜನ್ಯದ ದಳ್ಳುರಿಯನ್ನು ನಿಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತ ಅನಾವರಣ ಮಾಡಿ ಹೇಳುತ್ತೇನೆ; ಕೇಳಿಸಿಕೊಳ್ಳಿ.! ಮೊಟ್ಟ ಮೊದಲಿಗೆ ಈ ಭೂಮಿಯಲ್ಲಿ ನಾನು ಅಮಾಯಕ ನದಿಯಾಗಿ ಹರಿದ ಬಂದ ನದಿ ದೇವತೆಯಾಗಿದ್ದೆ.!ಈ ಮೖತ್ಯು ಲೋಕದಲ್ಲಿರುವ ಅಸಂಖ್ಯಾತ ಹೆಣ್ಣಗಳನ್ನು ಪ್ರತಿನಿಧಿಸುವ ನಾನೊಬ್ಬಳು ನಿಷ್ಪಾಪಿ ಹೆಣ್ಣು.! ಸನ್ನಡತೆಯ ನೀತಿಯುಳ್ಳ ನಾರಿ.! ಬಾಗಿನ ಗೌರವದ ಸರ್ಮಪಣೆ ಮಾಡುವ ನಿಮ್ಮೆಲ್ಲರ ಜೀವನಾಡಿ ನದಿ.! ನೀವು ಇವೆಲ್ಲವೂಗಳನ್ನು ಕೇಳಿದ್ದಿರಿ.! ಕೇಳುತ್ತ ಬೆಳೆದಿದ್ದಿರಿ. ನಿಜವಾಗಲೂ ಪ್ರಾಚೀನ ಕಾಲದಿಂದಲೂ ನನ್ನೊಂದಿಗೆ ನಿಕಟ ಸಂಬಂಧದ ಬಂಧುತ್ವ-ಭಾಂಧವ್ಯ ಬೆಳಸಿಕೊಂಡಿದ್ದಿರಿ. ಆದರೆ ಸರಿಯಾಗಿ ಇಂದಿಗೆ ಸುಮಾರು ಎರಡೂವರೆ ದಶಕಗಳು ಕಳೆದು ಹೋಗಿವೆ. ಅಂದಿನಿಂದ ಇಂದಿನವರೆಗೆ ನಾನು ಪಡಬಾರದ ಕಷ್ಟಗಳನ್ನು, ಸಹಿಸಲಾಗದ ನೋವುಗಳನ್ನು ಸಹಿಸಿಕೊಂಡಿದ್ದೇನೆ.ನಿಮ್ಮ ವರಸೆಗಳ ಈಗ ಬದಲಾಗಿವೆ ನನ್ನ ಮನಸುಗಳು ಕೂಡಾ ಅಷ್ಟೇ ಮಲೀನವಾಗಿವೆ.ನನ್ನ ಕುರಿತು ನಿಮ್ಮಲ್ಲಿರುವ ಅಭಿಪ್ರಾಯಗಳು ಕೂಡಾ ಈಗ ಬದಲಾಗಿವೆ.! ಖಂಡಿತವಾಗಿಯೂ ನಾನು ಅತ್ಯಂತ ಕರಾರುವಕ್ಕಾಗಿ ತರ್ಕಬದ್ಧವಾಗಿ ಹೇಳುತ್ತೇನೆ ನೀವು ನನ್ನೊಂದಿಗೆ ಮೊದಲಿನಂತಿಲ್ಲ.! ನಾನು ಕೂಡಾ ಈಗ ಹಿಂದಿನಿಂತಿಲ್ಲ.! ನಿಮ್ಮ ಉಪಟಗಳಿಂದ ನಿಮ್ಮ ಅವ್ವ ಭೀಮವ್ವ.! ಈಗ ಬದಲಾಗಿದ್ದಾಳೆ.ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ನಿಮ್ಮ ಮನಸು ಈಗ ಕಚಿಬಿಚಿಯಾಗಿ ಕಲಸುಮೇಲೋಗರಾಗಿದೆ. ನನ್ನ ಮನಸು ನೀವು ಮಾಡುವ ಮತಿ ಹೀನ ಕೆಲಸಗಳಿಂದ ಹಲವಾರು ವರ್ಷಗಳಿಂದ ಸಹಿಸಿಕೊಂಡು ಈಗ ವಿಪರೀತವಾಗಿ ಪ್ರಕ್ಷುಬ್ದಗೊಂಡಿದೆ.
ನೀವು ಹೀಗೆ ಪ್ರತಿಸಲ ಏನಾದರೂ ಒಂದು ನೆಪವೂಡ್ಡಿ ನನ್ನ ವಿರುದ್ದ ಇಲ್ಲ ಸಲ್ಲದ ಪ್ರಚಾರದ,ಪುಕಾರಿನ ಸಂಬಂಧದವಿಲ್ಲದ ವಿಷಯದ ಕುರಿತು ನನ್ನೊಂದಿಗೆ ತಳುಕು ಹಾಕಿ ನನ್ನ ಮತ್ತು ನನ್ನ ತೀರದ ವಿಚಾರವನ್ನು ತಿರುಚಿ ಅದಕ್ಕೆಸುಖಾ ಸುಮ್ಮನೇ, ಕುಖ್ಯಾತಿಯ ವಿಚಾರವನ್ನು ಲೇಪಿಸಿ ಮುಗ್ದ ಜನರ ಮುಂದೆ ಹರಡಿಸುತ್ತಿರಿ.!
