ಮ.ಬೆಟ್ಟ ರಸ್ತೆಯಲ್ಲೊಂದು ತೆರೆದ ಅಪಾಯಕಾರಿ ಪಾಳು ಬಾವಿ..!
ಮಲ ಮಿಶ್ರಿತ ಕೊಳಚೆಯೊಂದಿಗೆ ತುಂಬಿ ತುಳುಕಿ ಸಾಂಕ್ರಾಮಿಕ ರೋಗ ಹರಡಲು ಸನ್ನದ್ದ..!
ಕಣ್ಮುಚ್ಚಿ ಕುಳಿತ ಪಟ್ಟಣ ಪಂಚಾಯ್ತಿ..!
ಹನೂರು . ಜುಲೈ ೧೭ ಹನೂರಿನಿಂದ ಮ.ಬೆಟ್ಟಕ್ಕೆ ತೆರಳುವ ಕೆಶಿಪ್ ಮುಖ್ಯ ರಸ್ತೆಯ ಅಂಚಿನಲ್ಲಿಯೇ ಇರುವ ತೆರೆದ ಪಾಳು ಬಾವಿಯೊಂದು ಮಲ ಮಿಶ್ರಿತ ಕೊಳಚೆ ನೀರು ಹಾಗೂ ಕಸದ ರಾಶಿಯನ್ನು ತುಂಬಿ ತುಳುಕಿಸಿಕೊಂಡು ಉಚಿತ ಸಾಂಕ್ರಾಮಿಕ ರೋಗವನ್ನು ಹರಡಲು ಸನ್ನದ್ಧವಾಗಿ ನಿಂತಿದ್ದರೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ನಾಗರೀಕರ ಆತಂಕಕ್ಕೆ ಕಾರಣವಾಗಿದೆ.
ಕೆಶಿಫ್ ಮುಖ್ಯ ರಸ್ತೆ ಬದಿಯಲ್ಲಿ ನೂರಾರು ವರ್ಷಗಳಿಂದ ಇರುವ ಈ ಪಾಳು ಬಾವಿಯ ಸುತ್ತಮುತ್ತ ಇರುವ ಹತ್ತಾರು ಹೋಟೆಲ್ ಗಳವರು ಲಾಡ್ಜ್ ನವರು ಶೌಚದ ಮಲಿನ ಹಾಗೂ ಕೊಳಕು ನೀರನ್ನು ಪೈಪ್ ಗಳ ಮೂಲಕ ಈ ಪಾಳು ಬಾವಿಗೆ ಬಿಡುತ್ತಿರುವುದಲ್ಲದೆ, ಎಲ್ಲಾ ತೆರನಾದ ತ್ಯಾಜ್ಯವನ್ನು ಇಲ್ಲಿಗೆ ತಂದು ಸುರಿಯುತ್ತಿರುವುದರಿಂದ ಅಲ್ಲಿ ಶೇಖರಣೆಯಾದ ಕಸದ ರಾಶಿ ಹಾಗೂ ಕೊಳಚೆ ನೀರೆಲ್ಲಾ ಬೆರೆತು ಅದು ಇಲ್ಲಿಯೇ ನಿಂತು ಮತ್ತಷ್ಟು ಕೊಳೆತು ಗಬ್ಬೆದ್ದು ನಾರುತ್ತಿರುವುದರ ಜತೆಗೆ ಆ ಭಾಗದ ನೂರಾರು ಅಂಗಡಿ ಮುಂಗಟ್ಟುಗಳವರು ಎಲ್ಲಾ ತೆರನಾದ ಕಸದ ರಾಶಿಯನ್ನು ಇಲ್ಲಿಗೇ ಸುರಿಯುತ್ತಿರುವುದರಿಂದ ಕೊಳಚೆ ತುಂಬಿ ತುಳುಕುತ್ತಿದ್ದು ಗಬ್ಬೆದ್ದು ನಾರುತ್ತಿದೆ.
