ಬೆಟ್ಟಳ್ಳಿ ಮಾರಮ್ಮ ಜಾತ್ರೆಗೆ ಚಾಲನೆ
ಹನೂರು :ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ತಮಟೆ ಬಾರಿಸುವ ಮೂಲಕ ಮಂಗಳವಾರ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.
ಹಬ್ಬದ ಪ್ರತಿತಿಯಂತೆ ಹಬ್ಬ ಪ್ರಾರಂಭವಾಗುವ 15 ದಿನಗಳಿಗೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾತ್ರೆಯ ಮಹೋತ್ಸವ ಸಂಬಂಧ ತಮಟೆ ಬಾರಿಸುವ ಮೂಲಕ ರಂಗತೋಟಿ ಜಾತ್ರೆಗೆ ಸಾರುವುದು ವಾಡಿಕೆವಾಗಿದೆ. ಜಾತ್ರೆಗೆ ಸಾರಿದ ಎರಡು ದಿನಗಳ ನಂತರ ದೇವಾಲಯದ ಮುಂಭಾಗ ಪ್ರತಿದಿನ ಸಂಜೆ ಸುಮಾರು ಏಳು ಗಂಟೆಯ ಸಮಯದಲ್ಲಿ ಯುವಕರು ಕುಣಿಯುವ ಮೂಲಕ ರಂಗವನ್ನು ಕಟ್ಟುತ್ತಾರೆ. ಹಬ್ಬಕ್ಕೆ ಚಾಲನೆ ನೀಡಿದ ಎಂಟು ದಿನಕ್ಕೆ ಸರಿಯಾಗಿ ಅಂದರೆ ಮಂಗಳವಾರ ಬೆಟ್ಟಳ್ಳಿ ಮಾರಮ್ಮನ ಪತಿದೇವರು ಎಂದು ಭಾವಿಸುವ ಮೂರು ಕವಲಿನ ಕಂಬಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ದೇವಾಲಯದ ಮುಂಭಾಗ ಪ್ರತಿಷ್ಠಾಪನೆಯನ್ನು ಮಾಡಲಾಗುತ್ತದೆ. ಜಾತ್ರಾ ಮಹೋತ್ಸವವು ಬಹಳ ಅದ್ದೂರಿಯಿಂದ ಜರುಗಲಿದ್ದು ಗ್ರಾಮದಲ್ಲಿ ದೀಪಾಲಂಕಾರ ಮಾಡಲಾಗುವುದು. ಏಪ್ರಿಲ್ 1 ಸೋಮವಾರ ಜಾಗರ ಸಮರ್ಪಣೆ, ಏಪ್ರಿಲ್ 2 ಮಂಗಳವಾರ ನೂತನವಾಗಿ ಪ್ರಾರಂಭವಾಗುತ್ತಿರುವ ತೇರನ್ನು ಮಧ್ಯಾಹ್ನ 12 ಗಂಟೆಗೆ ಚಾಲನೆಯನ್ನು ನೀಡಲಾಗುವುದು. ಹಾಗೂ ಬೆಳಿಗ್ಗೆಯಿಂದ ತಂಪು ಜ್ಯೋತಿ ಕಾರ್ಯ ನಡೆಯುತ್ತದೆ. ಏಪ್ರಿಲ್ 3 ಬುಧವಾರ ಬಾಯಿ ಬೀಗ ಜರುಗಲಿದೆ. ಏಪ್ರಿಲ್ 4 ಪ್ರಾತಃಕಾಲ ಸುಮಾರು 5:30 ಸಮಯದಲ್ಲಿ ಈ ಬೆಟ್ಟಳ್ಳಿ ಮಾರಮ್ಮ ದೇವಾಲಯದ ಅರ್ಚಕರು ಅಗ್ನಿಕುಂಡ ದರ್ಶನ ನಡೆಸುತ್ತಾರೆ. ಇದರ ಜೊತೆಗೆ ಶ್ರೀ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆಗೆ ತೆರೆ ಬೀಳಲಿದೆ. ಈ ಜಾತ್ರೆಯಲ್ಲಿ ಸಾವಿರಾರು ಭಕ್ತಾದಿಗಳು ಎಲ್ಲಾ ಗ್ರಾಮಗಳಿಂದ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.