ಶ್ರೀ ಸಿದ್ದರಾಮೇಶ್ವರರ ತತ್ವ ಆದರ್ಶ ಗುಣಗಳನ್ನು ಪಾಲಿಸಬೇಕು ಶಾಸಕ ಎಂಆರ್ ಮಂಜುನಾಥ್
ಹನೂರು: ಶ್ರೀ ಶಿವಯೋಗಿ ಶ್ರೀ ಶ್ರೀ ಶ್ರೀ ಸಿದ್ದರಾಮೇಶ್ವರ 852 ನೇ ಜಯಂತೋತ್ಸವ ಕಾರ್ಯಕ್ರಮ ಪ್ರಥಮ ಬಾರಿಗೆ ಪಟ್ಟಣದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
ಹನೂರು ಪಟ್ಟಣದ ಶ್ರೀ ಕೆಂಪೇಗೌಡ ವೃತ್ತ ಬಳಿ ಶ್ರೀ ಶಿವಯೋಗಿ ಶ್ರೀ ಶ್ರೀ ಶ್ರೀ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಎಂ.ಆರ್.ಮಂಜುನಾಥ್ ಪುಷ್ಪ ನಮನ ಸಲ್ಲಿಸಿ ಮೆರವಣಿಗೆ ರಥಕ್ಕೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಮಹಿಳೆ ಮತ್ತು ಮಕ್ಕಳು ಪೂರ್ಣಕುಂಭದೊಂದಿಗೆ ಹೆಜ್ಜೆ ಹಾಕಿದರು. ವಿವಿಧ ಕಲಾ ತಂಡಗಳು ಮೆರವಣಿಗೆ ಉದ್ದಕ್ಕೂ ತಮ್ಮ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಿದರು. ಸಮುದಾಯದ ಯುವಕರು, ಮಕ್ಕಳು ವಾದ್ಯ ಮೇಳ ತಮಟೆ ನಗಾರಿ ಸದ್ದಿಗೆ ಕುಣಿದು ಕುಪ್ಪಳಿಸಿದರು. ಭೋವಿ ಸಮುದಾಯದ ವಿವಿಧ ಮುಖಂಡರುಗಳು ಪಕ್ಷತೀತಾವಾಗಿ ಮೆರವಣಿಗೆಯಲ್ಲಿ ಸಾಗಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, 12ನೇ ಶತಮಾನ ಕ್ರಾಂತಿ ಯುಗ. ಜಾತಿ ತಾರತಮ್ಯವನ್ನು ತೊಲಗಿಸಲು ಶ್ರಮಿಸಿದ ಕಾಲ. ಬಸವಣ್ಣ ಅವರ ಅನುಭವ ಮಂಟಪದಲ್ಲಿ ಶ್ರೀ ಸಿದ್ದರಾಮೇಶ್ವರರು ಮುಂಚೂಣಿಗರಾಗಿದ್ದರು. ಅವರು ವಿದ್ಯ ಹಾಗೂ ಕಾಯಕಕ್ಕೆ ಮಹತ್ವ ನೀಡಿದ್ದರು. ಅವರ ತತ್ವ ಆದರ್ಶ ಅನುಕರಣಿಯ. ಮಕ್ಕಳನ್ನು ಹೆಚ್ಚು ಹೆಚ್ಚು ವಿದ್ಯವಂತರನ್ನಾಗಿ ಮಾಡಿ, ಜೊತೆಗೆ ಕುಲ ಕಸುಬನ್ನು ಎತ್ತಿ ಹಿಡಿಯುವಂತಾಗಾಬೇಕು. ಬೋವಿ ಸಮಾಜ ನಿಮ್ಮ ಸಂಘಟನೆಯಿಂದ ಸಮಾಜಕ್ಕೆ ದೊರಕುವ ಹಕ್ಕುಗಳನ್ನು ಪಡೆಯಲು ಸಜ್ಜಾಗಬೇಕು. ಆಧುನಿಕ ವೈಜ್ಞಾನಿಕ ಉಪಕರಣಗಳು ಇಲ್ಲದ ಕಾಲದಲ್ಲಿ ಜನತೆಗೆ ದಿನ ನಿತ್ಯ ಬಳಕೆಯ ವಸ್ತುಗಳ ಜೊತೆಗೆ ಇಂದಿಗೂ ಹಂಪಿ ದೇವಾಲಯದಂತ ದೇವಾಲಯಗಳ ನಿರ್ಮಾಣದಲ್ಲಿ ಮಹತ್ವ ಪಾತ್ರ ವಹಿಸಿದೆ. ಕುಲ ಕಸುಬು ಪಡೆಯಲು ಹೋರಾಟ ಅಗತ್ಯ. ಇದಕ್ಕೆ ನನ್ನ ಸಹಕಾರ ಇದೆ. ಸ್ವಾಮಿಜಿಗಳನ್ನು ಮುಂದಿನ ದಿನಗಳಲ್ಲಿ ಕರೆತಂದು ಈ ಬಗ್ಗೆ ರೂಪುರೇಷ ತಯಾರಿಸಬೇಕು. ರಾಜ್ಯ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಹೆಮ್ಮೆಯ ವಿಚಾರ. ಹಲವು ಮುಖಂಡರುಗಳು ಸಮಾಜದ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಗೂಳೆ ಹೋಗಿರುವ ಕ್ಷೇತ್ರದ ಜನತೆಗೆ ಉದ್ಯೋಗ ಒದಗಿಸಲು ಸಿದ್ಧತೆಗಳನ್ನು ಕೈಗೊಂಡಿದ್ದೇನೆ. ಅದನ್ನು ಹೇಳುವುದಕ್ಕಿಂತ ಮಾಡಿ ತೋರಿಸುತ್ತೇನೆ. ಮುಂದಿನ ವರ್ಷದೊಳಗೆ ಜಿಲ್ಲೆಯ ಏಕೈಕ ಸಮುದಾಯದ ಭವನ ಪೂರ್ಣಗೊಳಿಸಲಾಗುವುದು. ಸಮುದಾಯದ ಜನತೆಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಂದಿನ ಜಯಂತಿ ವೇಳೆಗೆ ನನ್ನಿಂದಾದ ಕೊಡುಗೆ ನೀಡುತ್ತೇನೆ.
