ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಿ : ಶಾಸಕ ಪಾಟೀಲ್ ಖಡಕ ಸೂಚನೆ
ಇಂಡಿ : ತಾಲೂಕಿನಾದ್ಯಂತ ಎಲ್ಲಿಯೂ ಸಹ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ – ಯಾಗದಂತೆ ಕ್ರಮ ಕೈಗೊಳ್ಳಿ ಈ ಬಾರಿ ಮಳೆಗಾಲ ಅತಿ ಕಡಿಮೆಯಾಗಿದ್ದು ಕುಡಿಯುವ ನೀರಿನ ಸಮಸ್ಯೆ ಜನವರಿಯಿಂದಲೇ ಪ್ರಾರಂಭವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಮಂಗಳವಾರ ಮರಗೂರ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಹಮ್ಮಿಕೊಂಡ ಟಾಸ್ಕಫೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಲ್ಲಿನ ಗ್ರಾಪಂ ಆಡಳಿತ ಮಂಡಳಿಯವರು ಅಲ್ಲಿನ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಿ ತಾಲೂಕ ಆಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಮೇವಿನ ಸಮಸ್ಯೆ ಉಲ್ಬನವಾಗುತ್ತಿದ್ದು ಗೋಶಾಲೆಗಳನ್ನು ತೆರೆದು ಅಲ್ಲಿ ನೀವು ಪೂರೈಸಿ, ಗೋಶಾಲೆಗೆ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಸೂಚಿಸಿದರು. ನೀರಿನ ಲಭ್ಯತೆಯನ್ನು ಗಮನಿಸಿ ಟ್ಯಾಂಕರ್ ಮೂಲಕ ನೀರು ಪೂರೈಸಿ, ಖಾಸಗಿ ರೈತರ ಅಥವಾ ವ್ಯಕ್ತಿಗಳ ಹತ್ತಿರ ಬೋರ್ವೆಲ್ ಬಾವಿಗಳಿಗೆ ನೀರು ಇದ್ದರೆ ಅವರ ಮನವೊಲಿಸಿ ನೀರು ಪಡೆದುಕೊಂಡು ಜನರಿಗೆ ಕುಡಿಯುವ ನೀರಿನ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರು.
ಕೆರೆ ಹಾಗೂ ನದಿಯ ಸುತ್ತಮುತ್ತ ಮೋಟಾರ್ ಅಳವಡಿಸಿದ್ದರೆ ಅವುಗಳನ್ನು ತೆರವುಗೊಳಿಸಿ ನೀರು ಪೋಲಾಗದಂತೆ ಕ್ರಮವಹಿಸಬೇಕೆಂದು ತಿಳಿಸಿದರು.
ಕಂದಾಯ ಉಪ ವಿಭಾಗಾಧಿಕಾರಿ ಅಭೀದ್ ಗದ್ಯಾಳ ಮಾತನಾಡಿ, ನೀರಿನ ಸಮಸ್ಯೆಯಾಗದಂತೆ ಎಲ್ಲ ಅಧಿಕಾರಿಗಳು ನೋಡಿಕೊಳ್ಳಬೇಕು, ಹೆಚ್ಚಿನ ಸಮಸ್ಯೆ ಇದ್ದರೆ ಕೂಡಲೇ ನಮ್ಮ ಗಮನಕ್ಕೆ ತನ್ನಿ, ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸೋಣ ಎಂದರು.
ಉಪ ತಹಸಿಲ್ದಾರ ಧನಪಾಲ ಶೆಟ್ಟಿ ದೇವೂರ, ತಾ.ಪಂ. ಇಓ ಬಾಬುರಾವ್ ರಾಠೋಡ, ಮನೋಜಕುಮಾರ ಗಡಬಳ್ಳಿ ಎಸ್. ಆರ್. ರುದ್ರವಾಡಿ, ಹೆಚ್.ಎಸ್. ಪಾಟೀಲ, ಮಹಾದೇವಪ್ಪ ಏವೂರ, ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂಡಿ: ಭೀಮಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಟಾಸ್ಕಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ್ ಮಾತನಾಡಿದರು.