ವಿಜ್ಞಾನ ಮನುಷ್ಯ ಜೀವನದ ಅವಿಭಾಜ್ಯ ಅಂಗ-ಸಂತೋಷ ಬಂಡೆ
ಇಂಡಿ: ವಿಜ್ಞಾನವು ಮನುಷ್ಯನ ಜೀವನದ ಅವಿಭಾಜ್ಯ ಅಂಗ. ದಿನನಿತ್ಯದ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ನಮ್ಮ ಸಮಾಜ ಮತ್ತು ಆರ್ಥಿಕತೆಯ ಅಭಿವೃದ್ಧಿಗೆ ವಿಜ್ಞಾನ ಅತ್ಯಗತ್ಯ. ಸಮಾಜದಲ್ಲಿ ಎದುರಾಗುವ ಸಮಸ್ಯೆಗೆ ವಿಜ್ಞಾನದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ವಿಜ್ಞಾನ ದಿನವು ನಮ್ಮ ಜಗತ್ತನ್ನು ರೂಪಿಸುವಲ್ಲಿ ವಿಜ್ಞಾನದ ಪಾತ್ರವನ್ನು ನೆನಪಿಸುತ್ತದೆ. ಇದು ನಮ್ಮ ಹಿಂದಿನ, ವರ್ತಮಾನ ಮತ್ತು ಭವಿಷ್ಯದ ವೈಜ್ಞಾನಿಕ ಸಾಧನೆಗಳ ಆಚರಣೆಯಾಗಿದೆ. ವಿಜ್ಞಾನಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ ವಿಜ್ಞಾನಿಗಳು ಮತ್ತು ನಾವೀನ್ಯಕಾರರ ಕಾರ್ಯವನ್ನು ಗುರುತಿಸಲು ಇದೊಂದು ಅವಕಾಶವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆ ಮೂಲಕ ಅಂಧಕಾರ ತೊಡೆದು ಹಾಕಬೇಕು.
ಹವಾಮಾನ ಬದಲಾವಣೆಯಿಂದ ಹಿಡಿದು ಇಂದು ನಮ್ಮ ಜಗತ್ತು ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಪರಿಹರಿಸುವ ಶಕ್ತಿ ವೈಜ್ಞಾನಿಕ ಸಂಶೋಧನೆ ಹೊಂದಿದೆ. ಹಾಗಾಗಿ ಮಕ್ಕಳು ವೈಜ್ಞಾನಿಕ ಮನೋಭಾವವನ್ನು ಬಲಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ ಹಾಗೂ ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.



