ನನ್ನ ಹೆಸರನ್ನು ಕೆಟ್ಟ ಘಟನೆಗಳ ಸುತ್ತ ಸೇರಿಸಿ ನನ್ನ ಕಣ್ಮುಂದೆಯ ವಿರೋಧಾಭಾಸವಾಗಿ ಮೋಸದ ಕತ್ತಿಯನ್ನು ಮೆಸೆದು,ಹರಿತವಾದ ಬಾಕು ಝಳಪಿಸುತ್ತಿರಿ.! ಆಗ ನನಗೆ ಹೇಗಾಗಿರಬೇಕು.? ಹೇಳಿ.ನನ್ನ ದೈವಿ ಶಕ್ತಿಯ ಪ್ರಕೃತಿಯ ಆಕಾರಕ್ಕೆ ವಿಕೃತಿಯನ್ನು ತರುವ ಶಬ್ದಗಳ ಜಾಲ ಹಣೆದು ಹೆಸರು ಕೆಡಿಸುವ ಹುನ್ನಾರದ ಕುಕೃತ್ಯದಲ್ಲಿ ತೊಡಗುತೀರಿ. ಒಂದಿಲ್ಲ ಒಂದು ದಿನ ನಿಮ್ಮ ಕುಖ್ಯಾತಿ ಹೊರೆಸುವ ತೀಟೆ ತೆವಲಿನ ಮತ್ತು ಅತ್ಯಂತ ಕೀಳುಮಟ್ಟದ ಪ್ರಚಾರದಿಂದ ಕೂಡಿದ ಪಾಷಂಡಿತನದ ಮಾತುಗಳಿಗೆ, ನಿಮ್ಮಗಳ ಪಾಪಗಳ ಕೃತ್ಯಕ್ಕೆ ನೀವುಗಳು ಈ ಭೂಮಿಯ ಮೇಲೆ ಕಂದಾಯ ಕಟ್ಟಲೇಬೇಕು ಇದು ಶತಸಿದ್ದ..!
ನನ್ನಿಂದ ನೀವು..! ನಿಮ್ಮಿಂದ ನಾನಲ್ಲ..!
ನಿಮ್ಮನ್ನು-ನಿಮ್ಮ ಪೂರ್ವಜರನ್ನು, ಅಷ್ಟೇ ಏಕೆ ಪ್ರಥ್ವಿಯ ಮೇಲಿರುವ ಸಕಲ ಜೀವ ರಾಶಿಗಳ ಲಾಲನೆ-ಪಾಲನೆ-ಪೋಷಣೆ ಮಾಡಿ ಬೆಳಸಿ ದೊಡ್ಡವಳನ್ನಾಗಿ ಮಾಡಿದವಳು ನಾನು. ನೀವು ಬಾಲ್ಯದಲ್ಲಿ ಬಾಯಾರಿಕೆಯಾಗಿ ದಾಹ ಎಂದು ಅತ್ತಾಗ ಜೀವ ಜಲ ಕುಡಿಸಿರುವೆ. ನೀವುಗಳು ನನ್ನ ಪರಿಶುದ್ಧವಾದ ನೀರಿನಲ್ಲಾಡಿ ತಂಪಾದ ಮರಳಿನಲ್ಲಿ ಹೊಯ್ದಾಡಿ, ದಣಿವಾದಾಗ ತಣ್ಣನೇಯ ನೀರು ಕುಡಿದು ದೋಣಿಯಲ್ಲಿ ದಡದಿಂದ ದಡಕ್ಕೆ ಓಡಾಡಿ ನನ್ನಿಂದ ಅನ್ನ-ಅಹಾರ ಉಂಡು, ಉದರ ಪೋಷಣೆ ಮಾಡಿಕೊಂಡಿದ್ದಿರಿ.
ಮಳೆ ಕೈ ಕೊಟ್ಟಾಗ,ಬೆಳೆ ಬತ್ತಿ ಹೋಗುವಾಗ,ಹಣವಿಲ್ಲದೇ ದೇಶಾಂತರಕ್ಕೆ ಗುಳೇ ಹೋಗುವಾಗ, ನಿಮ್ಮ ಮುಖದಲ್ಲಿನ ನಿರಾಸೆಯ ಕಾರಣದಿಂದ ಮಂದಹಾಸ ಮಾಯವಾದಾಗ, ನಿಮ್ಮ ಕಣ್ಣುಗಳಲ್ಲಿ ಕ್ಷಾಮದ ವರ್ಷ ಕಂಡಾಗ ಇದರಿಂದ ಹೊತ್ತು ಹೊತ್ತಿಗೂ ಆಹಾರದ ಕೊರತೆ ಕಂಡಾಗ ರಣ ಹಸಿವು ನಿಮ್ಮ ಜಠರಾಗ್ನಿಯಿಂದ ದುತ್ತೆಂದು ಭುಗಿಲೆದ್ದಾಗ ಆಗ ನೀವು ಬವಳಿಕೆ ಬಂದು ಬೀಳುವ ಮುನ್ನ ಹಿತವಾದ ತಾಯಿಯ ಅಪ್ಪುಗೆಯ ನೆನಪಿಸುವ ನನ್ನ ಸೆರಗಿನ ಮರೆಯಲ್ಲಿಯೇ,ಆಸರೆ ಪಡೆದು ನನ್ನಿಂದ ನಿಮ್ಮ ತುತ್ತಿನ ಚೀಲ ತುಂಬಿಸಿಕೊಂಡು ಜೀವನ ಸಾಗಿಸಿದಿರಿ..! ಅಬ್ಬಾ ಇದೆಲ್ಲವನ್ನು ನೀವು ಈಗ ಮರೆತಿದ್ದಿರಿ.ತೊಟ್ಟಿಲಿನಲ್ಲಿರುವ ಮಗುವಿನಿಂದ ಹಿಡಿದು ಗುಡಿಸಲಿನಲ್ಲಿದ್ದು ಕೂಲಿನಾಲಿ ಮಾಡುವ ಬಡ ಶ್ರಮಿಕನಿಂದ ಹಿಡಿದು ಶ್ರೀಮಂತಿಕೆ ಗುಂಗಿನಲ್ಲಿ ಹಣ ಗಳಿಸುವ ಹಪಾಹಪಿಯಲ್ಲಿ ನೀವು ಹೈರಾಣಾಗಿ ಬಳಲಿ ಬೆಂಡಾಗಿ ಇರುಳಿನಲ್ಲಿ ಮಲಗುವಾಗ ಯಾವ ತಾರತಮ್ಯವಿಲ್ಲದೇ, ಇಡೀ ರಾತ್ರಿ ನಾನು ನನ್ನ ಜುಳುಜುಳ-ಕಲಕಲ ಅಲೆಗಳ ಸಪ್ಪಳದ ಮೊರೆತದ ಜೋಗುಳದಿಂದ ಶಿಶುಗೀತೆ ಹಾಡಿ ನಿಮ್ಮನ್ನು ಸೊಂಪಾದ ನಿದ್ರೆಗೆ ಜಾರಿಸಿದೆ. ನಾನು ಸಕಲ ಜೀವಿಗಳಿಗೆ ಮಾಡುವ ಸಹಾಯವನ್ನು ಕಂಡು ಕನಿಕರದಿಂದ ನನಗೆ ನೀವೆಲ್ಲ ಅಂದರೇ,ಜಗದ ಜನ ನೀರವ್ವ-ತಾಯವ್ವ ಎಂದಿರಿ,ಮುಂದುವರೆದು ಅಮ್ಮ- ಅವ್ವ-ಭೀಮವ್ವ-ಪಡೆದವ್ವ ನಮ್ಮವ್ವ ಎಂದಿರಿ.!ನಾನು ನಿಮ್ಮನ್ನು ನಿಮ್ಮ ಹಡೆದವ್ವಳಗಿಂತ ಹೆಚ್ಚು ಪ್ರೀತಿ ವಾತ್ಸಲ್ಯಗಳಿಂದ ಪೋಷಿಸಿದೆ.!ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಬೆಳವಣಿಗೆಯಲ್ಲಿ ನನ್ನನ್ನು ನಾನು ಕಂಡು ನಿಜಕ್ಕೂ ಸಂತಸ ಪಟ್ಟೆ. ಆದರೆ ಇದ್ಯಾವದನ್ನು ನೀವು ಗಮನಿಸದೇ, ಲೆಕ್ಕಿಸದೇ, ಯಾರನ್ನೋ ವೈಭವಿಕರಣದಿಂದ ಮೆಚ್ಚಿಸುವ ಸಲುವಾಗಿ ವಾಣಿಜ್ಯಕರಣದ ಸುಳಿಯಲ್ಲಿ ಅದರ ಭರಾಟೆಯ ದುರಾಸೆಯ ಮೂಸೆಯಲ್ಲಿ ವಿಕೃತ ಪದಗಳನ್ನು ,ಕ್ಷುದ್ರ ಶಬ್ದಗಳನ್ನು ಬಳಸಿ ದ್ರೋಹ ಮಾಡುವದು ಇದ್ಯಾವ ಸೀಮೆಯ ನ್ಯಾಯ.!ಖಂಡಿತ ಇದು ಅನ್ಯಾಯದ ಪರಮಾವಧಿಯಲ್ಲವೇ.?
