ಇಂಡಿ : ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ ಸರಕಾರ ಹಣ ಬಿಡುಗಡೆ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಲಿ, ಬಿಜೆಪಿ ಅವಧಿಯಲ್ಲಿನ ಎಷ್ಟು ಕಾಮಗಾರಿಗಳನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿಲ್ಲವೇ..?ಲೋಕಾರ್ಪಣೆಗೊಳಿಸಿಲ್ಲವೇ..? ಕೇಂದ್ರ ಸರಕಾರದ ಹಲವಾರು ಯೋಜನೆಗಳ ಕಾಮಗಾರಿ ಪೂಜೆ ಸಹ ಶಾಸಕರೆ ಮಾಡಿದ್ದಾರೆ. ಅದಕ್ಕೆ ಸಂಸದರ ತ್ಯಾಗಿಯಭಾವನೆ ಕಾರಣ. ಆದರೆ ಚಿಕ್ಕ ಪುಟ್ಟ ವಿಷಯಗಳಿಗೆ ರಾಜಕಾರಣ ಮಾಡಿತ್ತಿರುವುದು ಕಾಂಗ್ರೆಸ್ ಮುಖಂಡರ ಹಾಗೂ ಶಾಸಕರ ನಡೆ ಜನರಿಗೆ ಅರ್ಥವಾಗುತ್ತಿದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಕೈ ಮುಖಂಡರ ವಿರುದ್ಧ ಆರೋಪಿಸಿ, ಕಿಡಿಕಾರಿದರು.
ಅವರು ಶುಕ್ರವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಯೋಜನೆಗಳ ಕಾಮಗಾರಿಗಳ ಭೂಮಿ ಪೂಜೆಯನ್ನು ಸಹ ತಾವೇ ಮಾಡುವ ಶಾಸಕರಿಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಭೂಮಿ ಪೂಜೆಯನ್ನು ಸಂಸದರಿಂದ ಮಾಡಿಸಿ ಜನರಿಗೆ ಬಿಜೆಪಿಯ ಕಾರ್ಯ ಎಂದು ಗೊತ್ತಾಗುವಂತೆ ಮಾಡಿದ್ದು ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿದೆ ಹೀಗಾಗಿ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಜೆಜೆಎಂ ಯೋಜನೆ, ಕೆರೆ ತುಂಬುವ ಯೋಜನೆ ಹೀಗೆ ಹಲವು ಯೋಜನೆಗಳಿಗೆ ಸಂಸದರ ಅನುಪಸ್ಥಿತಿಯಲ್ಲಿ ಪೂಜೆ ನೆರವೇರಿಸಿ ಎಲ್ಲಾ ಕಾಮಗಾರಿಗಳು ತಾವೇ ಮಾಡಿಸಿದ್ದು ಎಂಬಂತೆ ಜನತೆಗೆ ತೋರಿಸಿಕೊಡುವ ಕಾರ್ಯವನ್ನು ಶಾಸಕ ಯಶವಂತರಾಯ ಗೌಡರು ಮಾಡುತ್ತ ಬಂದಿದ್ದಾರೆ. ಸಂಸದ ಜಿಗಜಿಣಗಿ ಅವರ ವಯಸ್ಸಿಗಾದರೂ ಗೌರವ ಕೊಡಬೇಕಿದ್ದ ಶಾಸಕರು ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ತರವಲ್ಲ ಎಂದರು.
ಈಗ ಬಿಜೆಪಿ ಅವರು ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಜನತೆಗೆ ಗೊತ್ತಾಗಲಿ ಎಂದು ಕಾರ್ಯಕ್ರಮ ಮಾಡಿದ್ದು, ಶಾಸಕರಿಗೆ ಸಹಿಸಂದಂತಾಗಿದೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಂಸದ ರಮೇಶ್ ಜಿಗಜಿಣಗಿ ಅವರು ಸ್ವತ: ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ದೂರವಾಣ ಯಲ್ಲಿ ಮಾತನಾಡಿ ಅವರು ಭರವಸೆ ನೀಡಿದ ನಂತರ ರೈತರಿಗೆ ಪ್ರತಿಭಟನೆ ಕೈ ಬಿಡಲು ಮನವಿ ಮಾಡಿಸಿದ್ದು ಶಾಸಕರಿಗೂ ತಿಳಿದಿದೆ. ಸದನದಲ್ಲಿ ಸಹ ಶಾಸಕರು ಈ ನೀರಾವರಿ ಯೋಜನೆ ನಮ್ಮ ಪ್ರದೇಶಕ್ಕೆ ಬರುತ್ತದೆ ಮಂಜೂರು ಮಾಡಿದ ಕಾರಜೋಳ ಸಾಹೇಬರು ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ. ಈಗ ಅದೇ ಯೋಜನೆ ತಾವೇ ಸ್ವತಃ ಮಂಡಿಸಿರುವಂತೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಸಂಸದ ರಮೇಶ ಜಿಗಜಿಣಗಿ ಅವರು ಹಾಗೂ ೨೦೦೮ ರಲ್ಲಿ ನಮ್ಮ ಪಕ್ಷದ ಶಾಸಕರಾದ ಸಾರ್ವಭೌಮ ಬಗಲಿ ಅವರು ಮಾಡಿದ ಕಾರ್ಯಗಳನ್ನು ಶೀಘ್ರವೇ ದಾಖಲಾತಿ ಸಮೇತ ಜನತೆಯ ಮುಂದಿಡಲಾಗುವುದು ಎಂದರು.
ಶಾಸಕರು ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಷ್ಟು ಕಾಮಗಾರಿಗಳನ್ನು ಉದ್ಘಾಟಿಸಿಲ್ಲವೇ? ಲೋಕಾರ್ಪಣೆ ಗೊಳಿಸಿಲ್ಲವೇ? ಯಾರು ಕೆಲಸ ಮಾಡಿದ್ದಾರೆ ಅವರ ಹೆಸರು ಹೇಳಬೇಕು. ಆದರೆ ಬೇರೆಯವರು ಮಾಡಿದ ಕೆಲಸವನ್ನು ಸಹ ನಾನೇ ಮಾಡಿದ್ದೇನೆ ಎಂದು ಜಂಭ ಕೊಚ್ಚಿಕೊಳ್ಳುವುದು ಸರಿಯಲ್ಲ ಎಂದರು.
ಬಿಜೆಪಿ ಮುಖಂಡ ಅನೀಲ ಜಮಾದಾರ ಮಾತನಾಡಿ, ಸಂಸದ ರಮೇಶ ಜಿಗಿಜಿಣಗಿ ಅವರು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಇಂಡಿ ಮತಕ್ಷೇತ್ರಕ್ಕೆ ನೀಡಿದ್ದಾರೆ. ಆದರೆ ಅವರು ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲು ಆಗಮಿಸಿಲ್ಲ, ಸ್ಥಳೀಯ ಶಾಸಕರೇ ಪೂಜೆ ಮಾಡಿಕೊಂಡು ಹೋಗಲಿ ಎಂಬ ತ್ಯಾಗಭಾವನೆಯನ್ನು ಹೊಂದಿದ್ದರು, ಆದರೆ ಸ್ಥಳೀಯ ಶಾಸಕರು ಅದನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ಯೋಜನೆಗಳನ್ನು ಸಹ ತಾವೇ ಪೂಜೆ ಮಾಡಿ ತಾವೇ ಮಾಡಿಸಿದಂತೆ ಜನತೆಯ ಮುಂದೆ ಹೇಳಿಕೊಳ್ಳುತ್ತಿರುವುದು ಜನತೆಗೆ ಯಾವ ಯೋಜನೆ ಯಾರಿಗೆ ಬರುತ್ತದೆ ಎಂಬ ಬಗ್ಗೆ ಗೊತ್ತಾಗುತ್ತದೆ ಜನರೇನು ನೀವು ಹೇಳುವುದನ್ನು ಪೂರ್ಣವಾಗಿ ನಂಬಲು ಹುಚ್ಚರಲ್ಲ ಎಂದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಬಗ್ಗೆ ಶಾಸಕರು ಸಾಕಷ್ಟು ಸಾರಿ ಮಾತನಾಡುತ್ತಾರೆ, ಮೊನ್ನೆ ಸ್ವಾತಲಗಾಂವ ಕ್ರಾಸ್ ನಲ್ಲಿ ನಡೆದ ವಿದ್ಯುತ್ ಇಲಾಖೆಯ ಕಾರ್ಯಕ್ರಮದಲ್ಲಿಯೂ ತಮ್ಮ ಪಕ್ಷದ ಬಗ್ಗೆ ಮಾತನಾಡಿ ಮುಂಬರುವ ಚುನಾವಣೆ ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅತಿಹೆಚ್ಚಿನ ಸೀಟಿಗಳನ್ನು ಗೆದ್ದು ತೋರಿಸುತ್ತೆನೆಂದು ಅಹಂಕಾರದಿಂದ ನೋಡಿದಿದ್ದಾರೆ. ಮತ ಹಾಕುವರು ನಾಗರಿಕರು, ಎಂಬುದನ್ನು ಶಾಸಕರು ಮೊದಲು ಅರಿತುಕೊಳ್ಳಬೇಕು, ದುರಹಂಕಾರದ ಮಾತಿಗೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ತಕ್ಕ ಉತ್ತರ ಕೊಡುತ್ತಾರೆ. ಜನ ಯಾರ ಪರ ಇದ್ದಾರೆ ಎಂಬುದು ತಾಲೂಕ ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೊತ್ತಾಗಲಿದೆ ನೀವು ಸವಾಲು ಹಾಕಿದ್ದನ್ನು ನಾವು ಸ್ವೀಕರಿಸಿದ್ದೇವೆ ಜನರು ಅದಕ್ಕೆ ಪ್ರತ್ಯುತ್ತರ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದೇವೆಂದ್ರ ಕುಂಬಾರ, ಹಣಮಂತ್ರಾಯಗೌಡ ಪಾಟೀಲ, ಶಾಂತು ಕಂಬಾರ, ವಜ್ರಕಾಂತ ಕೂಡಿಗನೂರ, ರಾಜಶೇಖರ ಯರಗಲ್ ಮತ್ತಿತರರು ಇದ್ದರು.
ಇಂಡಿ: ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಮಾತನಾಡಿದರು.