ಸೋಲಾರ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿ: ಅನಿತಾ
ಹನೂರು: ಭವಿಷ್ಯದಲ್ಲಿ ವಿದ್ಯುತ್ ಕೊರತೆ ನೀಗಿಸಲು ರೈತರು ಸೋಲಾರ್ ಶಕ್ತಿಯನ್ನು ಬಳಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೊಳ್ಳೆಗಾಲ ಸೆಸ್ಕ್ ವಿಭಾಗಿಯ ಕಾರ್ಯಪಾಲಕ ಅಭಿಯಂತರ ಅನಿತಾ ತಿಳಿಸಿದರು.
ಹನೂರು ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ಫಸಲು ಬೆಳೆಯಲಾಗದ ಬಂಜರು ಭೂಮಿ ಇದ್ದರೆ ಅಂತಹ ಭೂಮಿಯಲ್ಲಿ ಸರ್ಕಾರದ ಸೌರಮಿತ್ರ ಯೋಜನೆಯಡಿ ಸೋಲಾರ್ ವಿದ್ಯುತ್ ಅಳವಡಿಸುವ ಅವಕಾಶವಿದ್ದು, ಜಮೀನು ಮಾಲೀಕರಿಗೆ ಪ್ರತಿ ಎಕರೆಗೆ ವರ್ಷಕ್ಕೆ ರೂ. 25 ಸಾವಿರ ಗೌರವ ಧನ ನೀಡಲಾಗುವುದು. ಕನಿಷ್ಠ 5 ಎಕರೆ ಜಮೀನು ಹೊಂದಿರಬೇಕು. ಇದಕ್ಕಾಗಿ 30 ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗುವುದು.
ಈ ಯೋಜನೆಯಡಿ ಪ್ರತಿ ಐ. ಪಿ. ಸೆಟ್ ಗೆ ರಿಯಾಯಿದರದಲ್ಲಿ ಪ್ರತ್ಯೇಕ ಸೋಲಾರ್ ಅಳವಡಿಸಿಕೊಳ್ಳುವ ಅವಕಾಶವೂ ಇರುತ್ತದೆ.ಅಲ್ಲದೆ ಸೌರಗೃಹ ಯೋಜನೆಯಡಿ ಮನೆಗಳಿಗೆ ಶೇ. 80 ರಿಯಾಯಿತಿ ದರದಲ್ಲಿ ಸೋಲಾರ್ ಪ್ಯಾಕ್ ಅಳವಡಿಸಿಕೊಡಲಾಗುವುದು. ಆದ್ದರಿಂದ ಈ ಯೋಜನೆಯನ್ನು ರೈತರು ಮತ್ತು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಿ.
ವಿದ್ಯುತ್ ಸುರಕ್ಷತೆ ಬಗ್ಗೆ ರೈತರು ಹೆಚ್ಚಿನ ಗಮನ ನೀಡಬೇಕು ಮಕ್ಕಳು ಹಾಗು ಸಾಕು ಪ್ರಾಣಿಗಳನ್ನು ವಿದ್ಯುತ್ ಸಂಪರ್ಕದಿಂದ ದೂರ ಇರುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ರೈತರು ಫೋನ್ ಕರೆ ಮಾಡಿದಾಗ ಸೆಸ್ಕ್ ಸಿಬ್ಬಂದಿಗಳು ಕಡ್ಡಾಯವಾಗಿ ಕರೆ ಸ್ವೀಕರಿಸಿ. ಅವರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ನೀಡಿ ಎಂದು ಸೆಸ್ಕ್ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಕೆಟ್ಟುಹೋದ ಪರಿವರ್ತಕಗಳ ರಿಪೇರಿ ತುಂಬಾ ವಿಳಂಬವಾಗುತ್ತಿದೆ. ಇದರಿಂದ ಸಮಸ್ಯೆ ಅನುಭವಿಸುವ ರೈತರು ಪ್ರತಿಭಟನೆಗೆ ಇಳಿಯುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಕೆಟ್ಟುಹೋದ ಪರಿವರ್ಕಗಳನ್ನು ರಿಪೇರಿ ಮಾಡಲು ಟೋಲ್ ಫ್ರೀ ನಂಬರ್ ನೀಡಲಾಗುವುದು. ಈ ನಂಬರ್ ಗೆ ಕರೆ ಮಾಡಿದ 72 ಗಂಟೆಗಳಲ್ಲಿ ಸರಿಪಡಿಸಲಾಗುವುದು. ಇದು ಮುಂದಿನ ಒಂದು ವಾರದೊಳಗೆ ಚಲನೆಯಾಗುತ್ತದೆ. ಅಲ್ಲದೆ ಪರಿವರ್ತಕ ರಿಪೇರಿಗಾಗಿ ರೈತರು ಯಾವುದೇ ಖರ್ಚು ನೀಡಬೇಕಾಗಿಲ್ಲ. ಇದು ಸೆಸ್ಕ್ ನಿಂತ ಉಚಿತ ಸೇವೆಯಾಗಿದೆ. ಈ ಬಗ್ಗೆ ಕಚೇರಿಗಳಲ್ಲಿ ಪೋಸ್ಟರ್ ಹಾಕಿ ರೈತರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಅಕ್ರಮ ಸಕ್ರಮ ಪರಿವರ್ತಕ ಅಳವಡಿಕೆ, ಜೋತುಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುವುದು, ಮನೆ ಮೇಲೆ ವಿದ್ಯುತ್ ತಂತಿ ಹಾದುಹೋಗಿರುವುದನ್ನು ಸರಿಪಡಿಸುವುದು ಸೇರಿದಂತೆ ಪ್ರಸ್ತುತ ಸಭೆಯಲ್ಲಿ ಗ್ರಾಹಕರು ಮತ್ತು ರೈತರಿಂದ ಒಟ್ಟು 26 ದೂರುಗಳನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಎ ಇ ಇ ಶಂಕರ್, ಎ.ಇ. ರಂಗಸ್ವಾಮಿ, ಜೆ.ಇ. ಗಳಾದ ವೆಂಕಟೇಶ್ ಮೂರ್ತಿ, ಮಾದೇಶ್, ವೆಂಕಟಾಚಲ, ಹಾಗೂ ವಿದ್ಯುತ್ ಗ್ರಾಹಕರು ಮತ್ತು ರೈತರು ಹಾಜರಿದ್ದರು.
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