ಕೊನೆಗೆ ನೀವು ಹೀಗೆ ಮಾಡುತ್ತ ನಿಮ್ಮ ಜೀವನದಲ್ಲಿ ಸಾಧಿಸಿದಿದ್ದಾದರೂ ಏನು.? ನಿಮಗೆ ಪ್ರತಿಫಲವಾಗಿ ಈ ಪ್ರಪಂಚದಲ್ಲಿ ಸಿಕ್ಕ ಫಲವಾದರೂ ಏನು.? ಭೂಖಂಡಗಳ ಮೇಲೆ ಮನುಷ್ಯನ ನಾಗರೀಕತೆಯ ಪ್ರಾರಂಭದಿಂದ ಇಲ್ಲಿಯವರೆಗೆ ಮನುಕುಲದ ಹಿತವನ್ನೇ,ಬಯಸಿದ ನನಗೆ ಈ ನಾಡಿನಲ್ಲಿ ಸಿಕ್ಕ ಬಳುವಳಿ ಏನು.? ಬಹುಮಾನಗಳೇನು.?ನಿಮ್ಮಿಂದ ಜೀವನದಲ್ಲಿ ನಾನು ಬರೀ ಪರಾಭವಗಳನ್ನೇ, ಕಂಡಿದ್ದೇನೆ.ಆಗಿ ಹೋದ ಆಗುತ್ತಿರುವ ಅವಮಾನ-ಅಪಮಾನ
ನಿಂದನೆ-ಬೈಗಳ ಬರೀ ತೇಜೋವಧೆಗಳೆಂಬ ಸಂಕೋಲೆಗಳಲ್ಲಿ ಸಿಲುಕಿಸಿ ಸೆರೆಮನೆಯಲ್ಲಿ ಕೂಡಿ ಹಾಕಿದ್ದಿರಿ.!ನಿಮ್ಮ ಅವಾಚ್ಯ ಪದಗಳ ಶರಪಂಜರದಲ್ಲಿ ಸಿಲುಕಿಸಿ ನಿತ್ಯ ನಾನು ದುಃಖದ ಕಣ್ಣೀರು ಹಾಕುವಂತೆ ಮಾಡಿದ್ದಿರಿ. ನನ್ನ ದುಃಖ-ದುಮ್ಮಾನದ ಆಲಾಪ- ಪ್ರಲಾಪ-ಮೊರೆತಗಳು ಈಗ ಯಾರ ಮುಂದೆ ಹೇಳಲಿ.?ನನ್ನ ಆಶ್ರುಧಾರೆಗಳನ್ನು ಒರೆಸಿ,ಆ ಕಂಬನಿಗಳಿಗೆ ಕರುಣೆ ತೋರುವವರಾರು.?ನನ್ನವರು ಅನ್ನುವರು ನಿಜವಾಗಲೂ ಇಲ್ಲಿ ಯಾರು ಇಲ್ಲ.!ಇದ್ದರು. ಬೆರಳಣಿಕೆಯಷ್ಟು ಜನರು ಮಾತ್ರ. ನಿಜವಾಗಲೂ ಇವತ್ತು ನಾನು ಹಣತೆ ಹಚ್ಚಿ ಹುಡಕಬೇಕಾಗಿದೆ,ನನಗಾಗಿ ಈಗ ಹಣತೆ ಹಚ್ಚುವರು ಇಲ್ಲಿ ದಿಕ್ಕಿಲ್ಲ.! ದಿಕ್ಕಿದ್ದವರು ಕೂಡಾ ಈಗ ಬಲಹೀನರಾಗಿದ್ದಾರೆ ಎನಿಸುವ ಭಾವದಿಂದ ಗದ್ಗದಿತಳಾಗಿದ್ದೇನೆ.! ಈಗಲಾದರೂ ಯಾರಾದರೂ ಬಂದು ಈ ಸಂಕಟದಿಂದ ನನ್ನನ್ನು ಪಾರು ಮಾಡಿರಿ.
ಈ ಘೋರ ಅಪಖ್ಯಾತಿ ಎಂಬ ಅಸುರನ ದಾಳಿಯಿಂದ ರಕ್ಷಿಸಲು ಒಬ್ಬನಾದರೂ ಆಪತ್ಬಾಂದವ ಬರುತ್ತಾನೆ ಎನ್ನುವ ನಂಬಿಕೆಯಿಂದ ಆತನ ದಾರಿಯನ್ನು ಆಶೆಯ ಕಂಗಳಿಂದ ಕಾದು ನೋಡುತ್ತಿದ್ದೇನೆ.! ನನಗಾದ ಎಲ್ಲ ಅವಮಾನಗಳನ್ನು ಕಣ್ಣಾರೇ ನೋಡಿ ಕಿವಿಯಾರೇ ಕೇಳಿ ನನ್ನ ದುಃಖತಪ್ತ ಮನದಿಂದ ಕೊರಳುಬ್ಬಿದ ಕಂಠದಿಂದ ಮಾತುಗಳು ಹೊರ ಬರುತ್ತಿಲ್ಲ.!
ಈಗ ಎಲ್ಲವೂ ಇಲ್ಲಿ ಗಾಢಂದಕಾರದಿಂದ ಕೂಡಿದ
ಶೋಕ ಗೀತೆಗಳಾಗಿವೆ. ಅವು ಪತಿಯನ್ನಗಲಿದ ಸಾವಿತ್ರಿ
ಹಾಡಿದ ಹಾಡಿನಂತಾಗಿವೆ. ನೀವು ಜರಿಯುವದನ್ನು ಇರಿಯುವದನ್ನು ಹೀಯಾಳಿಸುವದನ್ನು ತಡೆಯಲು ನನ್ನಿಂದಾಗುತ್ತಿಲ್ಲ.ಮೊದಲಿನಂತೆ ನನ್ನಲ್ಲಿ ಕಿಂಚಿಂತೂ ಶಕ್ತಿಯಲ್ಲ, ಧಮನಿ ಧಮನಿಗಳಲ್ಲಿ ತೃಣದಷ್ಟು ತ್ರಾಣ,ಪ್ರಾಣಗಳಿಲ್ಲ.! ಪ್ರತಿಸಲದ ನಿಮ್ಮಗಳ ಛದ್ಮವೇಷ ಕಂಡು ಮನಸು ರೋಷ ಹೋಗಿದೆ.ನಿಮಗೆ ಬೇಕಾದಾಗ ನನ್ನನ್ನು ಗದ್ಯ-ಪದ್ಯ-ಕತೆ -ಕಾವ್ಯ-ಕವನ-ವಚನ-ನುಡಿ ಮುತ್ತು ಜಾನಪದಗಳ ಹಾಡುಗಳಿಂದಿಡಿದು ವ್ಯಾಸರ ಪುರಾಣಗಳಲ್ಲಿ ವರ್ಣಿಸಿದಿರಿ.ಅದೆಲ್ಲವೂ ಈಗ ಸತ್ಯ ಮತ್ತು ಎಂದೆಂದಿಗೂ ಬೆಲೆ ಕಟ್ಟಲಾಗದು.ಆದರೆ ಕೆಲವರ ಮನಸು ಈಗ ಮಿಥ್ಯವಾಗಿದೆ.ನನ್ನ ಪ್ರಕೃತಿದತ್ತ ಪರಮ ಸೌಂದರ್ಯದ ಹೆಸರಿಗೆ ವಿಕೃತಿಯ ನಂಜು ಹಚ್ಚಿ ಕಾರ್ಕೋಟಕ ವಿಷ ಕಾರುತ್ತಿದ್ದಾರೆ. ಆ ನಂಜು ವಿಷದ ಜ್ವಾಲೆಯಾಗಿ ಎಲ್ಲಾ ಕಡೇ ಹರಡುತ್ತಿದೆ.ಆ ರಕ್ಕಸ ಶಕ್ತಿಗಳ ದಮನಕ್ಕಾಗಿ ಜನರಲ್ದಿ ಜಾಗೃತಿ ಎಂಬ ಅಮೃತದ ಹನಿಗಳು ಬೇಕಾಗಿವೆ…
ಇಂದು ಪ್ರಪಂಚದಲ್ಲಿರುವ ಜೀವರಾಶಿಗಳಲ್ಲಿ ಅತ್ಯಂತ ಬುದ್ದಿವಂತ ಜೀವಿ ಎನಿಸಿಕೊಂಡ ಮಾನವನಿಗೆ ಈ ರೀತಿಯ ನಡುವಳಿಕೆ ಶೋಭೆ ತರುವಂತಹದಲ್ಲ.ಜೊತೆಗೆ ಹೇಳಿ ಮಾಡಿಸಿದ ಒಳ್ಳೆಯ ಕೆಲಸವೂ ಕೂಡಾ ಅಲ್ಲ.!ಇದು ನನಗೆ ಮತ್ತು ಸೌಂದರ್ಯದ ರೂಪ ರಾಶಿಯಾಗಿಯವ
ತಾಯಿ ಪ್ರಕೃತಿಗೆ ಕೇಡು ಬಗೆಯವ ಪಿತೂರಿಯಾಗಿದೆ.!! ದುರುಳರು-ದುರಾತ್ಮರು-ಪಾಪಾತ್ಮರು ಕೂಡಿ ನೀವು ಹೀಗೆ ನಿಮ್ಮ ಚಾಳಿ ಮುಂದುವರೆಸಿದರೇ,ನನ್ನ ಅವಸಾನದೊಂದಿಗೆ ನಿಮ್ಮ ಅವಸಾನದ ಪೆಟ್ಟಿಗೆಗೆ ಅಂತಿಮವಾಗಿ ನೀವೇ ಮೊಳೆ ಹೊಡೆದುಕೊಳ್ಳಬೇಕಾಗುತ್ತದೆ ಎಚ್ಚರ.! ಕೊನೆಯದಾಗಿ ಒಂದು ಮಾತನ್ನು ಹೇಳಬೇಕಾದರೇ ನನ್ನಿಂದ ನೀವು.!ನಿಮ್ಮಿಂದ ನಾನಲ್ಲ ಕಟ್ಟೆಚ್ಚರ.!! ಈಗಲಾದರೂ ಎಚ್ಚರಗೊಂಡು ಬದಲಾಗಿರಿ.! ಬದಲಾವಣೆಗಾಗಿ ಬೆಂಬಲಿಸಿರಿ.!! ನಾನು ಸಹ್ಯಾದ್ರಿಯ ಪರ್ವತ ಶ್ರೇಣಿಗಳಲ್ಲಿ,ಪಶ್ಚಿಮ ಘಟ್ಟಗಳ
ತುತ್ತ ತುದಿಯ ಸಾಲಿನಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಭೀಮಾಶಂಕರ ಸುಕ್ಷೇತ್ರದ ಸಾನಿದ್ಯದ ಪಾವಿತ್ರ್ಯೆತೆಯಲ್ಲಿ ಹೇಗೆ ಉದ್ಭವಿಸಿ ಬಂದೆ.! ನನ್ನ ಉಗಮಕ್ಕೆ ಕಾರಣ ಪುರುಷ ಯಾರು.? ನಾನು ಯಾವ ಅವತಾರದ ಪ್ರತೀಕವಾಗಿ ಜನಿಸಿ ಬಂದೆ.! ಇವತ್ತು
ನನ್ನ ಪುಣ್ಯದ ಕತೆ ಚರಿತ್ರೆ-ಚಾರಿತ್ಯ ಎಲ್ಲವನ್ನು ಕೇಳಿರಿ….
