ಜನ-ಜಾನುವಾರಿಗೆ ನೀರು, ಮೇವು ಕಡಿಮೆಯಾಗದಿರಲಿ : ಎಸಿ ಗದ್ಯಾಳ
ಸಿಂದಗಿ: ಮಳೆಯ ಅಭಾವದಿಂದ ಈಗಾಗಲೇ ಮೂರು ತಾಲೂಕಿನ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡು ಬರುತ್ತಿದ್ದು, ಬರುವ ಜೂನ್ ತಿಂಗಳವರೆಗೆ ಜನ ಜಾನುವಾರಿಗೆ ನೀರು, ಮೇವು ಕಡಿಮೆಯಾಗದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕಾರ್ಯ ಮಾಡಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು ಪಟ್ಟಣದ ತಾಪಂ ಸಭಾಭವನದಲ್ಲಿ ಸಿಂದಗಿ, ಆಲಮೇಲ ಮತ್ತು ದೇವರ ಹಿಪ್ಪರಗಿ ತಾಲೂಕಿನ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಸಂಗ್ರಹಣೆ ಹಾಗೂ ಕೆರೆಗಳಿಗೆ ನೀರು ತುಂಬಿಸುಬ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಹಳ್ಳಿಗಳಿಗೆ ಸಕಾಲಕ್ಕೆ ಕುಡಿಯುವ ನೀರು ಒದಗಿಸಬೇಕು. ನೀರಿನಿಂದ ವಂಚಿತವಾದ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾ- ರಿಗಳು ಮತ್ತು ತಾಲೂಕಾ ಅಧಿಕಾರಿಗಳು ಈ ಬರಗಾಲ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನ ನಿಗಾವಹಿಸಿ ಕಾರ್ಯ ನಿರ್ವಹಿಸಬೇಕು. ಯಾವುದೇ ಗ್ರಾಮ. ತೋಟದ ವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವುದು ಕಂಡು ಬಂದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕಾರಗಳು ಆ ಗ್ರಾಮದ ಜನಸಂಖ್ಯೆ ಹಾಗೂ ಗ್ರಾಮದಲ್ಲಿರುವ ದನ ಕರುಗಳ ಸಂಖ್ಯೆ ಮತ್ತು ಅದಕ್ಕೆ ತಕ್ಕಂತೆ ಅಲ್ಲಿ ದಿನಕ್ಕೆ ತಗಲುವ ಕುಡಿಯುವ ನೀರಿನ ಪ್ರಮಾಣದ ಬೇಡಿಕೆಯ ಮನವಿಯನ್ನು ಕೂಡಲೇ ತಾಲೂಕು ದಂಡಾಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.
ಸಿಂದಗಿ ಮತ್ತು ದೇವರ ಹಿಪ್ಪರಗಿ ವಲಯದಲ್ಲಿ ಹಾದು ಹೋಗುವ ಕಾಲುವೆಗಳಲ್ಲಿ ರಾಂಪೂರ2 ಕೆಬಿಜೆಎನ್-ಎಲ್ ಅಧಿಕ್ಷಕರು 24*7 ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಕೆರೆ ತುಂಬಿಸುವಾಗ ನೀರು ಹಾಳಾಗದಂತೆ ಮತ್ತು ಕೃಷಿ ಚಟುವಟಿ- ಕೆಗಳಿಗೆ ಬಳಕೆ ಮಾಡದಂತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ಎಲ್ಲ ಅಧಿಕಾ- ರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಿಂದಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ದೇವರ ಹಿಪ್ಪರಗಿ ತಾಲೂಕು ದಂಡಾಧಿಕಾರಿ ಪ್ರಕಾಶ ಸಿಂದಗಿ, ತಾಪಂ ಇಓ ರಾಮು ಅಗ್ನಿ, ಆಲಮೇಲ ತಹಶೀಲ್ದಾರ್ ಮಹಾದೇವ ಸನ್ನಮುರಿ, ಸಿಡಿಪಿಒ ಎಸ್.ಎನ್ ಕೋರವಾರ ಸೇರಿದಂತೆ ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.