ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ-ಸಂತೋಷ ಬಂಡೆ
ಇಂಡಿ: ‘ಸಮಾಜಕ್ಕೆ ಮಾರಕವಾಗಿರುವ ತಂಬಾಕು ಸೇವನೆ ಬಗೆಗಿನ ಅಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡ ‘ತಂಬಾಕು ಸೇವನೆಯ ದುಷ್ಪರಿಣಾಮಗಳು’ ಕುರಿತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿರಂತರ ತಂಬಾಕು ಸೇವನೆಯಿಂದ ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್‌ನಂತಹ ರೋಗಗಳು ಬರುತ್ತವೆ.
ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿಬಿಡುತ್ತದೆ. ಸಂಶೋಧನೆಗಳ ಪ್ರಕಾರ ಜಗಿದು ತಿನ್ನುವ ತಂಬಾಕು ಅತ್ಯಂತ ಅಪಾಯಕಾರಿ. ಹಾಗಾಗಿ ತಂಬಾಕು ಸೇವನೆ ತ್ಯಜಿಸಬೇಕು ಎಂದು ಹೇಳಿದರು.
ಇಂಡಿ ಎಸ್ ಬಿ ಆಯ್ ಬ್ಯಾಂಕ್ ಕೃಷಿ ಕ್ಷೇತ್ರ ಅಧಿಕಾರಿ ಪ್ರಕಾಶ ಗುಜ್ಜಲಕರ ಮಾತನಾಡಿ, ಯುವಕರು ಗುಟಕಾ, ಸಿಗರೇಟು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ ಸುಂದರ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವದು ದುರದೃಷ್ಟಕರ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ನಾಗರಿಕರ ಸಹಕಾರ ಬಹುಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದೀರ್ಘವಾದ ಅಡ್ಡ ಪರಿಣಾಮಗಳಾಗುತ್ತವೆ. ಹಾಗಾಗಿ ತಂಬಾಕು ಸೇವನೆಯಿಂದ ದೂರವಿರುವ ಸಂಕಲ್ಪ ಎಲ್ಲರೂ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಂಬಾಕು ಸೇವನೆಯ
ದುಷ್ಪರಿಣಾಮಗಳ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ, ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಶಿಕ್ಷಕರಾದ ಎಸ್ ಪಿ ಪೂಜಾರಿ, ಎನ್ ಬಿ ಚೌಧರಿ,ಅಲ್ಫಿಯಾ ಅಂಗಡಿ, ಆಶಾ ಕಾರ್ಯಕರ್ತೆ ಸುಜಾತಾ ಚಾಂದಕವಟೆ ಸೇರಿದಂತೆ ಅನೇಕ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.