ಅಯೋದ್ಯೆ ರಾಜ ಭೀಮಕನಿಂದ ಭೀಮಾ ಎಂಬ ಹೆಸರಾಯಿತು..!
ನಾನು ಭಾರತದ ಭೂತಾಯಿ ವಸುಂಧರೆಯ ಮೇಲೆ ಅವತರಣವಾಗಿ ನನ್ನ ಪ್ರಾಣ ಪ್ರತಿಷ್ಠಾಪನೆಯಾಗುವರೆಗೆ ನಾನು ಹುಟ್ಟಿದ್ದು ಐದು ಸಾವಿರ ವರ್ಷಗಳ ಹಿಂದೆಯೋ,ಹತ್ತು ಸಾವಿರ ವರ್ಷಗಳ ಹಿಂದೆಯೋ ಅಥವಾ ಸಹಸ್ರ, ಸಹಸ್ರ ವರ್ಷಗಳಾಚೆಯೋ ಸ್ಪಷ್ಟವಾಗಿ ನನಗೆ ಗೊತ್ತಿಲ್ಲ.! ನಿರ್ದಿಷ್ಟವಾಗಿ ನೆನಪಿಲ್ಲ.ಇಲ್ಲಿ ಎಲ್ಲವೂ ಅಸ್ಪಷ್ಟ.ನನ್ನನ್ನು ಭೂಲೋಕದ ಜನ ಭೀಮಾ-ಭೀಮೆ-ಭೀಮಾರಥಿ -ಭಾಗೀರಥಿ -ಚಂದ್ರಭಾಗ ಎಂಬ ಹೆಸರಿನ ನಾಮಕರಣ ಮಾಡಿದ್ದಾರೆ. ನಾನು ನದಿಯಾಗಿ ಹುಟ್ಟುವ ಮುನ್ನ ಇಲ್ಲಿ ಬಹಿರಂಗವಾಗಿ ಭೊರ್ಗೆರೆದು ಹರಿಯುವ ಮುನ್ನ ಕೈಲಾಸ ಪರ್ವತದಲ್ಲಿ ಶಂಭೋ ಶಂಕರನ ಅಂತರಂಗದಲ್ಲಿ ಗುಪ್ತ ಗಾಮಿನಿಯಾಗಿದ್ದೆ.
ಯಾವಾಗ ತ್ರಿಪುರಾಸುರನನ್ನು ಘನಘೋರ ಯುದ್ಧದಲ್ಲಿ ಪರಮಾತ್ಮ ಸಂಹರಿಸುತ್ತಾನೋ,ಆ ಭೀಕರ ಯುದ್ಧದ ಪರಿಣಾಮವಾಗಿ ಬಸವಳಿದು ಬಂದು ಪರಮಾತ್ಮ
ಸಹ್ಯಾದ್ರಿ ಶ್ರೇಣಿಗಳ ಕಾನನದಲ್ಲಿ ಬಂದು ಕುಳಿತನು,ಆಗ ಆತನನ್ನು ಕಾಣಲು ಅಯೋಧ್ಯೆಯ ರಾಜ ‘ಭೀಮಕ’ಬಂದು ಕಠಿಣ ತಪಸ್ಸು ಮಾಡಿದನು.ಆತನ ಭಕ್ತಿಗೆ ಸಹ್ಯಾದ್ರಿಯ ಶಂಕರ ಮೆಚ್ಚಿದ ಶಿವನು ಬಸವಳಿದ ಸಮಯದಲ್ಲಿ ಶಂಕರನ ತನುವಿನೊಳಗಿದ್ದೆ.ನಾನು ಶಿವನ ಶರೀರದ ಬೆವರಿನ ಮೂಲಕ ಉದ್ಭವಾಗಲ ಸಜ್ಜಾದಾಗ ರಾಜ ಭೀಮಕ ಸಾಕ್ಷಿ ಭೂತವಾಗಿ ನನ್ನ ಇರುವಿಕೆಯನ್ನು ನೋಡಿದನು.ಭೀಮಕನ ದೃಷ್ಠಿಗೆ ಬಿದ್ದ ನಾನು ನನ್ನನ್ನು ನದಿಯಾಗಿ ಹರಿಸುವಂತೆ ಶಿವನಿಗೆ ಕೇಳಿಕೊಂಡನು.ನಾನು ನದಿಯಾಗಿ ಹರಿದು ಮಾನವ ಕುಲಕೋಟಿಯನ್ನು ಸಕಲ ಜೀವರಾಶಿಗಳ ಪಾಲಿಗೆ ಜೀವನಾಡಿ ನದಿಯಾಗಿ ನನ್ನ ಬದುಕನ್ನು ಲೋಕಕ್ಕೆ ಸಮರ್ಪಣೆಯಾಗಲಿ ಎನ್ನುವ ಮಹತ್ವಾಕಾಂಕ್ಷೆಯ ಸದುದ್ದೇಶದಿಂದ ಶಿವನನ್ನು ಅಯೋಧ್ಯೆಯ ರಾಜ ಭೀಮಕ ದೀನನಾಗಿ ಬೇಡಿಕೊಂಡನು. ಭೀಮಕನ ಪರೋಪಕಾರ ಭಾವದ ಸಮಷ್ಟಿಯ ಪ್ರಜ್ಞೆಯ ಬಿನ್ನವತ್ತಳಿಕೆಯನ್ನು ಮನ್ನಿಸಿ ಜಟಾಜೂಟ ಹೊತ್ತ ಗಂಗಾಧರ ತಥಾಸ್ತು ಹೇಳಿದನು….