ಕುಂದು ಕೊರತೆಗಳ ಬಗ್ಗೆ ಮನವಿ ಸಲ್ಲಿಕೆ: ಸಮುದಾಯದ ಮುಖಂಡರುಗಳು ವಿವಿಧ ಬೇಡಿಕೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು. ಜಾತಿ ಗಣತಿ ಅಂಕಿ ಅಂಶ ತಪ್ಪಾಗಿ ನಮೂದು ಆಗಿದೆ. ಉದ್ಯೋಗವಿಲ್ಲದೇ ಗೂಳೆ ಹೋಗುತ್ತಿದ್ದಾರೆ. ಆ ಹಿನ್ನಲೆಯಲ್ಲಿ ಉದ್ಯೋಗ ಒದಗಿಸಿ, ಒಂದೇ ಒಂದು ಸಮುದಾಯ ಭವನ ಪೂರ್ಣಗೊಳಿಸಬೇಕು, ಸಮುದಾಯದ ಭವನ, ಹಾಸ್ಟೆಲ್ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.
ರಾಜ್ಯ ಬೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮು ಮಾತನಾಡಿ, ಈ ಕಾಲದಲ್ಲಿ ಭೋವಿ ಕುಲಕಸುಬುಗಳಲ್ಲಿ ಮಾರ್ಪಟ್ಟು ಅಗತ್ಯವಾಗಿದ್ದು ಸೌಲಭ್ಯ ಕೋರಿ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ನಮ್ಮ ಕುಲ ಕಸುಬು ನಮಗೆ ಕೊಡಿ. ಕಲ್ಲು ಹೊಡೆದು ಬದುಕಲು ಅವಕಾಶ ಮಾಡಿಕೊಡಬೇಕು. ನಮ್ಮ ಅಕ್ಕಪಕ್ಕ ಕೋರೆಗಳಲ್ಲಿ ಕಲ್ಲು ತೆಗೆದು ಅದರಿಂದ ಬರುವ ವಿವಿಧ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಕಾನೂನಾತ್ಮಕವಾಗಿ ಅವಕಾಶ ಮಾಡಿಕೊಡಬೇಕು ಎಂಬ ಹೋರಾಟವನ್ನು ಮಾಡಲಾಗುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ದೊಡ್ಡ ದೊಡ್ಡ ಉದ್ಯಮಿಗಳಿಗೆ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೈಸೂರು ಬೋವಿ ಜನಾಂಗದ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ನಾಗರಾಜು, ಮೈಸೂರ್ ಜಿಲ್ಲಾ ಹಿತ ರಕ್ಷಣಾ ಸಮಿತಿ ಮಲ್ಲಣ್ಣ, ಮುಖ್ಯ ಭಾಷಣಕಾರ ಡಾ.ಚಿನ್ನಭೋವಿ, ಜಿಲ್ಲಾ ಭೋವಿ ಸಮಾಜದ ಗೌರವಧ್ಯಕ್ಷ ಚಂಗವಾಡಿ ಕೆ.ರಾಜು, ಮಾನಸ ಶಿಕ್ಷಣ ಸಂಸ್ಥೆ ದತ್ತೆಶ್ ಕುಮಾರ್, ಛಲವಾದಿ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಬಸವರಾಜು, ಬೋವಿ ಸಮುದಾಯದ ಮುಖಂಡರುಗಳಾದ ಮಾದೇವ್ ಹಾಗೂ ವಿವಿಧ ಗ್ರಾಮಗಳ ಸಮುದಾಯದ ಸಾರ್ವಜನಿಕರು ಉಪಸ್ಥಿತರಿದ್ದರು.