ಇಂಡಿ : ಕರ್ನಾಟಕ ಸರ್ಕಾರ ಆದೇಶದಂತೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವ್ಯಾಪಾರಸ್ಥರು ಕಡ್ಡಾಯವಾಗಿ ಶೇಕಡಾ 60 ರಷ್ಟು ಅಂಗಡಿಯ ನಾಮಫಲಕಗಳು ಕನ್ನಡ ಭಾಷೆಯ ದೊಡ್ಡ ಅಕ್ಷರದಲ್ಲಿ ಉಪಯೋಗಿಸಬೇಕು. ಒಂದು ವೇಳೆ ನಿರಾಸಕ್ತಿ ಅಥವಾ ನಿರ್ಲಕ್ಷ್ಯ ವಹಿಸಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಬಾಳು ಮುಳುಜಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಯ ಭಾಷೆಯ ನಾಮ ಫಲಕಗಳನ್ನು ಶೀಘ್ರದಲ್ಲೇ ತೆರುವು ಗೊಳಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮಾತ್ರಕ್ಕೆ ಕನ್ನಡಿಗರು ಅಥವಾ ಕನ್ನಡ ಕನ್ನಡ ಎಂದ ಮಾತ್ರಕ್ಕೆ ಕನ್ನಡಿಗರಾಗಲು ಸಾಧ್ಯವಿಲ್ಲ. ನಮ್ಮ ಮಾತೃ ಭಾಷೆ ನಮ್ಮ ಹೆಮ್ಮೆ. ಯಾವ ಭಾಷೆಗೂ ಕಮ್ಮಿಯಿರದ ಕನ್ನಡ ಮಾತನಾಡಲು ಏತಕೆ ಹಿಂಜರಿಕೆ?
ಹೆತ್ತ ತಾಯಿಯನ್ನು, ಈಕೆ ನನ್ನ ತಾಯಿ ಎಂದು ತೋರಿಸಲು ಅವಮಾನ ಇದೆಯೇ? ತಾತ್ಸಾರ ಇದೆಯೇ? ಅಂದಮೇಲೆ ಮಾತೃ ಭಾಷೆಯ ಮೇಲೆ ಏಕೆ ತಾತ್ಸಾರ, ಏಕೆ ಅವಮಾನ?
ಬೇರೆ ಭಾಷೆ ಮಾತಾಡಬೇಡಿ ಹಾಗೂ ಕಲಿಯಬೇಡಿ ಎನ್ನುವುದು ಎಂದಿಗೂ ಮಾತಿನ ಅರ್ಥವಲ್ಲ. ಕವಿ ವಾಣಿಯಂತೆ ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪೇನಿಲ್ಲ, ಆದರೆ ಬೇರೆ ಭಾಷೆಗಳು ಕಿಟಕಿಯಾದರೆ, ಕನ್ನಡ ಮನೆಯ ಮುಖ್ಯ ಬಾಗಿಲು ಆಗಿರಲಿ ಎಂದರು.
ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವುದು, ಕಲಿಸುವುದು ಅಗತ್ಯ. ಅದು ನಾವು ಕನ್ನಡಕ್ಕೆ ಮಾಡುವ ಸಹಾಯವಲ್ಲ, ಅದು ಪ್ರತೀ ಕನ್ನಡಿಗನ ಕರ್ತವ್ಯ. ಉಳಿಸಿ-ಬೆಳೆಸಿ ಎನ್ನುವುದರ ಬದಲು, ಬಳಸಿ ಕಲಿಸೋಣ.
ಅಂಗಡಿ ಮಾಲೀಕರು ಯಾವುದೇ ಬೇಜವಾಬ್ದಾರಿ ನಾಮ ಫಲಕ ಬರೆಸುವುದು ತಪ್ಪಿದ್ದಲ್ಲಿ ಅಂಗಡಿ ಪರವನಿಗೆ ರದ್ದು ಮಾಡಬೇಕು ಎಂದು ಕರವೇ ಆಗ್ರಹ ಮಾಡುತ್ತದೆಂದು ತಿಳಿಸಿದರು.