ಆಗ ಶುರುವಾಯಿತು ನೋಡಿ ನನ್ನ ನಗೆತ, ಜಿಗಿತ, ಪುಟಿತ, ರಭಸದಿಂದ ಹರಿಯುತ್ತ ಶರವೇಗದಲ್ಲಿ ಸಾಗಿದೆ. ದುರ್ಗಮದ ದಾರಿಯಲ್ಲಿ ಸಿಕ್ಕ ದೊಡ್ಡ,ದೊಡ್ಡ ಬೆಟ್ಟದ ಬಂಡೆಗಳ ಇಳಿ ಜಾರಿನಲ್ಲಿ ಸಾಗುತ ಒಮ್ಮೆಗೆ ಛಂಗನೆಯ ಚಿಮ್ಮುವಿಕೆಯ ರುದ್ರರಮಣೀಯ ನೋಟದ ಅಪರಮಿತ ಸೌಂದರ್ಯ ನೋಡುಗರ ಕಣ್ಮನ ಸೆಳೆಯುುವಂತಿತ್ತು.ಆಳವಾದ ಗುಳಿ ಬಿದ್ದ ನೆಲದಲ್ಲಿ ಸುಳಿಯಾಗಿ ಸುತ್ತಿ ಒಮ್ಮೆಗೆ ನಟರಾಜನ ನಾಟ್ಯ ಹೋಲುವಂತೆ ದಿಗ್ಗನೆ ಎದ್ದೇಳುತ್ತಿದ್ದ ನನ್ನ ಮನ ಮೋಹಕದ ದೃಶ್ಯ ರಮಣೀಯವಾಗಿತ್ತು.ನಾನು ತಿರುಗುಣಿಯ ದಾರಿಯಲ್ಲಿ ವಯ್ಯಾರದಿಂದ ಕುಣಿಯುತ್ತ ಬಳಕುತ್ತ ಸಾಗುತ್ತಿದ್ದೆ.ಹೀಗೆ ಶ್ರೇಣಿಗಳ ಉತ್ತುಂಗದ ಪ್ರದೇಶದಲ್ಲಿ ಹರಿಯುವಾಗ ಅಲ್ಲಿನ ತುತ್ತ ತುದಿಯಿಂದ ಧುಮ್ಮಿಕ್ಕುವ ಜಲಧಾರೆಯಾಗಿ,ಅಕ್ಕಪಕ್ಕದ ಪರಿಸರವನ್ನು ಕ್ಷಣಾರ್ಧದಲ್ಲಿ ಅಗಲವಾಗಿ ಅಪೋಷನ ತೆಗೆದುಕೊಂಡು ಸಾಗುವ ನನ್ನ ಪ್ರಳಯ ಭೀಕರ ನೋಟ ರಣ ಭೀಕರವಾಗಿತ್ತು.ಕೆಲವೊಮ್ಮೆ ಅಬ್ಬರ- ಉಬ್ಬುರ ಏರಿಳಿತ ಕಡಿಮೆಯಾಗಿ ಕಣ್ಣಿಗೆ ಶಾಂತತೆಯ ಭಾವ ತರುತ್ತಿತ್ತು. ಒಮ್ಮೊಮ್ಮೆ ಮಾತು ಕೇಳುವ ಮಗುವಿನಂತೆ ಮತ್ತೊಮ್ಮೆ ಪ್ರಶಾಂತವಾದ ಕಣ್ಣುಗಳಿಂದ ನೋಡಿದಾಗ ಯಾವುದೇ ಹಮ್ಮ ಬಿಮ್ಮುಗಳಿಲ್ಲದೇ ಹೃದಯ ವೈಶಾಲ್ಯತೆಯ ಪ್ರತೀಕವಾಗಿ ತುಂಬಿದ ಸರೋವರದಂತೆ ಕಾಣುತ್ತಿದ್ದೆ….