ಇದಲ್ಲದೆ ಇದು ಮುಖ್ಯ ರಸ್ತೆತೆರೆದ ಪಾಳು ಬಾವಿಯಾದ್ದರಿಂದ ಕಸವನ್ನು ಮೇಯಲು ಬರುವ ದನಕರು ಜಾನುವಾರುಗಳು ಬಿದ್ದು ಅವಘಡ ಸಂಭವಿಸುವ ಹಾಗೂ ವಾಹನಗಳು ಆಯತಪ್ಪಿ ಬಿದ್ದು ಅಪಾಯಕ್ಕೀಡಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
ಇಷ್ಟೂ ಸಾಲದೆಂಬಂತೆ ಕೆಶಿಪ್ ನವರು ರಸ್ತೆಯ ಬದಿ ಬಾಕ್ಸ್ ಚರಂಡಿ ನಿರ್ಮಿಸಿರುವರಾದರೂ ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಪಾಳು ಬಾವಿಯ ಆದಿಕೃತ ಜಾಗದ ಮಾಲೀಕರು ಚರಂಡಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದರೂ ನಿಖರ ಕಾರಣವಿಲ್ಲದಿದ್ದರೂ ಕೆಶಿಪ್ ನವರು ಈ ಬಾವಿಯ ಅಳತೆಗೆ ಮಾತ್ರ ಚರಂಡಿ ನಿರ್ಮಾಣವನ್ನು ಅರ್ಧಕ್ಕೆ ಕೈಬಿಟ್ಟು ಅವೈಜ್ಞಾನಿಕವಾಗಿ ಮುಂದಕ್ಕೆ ಚರಂಡಿ ನಿರ್ಮಿಸಿರುವುದು ಸಹ ಅಪಾಯಕ್ಕೆ ಮತ್ತಷ್ಟು ಆಹ್ವಾನ ನೀಡುತ್ತಿದೆ. ಈರಸ್ತೆಯಲ್ಲಿ ಸಂಚರಿಸುವ ಎಲ್ಲಾ ತೆರನಾದ ವಾಹನಗಳು ಆಯ ತಪ್ಪಿ ನುಗ್ಗಿದಲ್ಲಿ ಈ ಚರಂಡಿಯ ಗ್ಯಾಪ್ ನಲ್ಲಿ ಪಾಳು ಬಾವಿಗೆ ಬಿದ್ದು ಗಂಭೀರ ಅವಘಡ ಸಂಭವಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಮೊದಲೇ ರಾಜ್ಯಾದ್ಯಂತ ಎಲ್ಲೆಂದರಲ್ಲಿ ಡೆಂಗ್ಯೂ ಜ್ವರದಂತಹ ಹಲವಾರು ಸಾಂಕ್ರಾಮಿಕ ರೋಗಗಳು ಶರವೇಗದಲ್ಲಿ ಹರಡುತ್ತಿದ್ದು ಈ ರಣ ಕೊಳಕಿನಿಂದ ಇಲ್ಲಿಗೂ ವ್ಯಾಪಿಸುವ ಮುನ್ನ ಎಚ್ಚೆತ್ತು ಕೂಡಲೇ ಪಟ್ಟಣ ಪಂಚಾಯ್ತಿಯವರು ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿರುವ ಈ ಪಾಳ ಬಾವಿಯ ಕೊಳಚೆಯನ್ನು ತೆರವುಗೊಳಿಸಿ ಬಾವಿಯನ್ನು ಮುಚ್ಚಿ ರೋಗ ಹರಡುವಿಕೆಗೆ ತಡೆಯೊಡ್ಡಬೇಕಾಗಿದೆ. ಜತೆಗೆ ಕೆಶಿಪ್ ನವರು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಅಪೂರ್ಣ ಚರಂಡಿ ಕಾಮಗಾರಿಯನ್ನು ಪೂರ್ಣಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪ್ರಬುದ್ಧ ನಾಗರೀಕರು ಆಗ್ರಹಿಸಿದ್ದಾರೆ.