ಮಾನಸಿಕ ಆರೋಗ್ಯ ಸದೃಢತೆ ಕಾಪಾಡಿಕೊಳ್ಳಿ:
ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್. ಹಾಗರಗಿ
ವಿಜಯಪುರ : ಕಾರ್ಯಕ್ಷೇತ್ರದ ಚಟುವಟಿಕೆಯಲ್ಲಿ ಮಾನಸಿಕ ಒತ್ತಡಗಳಿಂದ ಪಾರಾಗಲು ಓದು, ಸಂಗೀತ, ಧ್ಯಾನ, ಆಟೋಟಗಳಂತಹ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ಸದೃಢತೆ ಹೊಂದಲು ಸಹಾಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ ಎಸ್. ಹಾಗರಗಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ ಇವರ ಸಹಯೋಗದಲ್ಲಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಕಾರ್ಯಕ್ಷೇತ್ರದಲ್ಲಿ ಮಾನಸಿಕ ಆರೋಗ್ಯಕ್ಕೆ ಆಧ್ಯತೆ ನೀಡುವ ಸಮಯ ಈಗ ಬಂದಿದೆ ಎಂಬ ಘೋಷವಾಕ್ಯದಡಿಯಲ್ಲಿ ನಡೆದ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರು ಮನಸ್ ಉಚಿತ ಸಹಾಯವಾಣಿ 14416 ಕರೆ ಮಾಡಿ ಆಪ್ತ ಸಮಾಲೋಚನೆ ಪಡೆದಕೊಳ್ಳಬಹುದು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮನೋವೈದ್ಯರು, ಆಪ್ತ ಸಮಾಲೋಚಕರು ಒತ್ತಡ ಮುಕ್ತ ಜೀವನ ನಡೆಸಲು ಉಚಿತ ಸಲಹೆಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಸಂಪತ್ತ ಗುಣಾರಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬAತೆ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದರು.
ಜಾಥಾವು ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಾರುಕಟ್ಟೆ ರಸ್ತೆಯ ಮೂಲಕ ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅವರಣದವರೆಗೆ ನಡೆಯಿತು.
ಈ ವೇಳೆ ತಾಲೂಕಾ ಆರೋಗಾಧಿಕಾರಿ ಡಾ. ಪರಶುರಾಮ ಹಿಟ್ಟನಳ್ಳಿ, ಐ.ಇ.ಸಿ ವಿಭಾಗದ ಜಿ.ಎಂ.ಕೊಲುರ, ಸುರೇಶ ಹೊಸಮನಿ ಸೇರಿದಂತೆ ಜಿಲ್ಲಾ ಮಾನಸಿಕ ಆರೋಗ್ಯ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ತುಳಜಾಭವಾನಿ ನರ್ಸಿಂಗ್ ಕಾಲೇಜ, ಅಶ್ವಿನಿ ನರ್ಸಿಂಗ ಕಾಲೇಜ, ಬಾಂಗಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.