ರಾಯಚೂರು: ದೇವದುರ್ಗ ತಾಲೂಕಿನ ಕೃಷ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಒತ್ತಾಯಿಸಿದ್ದಾರೆ.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೇವದುರ್ಗ ತಾಲೂಕಿನ ಕೃಷ್ಣಾ ನದಿಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ ಮಾಡಿ, ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರೀ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನದಿಯಲ್ಲಿ ರಾತ್ರಿ ಗಣಿಗಾರಿಕೆ ಸಾಗಾಣಿಕೆ ನಿಷೇಧವಿದ್ದರೂ, ನಿರಂತರ ನದಿಯಿಂದ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ.
ಸ್ಟಾಕ್ ಯಾರ್ಡ್‌ಗಳಲ್ಲಿ ೧೩ ಟನ್ ರಾಯಲ್ಟಿ ನೀಡಿ, ೧೩ ಟನ್ ಮರಳು ತುಂಬಿಸುವ ಬದಲು ೩೫ ಟನ್ ಹೆಚ್ಚುವರಿ ಓವರ್ ಲೋಡ್ ವ್ಹೇ ಬ್ರಿಡ್ಜ್ ಕಾಟಾ ಮಾಡದೇ, ಅಕ್ರಮ ಮರಳು ದಂಧೆ ಸಾಗಾಣಿಕೆ ಮಾಡುತ್ತಿದ್ದಾರೆ. ಟೆಂಡರ್ ನಿಯಮ ಪ್ರಕಾರ ನದಿಯಲ್ಲಿ ಬೆಳಿಗ್ಗೆ ೬ ಘಂಟೆಯಿಂದ ಸಾಯಂಕಾಲ ೬ ಘಂಟೆವರೆಗೆ ಗಣಿಗಾರಿಕೆ ಮಾಡಲು ನಿಯಮವಿದೆ. ಆದರೆ, ಗುತ್ತೇದಾರರು ಇಡೀ ರಾತ್ರಿ ಪೂರ್ತಿ ಅಕ್ರಮ ಗಣಿಗಾರಿಕೆ ಮಾಡಿ, ಸಾಗಾಣಿಕೆ ಮಾಡುತ್ತಿದ್ದಾರೆ.
ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾರಾಯಣಪೂರು ಬಲದಂಡೆ ಕಾಲುವೆ ನವೀಕರಣ ಕಾಮಗಾರಿ ಭರದಿಂದ ನಡೆದಿದ್ದು, ಗುತ್ತಿಗೆದಾರರು ರಾಯಲ್ಟಿ ಇಲ್ಲದಿದ್ದರೂ, ಲಕ್ಷಾಂತರ ಮೆಟ್ರಿಕ್ ಟನ್ ಅಕ್ರಮ ಮರಳು ಕಾಮಗಾರಿ ಮಾಡಿ, ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕೆಂದರು. ಕೂಡಲೇ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವವ ವಿರುದ್ಧ ಕ್ರಮ ಕೈಗೊಂಡು ಸರ್ಕಾರಕ್ಕೆ ಆಗುವ ನಷ್ಟ ತಡೆಗಟ್ಟಬೇಕೆಂದು ಒತ್ತಾಯಿಸಿದರು.