ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು
ರಾಯಚೂರು : ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ ಎಂದು ಪ್ರಭಾರಿ ಮುಖ್ಯ ಗುರು ಸಕ್ರಪ್ಪ ಕೆ ಗೋನಾಳ್ ಹೇಳಿದರು.
ತಾಲೂಕಿನ ಹೀರಾಪೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಸರ್.ಸಿ.ವಿ. ರಾಮನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ತದನಂತರ ಮಾತಾನಾಡಿದ ಅವರು, ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ – ಹೀಗೆ ಅನೇಕ ಚಟುವಟಿಕೆಗಳ ನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ.ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ೧೯೨೮ರ ಫೆಬ್ರವರಿ ೨೮ರಂದು ‘ರಾಮನ್ ಇಫೆಕ್ಟ್’ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದರು. ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ ವಿ ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್, ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ, ೧೮೮೮ರ ನವೆಂಬರ್ ೭ರಂದು. ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕ ವೆಂಕಟೇಶ, ಮಹ್ಮದ್ ರಫಿ, ಶಂಕರಗೌಡ, ಪೂ.ಪಾ ಪಂಪನಗೌಡ ಪೊಲೀಸ್ ಪಾಟೀಲ್, ನರಸಿಂಹ, ಬಸವರಾಜ್,ಸಾವಿತ್ರಿ, ಮಲ್ಲನಗೌಡ,ಅಸ್ಮತ್, ಲಕ್ಷ್ಮಿ, ಹುಲಿಗೆಮ್ಮ,ಈರಮ್ಮ, ನರಸಮ್ಮ, ಅಂಜನಮ್ಮ,ಸೀತಮ್ಮ, ಸುರೇಶ್ ಸೇರಿದಂತೆ, ಶಾಲೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಎಸ್ ಎನ್ ಖಾದ್ರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.