ನನ್ನ ‘ಭೀಮೋದ್ಭವ’ದ ಇನ್ನೊಂದು ಪುಣ್ಯ ಪ್ರಸಂಗದ ರೋಚಕ ಕತೆಯ ಸುಂದರ ವರ್ಣನೆಯಿದೆ.ಈ ಜಗದ ರಕ್ಷಕ ಜಗಧಿಶ್ವರನಾದ ಶಿವನು ಸಹ್ಯಾದ್ರಿಯ ಶೂರನಾಗಿ ಭೀಮಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ಕಾರಣಕ್ಕೂ ನನಗೆ ಈ ಹೆಸರು ಬಂದಿದೆ ಎಂದು ಭಾರತೀಯ ವೇದಾಂಗ ಪಂಡಿತರು ತಿಳಿಸುತ್ತಾರೆ. ನಾನು ಈ ವಿಷಯದಲ್ಲಿ ಆಗ ನವಜಾತ ಶಿಶುವಾಗಿದ್ದೆ.ಮತ್ತು ಇನ್ನೊಂದು ಮುಖ್ಯ ವಾದ ಸಾಂಪ್ರದಾಯಕವಾದ ಮಾತಿನಂತೆ ನದಿ ಮೂಲ,ಋಷಿ ಮೂಲ ಸ್ತ್ರೀ ಮೂಲ ಕೇಳಬಾರದು ಎನ್ನುತ್ತಾರೆ. ಆದರೂ ನನ್ನ ಕಥಾಸಾರದ ಉಲ್ಲೇಖವನ್ನು ನಾನು ನೀಡುತ್ತ ಮತ್ತಷ್ಟು ಹಂಚುತ್ತ ಹಗುರವಾಗುತ್ತೇನೆ.ಕೇಳುವ ಪುಣ್ಯ ನಿಮ್ಮದಾಗಲಿ ಹೇಳಿದ ಸೌಭಾಗ್ಯ ನನ್ನದಾಗಲಿ.! ಸನಾತನ ಕಾಲದಲ್ಲಿ ಋಷಿಗಳಾಗಿದ್ದ ವೇದವ್ಯಾಸರು ರಚಿಸಿದ ಹದಿನೆಂಟು ಪುರಾಣಗಳ ಪೈಕಿ ಮತ್ಸ್ಯ ಪುರಾಣ,ಬ್ರಹ್ಮ ಮತ್ತು ವಾಮನ ಪುರಾಣಗಳಲ್ಲಿ ಮತ್ತು ವಿಶೇಷವಾಗಿ ಮಹಾಭಾರತದ ಕಾವ್ಯಗಳಲ್ಲಿ ಕೂಡಾ ನನ್ನ ಹೆಸರು ಉಲ್ಲೇಖವಾಗುತ್ತ ಬಂದಿತು.ಭೀಮೆ ಎಂಬುದು ಪಾರ್ವತಿ ದೇವಿಯ ಇನ್ನೊಂದು ಹೆಸರಾಗಿದೆ ಎಂದು ಭೂಲೋಕದ ಜನರಲ್ಲಿ ಬಹು ದೊಡ್ಡ ನಂಬಿಕೆಯಾಗಿದೆ.ಮತ್ತು ನಾನು ಕೂಡಾ ಆ ನಂಬುಗೆಗೆ ಸಂಪೂರ್ಣ ಅರ್ಹಳಾಗಿದ್ದೇನೆ….
ಇನ್ನೂ ಭೌಗೋಳಿಕ ನಕ್ಷೆಯ ಸಂಶೋಧಕರ ಪ್ರಕಾರ ನಾನು ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಖೇಡ ತಾಲೂಕಿನ ದಟ್ಟ ಕಾನನದ ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಭೀಮಾಶಂಕರ ಜ್ಯೊತಿರ್ಲಿಂಗದ ಮುಂದುಗಡೆಯ ಪವಿತ್ರ ಜಲ ಕುಂಡದಿಂದ ಅವತರಣ ಹೊಂದಿರುವೆ ಎನ್ನಲಾಗಿದೆ. ಹೀಗೆ ಅನೇಕ ರೀತಿಯ ಪೌರಾಣಿಕ ಐತಿಹಾಸಿಕವಾದ ಭೌಗೋಳಿಕವಾದ ದಾಖಲೆಯನ್ನು ನಿಮಗೆ ತಿಳಿಸುತ್ತೇನೆ. ನಾನು ಈ ನಾಡಿನಲ್ಲಿ ಶತ ಶತಮಾನಗಳ ಕಾಲದಿಂದ ತಲೆ ತಲಾಂತರದ ಕಾಲದಿಂದ ಹರಿಯುತ್ತ ಭವ್ಯತೆಯ ಭೂಮಿಯಲಿ ದಿವ್ಯತೆಯ ದಾರಿಯಲ್ಲಿ ಸಾಗುತ್ತಿರುವೆ…..
ಭಾಗ-02 ರಲ್ಲಿ
ದಿವ್ಯತೆಯ ದಾರಿಯೇ ಪುಣ್ಯಾರಣ್ಯವಾಯಿತು.!
ನಾನು ಸಾಗಿದ ನೆಲ ಸುಕ್ಷೇತ್ರವಾಯಿತು…!!
ರೋಚಕತೆಯ ಸರಣಿಯಾಗಿ ಮುಂದವರೆಯುವದು ಕಾಯಿರಿ..
✍️ದಶರಥ ಕೋರಿ ಸಾಹಿತಿ, ಶಿಕ್ಷಕರು ಇಂಡಿ
- ಆಕರಗಳು: ಕನ್ನಡ ವಿಶ್ವಕೋಶ
ಖಲೀಲ ಗಿಬ್ರಾನರ ಕವನ
ಶಿ, ರಾ,ಸುಲಾಖೆಯವರ ಕವನ
ಭಾವಚಿತ್ರಗಳು ಮತ್ತು ಮಾಹಿತಿ ಕೃಪೆ: ವಿಕಿಪೀಡಿಯ,
ಗೂಗಲ್ ಇಮೇಜ್ - ಪ್ರೇರಣೆ ಪ್ರೋತ್ಸಾಹ: ಶ್ರೀ ಕಿಶೋರ ಕಾಸಾರ ಸಾಹಿತಿಗಳು ಮಣೂರ. ಶ್ರೀ ಶಂಕರ ಜಮಾದಾರ ವರದಿಗಾರರು ಇಂಡಿ.