ಆ.21ರಂದು ಆಲಮಟ್ಟಿ ಜಲಾಶಯಕ್ಕೆ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಣೆ : ಸಿದ್ಧತೆಗಳ ಕುರಿತು ಪರಿಶೀಲನೆ
ವಿಜಯಪುರ, ಆಗಸ್ಟ್ 20: ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಆಗಸ್ಟ್ 21ರಂದು ಆಲಮಟ್ಟಿಯ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಬಿಜೆಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ.ಮೋಹನ್‍ರಾಜ್ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಂಗಳವಾರ ಆಲಮಟ್ಟಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.
ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿಗಳು ಆಗಮಿಸುವ ಹಿನ್ನೆಲೆಯಲ್ಲಿ ಜಂಟಿಯಾಗಿ ಪರಿಶೀಲನೆ ನಡೆಸಿದ ಅವರು, ಹೆಲಿಪ್ಯಾಡ ಸ್ಥಳ ಹಾಗೂ ಅಲ್ಲಿನ ಭದ್ರತೆ, ಬಾಗಿನ ಅರ್ಪಿಸುವ ಸ್ಥಳಕ್ಕೆ ಭೇಟಿ ನೀಡಿ, ಪೂಜಾ ಸ್ಥಳ, ಅಲ್ಲಿ ಹೂವಿನ ಅಲಂಕಾರ, ಶಾಮಿಯಾನ ವ್ಯವಸ್ಥೆ, ಸೂಕ್ತ ಆಸನ ವ್ಯವಸ್ಥೆ, ಶಾಮಿಯಾನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದ ಅವರು, ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಬಿಟಿಡಿಎ ಮುಖ್ಯ ಅಭಿಯಂತರ ಬಸವರಾಜ, ನಿಡಗುಂದಿ ತಹಶೀಲ್ದಾರ ಎ.ಡಿ.ಅಮರಾವಡಗಿ ಆಲಮಟ್ಟಿ ಡ್ಯಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಟಿ.ವಿ.ದೊಡಮನಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.