ಜಿಲ್ಲೆಯಲ್ಲಿ ಎನಿವೇರ್ ನೊಂದಣಿ ವ್ಯವಸ್ಥೆ :ಡಿಸಿ ಭೂಬಾಲನ್
ವಿಜಯಪುರ, ಆಗಸ್ಟ್ 30 :ಪ್ರಸಕ್ತ 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಎನಿವೇರ್ ನೋಂದಣಿ ವ್ಯವಸ್ಥೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದೆಂದು ಸರ್ಕಾರದಿಂದ ಘೋಷಿಷಲಾಗಿದ್ದು, ಎನಿವೇರ್ ನೋಂದಣಿಯನ್ನು ವಿಜಯಪುರ ಜಿಲ್ಲೆಯ ಉಪ ನೋಂದಣಿ ಕಚೇರಿಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಪ್ರಸ್ತುತ ಸಾರ್ವಜನಿಕರು ಸ್ಥಿರಾಸ್ತಿ ಇರುವ ವ್ಯಾಪ್ತಿಯ ಉಪ ನೋಂದಣಿ ಕಚೇರಿಯಲ್ಲಿ ಮಾತ್ರ ದಸ್ತಾವೇಜ್‍ನ್ನು ನೋಂದಣಿ ಮಾಡಲು ಅವಕಾಶವಿದು, ಎನಿವೇರ್ ವ್ಯವಸ್ಥೆಯಲ್ಲಿ ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿ – ಕೊಳ್ಳಬಹುದಾಗಿದೆ. ಉದಾಹರಣೆಗಾಗಿ ವಿಜಯಪುರ ನಗರದ ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡಲು ಜಿಲ್ಲೆಯ ಉಪ ನೋಂದಣಿ ಕಚೇರಿಗಳಾದ ವಿಜಯಪುರ, ಬಸವನಬಾಗೇವಾಡಿ, ಇಂಡಿ, ಸಿಂದಗಿ, ಮುದ್ದೇಬಿಹಾಳ ಮತ್ತು ತಿಕೋಟಾ ಉಪ ನೊಂದಣಿ ಕಚೇರಿಗಳ ಪೈಕಿ ಯಾವುದೇ ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ನೊಂದಣಿ ಪ್ರಕ್ರಿಯೆ ಮಾಡಿಕೊಳ್ಳಬಹುದಾಗಿರುತ್ತದೆ.
ಸಾರ್ವಜನಿಕರು ಎನಿವೇರ್ ನೋಂದಣಿಯ ಸದುಪಯೋಗ ಪಡೆದುಕೊಂಡು ತಮಗೆ ಹತ್ತಿರದ ಅಥವಾ ನೋಂದಣಿಗೆ ಸ್ಲಾಟ್ ಲಭ್ಯವಿರುವಂತಹ ಕಚೇರಿ ಆಯ್ಕೆ ಮಾಡಿಕೊಂಡು ದಸ್ತಾವೇಜ್‍ನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















