ರಾಯಚೂರ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಿಲ್ಲೆಗೆ ಬಿಡುಗಡೆಯಾದ 561 ಕೋಟಿಗಳಲ್ಲಿ ಶೇ 60 ಅನುದಾನ ಕೂಲಿ ಪಾವತಿಗೆ ಬಳಸಲಾಗಿದ್ದು, ಉಳಿದ 250 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು CEO ನೂರ್ ಜಹರಾ ಖಾನಂ ಹೇಳಿದರು.
ತಾಲ್ಲೂಕಿನ ಆತ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ರಾಂಪುರ ಗ್ರಾಮದಲ್ಲಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ನರೇಗಾ ದಿವಸ್ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ. ಮಾನವ ದಿನಗಳ ಸೃಜನೆ, ಕೂಲಿ ಪಾವತಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ನರೇಗಾ ಯೋಜನೆಗೆ ಬಿಡುಗಡೆಯಾಗುವ ಅನುದಾನಕ್ಕೆ ಯಾವುದೇ ನಿರ್ಬಂಧ ಇಲ್ಲ. ಎನ್‌ಆರ್‌ಎಲ್‌ಎಂ, 15 ನೇ ಹಣಕಾಸು ಹೀಗೆ ವಿವಿಧ ಮೂಲಗಳಿಂದ ಅನುದಾನ ಬಿಡುಗಡೆಯಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಪಿಡಿಓ, ಅಧ್ಯಕ್ಷ, ತಾಂತ್ರಿಕ ಎಂಜಿನಿಯರುಗಳು ಮನಸು ಮಾಡಿದರೆ ಪ್ರತಿಯೊಂದು ಹಳ್ಳಿಯನ್ನು ಅಭಿವೃದ್ಧಿಪಡಿಸಬಹುದು. ಕಚೇರಿಗಳಲ್ಲಿ ಕುಳಿತು ಕ್ರಿಯಾ ಯೋಜನೆ ತಯಾರಿಸದೇ ಹಳ್ಳಿಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಸೇರ್ಪಡೆ ಮಾಡಬೇಕು. ಪ್ರಸಕ್ತ ವರ್ಷದ ಕಾಮಗಾರಿಗಳನ್ನು ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು. ಜಿಲ್ಲೆಯ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದೆ. ಶಾಲಾ ಮಕ್ಕಳು, ವೃದ್ಧರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ನರೇಗಾದಡಿ ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು, ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು. 15 ನೇ ಹಣಕಾಸು ಅನುದಾನದಲ್ಲಿ ಶಾಲೆಗಳಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೇ. 50 ಕಾಮಗಾರಿಗಳನ್ನು ಪರಿಸರ ಅಭಿವೃದ್ಧಿಗೆ ಮೀಸಲು ಇರಿಸಬೇಕು. ಕೇವಲ ಕೆರೆಯಲ್ಲಿ ಹೂಳು ಎತ್ತುವುದಕ್ಕೆ ನರೇಗಾ ಸೀಮಿತವಾಗಬಾರದು. ಕೃಷಿ ಹೊಂಡ, ಬದು ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ನರೇಗಾದಡಿ 100 ದಿನಗಳ ಉದ್ಯೋಗ ಪೂರೈಸಿದ ಕೂಲಿಕಾರ್ಮಿಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ನಾಗರಾಜ್, ರಾಯಚೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ, ದೇವದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ, ಆತ್ಕೂರು ಗ್ರಾಮ ಪಂಚಾಯಿತಿ ಪಿಡಿಒ ರಮಾದೇವಿ , ವೈದೇಹಿ ಆಸ್ಪತ್ರೆಯ ಮಲ್ಲಿಕಾರ್ಜುನ, ನರೇಗಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹನುಮನಗೌಡ, ಜಿಲ್ಲಾ ಅಧ್ಯಕ್ಷ ಅಣ್ಣಾರಾವ್, ಎಡಿಪಿಸಿ ಮಲ್ಲಮ್ಮ, ಡಿಐಸಿ ವಿಶ್ವನಾಥ, ರಾಯಚೂರು ಎಪಿಎಂಸಿ ಮಾಜಿ ಅಧ್ಯಕ್ಷ ಗೋಪಾಲರೆಡ್ಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವಶರಣಪ್ಪ, ನೌಕರರ ಸಂಘದ ಗೌರವ ಅಧ್ಯಕ್ಷ ಸಿರಾಜ್ ಅಹ್ಮದ್ ಜಾಫರಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವೆಂಕಟೇಶ ದೇಸಾಯಿ, ಆಲಂಬಾಷಾ, ಬಸ್ಸಣ್ಣ ನಾಯಕ, ಶಿವಪ್ರಸಾದ್ ಇದ್ದರು.