ಫೆ.15 ರಿಂದ ಗುತ್ತಿಗೆ ನೌಕರರ ಮುಷ್ಕರ
ತೆಲಸಂಗ: ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಗ್ರಾಮೀಣ ಭಾಗದಲ್ಲಿ ಇರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಬೇಡಿಕೆಗೆ ಆಗ್ರಹಿಸಿ ಫೆ.15 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ 6192 ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದು ಎನ್. ಎಚ್.ಎಮ್.ಗುತ್ತಿಗೆ ನೌಕರರ ಸಂಘದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಕ್ರಿ ತಿಳಿಸಿದ್ದಾರೆ.
ಗುರುವಾರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಪಿಎಚ್ ಸಿ-ಯುಎಚ್‌ಸಿ ಮಾರ್ಗಸೂಚಿಗಳ ಅನ್ವಯ 6 ವರ್ಷಸೇವೆ ಪೂರೈಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳ ಸೇವೆಯನ್ನು ಖಾಯಂಗೊಳಿಸಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇತರೆ ನೌಕರರಿಗೆ ನೀಡಿದ 15% ವೇತನ ಹೆಚ್ಚಳವನ್ನು ಸಮುದಾಯ ಆರೋಗ್ಯ ಅಧಿಕಾರಿಗಳಿಗೂ ಅನ್ವಯಿಸಬೇಕು. ತಡೆಹಿಡಿದಿರುವ 5 % ವಾರ್ಷಿಕ ವೇತನ ಮತ್ತು 10% ಲೋಯಾಲಿಟಿ ಬೋನಸ್ ಕೂಡಲೆ ಬಿಡುಗಡೆ ಮಾಡಬೇಕು. ವಿನಾಕಾರಣ ವಜಾಗೊಳಿಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೂಡಲೇ ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಬೇಕು. ಸಿಪಿಎಚ್‌ಸಿ-ಯುಎಚ್‌ಸಿ ಮಾರ್ಗ ಸೂಚಿಗಳ ಅನ್ವಯ ಮಾಸಿಕ ಪ್ರೋತ್ಸಾ ಹಧನ 15000/- ಗಳನ್ನು ಪಾವತಿಸಬೇಕು. ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿ ಷರತ್ತು ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಣೆ ಹಾಗೂ ಎಚ್‌ಡಬ್ಲ್ಯುಸಿ ಆಡಳಿತಕ್ಕೆ ಮಾತ್ರ ಸೀಮಿತಗೊಳಿಸಬೇಕು. ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡುವ ಅವಕಾಶ ಕಲ್ಪಿಸಬೇಕು. ಆದಕಾರಣ ಈ 11 ಪ್ರಮುಖ ಬೇಡಿಕೆಗನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಂಘಟನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು.