ಮುದ್ದೇಬಿಹಾಳ | ಗ್ರಾ.ಪಂ ಎದುರು ಪ್ರತಿಭಟನೆ, ಕಾರಣವೇನು..?
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ವಾಟರ್‌ಮನ್‌ಗಳ ಕಾನೂನು ಬಾಹಿರ ನೇಮಕ ವಿರೋಧಿಸಿ, ಜಿಪಂ ಸಿಇಓ ಅವರ ಆದೇಶದಂತೆ ಅವರನ್ನು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿ ದಲಿತ, ಪ್ರಗತಿಪರ, ರೈತಪರ ಸಂಘಟನೆಗಳ ಮುಖಂಡರು, ಸದಸ್ಯರು ಕುಂಟೋಜಿ ಗ್ರಾಪಂ ಕಚೇರಿ ಎದುರು ಸೋಮವಾರದಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಗ್ರಾಪಂ ಅಧ್ಯಕ್ಷ ಜಗದೀಶ ಲಮಾಣಿ, ಪಿಡಿಓ ಪಿ.ಎಸ್.ನಾಯ್ಕೋಡಿ ಅವರ ಲಿಖಿತ ಭರವಸೆ ಪತ್ರ ನೀಡಿದ ಹಿನ್ನೆಲೆ ಗುರುವಾರ ಮುಕ್ತಾಯಗೊಂಡಿತು. ಧರಣಿ ನಿರತರ ಮುಖಂಡರಾದ ಬಸವರಾಜ ಪೂಜಾರಿ ಸಿದ್ದಾಪುರ, ವಜಾ ಬೇಡಿಕೆಯ ಮೂಲ ಅರ್ಜಿದಾರ ರಾಮಣ್ಣ ಕವಡಿಮಟ್ಟಿ ಅವರು, ನಕಲಿ ದಾಖಲೆ ಸೃಷ್ಟಿಸಿ ಮೂವರು ವಾಟರ್‌ಮನ್‌ಗಳನ್ನು ಪಂಚಾಯಿತಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇದನ್ನು ಪ್ರಶ್ನಿಸಿ ದಾಖಲೆ ಸಮೇತ ಜಿಪಂ ಸಿಇಓ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು. ದಾಖಲೆ ಪರಿಶೀಲಿಸಿದ ಸಿಇಓ ಅವರು ಮೂವರೂ ವಾಟರ್‌ಮನ್‌ಗಳನ್ನು ವಜಾಗೊಳಿಸಲು ಕ್ರಮ ಜರುಗಿಸುವಂತೆ ತಾಪಂ ಇಓ ನಿಂಗಪ್ಪ ಮಸಳಿ ಅವರಿಗೆ ೮-೧-೨೦೨೫ರಂದು ಆದೇಶ ಮಾಡಿದ್ದರು. ತಾಪಂ ಇಓ ಅವರು ಪಂಚಾಯಿತಿ ಪಿಡಿಓಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದರೂ ಪಾಲಿಸಿರಲಿಲ್ಲ. ಈ ಕುರಿತ ವರದಿಯನ್ನು ತಾಪಂ ಇಓ ಅವರು ಜಿಪಂ ಸಿಇಓ ಅವರಿಗೆ ಸಲ್ಲಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನರಿತ ಪಿಡಿಓ, ಗ್ರಾಪಂ ಅಧ್ಯಕ್ಷರು ಪಂಚಾಯಿತಿ ಕಾಯ್ದೆ ಪ್ರಕಾರ ವಾಟರ್‌ಮನ್ ವಜಾಗೊಳಿಸುವ ಅಧಿಕಾರಿ ಗ್ರಾಪಂ ಆಡಳಿತ ಮಂಡಳಿಗೆ ಮಾತ್ರ ಇರುವುದರಿಂದ ಮಾ.೨೧ರಂದು ಗ್ರಾಪಂ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದಿದ್ದೇವೆ. ಆ ಸಭೆಯಲ್ಲಿ ಮೂವರೂ ವಾಟರ್‌ಮನ್‌ಗಳ ವಜಾ ಕುರಿತು ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. ಚರ್ಚೆಯ ನಂತರ ಕೈಕೊಳ್ಳುವ ನಿರ್ಣಯವನ್ನು ಹೋರಾಟಗಾರರಿಗೆ ಲಿಖಿತವಾಗಿ ತಲುಪಿಸಲಾಗುತ್ತದೆ. ಆದ್ಧರಿಂದ ಧರಣಿ ಕೈಬಿಡುವಂತೆ ಲಿಖಿತ ಪತ್ರ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂಧಿಸಿ ಧರಣಿ ಕೈಬಿಡುತ್ತಿದ್ದೇವೆ. ಸಾಮಾನ್ಯ ಸಭೆಯಲ್ಲಿ ನ್ಯಾಯದ ಪರ ತೀರ್ಮಾನ ಬರದೇ ಹೋದಲ್ಲಿ ಮತ್ತೇ ಹೊರಾಟ ತೀವ್ರಗೊಳಿಸುತ್ತೇವೆ ಎಂದು ತಿಳಿಸಿದರು. ವಿವಿಧ ಸಂಘಟನೆಗಳ ಪ್ರಮುಖರು, ಧರಣಿ ನಿರತರು, ಗ್ರಾಪಂ ಸಿಬ್ಬಂದಿಗಳು, ಗ್ರಾಪಂ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.
ಮುದ್ದೇಬಿಹಾಳ: ಕುಂಟೋಜಿ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸುತ್ತಿದ್ದ ದಲಿತ, ಪ್ರಗತಿಪರ, ರೈತಪರ ಸಂಘಟನೆಗಳ ಮುಖಂಡರಿಗೆ ಪಿಡಿಓ, ಗ್ರಾಪಂ ಅಧ್ಯಕ್ಷರು ಲಿಖಿತ ಭರವಸೆ ಪತ್ರ ನೀಡಿ ಧರಣಿ ಮುಕ್ತಾಯಗೊಳಿಸಿದರು.