ಮುದ್ದೇಬಿಹಾಳ:ಕೃಷ್ಣಾ ನದಿ ದಂಡೆಯಲ್ಲಿ ಫಲವತ್ತಾದ ಕಪ್ಪು ಎರೆ, ಮೆಕ್ಕಲು ಮಣ್ಣಿನ ಅಕ್ರಮ ಸಾಗಾಟ ತಡೆಯುವಲ್ಲಿ ವಿಫಲರಾಗಿರುವ ಅಧಿಕಾರಿಗಳ ನಡವಳಿಕೆ ಖಂಡಿಸಿ ಮೂರು ಮಂಗಗಳ ಫ್ಲೆಕ್ಸ್ನೊಂದಿಗೆ ಕಣ್ಣು, ಬಾಯಿ, ಕಿವಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಯುವಜನ ಸೇನೆ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಮಂಗಳವಾರ ಇಲ್ಲಿನ ತಾಲೂಕು ಆಡಳಿತ ಸೌಧ ಆವರಣದಲ್ಲಿ ವಿನೂತನ ಪ್ರತಿಭಟನೆ ನಡೆಸಿ ತಹಶೀಲ್ದಾರ್, ಪೊಲೀಸ್, ಕೆಬಿಜೆಎನ್ನೆಲ್ ಅಧಿಕಾರಿಗಳ ನಿರ್ಲಕ್ಷ್ಯಯಕ್ ವಿಡಂಬನಾ ಶೈಲಿಯಲ್ಲಿ ಚಾಟಿ ಬೀಸಿದರು.
ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ, ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ ಅವರು ತಂಗಡಗಿಯಿಂದ ನಾರಾಯಣಪುರ ಡ್ಯಾಂ ಹಿಂಭಾಗದ ಅಯ್ಯನಗುಡಿ ಗ್ರಾಮದವರೆಗೂ ಕೃಷ್ಣಾ ನದಿ ದಂಡೆಯಲ್ಲಿರುವ ಫಲವತ್ತಾದ ಕಪ್ಪು ಮಣ್ಣನ್ನು ರೈತರ ಹೆಸರಿನಲ್ಲಿ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ರಾಜಸ್ವ ನಷ್ಟವಾಗುತ್ತಿರುವುದು ಮಾತ್ರವಲ್ಲದೆ ನದಿ ದಂಡೆಯಲ್ಲಿ ಆಳವಾದ ತಗ್ಗು ಸೃಷ್ಟಿಯಾಗಿ ಭವಿಷ್ಯದಲ್ಲಿ ಜನ, ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ. ಅಕ್ರಮ ತಡೆಯುವಂತೆ ಮನವಿ ಸಲ್ಲಿಸಿದರೂ, ಲೋಕಾಯುಕ್ತರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋದರೂ ತಹಸೀಲ್ದಾರ್, ಪೊಲೀಸ್, ಕೆಬಿಜೆಎನ್ನೆಲ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಕಾನೂನು ಹೋರಾಟದ ಜೊತೆಗೆ ಸರ್ಕಾರದ ಮಟ್ಟದಲ್ಲೂ ಮನವಿ ಸಲ್ಲಿಸಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.
ಯುವಜನ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಅವರು ಮಾತನಾಡಿ, ತಿಂಗಳ ಹಿಂದಿನಿಂದಲೂ ಈ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದರೂ ಅನುಮತಿ ಇಲ್ಲದೆ ಪಲವತ್ತಾದ ಮಣ್ಣನ್ನು ಟ್ರಿಪ್‌ಗೆ ೫೦೦೦ ರೂನಂತೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಈ ಬಗ್ಗೆ ಗಮನ ಸೆಳೆದರೆ ತಹಸೀಲ್ದಾರ್ ಅವರು ಇದು ತನಗೆ ಸಂಬಂಧಿಸಿದ್ದಲ್ಲ ಕೆಬಿಜೆಎನ್ನೆಲ್‌ಗೆ ಸಂಬಂಧಿಸಿದ್ದು ಎನ್ನುತ್ತಾರೆ. ಪೊಲೀಸರು ತಹಸೀಲ್ದಾರ್ ಕಂಪ್ಲೆಂಟ್ ಕೊಟ್ಟರೆ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳುತ್ತಾರೆ. ಕೆಬಿಜೆಎನ್ನೆಲ್‌ನವರು ತಮಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಇದರ ಹಿಂದೆ ಪ್ರಭಾವಿಗಳ ಕೈ ಕೆಲಸ ಮಾಡುತ್ತಿದೆ. ಅಕ್ರಮ ತಡೆಗಟ್ಟಬೇಕಾದ ಪ್ರಮುಖ ಇಲಾಖೆಗಳ ಅಧಿಕಾರಿಗಳೇ ಕೈಚಲ್ಲಿ ಸುಮ್ಮನಾದರೆ ಅಕ್ರಮ ನಡೆಸುವವರಿಗೆ ಸಪೋರ್ಟ ಮಾಡಿದಂತಾಗೊಲ್ಲವೇ. ಸ್ಥಳಕ್ಕೆ ಭೇಟಿ ನೀಡಿ ಎಂದರೆ ತಹಸೀಲ್ದಾರ್, ಪಿಎಸೈ ಅವರು ಸ್ಪಂಧಿಸಿಲ್ಲ. ೨೦ ದಿನಗಳಾದರೂ ಹೋರಾಟಗಾರರಿಗೆ ಯಾವ ರೀತಿ ಸ್ಪಂಧಿಸಬೇಕೆನ್ನುವ ಮನೋಭಾವ ಇಲ್ಲದಿರುವುದು ಸಹಿಸಲಸಾಧ್ಯ. ರೈತಸಂಘದವರು ಯಾರದೋ ಮಾತು ಕೇಳಿ ಸೋಮವಾರ ಹೋರಾಟ ನಡೆಸಿದ್ದು ಅವರ ದಾರಿ ತಪ್ಪಿಸಿದಂತಾಗಿದೆ ಎಂದು ಕಿಡಿಕಾರಿದರು.
ಶಿವು ಕನ್ನೊಳ್ಳಿ ಅವರು ಮಾತನಾಡಿ ಮಣ್ಣುಮಾಫಿಯಾ ವಿರುದ್ಧ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇನೆ.
ಸ್ವಯಂಘೋಷಿತ ಚಿಂತಕರು, ಕಲಾವಿದರು ಹೋರಾಟ ನಡೆಸಿ ಫಲವತ್ತಾದ ಕೃಷಿಗೆ ಉಪಯುಕ್ತ ಮಣ್ಣು ಎನ್ನುತ್ತಿದ್ದಾರೆ. ಊರ ಮುಂಭಾಗದಲ್ಲಿ ಕೊರಿ, ತೆಗ್ಗು ಮಾಡುವುದರಿಂದ ಸ್ಥಳೀಯರಿಗೆ, ದನಕರುಗಳಿಗೆ ತೊಂದರೆ ಆಗುತ್ತದೆ. ಮೊಸಳೆಗಳು ಬಂದು ವಾಸಸ್ಥಲವಾಗಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹೊಳಿದಂಡಿ ರೈತರು ಜಮೀನು ಕಳೆದುಕೊಂಡು ತೊಂದರೆಗೀಡಾಗಿದ್ದು ಈ ರೀತಿ ಮಣ್ಣು ಸಾಗಿಸಿದರೆ ಅಂಥ ರೈತರ ಬಾಳು ಏನಾಗಬೇಕು. ಎಲ್ಲೆಂದರಲ್ಲಿ ತಗ್ಗು ತೋಡಿ ಮಣ್ಣು ಸಾಗಿಸಿ ಜೀವನ ದುರಂತವಾಗಿಸಿದ್ದಾರೆ. ಗ್ರಾಮಗಳ ಪರಿಸ್ಥಿತಿ ಅರಿವಿಲ್ಲದೆ ರೈತರ ಹೆಸರಿನಲ್ಲಿ ಹೋರಾಟ ಮಾಡಿದ್ದು ಖಂಡನೀಯ. ರೈತರಿಗೆ ನಿಜವಾಗಿಯೂ ಮಣ್ಣು ಬೇಕಾಗಿದ್ದರೆ ನದಿಯಲ್ಲಿರುವ ಮಣ್ಣನ್ನು ಬಳಸಿ. ಇದನ್ನು ಮಾಡದೆ ನದಿ ದಂಡೆಯಲ್ಲಿರುವ ಮಣ್ಣು ಸಾಗಿಸುವುದು, ಮಣ್ಣಿನ ಹೆಸರಿನಲ್ಲಿ ಗರಸು, ಮರಳು ಅಕ್ರಮವಾಗಿ ಸಾಗಿಸುವುದು ಸಲ್ಲದು. ತಹಸೀಲ್ದಾರ್ ಅವರು ಇಂಥ ಅನಾಚಾರಗಳನ್ನು ಕೂಡಲೇ ಕ್ರಿಯಾಶೀಲರಾಗಿ ಪೊಲೀಸರಿಗೆ ತಿಳಿಸಿ ತಡೆಗಟ್ಟಬೇಕು. ಇದನ್ನು ಬಿಟ್ಟು ಯಾರದೋ ಕೈಗೊಂಬೆಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಸ್ಥಳ ಪರಿಶೀಲಿಸಿ ವಾಸ್ತವ ತಿಳಿದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ ಎಂ.ಎ.ಬಾಗೇವಾಡಿ ಅವರು ಧರಣಿ ಸ್ಥಳಕ್ಕೆ ಆಗಮಿಸಿ ತಹಸೀಲ್ದಾರ್ ಅವರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಪತ್ರ ಬರೆದು ನಿಯಮಾನುಸಾರ ಕ್ರಮ ಜರುಗಿಸುವಂತೆ ಕೋರಿ ಮಾ.೧೭ರಂದು ಬರೆದ ಪತ್ರವನ್ನು ಹೋರಾಟಗಾರರಿಗೆ ಸಲ್ಲಿಸಿದರು.
ಪ್ರಮುಖರಾದ ಪ್ರಕಾಶ ಚಲವಾದಿ ಸರೂರ, ಚಂದ್ರು ಹಡಪದ, ಅಜಯಕುಮಾರ ಕೋಟೆಖಾನ, ಕಾಶಿಮಸಾಬ ಗಂಗೂರ, ಬಾಬಾ ತಗ್ಗಿನಮನಿ, ಮಾಂತೇಶ ಚಲವಾದಿ, ಗಂಗು ಗಂಗನಗೌಡರ, ರಾಜು ಮಸಿಬಿನಾಳ, ಶಿವು ವನಕಿಹಾಳ, ಅಶೋಕ ನಿಡಗುಂದಿ, ಸಂಗಪ್ಪ ಪೊಲೀಸ್‌ಪಾಟೀಲ, ಅಯ್ಯಪ್ಪ ತಂಗಡಗಿ, ಶಿವು ಮುಳವಾಡ,ಹುಲಗಪ್ಪ ಮಾದರ, ಸೇರಿದಂತೆ ಪಾಲ್ಗೊಂಡಿದ್ದರು.
ಮುದ್ದೇಬಿಹಾಳ: ಅಕ್ರಮವಾಗಿ ಕಪ್ಪು ಎರೆ ಮಣ್ಣು ಸಾಗಾಟ ತಡೆಯುವಲ್ಲಿ ವಿಫರಾಗಿರುವ ಅಧಿಕಾರಿಗಳ ವಿರುದ್ಧ ಧರಣಿ ಸತ್ಯಾಗ್ರಹದಲ್ಲಿ ಸಂಗಯ್ಯ ಸಾರಂಗಮಠ ಮಾತನಾಡಿದರು. ಶಿವಾನಂದ ವಾಲಿ, ಪ್ರಕಾಶ ಚಲವಾದಿ, ಆನಂದ ಮುದೂರ ಇನ್ನಿತರರು ಇದ್ದಾರೆ.