ತೊಳಸಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಸರಸ್ವತಿ ಪೂಜೆ ಮತ್ತು ಬೀಳ್ಕೊಡುಗೆ ಸಮಾರಂಭ
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು | ಸರಕಾರಿ ಶಾಲೆಯಲ್ಲಿ ಕುಂಭಮೇಳದೊಂದಿಗೆ ವಾರ್ಷಿಕೋತ್ಸವ..! ಸರ್ವತೋಮುಖ ಬೆಳವಣಿಗೆಗೆ ಕೈ ಜೋಡಿಸಿ
ಹನೂರು: ಶ್ರೀ ಮಲೈ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ದಟ್ಟ ಕಾನನದ ಮಧ್ಯೆ ಇರುವ ಗುಡ್ಡಗಾಡು ಪ್ರದೇಶದಲ್ಲಿರುವ ತೊಳಸಿಕೆರೆ ಸರ್ಕಾರಿ ಶಾಲೆಯಲ್ಲಿ ವಿಜೃಂಭಣೆಯ ಶಾಲಾ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಜೆಯ ಸಮಯದ ಕಾರ್ಯಕ್ರಮದಲ್ಲಿ ಇಡೀ ಊರು ಹಬ್ಬದ ವಾತಾವರಣದಲ್ಲಿ ಮಿಂದೆದ್ದಿತು. ಮೊದಲಿಗೆ ಅತಿಥಿಗಳಿಗೆ ಪೂರ್ಣ ಕುಂಭ ಸ್ವಾಗತಿಸುವ ಮೂಲಕ ಅಲಂಕೃತಗೊಂಡಿದ್ದ ಮಂಟಪದಲ್ಲಿ ವಿದ್ಯಾದೇವತೆ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿ ನಂತರ ಬೆಂಗಳೂರಿನ ವಂಡರ್ಲಾ ಸಂಸ್ಥೆಯ ಸಿ ಎಸ್ ಆರ್ ನಿಧಿಯಿಂದ ಶಾಲೆಯ ಒಂದು ತರಗತಿ ಕೊಠಡಿಯ ನವೀಕರಣಗೊಂಡಿದ್ದ ಕಾಮಗಾರಿಯ ಉದ್ಘಾಟನೆ ಹಾಗೂ ಶಾಲೆಗೆ ಶುದ್ಧ ಕುಡಿಯುವ ನೀರಿನ ಆರ್ ಒ ಘಟಕದ ಉದ್ಘಾಟನೆಯನ್ನು ಹಾರೋಹಳ್ಳಿಯ ಪ್ರಗತಿ ಶಾಲೆಯ ಸಂಸ್ಥಾಪಕರಾದ ಶ್ರೀಯುತ ಶಿವನಂಜಪ್ಪ ರವರು ನೆರವೇರಿಸಿದರು.
ಶ್ರೀ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯ ವತಿಯಿಂದ ಶಾಲೆಯ ಶೌಚಾಲಯ ನವೀಕರಣ ಕಾಮಗಾರಿ ಮತ್ತು ಕೈ ತೊಳೆಯುವ ಘಟಕದ ಉದ್ಘಾಟನೆಯನ್ನು ಸಹಾ ನೆರವೇರಿಸಲಾಯಿತು.
ವೇದಿಕೆಯ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಯುತ ಶಿವನಂಜಪ್ಪ ಸರ್ ರವರು ಮಕ್ಕಳ ಉಜ್ವಲ ಭವಿಷ್ಯದ ಉದ್ದೇಶಕ್ಕಾಗಿ ಶಿಕ್ಷಣ ಅವಶ್ಯಕವಾಗಿದೆ. ಗುಡ್ಡಗಾಡು ಪ್ರದೇಶವಾದರೂ ತೊಳಸಿಕೆರೆ ಶಾಲೆಯು ಪೋಷಕರು ಮತ್ತು ಮಕ್ಕಳನ್ನು ಸೆಳೆಯುವಲ್ಲಿ ಸಫಲವಾಗಿದೆ. ಇಂತಹ ಅವಕಾಶಗಳನ್ನು ಬಳಸಿಕೊಂಡು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಶ್ರೀಮತಿ ಡಾ” ವೀಣಾ ಮತ್ತು ಅವರ ಪತಿ ಶ್ರೀ ಶ್ರೀಧರ್(ನಿವೃತ್ತ ಇಂಜಿನಿಯರ್, ನಿಮ್ಹಾನ್ಸ್ ಸಂಸ್ಥೆ,ಬೆಂಗಳೂರು) ಇವರು ಏಳನೇ ತರಗತಿಯ ಮಕ್ಕಳಿಗೆ ಆಕರ್ಷಕ ಪುಸ್ತಕಗಳ ಉಡುಗೊರೆಯನ್ನು ವಿತರಿಸಿದರು.
ಮಕ್ಕಳ ದಿನಾಚರಣೆಯ ದಿನದಂದು ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಆಟೋಟ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿವೇಕಾನಂದ ಸಂಸ್ಥೆಯ ಶ್ರೀ ಯಶವಂತ ಹಾಗೂ ತೀರ್ಥ ಕುಮಾರ್ ರವರು ನೀಡಿದರು.
ಕಾರ್ಯಕ್ರಮದ ಹಿಂದಿನ ದಿನ ಪೋಷಕರು ಮತ್ತು ಎಸ್ ಡಿ ಎಂ ಸಿ ಸಮಿತಿ ಸದಸ್ಯರಿಗೆ ಏರ್ಪಡಿಸಿದ್ದ ಆಟೋಟ ಹಾಗೂ ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಾದ ಪೋಷಕರಿಗೆ ಡಾಕ್ಟರ್ ಸೌಭಾಗ್ಯ (ಎನ್ ಜಿ ಒ ಸಂಸ್ಥೆ, ಬೆಂಗಳೂರು) ಬಹುಮಾನಗಳನ್ನು ಪ್ರಾಯೋಜಿಸಿ ವಿತರಿಸಿದರು.
ಕಾರ್ಯಕ್ರಮದಲ್ಲ ಹಾಜರಾಗಿದ್ದ ಎಲ್ಲಾ ಗ್ರಾಮಸ್ಥರು, ಪೋಷಕರು ಹಾಗೂ ಮಕ್ಕಳು ಮತ್ತು ಅತಿಥಿಗಳಿಗೆ ಬೆಂಗಳೂರು ಮೂಲದ ಶ್ರೀ ಯೋಗೀಶ್ ರವರು ಊಟದ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿಸಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕೈ ಜೋಡಿಸಿದ ಎಲ್ಲಾ ದಾನಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರತಿನಿಧಿಗಳು ಮತ್ತು ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಾದ ಏಳನೇ ತರಗತಿಯ ಹೇಮಲತಾ ಹಾಗೂ ಗುರುಕಿರಣ್ ರವರನ್ನು ಸನ್ಮಾನಿಸಲಾಯಿತು.
ನಂತರ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಇಷ್ಟಲ್ಲಾ ಕಾರ್ಯಕ್ರಮಗಳಿಗೆ ಶಾಲೆಯ ಶಿಕ್ಷಕರೊಂದಿಗೆ ಎಸ್ ಡಿ ಎಂ ಸಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಕೈ ಜೋಡಿಸಿ ಸಾಥ್ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಾರೋಹಳ್ಳಿ ತಾಲ್ಲೂಕಿನ ಯುವ ರಾಜಕೀಯ ಮುಖಂಡರಾದ ಶ್ರೀ ಮಂಜುನಾಥ್ ರವರು, ಅರಣ್ಯ ಇಲಾಖೆಯ ಪಾಲಾರ್ ಬೀಟ್ ನ ಡಿ ಆರ್ ಎಫ್ ಒ ಗಳಾದ ಶ್ರೀ ಮಲ್ಲಿಕಾರ್ಜುನ ಹಾಗೂ ವೆಂಕಟೇಶ ರವರು, ಚನ್ನಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವ ಸಹಾಯ ಸಂಘದ ಶ್ರೀ ಲೋಕೇಶ್, ಶ್ರೀ ಹರಿದಾಸ್ (ನಿವೃತ್ತ ಶಿಕ್ಷಕರು), ಶ್ರೀ ಕುಮಾರ ಸ್ವಾಮಿರವರು, ಐ ಸಿ ಐ ಸಿ ಐ ಫೌಂಡೇಶನ್ ನ ಶ್ರೀ ವೆಂಕಟಾಚಲ, ಎಸ್ ಡಿ ಎಂ ಸಿ ಸಮಿತಿಯ ಅಧ್ಯಕ್ಷರಾದ ಶ್ರೀ ಮಾದೇಶ, ಶಿಕ್ಷಕರಾದ ಶ್ರೀ ಮಹೇಂದ್ರ, ಅತಿಥಿ ಶಿಕ್ಷಕರು, ಊರಿ ದೊಡ್ಡ ಗೌಡರಾದ ಶ್ರೀ ಹುಚ್ಚಯ್ಯ ತಂಬಡಿ,ಶ್ರೀ ಕೆಂಪೇಗೌಡ ಹಾಗೂ ಅಪಾರ ಪ್ರಮಾಣದಲ್ಲಿ ಪೋಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು.